ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ನಿಲ್ಲದ ವರುಣನ ಆರ್ಭಟ: ಮೆಣಸಿನಕಾಯಿ, ಹತ್ತಿ ಬೆಳೆ ಜಲಾವೃತ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ಆಗಸ್ಟ್‌, 30: ಕೊಪ್ಪಳ, ಗದಗ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಮತ್ತೆ ಆರ್ಭಟಿಸಿದ್ದಾನೆ. ವರುಣನ ಆರ್ಭಟದಿಂದ ಎರಡು ಜಿಲ್ಲೆಗಳ ಜನರು ತತ್ತರಿಸಿ ಹೋಗಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ನೀಡಲು ಆದೇಶ ನೀಡಿದ್ದರು.

ಚರಂಡಿ ನೀರು ರಭಸವಾಗಿ ನುಗ್ಗಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿರುವ ಮನೆಗಳು ಜಲಾವೃತವಾಗಿವೆ. ಕೊಪ್ಪಳ ನಗರಸಭೆ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯತ್ ಮಧ್ಯೆ ಇರುವ ಗಣೇಶ ನಗರ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಸ್ಥಳಕ್ಕೆ ತಹಶೀಲ್ದಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದೆ. ಭಾರಿ ಮಳೆ ಸುರಿಯುತ್ತಿದ್ದ ಕಾರಣ ಕೊಪ್ಪಳ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ನೀಡಲಾಗಿತ್ತು. ಬಂಡಿಹರ್ಲಾಪುರ ಗ್ರಾಮದ ಶಾಲೆಯ ಆವರಣಕ್ಕೆ ನೀರು ನುಗ್ಗಿದ್ದು, ಶಾಲಾ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.

ಕೊಪ್ಪಳ ನಗರಸಭೆ ವ್ಯಾಪ್ತಿಯ ಗಣೇಶ ನಗರ, ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಂಜುನಾಥ ಹಾಗೂ ಸಿದ್ದಲಿಂಗ ಕಾಲೋನಿ ಪ್ರದೇಶದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಚರಂಡಿ ಹಾಗೂ ರಾಜಕಾಲುವೆಗಳ ನಿರ್ವಹಣೆ ಮಾಡದಿರುವುದರಿಂದ ಈ ಅವಾಂತರ ಆಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಸುಮಾರು 15-20 ವರ್ಷಗಳಿಂದಲೂ ಇದೆ ಪರಸ್ಥಿತಿಯಲ್ಲಿ ನಾವು ಜೀವನ ಸಾಗಿಸುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು. ಇಲ್ಲಿನ ರಾಜಕಾಲುವೆ, ಚರಂಡಿ ಹಾಗೂ ರಸ್ತೆ ಒತ್ತುವರಿ ಆಗಿದೆ. ಇದರಿಂದಾಗಿ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ.

 ಸಮಸ್ಯೆ ಬಗೆಹರಿಸುವುದಾಗಿ ಭರವಸೆ

ಸಮಸ್ಯೆ ಬಗೆಹರಿಸುವುದಾಗಿ ಭರವಸೆ

ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿ ಎಂದು ಸ್ಥಳೀಯರ ಆಗ್ರಹವಾಗಿದೆ. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ವಿಠ್ಠಲ ಚೌಗಲೆ ಅವರ ಮುಂದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್‌ ಮಾತನಾಡಿ ಇಲ್ಲಿಯ ಸಮಸ್ಯೆಯನ್ನು ಬಗೆಹರಿಸಲು ಸರ್ಕಾಕರಕ್ಕೆ ಯೋಜನೆಯ ಪ್ರಸ್ತಾವನೆ ಸಲ್ಲಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

 ಮಕ್ಕಳು, ಮಹಿಳೆಯರ ಪರದಾಟ

ಮಕ್ಕಳು, ಮಹಿಳೆಯರ ಪರದಾಟ

ಇನ್ನು ಗದಗ ಜಿಲ್ಲೆಯಲ್ಲಿಯೂ ಸಹ ಧಾರಾಕಾರ ಮಳೆ ಸುರಿದಿದ್ದು, ಲಕ್ಷ್ಮೇಶ್ವರ ಪಟ್ಟಣದ ಇಟ್ಟಿಗೆ ಕೆರೆ ಪಕ್ಕದಲ್ಲಿಯ ಮನೆಗಳಿಗೆ ಅಪಾರ ಪ್ರಮಾಣದ ಹಾನಿ ಆಗಿದೆ. ಸುವರ್ಣಗಿರಿ ತಾಂಡಾ ವ್ಯಾಪ್ತಿಯಲ್ಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಕುಳಿತುಕೊಳ್ಳುವುದಕ್ಕೂ ಜಾಗವಿಲ್ಲದೆ ಮಕ್ಕಳು, ಮಹಿಳೆಯರು ಪರದಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಮ ಪಂಚಾಯತಿಯ ಶೆಟ್ಟಿಕೆರೆ ಗ್ರಾಮದ ಕೆರೆಯ ಕೋಡಿ ಒಡೆದಿದ್ದು, ನೂರಾರು ಎಕರೆ ಬೆಳೆ ನಾಶವಾಗಿದೆ. ಹೆಸರು, ಸೂರ್ಯಕಾಂತಿ, ಮೆಕ್ಕೆಜೋಳ, ಮೆಣಸಿನಕಾಯಿ, ಹತ್ತಿ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.

 ನೀರಿನಲ್ಲಿ ಕೋಚ್ಚಿಹೋದ ಮೀನುಗಳು

ನೀರಿನಲ್ಲಿ ಕೋಚ್ಚಿಹೋದ ಮೀನುಗಳು

200 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆಯ ನೀರು ಪ್ರವಾಹದಂತೆ ಹರಿದಿದೆ. ಪರಿಣಾಮ ಬೋರ ಬಂಜಾರ ಸಮುದಾಯದವರ ಲಕ್ಷಾಂತರ ಮೀನು‌, ಮೀನಿನ ಮರಿಗಳು ಕೊಚ್ಚಿಕೊಂಡು ಹೋಗಿವೆ. ಮೀನುಗಾರಿಕೆಯಿಂದ ನಷ್ಟಕ್ಕೊಳಗಾದವರು ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿದಿದ್ದು, ಜಿಲ್ಲಾಧಿಕಾರಿ ವೈಶಾಲಿ ಎಂ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮುಂದಿನ ಸರ್ಕಾರಿ ರಜೆ ದಿನದಂದು ಶಾಲೆಗಳನ್ನು ನಡೆಸುವಂತೆ ಸೂಚನೆ ನೀಡಿದ್ದಾರೆ.

 ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ

ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ

ಭಾರಿ ಮಳೆ ಸುರಿದ ಕಾರಣ ಲಕ್ಷ್ಮೇಶ್ವರ ಪಟ್ಟಣದ ಐತಿಹಾಸಿಕ ಅಗಸ್ತ್ಯ ತೀರ್ಥ ದೇವಸ್ಥಾನ ಕುಸಿದು ಬಿದ್ದಿದೆ. ಅಗಸ್ತ್ಯ ಮುನಿಗಳು ತಪ್ಪಸ್ಸು ಮಾಡಿರುವ ಪವಿತ್ರ ಸ್ಥಳವು ಇದಾಗಿದೆ. ಸತತವಾಗಿ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ದೇವಸ್ಥಾನ ಕುಸಿದು ಬಿದ್ದಿದೆ. ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ ಹಾಗೂ ಮುಖ್ಯಾಧಿಕಾರಿ ಹುಲ್ಲಮ್ಮನವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಸುತ್ತಮುತ್ತ ಬೃಹತ್‌ ಪ್ರಮಾಣದಲ್ಲಿ ಗಿಡಗಳು ಬೆಳೆದಿದ್ದು, ಅನೈತಿಕ ಚಟುವಟಿಕೆಗೆ ದಾರಿ ಮಾಡಿಕೊಟ್ಟಂತಾಗಿದೆ. ದೇವಸ್ಥಾನದಲ್ಲಿರುವ ಶಿವನ ಮೂರ್ತಿಯೂ ಕೂಡ ನೀರಿನಲ್ಲಿ ಮುಳುಗಿದೆ. ಇಷ್ಟೆಲ್ಲ ಅನಾಹುತಗಳು ಆದರೂ ಕೂಡ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

English summary
heavy rain in Koppal, Gadag districts. houses flooded, people are distressed, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X