ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುದಿಯುವ ಕೊಪ್ಪಳದಲ್ಲಿ ಕಾಂಗ್ರೆಸ್ ನಾಯಕರ ಬೆವರಿಳಿಸಿದ ಮೋದಿ

By Manjunatha
|
Google Oneindia Kannada News

ಕೊಪ್ಪಳ, ಮೇ 08: ಕೊಪ್ಪಳದ ಉರಿ ಬಿಸಿಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಗಾಂಧಿ ಕಟುಂಬದ ಮೇಲೆ ಪುಂಖಾನುಪುಂಖಾನುವಾಗಿ ಟೀಕೆಗಳ ಸುರಿ ಮಳೆ ಮಾಡಿದರು. ಶಾಂತಿಯುತ ಕರ್ನಾಟಕಕ್ಕಾಗಿ ರಾಜ್ಯದಿಂದ ಕಾಂಗ್ರೆಸ್‌ ತೊಲಗಿಸಿ ಎಂದು ಕರೆ ನೀಡಿದರು.

ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿ ಆಯೋಜಿಸಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮೋದಿ, ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Karnataka elections: Narendra Modi rally in Koppal

ಕಾಂಗ್ರೆಸ್‌ ಕೇವಲ ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ ಸರ್ಕಾರ ನಡೆಸಿರುವುದು ಆ ಒಂದು ಕುಟುಂಬಕ್ಕಾಗಿ, ಸರ್ಕಾರ ಬೀಳಿಸಿದ್ದು ಕೂಡಾ ಆ ಒಂದು ಕುಟುಂಬಕ್ಕಾಗಿ ಎಂದು ಮೋದಿ ಅವರು ಗಾಂಧಿ ಕುಟುಂಬದ ಮೇಲೆ ಹರಿಹಾಯ್ದರು.

ಶೌಚಾಲಯಕ್ಕಾಗಿ ಪ್ರತಿಭಟನೆ ಮಾಡಿದ್ದ ಕೊಪ್ಪಳದ ಹೆಣ್ಣು ಮಗಳು ಮಲ್ಲಮ್ಮನನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ ಅವರು, ಮಲ್ಲಮ್ಮನಂತಹಾ ಜಾಗೃತ ಹೆಣ್ಣು ಮಗಳಿಗೆ ಜನ್ಮ ನೀಡಿದ ಈ ಪುಣ್ಯ ಭೂಮಿಗೆ ನಮಿಸುತ್ತೇನೆ ಎಂದರು.

ಪ್ರಧಾನಿ ಮೋದಿ ಅವರ ಭಾಷಣದ ಮುಖ್ಯಾಂಶಗಳು ಈ ರೀತಿ ಇವೆ ನೋಡಿ...

* ನಿಮ್ಮನ್ನು ಬಿಸಿಲಿನಲ್ಲಿ ನಿಲ್ಲಿಸಿ ಮಾತು ಕೇಳಿಸುತ್ತಿರುವುದಕ್ಕೆ ನಾನು ಕ್ಷಮೆ ಕೋರುತ್ತೇನೆ. ಆದರೆ ನಿಮ್ಮ ಈ ಶ್ರಮಕ್ಕೆ ಅಭಿವೃದ್ಧಿಯ ಮೂಲಕ ಪ್ರತಿಫಲವನ್ನು ನಾನು ನೀಡುತ್ತೇನೆ.

* ದೇಶ ಪ್ರೇಮ, ಸಬ್‌ ಕಾ ಸಾಥ್ ಸಬ್ ಕಾ ವಿಕಾಸ್‌ ಮಂತ್ರ ಮತ್ತೆ ಪಠಿಸಿದ ಮೋದಿ.

* ಕಾಂಗ್ರೆಸ್‌ ಕೇವಲ ಕುಟುಂಬ ರಾಜಕಾರಣ ಮಾಡುತ್ತದೆ. ಒಂದು ಪರಿವಾರವೇ ದೇಶವನ್ನು 60 ವರ್ಷ ನಡೆಸಿದೆ. ಅವರು ಸರ್ಕಾರ ನಡೆಸಿದ್ದು ಪರಿವಾರಕ್ಕಾಗಿ, ಸರ್ಕಾರ ಬೀಳಿಸಿದ್ದು ಕೂಡಾ ಪರಿವಾರಕ್ಕಾಗಿ.

* ಕಾಂಗ್ರೆಸ್‌ನದ್ದು ವಿಕೃತರೂಪದ ರಾಜಕೀಯ, ಅದು ತನ್ನ ಕುತಂತ್ರ ಬುದ್ಧಿಯಿಂದ ದೇಶದಲ್ಲಿ ವಿಷ ಬಿತ್ತಿದೆ. ಅದು ಅಧಿಕಾರಕ್ಕೆ ಏನನ್ನು ಬೇಕಾದರೂ ಮಾಡುತ್ತದೆ.

* ಸಿದ್ದರಾಮಯ್ಯ ಸರ್ಕಾರ ಮಕ್ಕಳ ಮನಸ್ಸಿನಲ್ಲೂ ಜಾತಿಯ ಬೀಜ ಬಿತ್ತಿದರು. ಆ ಜಾತಿಯವರು ಪ್ರವಾಸ ಹೋಗಬೇಕು ಈ ಜಾತಿಯವರು ಹೋಗಬಾರದು ಎಂಬ ಕೆಟ್ಟ ಸಂಸ್ಕೃತಿ ಹುಟ್ಟು ಹಾಕಿದರು.

* ಬುದ್ಧ ಸರ್ಕಿಟ್, ಗಾಂಧಿ ಸರ್ಕಿಟ್, ರಾಮ್ ಸರ್ಕಿಟ್, ಆದಿವಾಸಿ ಕ್ಷೇತ್ರ ಸರ್ಕಿಟ್, ಮರುಭೂಮಿ ಸರ್ಕಿಟ್‌ ಮುಂತಾದ ಸರ್ಕಿಟ್‌ಗಳನ್ನು ನಿರ್ಮಿಸಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಐದು ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ.

* ಕೊಪ್ಪಳಕ್ಕೆ ರಾಮಾಯಣ ಸರ್ಕಿಟ್‌ನಿಂದ ಬಹಳ ಲಾಭವಾಗುತ್ತದೆ. ಆನೆಗುಂದಿ, ಹಂಪಿಗೆ ಈ ಯೋಜನೆಯಿಂದ ಅತಿ ಹೆಚ್ಚಿನ ಲಾಭವಾಗಲಿದೆ, ಈ ಕ್ಷೇತ್ರ ಹನುಮಾನರ ಜನ್ಮಭೂಮಿ ಮತ್ತು ಶ್ರೀರಾಮರೊಂದಿಗೆ ಸಂಬಂಧ ಹೊಂದಿದೆ. ಇಲ್ಲಿ ವಿಮಾನದ ವ್ಯವಸ್ಥೆ ಸಹ ಮಾಡುತ್ತಿದ್ದೇವೆ. ಹವಾಯಿ ಚಪ್ಪಲಿ ತೊಡುವವರೂ ಕೂಡ ವಿಮಾನದಲ್ಲಿ ಓಡಾಡುವಂತಾಗಬೇಕು ಎಂಬ ಕನಸು ನಮ್ಮದು.

* ಕೊಪ್ಪಳದ ಸ್ವಚ್ಛಾಗ್ರಹಿ ಮಲ್ಲಮ್ಮನ ನೆನಪು ಮಾಡಿಕೊಂಡ ನರೇಂದ್ರ ಮೋದಿ. 'ನಾನು ಎರಡು ವರ್ಷದ ಹಿಂದೆ ಮನ್‌ ಕೀ ಬಾತ್‌ನಲ್ಲಿ ಈ ಜಿಲ್ಲೆಯ ಮಗಳಾದ ಮಲ್ಲಮ್ಮನ ಉಲ್ಲೇಖ ಮಾಡಿದ್ದೆ' ಆಕೆ ಸ್ವಚ್ಛತೆಯ ಪಾಠವನ್ನು ರಾಜ್ಯಕ್ಕೇ ಮಾಡಿದ್ದಳು.

* ಮಲ್ಲಮ್ಮನಂತಹಾ ಲಕ್ಷಾಂತರ ಹೆಣ್ಣು ಮಕ್ಕಳು ಸ್ವಚ್ಛ ಭಾರತ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ. ಮಲ್ಲಮ್ಮನಂತಹಾ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಈ ಪುಣ್ಯ ಭೂಮಿಗೆ ನಾನು ನಮನ ಮಾಡುತ್ತೇನೆ.

* ಹಿಂದಿನ ಸರ್ಕಾರದ ಅವಧಿಯಲ್ಲಿ ಹೆಣ್ಣು ಮಕ್ಕಳು ಗರ್ಭದಲ್ಲೇ ಸಾಯುತ್ತಿದ್ದರು. ಆದರೆ ನಮ್ಮ ಸರ್ಕಾರದ 'ಭೇಟಿ ಪಡಾವೊ ಭೇಟಿ ಬಚಾವೊ' ಆಂದೋಲನದಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಲಿಂಗ ಅನುಪಾತ ಸರಿ ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ.

* ಸುಖನ್ಯಾ ಸಮೃದ್ಧಿ ಯೋಜನೆ ಮೂಲಕ ಹೆಣ್ಣು ಮಕ್ಕಳ ಪ್ರಗತಿಗಾಗಿ ಹಣ ನೋಡುತ್ತಿದ್ದೇವೆ, ಹೆಣ್ಣು ಮಗು 18 ವರ್ಷಕ್ಕೆ ಬಂದಾಗ ಅವರ ಉನ್ನತ ಶಿಕ್ಷಣಕ್ಕಾಗಿ ದೊಡ್ಡ ಮೊತ್ತವನ್ನು ಅವರ ಕೈಗೆ ನಾವು ನೀಡುತ್ತೇವೆ.

* ಕರ್ನಾಟಕ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಹಾಡಿ ಹೊಗಳಿದ ಮೋದಿ, ಪ್ರಣಾಳಿಕೆಯಲ್ಲಿ ಪ್ರಮುಖ ಅಂಶಗಳನ್ನು ಜನರ ಮುಂದಿಟ್ಟರು.

* ಕೊಪ್ಪಳದ ಗವಿ ಮಠ ಉನ್ನತವಾದ ಕಾರ್ಯವನ್ನು ಮಾಡಿದೆ. ನೀರಿನ ಉಳಿಕೆಯಲ್ಲಿ ರಾಜ್ಯ ಮೆಚ್ಚುವ ಕಾರ್ಯ ಅವರು ಮಾಡಿದ್ದಾರೆ. ಗವಿ ಮಠದ ಮೂಲಕ ಹಳ್ಳಿಗಳಲ್ಲಿ ಮಳೆ ನೀರನ್ನು ಸಂಗ್ರಹಿಸುವ ಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೆಯ ವಿಷಯ.

* ಇಲ್ಲಿನ ಮುಖ್ಯಮಂತ್ರಿ ಅಹಂಕಾರಿ, ಆತನಿಗೆ ಏನೂ ಗೊತ್ತಿಲ್ಲ ಆತ ಬೇರೆಯವರಿಂದಲೂ ಕಲಿಯುವುದಿಲ್ಲ, ಅಕ್ಕ ಪಕ್ಕದ ರಾಜ್ಯಗಳು ನೀರಿನ ಬಗ್ಗೆ ಎಂತಹಾ ಅತ್ಯದ್ಬುತ ಕಾರ್ಯ ಮಾಡಿದೆ ಅದನ್ನು ನೋಡಿಯಾದರೂ ಕರ್ನಾಟಕ ಕಲಿಯಬೇಕಿದೆ.

* ಬಿಜೆಪಿಯ ಎಲ್ಲ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಬಿಜೆಪಿ ಪರ ಪ್ರಚಾರ ಮಾಡಿ, ಮೇ 12ರಂದು ನೀವೇ ಖುದ್ದಾಗಿ ಮತದಾರರನ್ನು ಪೋಲಿಂಗ್‌ ಬೂತ್‌ಗೆ ಕರೆತಂದು ಮತ ಚಲಾಯಿಸುವಂತೆ ಮಾಡಿ.

English summary
Narendra Modi addressing BJP rally in Koppal. local BJP candidates and BJP leaders were with him on the stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X