ಮಳೆ ತಂದ ಆಪತ್ತು; ಉತ್ತರ ಕನ್ನಡದಲ್ಲಿ ರೈತರ ಕೈ ಸೇರದ ಭತ್ತದ ಬೆಳೆ
ಕಾರವಾರ,ಮೇ 29: ವಾರಕ್ಕೂ ಹೆಚ್ಚು ಕಾಲ ಎಡಬಿಡದೆ ಸುರಿದ ಮಳೆ ಕೊಂಚ ಕಡಿಮೆಯಾಗಿದ್ದು ಎಲ್ಲೆಡೆ ಬಿಸಿಲಿನ ವಾತಾವರಣ ಮೂಡಿದೆ. ಆದರೆ ಉತ್ತರಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಇದೀಗ ಅಳಿದುಳಿದ ಬೆಳೆ ರಕ್ಷಣೆಗೆ ರೈತರು ಇನ್ನಿಲ್ಲದ ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
'ಅಸನಿ' ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವಾರಗಳಿಗೂ ಹೆಚ್ಚು ಕಾಲ ಎಡಬಿಡದೆ ಗಾಳಿ ಸಹಿತ ಭಾರಿ ಮಳೆಯಾದ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ದೊಡ್ಡ ಪ್ರಮಾಣದ ಹಾನಿ ಸಂಭವಿಸಿತ್ತು. ಮಾತ್ರವಲ್ಲದೆ ಜಿಲ್ಲೆಯಲ್ಲಿ ಮಳೆಗಾಲ ಪೂರ್ವದಲ್ಲಿ ಬೆಳೆಯುವ ಕಾರು ಭತ್ತದ ಬೆಳೆ ಇನ್ನೇನು ಕೈ ಸೇರುವ ಹೊತ್ತಿಗೆ ಮಣ್ಣುಪಾಲಾಗುವಂತಾಯಿತು.
ಸೇತುವೆ ಕಾಮಗಾರಿ ಅಪೂರ್ಣ; ಸ್ಥಳೀಯರಲ್ಲಿ ಆತಂಕ

ಮೊಳಕೆಯೊಡೆದ ಭತ್ತ
ಜಿಲ್ಲೆಯ ಶಿರಸಿ, ಸಿದ್ದಾಪುರ, ಹೊನ್ನಾವರ, ಯಲ್ಲಾಪುರ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ಕಾರು ಬೆಳೆ ಈ ಸಲ ಬಹುತೇಕ ನೀರು ಪಾಲಾಗಿದೆ. ಗದ್ದೆ ಕೋಯ್ಲಿನ ಸಮಯಕ್ಕೆ ಸರಿಯಾಗಿ ಮಳೆ ಸುರಿಯಲಾರಂಭಿಸಿದ್ದು, ಸಿದ್ದಾಪುರದ ದೊಡ್ಮನೆ ವ್ಯಾಪ್ತಿಯ ಸಾವಲಗದ್ದೆ, ಬಿಳೆಗೋಡ, ಸೇರಿದಂತೆ ಹಲವೆಡೆ ಕೊಯ್ದ ಭತ್ತ ಮಳೆಗೆ ಸಿಕ್ಕಿ ಗದ್ದೆಯಲ್ಲಿಯೇ ಮೊಳಕೆಯೊಡೆದಿದೆ. ಇನ್ನು ಕೆಲವೆಡೆ ಗದ್ದೆ ಹಸಿಯಾಗಿಯೇ ಇದ್ದು ಮಳೆ ಆತಂಕಕ್ಕೆ ಸಿಲುಕಿರುವ ರೈತು ಹಸಿ ಭತ್ತವನ್ನೇ ಕೊಯ್ದು ಜೋಪಾನ ಮಾಡುವುದಕ್ಕೆ ಮುಂದಾಗಿದ್ದಾರೆ.

ಹುಲ್ಲಿನ ಕೊರತೆಯ ಆತಂಕ
ಜಿಲ್ಲೆಯಾದ್ಯಂತ ಕೆಲವೆಡೆ ಮಳೆಗಾಲದಲ್ಲಿ ಜಾನುವಾರುಗಳಿಗೆ ಕಾರುಭತ್ತದ ಹುಲ್ಲನ್ನು ನಂಬಿಕೊಳ್ಳಲಾಗುತ್ತದೆ. ಆದರೆ ಈ ಬಾರಿ ಹುಲ್ಲು ವಾರಗಳ ಕಾಲ ಮಳೆಗೆ ಸಿಕ್ಕಿ ಸಂಪೂರ್ಣ ಹಾನಿಯಾಗಿದೆ. ಅಲ್ಲದೆ ಹಸಿ ಭತ್ತವನ್ನೇ ಕೊಯ್ದ ಕಾರಣ ಒಣಗಿಸಲು ಸಾಧ್ಯವಾಗದೇ ಹುಲ್ಲು ಮುಗ್ಗಿ ಹೋಗಿದೆ. ಈ ರೀತಿ ಕಪ್ಪಾದ ಹುಲ್ಲನ್ನು ಇದೀಗ ಒಣಗಿಸಲು ಪ್ರಯತ್ನಿಸಲಾಗುತ್ತಿದೆಯಾದರೂ ಇದನ್ನು ಜಾನುವಾರುಗಳು ತಿನ್ನುವುದಿಲ್ಲ. ಇದೀಗ ಹುಲ್ಲಿನ ದರ ಕೂಡ ಗಗನಕ್ಕೇರಿದ್ದು ಒಂದು ಕಟ್ಟು ಹುಲ್ಲಿಗೆ 40 ರೂ, ಹೊರೆಗೆ 700 ರೂ. ಕೇಳಲಾಗುತ್ತಿದೆ. ಇಷ್ಟೊಂದು ಹಣ ಕೊಟ್ಟು ಖರೀದಿ ಮಾಡುವುದು ಕಷ್ಟಸಾಧ್ಯವಾದ ಕಾರಣ ಮಳೆಗಾಲದಲ್ಲಿ ಜಾನುವಾರುಗಳಿಗೆ ಹುಲ್ಲು ಹುಡುಕುವುದು ಹೇಗೆ ಎಂಬ ಚಿಂತೆ ಕಾಡುತ್ತದೆ.

250ಕ್ಕೂ ಹೆಕ್ಟೇರ್ ನಲ್ಲಿ ಭತ್ತಕ್ಕೆ ಹಾನಿ
ಇನ್ನು ಮಳೆ ಹಾನಿ ಕುರಿತು ಸಮೀಕ್ಷೆ ನಡೆಸುತ್ತಿರುವ ಕೃಷಿ ಇಲಾಖೆ ಜಿಲ್ಲೆಯಲ್ಲಿ ಒಟ್ಟು 250 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಮೆಕ್ಕೆ ಜೋಳ ಹಾನಿಯಾಗಿರುವುದಾಗಿ ವರದಿ ತಯಾರಿಸಿದೆ. ಆದರೆ ಅಸಲಿಯಾಗಿ ಇಷ್ಟು ಮಾತ್ರವಲ್ಲದೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಗೆ ಬೆಳೆ ಹಾನಿ ಸಂಭವಿಸಿದೆ. ಆದರೆ ಕೆಲವೆಡೆ ಮಾತ್ರ ಸಮೀಕ್ಷೆ ನಡೆಸಿ ಇನ್ನು ಕೆಲವೆಡೆ ಬೆಳೆ ಹಾನಿಯಾದರೂ ಯಾರೊಬ್ಬರು ಬಂದು ನೋಡಿಲ್ಲ. ನಮ್ಮ ಭಾಗದಲ್ಲಿಯೂ ಸಾಕಷ್ಟು ಹಾನಿಯಾಗಿದ್ದು, ಬೆಳೆದ ಬೆಳೆ ಬಳಸಲಾಗದ ಸ್ಥಿತಿ ಇದ್ದು ಸರ್ಕಾರ ಈ ಬಗ್ಗೆ ಗಮನಹರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮನೆಗಳಿಗೂ ಹಾನಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಸುಮಾರು 42 ಮನೆಗಳಿಗೆ ಹಾನಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮಾತ್ರವಲ್ಲದೇ ಜಿಲ್ಲೆಯಾದ್ಯಂತ ಒಟ್ಟು 8 ಜಾನುವಾರುಗಳು ಸಾವನ್ನಪ್ಪಿವೆ. ಇದಲ್ಲದೆ ಗಾಳಿ ಸಹಿತ ಭಾರಿ ಮಳೆಗೆ ಅದೇಷ್ಟೊ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮನೆ, ವಸತಿ ಶಾಲೆಗಳ ಮೇಲ್ಛಾವಣಿಗಳು ಹಾರಿ ಹೋಗಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.