• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆ ಕಳೆದುಕೊಂಡಿದ್ದ ವೃದ್ಧೆಗೆ ಆಸರೆಯಾದ ಯುವಾ ಬ್ರಿಗೇಡ್

By ಕಾರವಾರ ಪ್ರತಿನಿಧಿ
|

ಕಾರವಾರ, ಫೆಬ್ರವರಿ 16; ಇದ್ದ ಹಂಚಿನ ಮುರುಕಲು ಮನೆಯನ್ನೂ ಅತಿವೃಷ್ಠಿಯಿಂದಾಗಿ ಕಳೆದುಕೊಂಡು ದಿಕ್ಕಿಲ್ಲದೇ ಕೂತಿದ್ದ ವೃದ್ಧೆಯೊಬ್ಬರಿಗೆ ಯುವಾಬ್ರಿಗೇಡ್ ನೆರವಾಗಿದೆ. ತನ್ನಿಬ್ಬರು ಬೌದ್ಧಿಕವಾಗಿ ಸವಾಲಿಗೊಳಗಾಗಿರುವ ಮಕ್ಕಳೊಂದಿಗೆ ಜೋಪಡಿಯಲ್ಲಿ ದಿನ ದೂಡುತ್ತಿದ್ದ ವೃದ್ಧೆ ಇಳಿವಯಸ್ಸಿನಲ್ಲಿ ಅಂದದ ಮನೆಗೆ ಗೃಹಪ್ರವೇಶ ಮಾಡಿದ್ದಾರೆ.

2019ರಲ್ಲಿ ಸುರಿದ ಧಾರಾಕಾರ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ನದಿ-ತೊರೆಗಳು ತುಂಬಿ ಹರಿದಿದ್ದವು. ನೆರೆ ಹಾವಳಿ ಉಂಟಾಗಿ ಹಲವು ಕಡೆಗಳಲ್ಲಿ ಜನ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದರು. ಕುಮಟಾ ತಾಲೂಕಿನ ಹೆಗಡೆಯಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಸುಮಾರು 70 ವರ್ಷದ ವೃದ್ಧೆ ಮಹಾದೇವಿ ಗೌಡ ಅವರ ಮನೆಯ ಮೇಲೆ ಮರವೊಂದು ಮುರಿದು ಬಿದ್ದು ಮುರುಕಲು ಮನೆ ಕೂಡ ಭಾಗಶಃ ಧರಾಶಾಹಿಯಾಗಿತ್ತು.

ಒಂದು ಕಡೆ ವಯಸ್ಸಾಗಿ ದುಡಿಯುವ ಶಕ್ತಿ ಕುಂದುತ್ತಿದ್ದರೂ, ಬೌದ್ಧಿಕವಾಗಿ ಸವಾಲಿಗೊಳಗಾಗಿರುವ ಇಬ್ಬರು ಮಕ್ಕಳನ್ನು ಸಾಕುವ ಜವಾಬ್ದಾರಿ ವೃದ್ಧೆಯ ಮೇಲೆ. ಹೀಗಾಗಿ ಅಲ್ಲಿ ಇಲ್ಲಿ ಏನೋ ಕೆಲಸ ಮಾಡಿ ದಿನಕ್ಕಾಗುವಷ್ಟು ಹಣ ಹೊಂದಿಸಿಕೊಂಡು ಬಂದು ಮಕ್ಕಳನ್ನು ಸಲುಹುತ್ತಿದ್ದಾಕೆಗೆ ಮನೆ ಮುರಿದು ಬಿದ್ದದ್ದು ಬರ ಸಿಡಿಲು ಬಡಿದಂತಾಗಿತ್ತು.

ಬಿದ್ದ ಮನೆಯ ಹೆಂಚು, ಮರದ ರೀಪುಗಳನ್ನೆಲ್ಲ‌ ಒಟ್ಟುಗೂಡಿಸಿಕೊಂಡು ಅಲ್ಲೇ ಇನ್ನಷ್ಟು ಮರದ ದಬ್ಬೆ, ಇತರ ವಸ್ತುಗಳನ್ನೇ ಆಧಾರವನ್ನಾಗಿ ಕೊಟ್ಟು ಒಂದು ತಾತ್ಕಾಲಿಕ ಜೋಪಡಿ ಕಟ್ಟಿಕೊಂಡಿದ್ದರು. ವಿಷಯ ತಿಳಿದ ಸ್ಥಳೀಯ ಕೆಲವರು ಜೋಪಡಿಗೆ ತಗಡಿನ ಹೊದಿಕೆ ಮಾಡಿಕೊಟ್ಟಿದ್ದರು.

ಹೊಸ ಮನೆ ಕಟ್ಟಿಕೊಡಲು ಯೋಜನೆ

ಹೊಸ ಮನೆ ಕಟ್ಟಿಕೊಡಲು ಯೋಜನೆ

ಈ ವಿಷಯ ಒಮ್ಮೆ ಯುವಾ‌ಬ್ರಿಗೇಡ್ ಕಾರ್ಯಕರ್ತರಿಗೆ ತಿಳಿಯಿತು. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಬಳಿಕ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ತಿಳಿಸಿದಾಗ ಹೊಸದಾಗಿ ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಕಾರ್ಯಕರ್ತರು, ಒಂದಷ್ಟು ದಾನಿಗಳಿಂದ ಮನೆ ನಿರ್ಮಾಕ್ಕೆ ಬೇಕಾದ ವಸ್ತುಗಳನ್ನೆಲ್ಲ ದೇಣಿಗೆಯಾಗಿ ಪಡೆದರು.

ಮನೆ ಪೂರ್ಣ ತೆರವು

ಮನೆ ಪೂರ್ಣ ತೆರವು

ಭಾಗಶಃ ಬಿದ್ದಿದ್ದ ಮನೆಯ ಪೂರ್ಣ ಭಾಗವನ್ನು ತೆರವುಗೊಳಿಸಿದರು. ಕಾರ್ಯಕರ್ತರೇ ಸೇರಿಕೊಂಡು ಮನೆಯ ಅಡಿಪಾಯ ತೆಗೆದರು. ಅಡಿಪಾಯಕ್ಕೆ ಮಣ್ಣು ತುಂಬುವ ಕೆಲಸ ಮಾಡಿದರು. ಅಂಗಳ ಮಾಡಿದರು. ಸ್ಥಳೀಯ ಮೇಸ್ತ್ರಿಗಳಿಂದ ಕಲ್ಲು ಕಟ್ಟಿಸಿ, ಗಿಲಾವ್ ಮಾಡಿಸಿದ ಬಳಿಕ ಮನೆಗೆ ಹೆಂಚನ್ನು ಕೂಡ ಕಾರ್ಯಕರ್ತರೇ ಸ್ವತಃ ಜೋಡಿಸಿದರು.

ಅಂದದ ಮನೆ ನಿರ್ಮಾಣ

ಅಂದದ ಮನೆ ನಿರ್ಮಾಣ

ಯುವ ಬ್ರಿಗೇಡ್ ಕಾರ್ಯಕರ್ತರು ಕಟ್ಟಡ ನಿರ್ಮಾಣದ ಕೂಲಿಕಾರರಂತೆ ದುಡಿದರು. ಎಲ್ಲರ ಶ್ರಮದ ಫಲವಾಗಿ ಕೊನೆಗೂ ಮಹಾದೇವಿ ಗೌಡ ಅವರಿಗೆ ಅಂದದ ಮನೆಯೊಂದು ನಿರ್ಮಾಣಗೊಂಡಿತು. ಮೂವರೂ ಈಗ ಇದೇ ಹೊಸ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

ಹಾಲು ಉಕ್ಕಿಸಲಾಯಿತು

ಹಾಲು ಉಕ್ಕಿಸಲಾಯಿತು

ಸೋಮವಾರ ಈ ಮನೆಯ ಗೃಹಪ್ರವೇಶ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ‌ ನಡೆಯಿತು. ಮನೆಯಲ್ಲಿ ಹಾಲುಕ್ಕಿಸಿ ಸಂಭ್ರಮಿಸಲಾಯಿತು. ವೃದ್ಧೆಗೆ ಮನೆ ಒಪ್ಪಿಸಿಕೊಡುವಾಗ ಎಲ್ಲರ ಮುಖದಲ್ಲೂ ಮಂದಹಾಸವಿದ್ದರೆ, ಅಜ್ಜಿಯ ಕಂಗಳಲ್ಲಿ ಅವ್ಯಕ್ತವಾದ ಕಣ್ಣೀರ ಹನಿಗಳಿದ್ದವು.

English summary
Yuva Brigade activists help the 70 year old women to construct new house in Kumta, Uttar Kannada district. Women house damaged in 2019 rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X