• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲೆಕ್ಷನ್ ಟಿಕೆಟ್ ಅಂದ್ರೆ ಬಸ್ ಟಿಕೆಟ್ ಅಲ್ಲ: ಆರ್.ವಿ. ದೇಶಪಾಂಡೆ

|
Google Oneindia Kannada News

ಕಾರವಾರ, ಆಗಸ್ಟ್ 03: ಮಾಜಿ ಸಚಿವ, ಹಳಿಯಾಳ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಆರ್.ವಿ. ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್ ಕಳೆದ ಮೂರು ದಶಕಗಳಿಂದಲೂ ರಾಜಕೀಯದಲ್ಲಿ ಗುರು- ಶಿಷ್ಯರು. ಅವರನ್ನು ಬಿಟ್ಟು ಇವರಿಲ್ಲ, ಇವರನ್ನು ಬಿಟ್ಟು ಅವರಿಲ್ಲ ಎಂಬಂತಿದ್ದ ಈ ಇಬ್ಬರು ನಾಯಕರುಗಳ ನಡುವೆ ಇತ್ತೀಚಿಗೆ ಸಂಬಂಧ ಹಳಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದಿಂದಲೇ ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿದ್ದೇನೆಂದು ಬಹಿರಂಗವಾಗಿ ಘೋಟ್ನೇಕರ್ ಹೇಳಿಕೆಗಳನ್ನು ನೀಡುತ್ತಿದ್ದು, ಇದು ಹಾಲಿ ಶಾಸಕರಾಗಿರುವ ದೇಶಪಾಂಡೆಯವರಿಗೆ ಇರಿಸು- ಮುರಿಸು ಉಂಟು ಮಾಡುತ್ತಿದೆ.

ಇನ್ನು 'ಒನ್ ಇಂಡಿಯಾ ಕನ್ನಡ'ದ ಫೇಸ್‌ಬುಕ್ ಸಂವಾದದಲ್ಲಿ ಪಾಲ್ಗೊಂಡಿದ್ದ ಆರ್.ವಿ. ದೇಶಪಾಂಡೆ, ಘೋಟ್ನೇಕರ್ ಹಳಿಯಾಳ ಕ್ಷೇತ್ರದಿಂದಲೇ ಟಿಕೆಟ್ ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. "ಕೇಳಿದರು ಅಂತ ಟಿಕೆಟ್ ಕೊಡಲು ಬರುವುದಿಲ್ಲ. ಅದೇನು ಬಸ್ ಟಿಕೆಟ್ ಅಲ್ಲ,'' ಎಂದು ಘೋಟ್ನೇಕರ್‌ಗೆ ಈ ವೇಳೆ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ.

"ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಹಿರಂಗವಾಗಿ ನಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿದ್ದಾರೆ. ಅದು ಹಳೇ ಮಾತು. ಅದು ಅವರ ನಿರ್ಣಯ, ಇದರ ಬಗ್ಗೆ ಈಗ ಹೆಚ್ಚು ಟೀಕೆ ಟಿಪ್ಪಣಿಗಳನ್ನು ಮಾಡಲು ನಾನು ಹೋಗುವುದಿಲ್ಲ. ಅದು ಅವರಿಗೆ ಬಿಟ್ಟ ವಿಚಾರ ಎಂದಿರುವ ದೇಶಪಾಂಡೆ, ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅದಕ್ಕೆ ಗಡಿಬಿಡಿ ಯಾಕೆ?,'' ಎಂದು ಪ್ರಶ್ನಿಸಿದ್ದಾರೆ.

 ಚುನಾವಣೆಗೆ ಸೀಮಿತ ರಾಜಕಾರಣಿ ಅಲ್ಲ

ಚುನಾವಣೆಗೆ ಸೀಮಿತ ರಾಜಕಾರಣಿ ಅಲ್ಲ

ಘೋಟ್ನೇಕರ್ ಹೆಸರು ಹೇಳದೆ, ಸ್ನೇಹಿತರು ಎಂದು ಸಂಬೋಧಿಸಿ ಮಾತನಾಡಿದ ದೇಶಪಾಂಡೆ, "ಅವರು ನಮ್ಮ ಜಿಲ್ಲೆಯಿಂದ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಜನವರಿಯ ತನಕ ಅವರ ಅಧಿಕಾರ ಇದೆ. ಆದರೆ ಕಳೆದ ಏಳೆಂಟು ತಿಂಗಳಿನಿಂದ ಅವರು ಇದನ್ನೇ ಹೇಳುತ್ತಿದ್ದಾರೆ. ಹೇಳುವುದು ಅವರ ಅಧಿಕಾರ, ಯಾಕೆ ಹೇಳಿದಿರಿ ಎಂದು ಕೇಳುವುದಕ್ಕೆ ನನಗೆ ಅಧಿಕಾರವಿಲ್ಲ. ಕ್ಷೇತ್ರದಿಂದ ಸ್ಪರ್ಧೆ ಮಾಡಲು ಎಲ್ಲರಿಗೂ ಟಿಕೆಟ್ ಕೇಳಲು ಅಧಿಕಾರವಿದೆ, ಪ್ರಜಾಪ್ರಭುತ್ವ. ಆದರೆ ಇದರ ಬಗ್ಗೆ ಹೆಚ್ಚು ಮಾತನಾಡಲ್ಲ. ಜನರ ಸೇವೆ ಮಾಡುವುದು, ಅಭಿವೃದ್ಧಿ ಪರವಾಗಿ ಇರುವುದು, ಬಡ ಜನರೊಂದಿಗೆ ಇರುವುದು, ಎಲ್ಲರೊಂದಿಗೆ ಹೊಂದಿಕೊಂಡು ಹೋಗುವುದನ್ನು ಮಾಡಬೇಕು. ನಾನು ಚುನಾವಣೆಗೆ ಸೀಮಿತ ರಾಜಕಾರಣಿ ಅಲ್ಲ. ಚುನಾವಣೆಯ ನಂತರ ಈ ಭಾಗದ, ರಾಜ್ಯದ, ಜಿಲ್ಲೆಯ ಪ್ರತಿನಿಧಿ. ಅವರ ಆಶೀರ್ವಾದ ನನ್ನ ಮೇಲಿದೆ,'' ಎಂದಿದ್ದಾರೆ.

8 ಸಿಎಂಗಳೊಂದಿಗೆ ಕೆಲಸ ಮಾಡಿದ್ದೇನೆ

"ನನಗೆ 50 ವರ್ಷ ಆಗಿತ್ತು ಆಗ 1971ರಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. 72ರಲ್ಲಿ ಬ್ಲಾಕ್ ಅಧ್ಯಕ್ಷ, ಜಿಲ್ಲಾ ಅಧ್ಯಕ್ಷನಾಗಿದ್ದೆ. ರಾಜ್ಯಮಟ್ಟದಲ್ಲಿ ಸೋನಿಯಾ ಗಾಂಧಿಯವರು ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದರು. 83 ಇಸವಿಯಿಂದ ಈವರೆಗೆ ನಾನು 8 ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ್ದೇನೆ. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ, ಸಿದ್ದರಾಮಯ್ಯನವರೊಂದಿಗೆ ಕೆಲಸ ಮಾಡಿದ್ದೇನೆ. ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಜನ ಬೆಂಬಲ ನೀಡಿದ್ದಾರೆ. ಹೀಗಾಗಿ ನಾನು ಸಣ್ಣ ವಿಚಾರ ಮಾಡುವುದಿಲ್ಲ,'' ಎಂದಿದ್ದಾರೆ.

 ಬಸ್ ಟಿಕೆಟ್ ಅಲ್ಲ

ಬಸ್ ಟಿಕೆಟ್ ಅಲ್ಲ

"ಇನ್ನು ಟಿಕೆಟ್ ಕೇಳಿದರು ಎಂದು ಟಿಕೆಟ್ ಕೊಡಲು ಬರುವುದಿಲ್ಲ. ಅದೇನು ಬಸ್ ಟಿಕೆಟ್ ಅಲ್ಲ. ರೊಕ್ಕ ಕೊಟ್ಟರೆ ಬಸ್ ಟಿಕೆಟ್ ಸಿಕ್ತು, ಟ್ರೇನ್ ಟಿಕೆಟ್ ಸಿಕ್ತು ಅನ್ನುವುದಕ್ಕಾಗಲ್ಲ. ಅದು ಕಾಂಗ್ರೆಸ್ ಪಕ್ಷದ ಟಿಕೆಟ್. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾಳೆ ಹೈಕಮಾಂಡ್ ಏನು ಆಜ್ಞೆ ಮಾಡುತ್ತದೆಯೋ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಶಿಸ್ತಿನಿಂದ ಪಾಲನೆ ಮಾಡಬೇಕಾಗಿರುವುದು ಕರ್ತವ್ಯ. ಚುನಾವಣೆ ಇನ್ನೂ ಬಹಳ ದೂರ ಇದೆ, ಬಂದಾಗ ನೋಡೋಣ,'' ಎಂದರು.

  CM ಗೆ ಶುರು ಆಯ್ತು ಹೊಸ ತಲೆನೋವು !! | Oneindia Kannada
   ಇಡೀ ಜಿಲ್ಲೆಯಲ್ಲಿ ಪ್ರಶಾಂತ್ ತಿರುಗಾಡುತ್ತಿದ್ದಾನೆ

  ಇಡೀ ಜಿಲ್ಲೆಯಲ್ಲಿ ಪ್ರಶಾಂತ್ ತಿರುಗಾಡುತ್ತಿದ್ದಾನೆ

  ಇನ್ನು ತಮ್ಮ ಪುತ್ರ ಪ್ರಶಾಂತ್ ದೇಶಪಾಂಡೆ ಯಲ್ಲಾಪುರ ಕ್ಷೇತ್ರದಲ್ಲಿ ಹೆಚ್ಚು ಸುತ್ತಾಡುತ್ತಿದ್ದು, ಇದು ಚುನಾವಣಾ ತಯಾರಿಯೇ? ಎಂಬ ಪ್ರಶ್ನೆಗೆ ನಗುತ್ತಲೇ ಪ್ರತಿಕ್ರಿಯಿಸಿದ ಅವರು, "ನಮ್ಮ ಜಿಲ್ಲೆಯ 4,500 ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುತ್ತಿಲ್ಲ. ಹೀಗಾಗಿ ಸ್ನೇಹಿತರೊಂದಿಗೆ ಸೇರಿ ಆಹಾರ ವಿತರಣೆಗೆ ಒಂದು ಕಾರ್ಯಕ್ರಮ ಹಾಕಿಕೊಂಡೆವು. ಇದರಲ್ಲಿ ಹಿರಿ ಮಗ ಪ್ರಸಾದ್ ಕೂಡ ಭಾಗಿಯಾಗಿದ್ದಾನೆ. ಪ್ರಶಾಂತ್ ದೇಶಪಾಂಡೆ ಕೂಡ ಕೇವಲ ಮುಂಡಗೋಡ, ಯಲ್ಲಾಪುರ, ಬನವಾಸಿ, ಶಿರಸಿ ಮಾತ್ರ ನೋಡುತ್ತಿಲ್ಲ. ಇಡೀ ಜಿಲ್ಲೆಯನ್ನು ನೋಡುತ್ತಿದ್ದಾನೆ. ರಾಜಕೀಯವಾಗಿ ಏನಾಗುತ್ತದೆ ಎನ್ನುವುದನ್ನು ಮುಂದೆ ನೋಡಬೇಕಾಗುತ್ತದೆ, ಇದರ ಬಗ್ಗೆ ಈಗ ನಾನು ಏನನ್ನೂ ಹೇಳಲಾಗುವುದಿಲ್ಲ. ಮುಂದೆ ಯಾರು, ಏನು ಎಂಬುದು ಕಾಂಗ್ರೆಸ್, ಹೈಕಮಾಂಡ್‌ಗೆ ಬಿಟ್ಟ ವಿಚಾರ,'' ಎಂದು ಹೇಳಿದರು.

  English summary
  Senior Congress leader R.V. Deshpande shared about his political life and recent politics with Oneindia Kannada.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X