ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ; ಯುವಕನಿಂದ ಅಖಂಡ ಕರ್ನಾಟಕ ಸೈಕಲ್ ಯಾತ್ರೆ

|
Google Oneindia Kannada News

ಕಾರವಾರ, ಅಕ್ಟೋಬರ್ 1: ದೇಶದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ದಿನಗಳ ಹಿಂದೆ ರಾಜ್ಯದ ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಳಿಕ ಅತ್ಯಾಚಾರ ತಡೆಗಟ್ಟಲು ಹಾಗೂ ಅತ್ಯಾಚಾರಿಗಳ ಮೇಲೆ‌ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯ ಕೇಳಿಬಂದಿದ್ದವು.

Recommended Video

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕು.... ಸೈಕಲ್‌ನಲ್ಲಿ ರಾಜ್ಯ ಸುತ್ತಿ ಜಾಥ ನಡೆಸಿದ ಯುವಕ | Oneindia Kannada

ಆದರೆ ಈ ಆಗ್ರಹಗಳು ಘಟನೆಗಳು ಘಟಿಸಿದಾಗ ಮಾತ್ರ ಕೇಳಿಬರುತ್ತಿವೆಯೇ ಹೊರತು ತದನಂತರದಲ್ಲಿ ಮತ್ತೆ ಸದ್ದೇ ಆಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಪರಿಣಾಮಕಾರಿಯಾಗಿ ಒತ್ತಡ ಹೇರಲು ಹಾಗೂ ಜನರನ್ನು ಈ ಕುರಿತಾಗಿ ಜಾಗೃತಗೊಳಿಸುವ ಸಲುವಾಗಿ ಯುವಕನೊಬ್ಬ "ಅಖಂಡ ಕರ್ನಾಟಕ ಸೈಕಲ್ ಯಾತ್ರೆ' ಹೊರಟಿದ್ದಾನೆ.

ಬೆಂಗಳೂರಿನ ಬನ್ನೇರುಘಟ್ಟದ ನಿವಾಸಿ ಕಿರಣ್ ಬಿ.ವಿ. ಈ ಸೈಕಲ್ ಯಾತ್ರೆ ಹೊರಟಿದ್ದಾನೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮಹಿಳೆಯರು, ‌ಮಕ್ಕಳು ಮತ್ತು ಯುವತಿಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಅವರಿಗೆ ರಕ್ಷಣೆ ಒದಗಿಸಲು ಈ ಬಗ್ಗೆ ಕಾನೂನು ರೂಪಿಸುವಂತೆ ಒತ್ತಾಯಿಸಿ ಕಿರಣ್ ರಾಜ್ಯದ 31 ಜಿಲ್ಲೆಗಳಲ್ಲಿ ಯಾತ್ರೆ ನಡೆಸುತ್ತಿದ್ದಾನೆ. ಪ್ರತಿ ಜಿಲ್ಲೆಗೆ ಭೇಟಿ ನೀಡಿದಾಗಲೂ ಅಲ್ಲಿಯ ಜಿಲ್ಲಾ ಕೇಂದ್ರಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯ ಮಾಡುತ್ತಿದ್ದಾನೆ.

Karwar: Young Man Cycling Whole Karnataka To Raise Awareness On Rise In Violence Against Women

ಕೇವಲ ಮಹಿಳೆಯರಿಗೆ ರಕ್ಷಣೆಯಷ್ಟೇ ಅಲ್ಲ, ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವವರ ವಿರುದ್ಧ ಗಲ್ಲು ಶಿಕ್ಷೆಯಂಥ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಕಿರಣ್ ಸಲ್ಲಿಸುವ ಮನವಿಯಲ್ಲಿ ಆಗ್ರಹಿಸಿದ್ದಾನೆ. ಈಗಾಗಲೇ 16 ಜಿಲ್ಲೆಗಳನ್ನು ಸುತ್ತಾಡಿರುವ ಈತ, 17ನೇ ಜಿಲ್ಲೆಯಾದ ಉತ್ತರ ಕನ್ನಡದ ಕಾರವಾರಕ್ಕೆ ಶುಕ್ರವಾರ ಭೇಟಿ ನೀಡಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಇನ್ನು ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ಕಿರಣ್, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ವರದಿಗಳಿಂದಾಗಿ ಮನನೊಂದು ಈ ಯಾತ್ರೆಗೆ ಮುಂದಾಗಿದ್ದಾನೆ. ಆ.22ಕ್ಕೆ ಬೆಂಗಳೂರಿನಿಂದ ಹೊರಟಿದ್ದ ಈತ, ಈಗಾಗಲೇ ಮನೆ ಬಿಟ್ಟು 40 ದಿನಗಳಾಗಿವೆ. ಪ್ರತಿದಿನ ಸುಮಾರು 50 ಕಿ.ಮೀ.ನಷ್ಟು ದೂರವನ್ನು ಕ್ರಮಿಸುತ್ತಿದ್ದಾನೆ.‌ ಯಾತ್ರೆಗಾಗಿ ಹೊಸ ಹರ್ಕ್ಯುಲಸ್ ಸೈಕಲ್ ಖರೀದಿಸಿರುವ ಕಿರಣ್, ತನ್ನ ಹಾಗೂ ತನ್ನ ತಂದೆ- ತಾಯಿ ಕೊಟ್ಟ ಹಣದಲ್ಲೇ ಅಖಂಡ ಕರ್ನಾಟಕ ಸುತ್ತುತ್ತಿದ್ದಾನೆ.

Karwar: Young Man Cycling Whole Karnataka To Raise Awareness On Rise In Violence Against Women

ಒಮ್ಮೊಮ್ಮೆ ರಾತ್ರಿ ಹೋಟೆಲ್, ಲಾಡ್ಜ್‌ಗಳಲ್ಲಿ ಈತ ತಂಗುತ್ತಾನೆ, ಊಟವನ್ನೂ ಅಲ್ಲೇ ಮಾಡುತ್ತಾನೆ. ಆದರೆ ಸೈಕಲ್‌ನಲ್ಲಿ ಟೆಂಟ್ ಅನ್ನು ಕೂಡ ತಂದಿರುವ ಕಿರಣ್, ಸ್ಥಳಾವಕಾಶ ದೊರೆತಲ್ಲಿ ಟೆಂಟ್ ಹಾಕಿ ಆ ದಿನ ರಾತ್ರಿ ಕಳೆಯುತ್ತಾರೆ. ಇನ್ನು ರಸ್ತೆಯಲ್ಲಿ ಸಿಗುವ ಕೆಲವರು ಕೊಡಿಸುವ ಊಟ- ತಿಂಡಿಯನ್ನೂ ಸ್ವೀಕರಿಸುತ್ತಾರೆ.

ಇನ್ನು ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಿರಣ್, "ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರಗಳು ನನ್ನ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಸೈಕಲ್ ಯಾತ್ರೆ ಹೊರಡಲು ಯೋಜಿಸಿ, ಗೆಳೆಯರೊಂದಿಗೆ ಮಾತುಕತೆ ನಡೆಸಿದೆ. ಕೆಲವರು ತಮಗೆ ಬರಲಾಗದಿದ್ದರೂ ಬೆಂಬಲ ನೀಡಿದರು. ಆದರೆ ಇನ್ನು ಕೆಲವರು, "ಯಾಕೆ ಸುಮ್ನೆ ತಿರುಗ್ತೀಯಾ? ಮನೇಲಿ ಉಂಡ್ಕೊಂಡು, ತಿಂದ್ಕೊಂಡಿರ್ಲಿಕ್ಕೇನು?,'' ಎಂದು ಕೂಡ ಮೂದಲಿಸಿದರು.

Karwar: Young Man Cycling Whole Karnataka To Raise Awareness On Rise In Violence Against Women

"ಆದರೆ ನನ್ನ ದೇಶಕ್ಕಾಗಿ, ಪೂಜ್ಯ ಭಾವನೆಯಿಂದ ನೋಡುವ ಮಹಿಳೆಯರ ರಕ್ಷಣೆಗಾಗಿ ಯಾರಿಗಾಗಿಯೂ ಕಾಯದೇ ಒಬ್ಬಂಟಿಯಾಗಿ ಈ ಯಾತ್ರೆ ಶುರು ಮಾಡಿದೆ. ಈಗ ರಾಜ್ಯದಾದ್ಯಂತ ಬೆಂಬಲ ಸಿಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಪ್ರತಿದಿನ ಕೂಡ ಒಬ್ಬರಲ್ಲಾ ಒಬ್ಬರು ಮೆಸೇಜ್ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುತ್ತಾರೆ,'' ಎಂದು ಖುಷಿಯಿಂದಲೇ ನುಡಿಯುತ್ತಾರೆ.

ಇನ್ನು ಇತ್ತೀಚಿಗೆ ಭಾರೀ ಸದ್ದು ಮಾಡಿದ್ದ ಮೈಸೂರು ಗ್ಯಾಂಗ್ ರೇಪ್ ಪ್ರಕರಣ ನಡೆದಿದ್ದು ಆ.24ಕ್ಕೆ. ಆದರೆ ಘಟನೆಯ ಎರಡು ದಿನಕ್ಕೂ ಮುನ್ನ, ಅಂದರೆ 22ರಂದೇ ಕಿರಣ್ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಯಾತ್ರೆ ಪ್ರಾರಂಭಿಸಿದ್ದ. ಇನ್ನು ಯಾತ್ರೆಯ ಕೊನೆಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿ ಒತ್ತಾಯಿಸುವುದಾಗಿಯೂ ಕಿರಣ್ ತಿಳಿಸಿದ್ದಾರೆ.

English summary
Bannerghatta-based Young Man cycling whole Karnataka to raise awareness on rise in violence against women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X