ನಂದಿಗ್ರಾಮ್ ಕ್ಷೇತ್ರದಲ್ಲಿ ದೀದಿ ಸೋಲಿನ ಬಗ್ಗೆ ಪ್ರಧಾನಿ ಭವಿಷ್ಯ
ಕೋಲ್ಕತ್ತಾ, ಏಪ್ರಿಲ್ 06: ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ವಿಧಾನಸಭಾ ಚುನಾವಣಾ ಮತದಾನದ ನಡುವೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ಮುಂದುವರಿಸಿದ್ದಾರೆ.
ಕೂಚ್ ಬೆಹರ್ ಎಂಬಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೀದಿ ವಿರುದ್ಧ ಹರಿಹಾಯ್ದರು. ನಂದಿಗ್ರಾಮ್ ಚುನಾವಣಾ ಫಲಿತಾಂಶದ ನಂತರ ರಾಜಕೀಯದಲ್ಲಿ ಮಮತಾ ಬ್ಯಾನರ್ಜಿ ತಮ್ಮದೇ ಗುರಿಯನ್ನು ತಲುಪಲಿದ್ದಾರೆ ಎಂದು ಲೇವಡಿ ಮಾಡಿದರು.
475 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ: ನಾಲ್ಕು ಭಾಷೆಗಳಲ್ಲಿ ಮತದಾರರಿಗೆ ಮೋದಿ ಸಂದೇಶ
ದೀದಿ ಅವರು ಫುಟ್ಬಾಲ್ ಆಟವನ್ನು ತುಂಬಾ ಆಡುತ್ತಾರೆ ಎಂದು ಜನರೇ ಹೇಳುತ್ತಾರೆ. ನಂದಿಗ್ರಾಮ್ ಮತಗಟ್ಟೆಯಲ್ಲೂ ದೀದಿ ಅವರು ತಮ್ಮ ಆಟವನ್ನು ಪ್ರದರ್ಶಿಸಿದರು. ಅದೇ ದಿನ ಮಮತಾ ಬ್ಯಾನರ್ಜಿ ಅವರು ಸೋಲುತ್ತಾರೆ ಎಂದು ಇಡೀ ದೇಶಕ್ಕೆ ಗೊತ್ತಾಯಿತು. ಫುಟ್ಬಾಲ್ ರೀತಿಯಲ್ಲೇ ನೀವು ರಾಜಕೀಯದಲ್ಲಿ ಈಗಾಗಲೇ ಒಂದು ಸ್ಕೋರ್ ಅನ್ನು ಮಾಡಿದ್ದೀರಿ ಎಂದು ಪ್ರಧಾನಿ ಮೋದಿ ಹೇಳಿದರು.
ಮತದಾನದ ಬಗ್ಗೆ ಮೆಚ್ಚುಗೆ ಇಲ್ಲ:
ಪಶ್ಚಿಮ ಬಂಗಾಳದ 2ನೇ ಹಂತದ ಮತದಾನದಲ್ಲಿ ಶೇ.80ರಷ್ಟು ಮತದಾನ ನಡೆದಿರುವ ಬಗ್ಗೆ ಮಮತಾ ಬ್ಯಾನರ್ಜಿ ಅವರಿಗೆ ಸಂತೋಷವಿಲ್ಲ. ಮತದಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮನಸ್ಥಿತಿಯೂ ಅವರಲ್ಲಿ ಇಲ್ಲ. ಅಂದರೆ ಅವರಿಗೆ ಸೋಲಿನ ಸುಳಿವು ಸಿಕ್ಕಿದೆ ಎಂದು ಅಲ್ಲವೇ ಎಂದು ಪ್ರಧಾನಿ ಮೋದಿ ಪ್ರಶ್ನೆ ಮಾಡಿದ್ದಾರೆ. ಇತ್ತೀಚಿಗೆ ಮುಸ್ಲಿಂ ಮತಗಳ ಒಗ್ಗಟ್ಟು ಮತ್ತು ಅದನ್ನು ವಿಭಾಗಿಸಲು ಸಾಧ್ಯವಿಲ್ಲ ಎಂದು ನೀವು ಹೇಳಿದ್ದೀರಿ. ಇದರಿಂದ ಮುಸ್ಲಿಂ ಮತಗಳೇ ನಿಮ್ಮ ಶಕ್ತಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 3ನೇ ಹಂತದ ಚುನಾವಣೆ:
ರಾಜ್ಯದಲ್ಲಿ 31 ವಿಧಾನಸಭಾ ಕ್ಷೇತ್ರಗಳಿಗೆ 3ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಹೂಗ್ಲಿ ಜಿಲ್ಲೆಯ 8, ಹೌರಾ ಜಿಲ್ಲೆಯ 9 ಹಾಗೂ ದಕ್ಷಿಣದ 24 ಪರಗಣ ಜಿಲ್ಲೆಯ 16 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿದೆ. ಈ ಹಂತದಲ್ಲಿ 205 ಅಭ್ಯರ್ಥಿಗಳು ಕಣದಲ್ಲಿದ್ದು, 13 ಮಹಿಳಾ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಎರಡು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ, ಏಪ್ರಿಲ್ 1ರಂದು ಎರಡನೇ ಹಂತದ ಚುನಾವಣೆ ನಡೆದಿದೆ. ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.