ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಯಾರಿಗೆ?: ಭಾನುವಾರ ತೀರ್ಮಾನ ಎಂದ ಎಚ್‌ಡಿಕೆ

|
Google Oneindia Kannada News

ಕೋಲಾರ, ಡಿಸೆಂಬರ್ 4: "2023ರ ಕರ್ನಾಟಕ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಯಾವ ಪಕ್ಷಕ್ಕಾದರೂ ಬೆಂಬಲ ನೀಡಬೇಕೆ, ಬೇಡವೇ ಎಂಬುದನ್ನು ಭಾನುವಾರದೊಳಗೆ ತೀರ್ಮಾನ ಮಾಡಲಾಗುವುದು," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ವಿಧಾನ ಪರಿಷತ್ ಚುನಾವಣೆ ನಿಮಿತ್ತ ಕೋಲಾರ ಜಿಲ್ಲೆಯಲ್ಲಿ ಮಾಜಿ ಸಿಎಂ ಎಚ್‌ಡಿಕೆ ಶನಿವಾರ ಪ್ರಚಾರ ಕೈಗೊಂಡಿದ್ದು, ಬೆಳಗ್ಗೆ ಅವರು ಮುಳಬಾಗಿಲಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.

"ಬಿಜೆಪಿ ನಾಯಕರು ಜೆಡಿಎಸ್ ಬೆಂಬಲ ಕೇಳಿದ್ದಾರೆ ನಿಜ, ಎರಡು ದಿನದಲ್ಲಿ ನಮ್ಮ ಪಕ್ಷದ ಅಭಿಪ್ರಾಯ ಹೇಳುವುದಾಗಿ ನಾನು ಹೇಳಿರುವುದೂ ನಿಜ. ಇನ್ನೂ ಸಮಯ ಇದೆ, ಆತುರವೇನೂ ಇಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ ನಮ್ಮ ಪಕ್ಷದ್ದು. ಆ ಗೆಲುವಿಗೆ ಏನೆಲ್ಲ ಆಗಬೇಕು, ಆ ಹಿನ್ನೆಲೆಯಲ್ಲಿ ಸ್ಥಳೀಯವಾಗಿಯೇ ಪಕ್ಷದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳಬೇಕು ಎಂಬ ನಿರ್ದೇಶನವನ್ನು ಭಾನುವಾರ ಅಥವಾ ಸೋಮವಾರದ ಒಳಗೆ ತಿಳಿಸಲಾಗುವುದು," ಎಂದು ಸ್ಪಷ್ಟಪಡಿಸಿದರು.

Karnataka MLC election; Will Take Decision in 2 Days About Alliance With BJP Says HD Kumaraswamy

"ಬಿಜೆಪಿ ಒಂದು ಕಡೆ ಜೆಡಿಎಸ್ ಬೆಂಬಲ ಕೇಳುತ್ತದೆ, ಇನ್ನೊಂದು ಕಡೆ ನಮ್ಮ ಪಕ್ಷವನ್ನು ಮುಗಿಸುವ ಪ್ರಯತ್ನ ಮಾಡುತ್ತಿದೆ. ಜೆಡಿಎಸ್ ಪಕ್ಷವನ್ನು ಸಂಪೂರ್ಣ ನಾಶ ಮಾಡಬೇಕೆಂದು ಎರಡೂ ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಇದೆಲ್ಲವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. 2023ಕ್ಕೆ ಜನತೆಯಿಂದಲೇ ಇದೆಲ್ಲಕ್ಕೂ ಉತ್ತರ ದೊರೆಯಲಿದೆ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ಉತ್ತರಿಸಿದರು.

"ಚುನಾವಣೆಗಳನ್ನು ಹೇಗೆ ಗೆಲ್ಲಬೇಕು ಎಂಬುದು ಬಿಜೆಪಿಗೆ ಚೆನ್ನಾಗಿ ಕರಗತವಾಗಿದೆ. ಹಣದಿಂದ ಗೆಲುವು ಸಾಧಿಸುವುದು ಹೇಗೆ ಎಂಬುದು ಆ ಪಕ್ಷಕ್ಕೆ ಚೆನ್ನಾಗಿ ತಿಳಿದಿದೆ. ರಾಜ್ಯದ ಹಣ ಲೂಟಿ ಮಾಡಿ ಆ ಪಕ್ಷ ಚುನಾವಣೆಗಳನ್ನು ಗೆಲ್ಲುತ್ತಿದೆ. ಆ ವಿಷಯದಲ್ಲಿ ಆ ಪಕ್ಷದ ನಾಯಕರಿಗೆ ಒಳ್ಳೆಯ ಅನುಭವ ಇದೆ ಹಾಗೂ ಅದರಲ್ಲಿ ಅವರು ಯಶಸ್ಸು ಸಾಧಿಸಿದ್ದಾರೆ. ಇಂಥ ಗೆಲುವು ನಿರಂತರವಾಗಿ ಎಲ್ಲ ಸಂದರ್ಭಗಳಲ್ಲೂ ಆಗುತ್ತದೆ ಎಂದು ಅವರು ನಂಬಿದ್ದಾರೆ. ಅದಕ್ಕೆ ವಿರುದ್ಧವಾಗಿ ಜನರು ತೀರ್ಮಾನ ತೆಗೆದುಕೊಳ್ಳುವ ಕಾಲ ಬಂದಿದೆ. ಹಣ ಬಲದ ವಿರುದ್ಧ ಒಂದಲ್ಲ ಒಂದು ದಿನ ಜನರು ತಿರುಗಿಬೀಳುತ್ತಾರೆ," ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದರು.

Karnataka MLC election; Will Take Decision in 2 Days About Alliance With BJP Says HD Kumaraswamy

ಸಿದ್ದರಾಮಯ್ಯಗೆ ಪರೋಕ್ಷ ಚಾಟಿ
"ಚಿಹ್ನೆಯ ಮೇಲೆ ಈ ಚುನಾವಣೆ ನಡೆಯಲ್ಲ. ಕೋಲಾರ- ಚಿಕ್ಕಬಳ್ಳಾಪುರ ಸೇರಿ ನಾವು ಸ್ಪರ್ಧೆ ಮಾಡಿರುವ ಆರೂ ಕ್ಷೇತ್ರಗಳಲ್ಲಿಯೂ ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ತ್ರಿಕೋನ ಸ್ಪರ್ಧೆ ಇದೆ. ಈ ಚುನಾವಣೆಯಲ್ಲಿ ಹಣಕ್ಕಿಂತ ಹೆಚ್ಚಾಗಿ ಸ್ಥಳೀಯವಾಗಿರುವ ರಾಜಕೀಯ ಬೆಳವಣಿಗೆಗಳು ಪ್ರಭಾವ ಬೀರಲಿವೆ. ಹೀಗಿದ್ದರೂ ಚುನಾವಣೆ ಎಂದ ಕೂಡಲೇ ಕಾಂಗ್ರೆಸ್ ನಾಯಕರೊಬ್ಬರು ಜೆಡಿಎಸ್ ಪಕ್ಷಕ್ಕೆ ಸರ್ಟಿಫಿಕೇಟ್ ಕೊಡಲು ಮುಂದಾಗುತ್ತಾರೆ. 2018ರಿಂದಲೂ ಅವರಿಂದ ಈ ರೀತಿಯ ಹೇಳಿಕೆಗಳು ಆರಂಭವಾಗಿದ್ದು, ಇದು 2023ರ ವಿಧಾನಸಭೆ ಚುನಾವಣೆವರೆಗೂ ಮುಂದುವರಿಯಲಿವೆ," ಎಂದು ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೆಸರೇಳದೆಯೇ ಚಾಟಿ ಬೀಸಿದರು.

"ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಅಂತಾರೆ, ಮತ್ತೆ ನಮ್ಮ ಮನೆ ಬಾಗಿಲಿಗೇ ಬಂದು ನಿಂತ್ಕೊಂಡು, ಬನ್ನಿ ಸರಕಾರ ಮಾಡೋಣ ಅಂತ ಕರೀತಾರೆ. ಕಾಂಗ್ರೆಸ್ ಪಕ್ಷದ ನಾಯಕರ ನಡವಳಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳುವುದನ್ನು ನಾಡಿನ ಜನರ ವಿವೇಚನೆಗೆ ಬಿಡಲು ನಾನು ನಿರ್ಧಾರ ಮಾಡಿದ್ದೇನೆ," ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಓಮಿಕ್ರಾನ್ ನಿಯಂತ್ರಿಸಿ
ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಬಗ್ಗೆ ಈಗಾಗಲೇ ಸರಕಾರದ ಗಮನ ಸೆಳೆದಿದ್ದೇನೆ, ನಿನ್ನೆಯೂ ಈ ಬಗ್ಗೆ ಮಾತನಾಡಿದ್ದೇನೆ. ಸರಕಾರವೂ ಹಲವಾರು ಸಭೆಗಳನ್ನು ಮಾಡುತ್ತಿದೆ. ಕೇವಲ ಸಭೆ ಮಾಡಿದರೆ ಉಪಯೋಗವಿಲ್ಲ. ಎರಡನೇ ಅಲೆಯಲ್ಲಿ ಉಂಟಾದ ಪ್ರಾಣಹಾನಿ ಈ ಬಾರಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ವೈದ್ಯರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಅವರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಎಚ್‌ಡಿಕೆ ರಾಜ್ಯ ಸರಕಾರಕ್ಕೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ವಕ್ಕಲೇರಿ ರಾಮು, ಮಾಜಿ ಶಾಸಕ ವೆಂಕಟ ಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಮುಖಂಡ ಸಮೃದ್ಧಿ ಮಂಜುನಾಥ್ ಮುಂತಾದವರು ಜೊತೆಯಲ್ಲಿದ್ದರು.

Recommended Video

ಓಮಿಕ್ರಾನ್ ರೂಪಾಂತರ, ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. | Oneindia Kannada | Oneindia Kannada

English summary
The JDS party will decide on Sunday whether or not to support BJP party, Former Chief Minister HD Kumaraswamy Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X