ಮೂಢನಂಬಿಕೆಗೆ ಇಬ್ಬರು ಹೆಣ್ಣುಮಕ್ಕಳನ್ನು ಬಲಿಕೊಟ್ಟ ಮಾಜಿ ಪ್ರಾಂಶುಪಾಲ ತಂದೆ, ಗೋಲ್ಡ್ ಮೆಡಲಿಸ್ಟ್ ತಾಯಿ
ಚಿತ್ತೂರು, ಜನವರಿ 25: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಮದನಪಲ್ಲಿಯಲ್ಲಿ ವಿಚಿತ್ರ ಘಟನೆ ನಡೆದಿದ್ದು, ಇದುವರೆಗೂ ಕಂಡು ಕೇಳರಿಯದ ಘಟನೆಗೆ ಜನ ಹಾಗೂ ಪೊಲೀಸ್ ಇಲಾಖೆ ಬೆಚ್ಚಿಬಿದ್ದಿದೆ.
ಪೋಷಕರೇ ಪೂಜೆ ನಡೆಸಿ, ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ್ದಾರೆ. ತಮಗಿದ್ದ ವಿಪರೀತ ಭಕ್ತಿಯಿಂದ ಮಕ್ಕಳನ್ನು ದೇವರಿಗೆ ಪೋಷಕರು ಬಲಿ ಕೊಟ್ಟಿರುವ ಘಟನೆ ಮದನಪಲ್ಲಿ ಹೊರಹೊಲಯದ ಶಿವನಗರದಲ್ಲಿ ನಡೆದಿದೆ.
ಮುನೇಶ್ವರ ಸ್ವಾಮಿ ವಿಗ್ರಹದ ಕೈಯಲ್ಲಿದ್ದ ಖಡ್ಗ ಹೊತ್ತೊಯ್ದ ಭೂಪ!
ತಮ್ಮ ಮಕ್ಕಳಿಗೆ ಈ ಜನ್ಮದಲ್ಲಿ ಸಾವು ಬರುವುದಿಲ್ಲ ಅನ್ನುವ ನಂಬಿಕೆಯಿಂದ ದೇವರಿಗೆ ಬಲಿ ಕೊಟ್ಟಿದ್ದಾರೆ. ತಂದೆ ಪುರುಷೋತ್ತಮ ನಾಯ್ಡು ಹಾಗೂ ತಾಯಿ ಪದ್ಮಜಾ ಸೇರಿಕೊಂಡು, ಸಾಯಿ ದಿವ್ಯಾ ಮತ್ತು ಅಲೆಖ್ಯಾ ಎಂಬ ಇಬ್ಬರು ಮಕ್ಕಳನ್ನು ಮನೆಯಲ್ಲೇ ಕ್ರೂರವಾಗಿ ಕೊಲೆ ಮಾಡಿದ್ದಾರೆ.
ಪೋಷಕರಿಗೆ ದೇವರ ಮೇಲಿದ್ದ ವಿಪರೀತ ನಂಬಿಕೆಯೇ ಈ ಅನಾಹುತಕ್ಕೆ ಕಾರಣವಾಗಿದ್ದು, ಮಕ್ಕಳ ಮೇಲೆ ಅತಿಯಾದ ಪ್ರೀತಿ ಹೊಂದಿದ್ದ ಪೋಷಕರು, ಎಲ್ಲಿ ನಮ್ಮ ಮಕ್ಕಳಿಗೆ ಸಾವು ಬಂದು ಬಿಡುತ್ತೋ ಅನ್ನುವ ಭಯಕ್ಕೆ ಪೂಜೆ ಮಾಡಿ ಕೊಲೆ ಮಾಡಿದ್ದಾರೆ.
ಹತ್ಯೆಯ ಹಿಂದೆ ಮೂರನೇ ವ್ಯಕ್ತಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ. ಇದಲ್ಲದೇ ತಂದೆ ಪುರುಷೋತ್ತಂ ನಾಯ್ಡು, ಮದನಪಲ್ಲಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಹಾಗೂ ತಾಯಿ Msc in mathematics ನಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿದ್ದರು. ಆದರೂ ಮೂಢನಂಬಿಕೆಗೆ ತಮ್ಮ ಮಕ್ಕಳನ್ನು ಬಲಿಕೊಟ್ಟಿದ್ದಾರೆ.
ಇನ್ನು ಕೊಲೆಯಾದ ಅಲೆಖ್ಯಾ ಮತ್ತು ಸಾಯಿ ದಿವ್ಯಾ ಇಬ್ಬರೂ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದರು. ಪವಾಡಗಳು ಕೊನೆಯ ಬಾರಿಗೆ ಮನೆಯಲ್ಲಿ ಸಂಭವಿಸುತ್ತವೆ ಎಂದು ಪೂಜಿಸಿ ಮೊದಲು ಸಾಯಿ ದಿವ್ಯಾ ನಂತರ ಅಲೇಖ್ಯಾಳನ್ನು ಡಂಬಲ್ಸ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಮನೆಯಿಂದ ಬಂದ ದೊಡ್ಡ ಶಬ್ಧ ಕೇಳಿ ಸ್ಥಳೀಯರು ಗಾಬರಿ ಆಗಿದ್ದಾರೆ. ಕೊನೆಗೆ ಘಟನೆ ಕುರಿತು ಪುರುಷೋತ್ತಂ ನಾಯ್ಡು ಕರೆ ಮಾಡಿ ಸಹೋದ್ಯೋಗಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಎಎಸ್ಪಿ ರವಿ ಮನೋಹರಾಚಾರಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಮ್ಮ ಮಕ್ಕಳನ್ನು ಬಲಿ ಕೊಟ್ಟಿದ್ದೇವೆ. ನಾಳೆ ಒಳಗೆ ಮತ್ತೆ ಹುಟ್ಟಿ ಬರುತ್ತಾರೆ. ನೀವು ಹೋಗಿ ಎಂದು ಪೋಷಕರು ಪೊಲೀಸರೊಟ್ಟಿಗೆ ಗಲಾಟೆ ಕೂಡ ಮಾಡಿದ್ದಾರೆ.