ಗೋಕರ್ಣ ಕಡಲತೀರದಲ್ಲಿ ಈಜಲು ತೆರಳಿದ್ದ ಯುವಕ ಸಾವು: ನಾಲ್ವರ ರಕ್ಷಣೆ
ಕಾರವಾರ, ಜನೆವರಿ 5: ಪ್ರವಾಸಕ್ಕೆಂದು ಬಂದು ಈಜಲು ಸಮುದ್ರಕ್ಕೆ ಇಳಿದಿದ್ದ ಐವರು ಪ್ರವಾಸಿಗರ ಪೈಕಿ ಓರ್ವ ಮೃತಪಟ್ಟಿದ್ದು, ನಾಲ್ವರನ್ನು ರಕ್ಷಣೆ ಮಾಡಿರುವ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.
ಹೊಸ ವರ್ಷಾಚರಣೆ: ಕಾರವಾರ ಕಡಲ ತೀರ ಖಾಲಿ, ಗೋವಾ ಫುಲ್
ತುಮಕೂರು ಮೂಲದ ರಂಗನಾಥ ರಂಗಸಾಮಯ್ಯ (19) ಮೃತ ಯುವಕನಾಗಿದ್ದಾನೆ. ತುಮಕೂರಿನಿಂದ 10 ಜನ ಸೇರಿ ಪ್ರವಾಸಕ್ಕೆ ಆಗಮಿಸಿದ್ದರು. ದೇವರ ದರ್ಶನ ಪಡೆದು ಸಮುದ್ರದಲ್ಲಿ ಈಜಾಡಲು ತೆರಳಿದಾಗ ಒಮ್ಮೆಲೆ ಬಂದ ಅಲೆಗೆ ಐವರು ಯುವಕರು ಕೊಚ್ಚಿಕೊಂಡು ಹೋಗಿದ್ದಾರೆ.
ತಕ್ಷಣ ಜೊತೆಯಲ್ಲಿದ್ದವರು ಕೂಗಿಕೊಂಡಾಗ ಸಮೀಪದಲ್ಲೇ ಇದ್ದ ಪ್ರವಾಸಿಗರಿಗೆ ಬೋಟಿಂಗ್ ಕರೆದುಕೊಂಡು ತೆರಳುವ ಸಿಬ್ಬಂದಿಗಳಾದ ಶೇಖರ ಹರಿಕಾಂತ, ನಿತ್ಯಾನಂದ ಹರಿಕಾಂತ ಎಂಬುವವರು ಬೋಟ್ ಮೂಲಕ ತೆರಳಿ ನಾಲ್ವರನ್ನು ಹರಸಾಹಸ ಮಾಡಿ ಕರೆ ತಂದಿದ್ದಾರೆ.
ದಡಕ್ಕೆ ತರುವ ವೇಳೆಯಲ್ಲಿ ಓರ್ವ ಮಾತ್ರ ಅಲೆಗಳಿಗೆ ಸಿಕ್ಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ. ತಕ್ಷಣ ಆತನನ್ನು ಆ್ಯಂಬುಲೆನ್ಸ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.