ಕೈದಿಗಳ ಜೊತೆ ವಿಡಿಯೋ ಸಂಭಾಷಣೆಗಾಗಿ ಇ-ಮುಲಾಕಾತ್
ಕೊಪ್ಪಳ, ಡಿಸೆಂಬರ್ 17: ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಇ-ಮುಲಾಕತ್ ಮೂಲಕ ಕೈದಿಗಳ ಜೊತೆ ಕುಟುಂಬ ಸದಸ್ಯರು ವಿಡಿಯೋ ಕಾಲಿಂಗ್ ಮೂಲಕ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಕೈದಿಗಳ ಕುಟುಂಬದವರು ಈ ವ್ಯವಸ್ಥೆಯ ಉಪಯೋಗ ಪಡೆದುಕೊಳ್ಳಬೇಕು.
ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಕೈದಿಗಳ ಭೇಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬಂಧಿಗಳಲ್ಲಿ ಆತ್ಮಸ್ಥೈರ್ಯವನ್ನು ಮತ್ತು ಮನೋಬಲ ಹೆಚ್ಚಿಸಲು ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖಾ ವತಿಯಿಂದ ಇ-ಮುಲಾಕತ್ ಯೋಜನೆ ಜಾರಿಗೆ ತರಲಾಗಿದೆ.
ಇ-ಮುಲಾಕತ್ ಮೂಲಕ ಬಂಧಿಗಳು ತಮ್ಮ ಕುಟುಂಬದ ಸದಸ್ಯರೊಡನೆ ಇಲಾಖಾ ನಿಯಮಗಳನ್ನು ಅನುಸರಿಸಿ ವಿಡಿಯೋ ಸಂಭಾಷಣೆ ನಡೆಸಬಹುದಾಗಿದೆ. ಇದಕ್ಕಾಗಿ ಮೊದಲು ನೋಂದಣಿ ಮಾಡಿಸಬೇಕು.
ವಿಡಿಯೋ ಸಂದರ್ಶನಕ್ಕಾಗಿ ಆನ್ಲೈನ್ ನೋಂದಣಿ ಮಾಡಿಸಲು ಸಂದರ್ಶಕರು ಗೂಗಲ್ನಲ್ಲಿ ಎನ್. ಪಿ. ಐ. ಪಿ ಎಂದು ಟೈಪ್ ಮಾಡಬೇಕು. ಆಗ ಕಂಡುಬರುವ ವಿಷಯಾಂಶದಲ್ಲಿ new visitor registration - national prison portal ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
2ನೇ ಹಂತದಲ್ಲಿ ಬಂದಿಯ ಸಂದರ್ಶನಕ್ಕಾಗಿ ಕಂಡು ಬರುವ ಆನ್ಲೈನ್ ಫಾರಂನಲ್ಲಿ ಕೋರಲಾದ ಮಾಹಿತಿಯನ್ನು ಭರ್ತಿ ಮಾಡಬೇಕು. 3ನೇ ಹಂತದಲ್ಲಿ ಮಾಹಿತಿಯನ್ನು ಭರ್ತಿ ಮಾಡಿ, visit mode ನಲ್ಲಿ ಕಂಡು ಬರುವ 2 ಆಯ್ಕೆಗಳಲ್ಲಿ ವಿಡಿಯೋ ಕಾನ್ಫರೆನ್ಸ ಅಂಶವನ್ನು ಆಯ್ಕೆ ಮಾಡಿಕೊಳ್ಳಬೇಕು.
ನಾಲ್ಕನೇ ಹಂತದಲ್ಲಿ ಅಂತಿಮವಾಗಿ ಫಾರಂ ಭರ್ತಿ ಮಾಡಿದ ಮೇಲೆ ಕಂಡು ಬರುವ ಕ್ಯಾಪ್ಚರ್ (CAPTURE) ಕೋಡ್ ಅನ್ನು ನಮೂದಿಸಿ ಸಬ್ಮಿಟ್ (submit) ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ನೋಂದಣಿ ಮಾಡಿದ ನಂತರ ಸಂದರ್ಶಕರ ಮೊಬೈಲ್ಗೆ ವಿಸಿಟ್ ರಿಜಿಸ್ಟ್ರೇಶನ್ ಸಂಖ್ಯೆ, ಇ-ಮೇಲ್ನಲ್ಲಿ ರೂಂ. ವಿಸಿಟ್ ಸಂಖ್ಯೆ ಹಾಗೂ ಭೇಟಿ ಸಮಯ ಬರುತ್ತದೆ. ಸಂದರ್ಶಕರು ತಮ್ಮ ಮೊಬೈಲ್ನಲ್ಲಿ 'jitsi meet' ಎಂಬ ಅಪ್ಲಿಕೇಷನ್ನ್ನು ಇನಸ್ಟಾಲ್ ಮಾಡಿಕೊಳ್ಳಬೇಕು.
ಈ ಅಪ್ಲಿಕೇಶನ್ ಮೂಲಕ ವಿಡಿಯೋ ಸಂದರ್ಶನದಲ್ಲಿ ಪಾಲ್ಗೊಂಡು ಬಂಧಿಗಳ ಜೊತೆ ಮಾತುಕತೆ ನಡೆಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9620602157 ಮತ್ತು 6361713955.