ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ನಿನಲ್ಲಿರುವ ಅಂಬೇಡ್ಕರರ ಮನೆ ಭಾರತದ ಪಾಲಿಗೆ ಉಳಿಯುತ್ತಾ..?

|
Google Oneindia Kannada News

ಲಂಡನ್ನಿನ ಉತ್ತರ ಭಾಗದಲ್ಲಿರುವ ಪ್ರಿಮ್ರಾಸ್ ಹಿಲ್ ಎಂಬಲ್ಲಿಯ ನೀರವ ಪ್ರದೇಶವೊಂದರಲ್ಲಿ ಭಾರತ ಪ್ರಜಾಪ್ರಭುತ್ವದ ಪಿತಾಮಹ ಡಾ. ಬಿ. ಆರ್. ಅಂಬೇಡ್ಕರ್ ಅವರ ನೆನಪಿನ್ನೂ ಉಸಿರಾಡುತ್ತಿದೆ! ಆದರೆ ಅವರ ನೆನಪನ್ನು ಶಾಶ್ವತವಾಗಿ ಜೀವಂತವಾಗಿರಿಸುವ ಪ್ರಯತ್ನಕ್ಕೆ ಮಾತ್ರ ನೂರೆಂಟು ವಿಘ್ನಗಳು.

ಲಂಡನ್ನಿನ ಪ್ರಿಮ್ರಾಸ್ ಹಿಲ್, ಮಾಡೆಲ್ ಕೇಟ್ ಮಾಸ್ ರಿಂದ ಹಿಡಿದು ನಟ ಡೇನಿಯಲ್ ಕ್ರಾಯಿಗ್ ವರೆಗೆ ಘಟಾನುಘಟಿ ಸೆಲೆಬ್ರಿಟಿಗಳ ಹುಟ್ಟೂರು. ಈ ಸ್ಥಳದಲ್ಲಿರುವ ಒಂದು 'ಮನೆ'ಗೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ವಿಶ್ವದ ನೂರಾರು ಗಣ್ಯರು ಹಲವು ಬಾರಿ ಎಡತಾಕಿದ್ದಾರೆ. ಆ ಮನೆಗೆ ವಿಶ್ವದ ನಾನಾ ಗಣ್ಯರನ್ನು ಸೆಳೆವ ಚುಂಬಕ ಶಕ್ತಿಯಿದೆ!

ಮನೆಯ ಎದುರಲ್ಲಿ ನೀಲಿ ಬಣ್ಣದ ಫಲಕವೊಂದರಲ್ಲಿ ದಪ್ಪ ಅಕ್ಷರಗಳಿಂದ ಬರೆದ"Dr Bhimrao Ramji Ambedkar, Indian Crusader of Social Justice lived here 1921-22," ("ಡಾ. ಭೀಮರಾವ್ ರಾಮಜೀ ಅಂಬೇಡ್ಕರ್, ಭಾರತದ ಸಾಮಾಜಿಕ ನ್ಯಾಯದ ಹೋರಾಟಗಾರ, 1921-22 ರಲ್ಲಿ ಇಲ್ಲಿ ವಾಸವಿದ್ದರು") ಎಂಬ ಆ ಸಾಲು ಕಣ್ಣಿಗೆ ರಾಚುತ್ತಿದ್ದಂತೆಯೇ ಹೆಜ್ಜೆಗಳು ತನ್ನಿಂತಾನೇ ಗೇಟಿನೊಳಗೆ ಊರತೊಡಗುತ್ತವೆ!

ಅಂಬೇಡ್ಕರ್ ಬಯಸಿದಂತೆ ಮೋದಿ ಸರ್ಕಾರ ಕೆಲಸ ಮಾಡಿದೆ: ಸದಾನಂದಗೌಡ ಅಂಬೇಡ್ಕರ್ ಬಯಸಿದಂತೆ ಮೋದಿ ಸರ್ಕಾರ ಕೆಲಸ ಮಾಡಿದೆ: ಸದಾನಂದಗೌಡ

ಗೇಟು ತೆರೆದು ಒಳಹೋಗುತ್ತಿದ್ದಂತೆಯೇ ಮಾಲೆಹಾಕಿದ ಡಾ.ಅಂಬೇಡ್ಕರ್ ಅವರ ಪ್ರತಿಮೆ ಪೂಜ್ಯಭಾವ ಮೂಡಿಸುತ್ತದೆ. ಅವರ ನೆನಪಿಗಾಗಿ ಉಳಿದ ಮನೆ, ಅದರ ಕೋಣೆಯಲ್ಲಿರುವ 'ಕಾನೂನು ಶಾಸ್ತ್ರದ ಟಿಪ್ಪಣಿಗಳು', ಕೆಲವು ಪುಸ್ತಕಗಳು, ಕಪ್ಪು ದಪ್ಪ ಫ್ರೇಮಿನ ಕನ್ನಡಕ... ಒಂದೊಂದೇ ಕಣ್ಣಿಗೆ ಬೀಳುತ್ತ ಬಾಬಾ ಸಾಹೇಬ್ ಇಲ್ಲೇ ಎಲ್ಲೋ ಉಸಿರಾಡುತ್ತಿದ್ದಾರೇನೋ ಎಂದು ರೋಮಾಂಚನವಾಗುತ್ತದೆ! (ಕೃಪೆ: ಬಿಬಿಸಿ)

ಧುತ್ತೆಂದು ಎರಗಿದ ವಿಘ್ನ!

ಧುತ್ತೆಂದು ಎರಗಿದ ವಿಘ್ನ!

ಆದರೆ ಬಾಬಾಸಾಹೇಬ್ ನೆನಪನ್ನು ಹೀಗೇ ಜೀವಂತವಾಗಿ ಉಳಿಸಿಬಿಡುವುದಕ್ಕೆ ಇದ್ದಕ್ಕಿದ್ದಂತೆ ವಿಘ್ನ ಎದುರಾಗಿದೆ.

2015 ರಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಮನೆಯನ್ನು ಅಧಿಕೃತವಾಗಿ ಉದ್ಘಾಟಿಸಿ, ಪ್ರವಾಸೀ ತಾಣ ಎಂದು ಗುರುತಿಸುವಂತೆ ಮಾಡಿದ್ದರು.
ಈ ಮನೆಯನ್ನು ಮಹಾರಾಷ್ಟ್ರ ಸರ್ಕಾರ 3 ಮಿಲಿಯನ್ ಪೌಂಡ್ (26.4 ಕೋಟಿ ರೂ.) ನೀಡಿ ಖರೀದಿಸಿತ್ತು. ಅಂಬೇಡ್ಕರ್ ವಾಸವಿದ್ದ ಈ ಮನೆಯನ್ನು 'ಮ್ಯೂಸಿಯಂ' ಆಗಿ ಬದಲಿಸುವ ಉದ್ದೇಶ ಭಾರತದ್ದು. ಈಗಾಗಲೇ ಈ ಮನೆಗೆ ವಾರಕ್ಕೆ ಏನಿಲ್ಲವೆಂದರೂ ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ಮಾತ್ರವಲ್ಲ ಅಂಬೇಡ್ಕರ್ ಅವರ ನೆನಪನ್ನು ಭಾರತದ ಗಡಿದಾಟಿ ಎಲ್ಲೆಲ್ಲೂ ಉಳಿಸುವ ಕಿರುಯತ್ನಗಳಲ್ಲಿ ಇದೂ ಒಂದು. ಆದರೆ ಈ ಮನೆಯ ಅಕ್ಕ-ಪಕ್ಕದ ಎರಡು ಮನೆಯವರು ಇದೀಗ 'ಈ ಮನೆಯನ್ನು ಮ್ಯೂಸಿಯಂ ಮಾಡಬಾರದು' ಎಂದು ಖ್ಯಾತೆ ತೆಗೆದಿದ್ದಾರೆ.

"ಈ ಮನೆಗೆ ಪ್ರವಾಸಿಗರು ಬರುವುದರಿಂದ ನಮಗೆ ಡಿಸ್ಟರ್ಬ್ ಆಗುತ್ತಿದೆ" ಎಂದು ಇಬ್ಬರು ನಿವಾಸಿಗಳು ದೂರಿದ್ದಾರೆ. 2018 ರ ಜನವರಿಯಲ್ಲಿ ಮನೆಯನ್ನು 'ನಿಯಮಗಳನ್ನು ಉಲ್ಲಂಘಿಸಿ' ಕಟ್ಟಲಾಗಿದೆ ಎಂದು ದೂರಿ ಸ್ಥಳೀಯ ಆಡಳಿತ ಪ್ರಾಧಿಕಾರವಾದ, ಕ್ಯಾಮ್ಡೆನ್ ಕೌನ್ಸಿಲ್ ಗೆ ವರದಿಯನ್ನು ನೀಡಲಾಯಿತು. ಈ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತನೆ ಮಾಡಲು ಸಾಧ್ಯವಿಲ್ಲ ಎಂದು ಕ್ಯಾಮ್ಡೆನ್ ಕೌನ್ಸಿಲ್ ಹೇಳಿತು.

ಆದರೆ ಫೆಬ್ರವರಿ 2018 ರಲ್ಲಿ ಈ ಮನೆಯ ಮುಂಚಿನ ಮಾಲೀಕರೇ, ಇದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಆದರೆ 2018 ರ ಅಕ್ಟೋಬರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೌನ್ಸಿಲ್, 'ವಾಸಯೋಗ್ಯ ಭೂಮಿಯ ನಷ್ಟ'ವಾಗುತ್ತದೆ ಎಂಬ ಕಾರಣ ನೀಡಿ ಮನವಿಯನ್ನು ತಿರಸ್ಕರಿಸಿತು.

ಸಾಮಾಜಿಕ ನ್ಯಾಯದ ಹರಿಕಾರ ಬಾಬಾ ಸಾಹೇಬ್ ಗೆ ಗಣ್ಯರ ನಮನ ಸಾಮಾಜಿಕ ನ್ಯಾಯದ ಹರಿಕಾರ ಬಾಬಾ ಸಾಹೇಬ್ ಗೆ ಗಣ್ಯರ ನಮನ

ಮುಂದಿನ ತಿಂಗಳು ಭವಿಷ್ಯ ನಿರ್ಧಾರ

ಮುಂದಿನ ತಿಂಗಳು ಭವಿಷ್ಯ ನಿರ್ಧಾರ

ಇದರೊಟ್ಟಿಗೆ ಇಬ್ಬರು ನಿವಾಸಿಗಳು ತಮಗೆ ಇಲ್ಲಿ ಪ್ರವಾಸಿಗರು ಬರುವುದರಿಂದ ತೊಂದರೆಯಾಗುತ್ತದೆ ಎಂದು ದೂರು ನೀಡಿದರು. ಆದರೆ ಕೌನ್ಸಿಲ್ ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಮತ್ತೊಮ್ಮೆ ಕಲೆಹಾಕುವಂತೆ ಈಗಾಗಲೇ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದ್ದು, ಈ ಕುರಿತ ನಿರ್ಣಯ ಸೆಪ್ಟೆಂಬರ್ 24 ರಂದು ಹೊರಬರಲಿದೆ.

ಮಹಾರಾಷ್ಟ್ರ ಸರ್ಕಾರ ಈ ವಿಚಾರದ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದೆ. ಆದರೆ ಲಂಡನ್ನಿನಲ್ಲಿರುವ ಭಾರತೀಯ ರಾಯಭಾರಿ ಪ್ರತಿನಿಧಿ ಬಿಬಿಸಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, 'ಈ ಸ್ಥಳ ಬೃಹತ್ ಸಂಖ್ಯೆಯ ಭಾರತೀಯರಿಗೆ ಅತ್ಯಂತ ಮಹತ್ವದ ಸ್ಥಳ. ಆದ್ದರಿಂದ ಈ ನಿವಾಸವನ್ನು ಮ್ಯೂಸಿಯಂ ಆಗಿ ಮಾಡಲು ನಾವು ಮನವಿ ಸಲ್ಲಿಸಿದ್ದೇವೆ' ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ದಲಿತ ಸಮುದಾಯದಲ್ಲಿ ಜನಿಸಿದ ಅಂಬೇಡ್ಕರ್ ಸಾಮಾಜಿಕ ನ್ಯಾಯ, ಜಾತಿಪದ್ಧತಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದವರು. ಕಡುಬಡತನದಲ್ಲಿ ಜನಿಸಿ, ಕಷ್ಟಪಟ್ಟು ಓದಿ, ಅಪಾರ ಜ್ಞಾನ ಗಳಿಸಿದ್ದ ಅಂಬೇಡ್ಕರ್ ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರೂ ಆಗಿದ್ದವರು. ಭಾರತದ ಸಂವಿಧಾನದ ನಿರ್ಮಾತೃರೂ ಅವರೇ.

ಅಂಬೇಡ್ಕರ್ ಅವರು ರಾಜಕೀಯಕ್ಕೆ ಧುಮುಕುವ ಮುನ್ನ, 1921-22 ರ ಅವಧಿಯಲ್ಲಿ ಪ್ರಿಮ್ರಾಸ್ ಹಿಲ್ ನಲ್ಲಿ ವಾಸವಿದ್ದು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅರ್ಥಶಾಸ್ತ್ರದ ಡಾಕ್ಟರೇಟ್ ಡಿಗ್ರಿ ಪಡೆದರು.
ಆದ್ದರಿಂದಲೇ ಫೆಡರೇಶನ್ ಆಫ್ ಅಂಬೇಡ್ಕರೈಟ್ ಅಂಡ್ ಬುದ್ದಿಸ್ಟ್ ಆರ್ಗನೈಸೇಶನ್(FABO) ಸಲಹೆಯ ಮೇರೆಗೆ ಮಹಾರಾಷ್ಟ್ರ ಸರ್ಕಾರ 2015 ರಲ್ಲಿ ಈ ಮನೆಯನ್ನು ಖರೀದಿಸಿತ್ತು.

ನೆರೆಹೊರೆಯವರ ಅನುಮತಿ ಮೇಲೆಯೇ ಖರೀದಿ

ನೆರೆಹೊರೆಯವರ ಅನುಮತಿ ಮೇಲೆಯೇ ಖರೀದಿ

ಈ ಮನೆಯನ್ನು ಸರ್ಕಾರ ಕೊಳ್ಳವ ಮುನ್ನವೇ ಇಲ್ಲಿನ ನೆರೆ-ಹೊರೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಲಂಡನ್ ಸರ್ಕಾರದ ಸೇವೆಯಲ್ಲಿರುವ ಸಂತೋಷ್ ದಾಸ್ "ತಾವು ವಾಸವಿರುವ ಸ್ಥಳದ ಬಳಿ ಒಂದು ಪ್ರವಾಸೀ ತಾಣವಿರುತ್ತದೆ, ಮ್ಯೂಸಿಯಂ ಇರುತ್ತದೆ ಎಂದಾದರೆ ನಾವೇಕೆ ಬೇಡ ಎನ್ನಲಿ?, ಈಗಾಗಲೇ ಇಲ್ಲಿಗೆ ಹಲವು ಪ್ರವಾಸಿಗರು ಬಂದಿದ್ದರೂ ನಮಗೆ ಯಾವ ತೊಂದರೆಯೂ ಆಗಿಲ್ಲ. ಅಷ್ಟಕ್ಕೂ ಇಲ್ಲೊಂದು ಇಂಥ ಮನೆಯಿದೆ ಎಂಬುದೇ ಇಲ್ಲಿರುವ ಹಲವರಿಗೆ ಗೊತ್ತಿರಲಿಲ್ಲ" ಎಂದು ಸ್ಥಳೀಯರೇ ಹಲವರು ಹೇಳುತ್ತಾರೆ.

"ನಾನು 1969 ರಿಂದ ಪ್ರಿಮ್ರಾಸ್ ಹಿಲ್ ನಲ್ಲಿ ವಾಸವಿದ್ದೇನೆ, ಆದರೆ ಎಂದಿಗೂ ಇಲ್ಲಿ ಯಾವ ಪ್ರವಾಸಿಗರಿಂದಲೂ ಸಮಸ್ಯೆಯಾಗಿಲ್ಲ. ಯಾರು ಯಾರಿಗೂ ತೊಂದರೆ ಮಾಡಿಲ್ಲ. ಈಗ ಇದ್ದಕ್ಕಿದ್ದಂತೆ ಈ ದೂರುಗಳು ಆರಂಭವಾಗಿದ್ದು ಏಕೆ ಎಂಬುದು ನಿಗೂಢವೆನ್ನಿಸಿದೆ. ನನಗೆ ಬೇಸರ ತಂದಿದೆ" ಎನ್ನುತ್ತಾರೆ 78 ವರ್ಷ ವಯಸ್ಸಿನ ಕೆನೆಡಿಯನ್ ಗಾಯಕಿ ಬೋನೀ ಡಾಬ್ಸನ್.

ಬಾಬಾ ಸಾಹೇಬ್ ನೆನಪಿನ ಮನೆ ಭಾರತದ ಪಾಲಿಗೆ ಉಳಿಯುತ್ತಾ?

ಬಾಬಾ ಸಾಹೇಬ್ ನೆನಪಿನ ಮನೆ ಭಾರತದ ಪಾಲಿಗೆ ಉಳಿಯುತ್ತಾ?

ಅಕಸ್ಮಾತ್ ಇದನ್ನು ಮ್ಯೂಸಿಯಂ ಆಗಿ ಮಾಡಲು ಸಾಧ್ಯವಿಲ್ಲ ಎಂಬ ತೀರ್ಪು ಬಂದರೆ ಅದನ್ನು ವಾಸಯೋಗ್ಯ ಎಂದು ಪರಿಗಣಿಸಿ ಮಾಲೀಕರಿಗೆ ಹಿಂದಿರುಗಿಸಬೇಕಾಗುತ್ತದೆ. ಈ ಮನೆಯ ಭವಿಷ್ಯ ಸೆಪ್ಟೆಂಬರ್ ಅಂತ್ಯದಲ್ಲಿ ನಿರ್ಧಾರವಾಗಲಿದೆ! ಬಾಬಾ ಸಾಹೇಬರು ವಾಸವಿದ್ದ ಈ ಮನೆ ಭಾರತದ ಪಾಲಿಗೆ ಉಳಿಯುತ್ತದಾ? ನೂರಾರು ಪ್ರವಾಸಿಗರನ್ನು ಕೈಬೀಸಿ ಕರೆದು ಅಂಬೇಡ್ಕರರ ಮಹೋನ್ನತ ಬದುಕಿನ ತಿರುಳನ್ನು ಕಟ್ಟಿಕೊಡುತ್ತದಾ...? ಗೊತ್ತಿಲ್ಲ.

ಆದರೆ ಈ ಎಲ್ಲವನ್ನೂ ಯೋಚಿಸುತ್ತಾ ಆ ಮನೆಯೊಳಗೊಮ್ಮೆ ಕಣ್ಣು ಹಾಯಿಸಿದರೆ, ಅಂಬೇಡ್ಕರರೇ ಬರೆದ, "ನಮ್ಮ ಸಹಜೀವಿಗಳಿಗೆ ಗೌರವ ನೀಡುವುದೇ ಪ್ರಜಾಪ್ರಭುತ್ವದ ಅತ್ಯಗತ್ಯ ಸ್ವಭಾವ" ಎಂಬ ಸಾಲು ಕಣ್ಣಿಗೆ ಬಿದ್ದು, ವಿಷಾದ ಆವರಿಸುತ್ತದೆ!

English summary
Father of Indian Constitution Dr. B.R.Ambedkar house in London, where he was staying for 2 years in 1921-22 is in controversy now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X