• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನರಕ ಸದೃಶ ಮನವನ್ನು ನಾಕವಾಗಿಸಲು ಶಂಕರರು ಬೇಕು: ರಾಘವೇಶ್ವರ ಶ್ರೀ

|

ಕಾರವಾರ, ಮೇ 10: ನರಕ ಸದೃಶವಾದ ಮನವನ್ನು ನಾಕವಾಗಿಸಿಕೊಳ್ಳಲು ಚಿತ್ತದಲ್ಲಿ ಶಂಕರಾಚಾರ್ಯರು ಸುಳಿದಾಡಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿಗಳು ಹೇಳಿದರು.

ಸಿದ್ದಾಪುರದ "ಗೋಸ್ವರ್ಗ"ದಲ್ಲಿ ನಡೆಯುತ್ತಿರುವ ಶಂಕರ ಪಂಚಮೀ ಉತ್ಸವದಲ್ಲಿ ಮೇ 9ರಂದು ನಡೆದ ಸಭೆಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀರಾಮಚಂದ್ರ ಹಾಗೂ ಶಂಕರರು ಶ್ರೀಮಠದ ನೇತ್ರಧ್ವಯಗಳಿದ್ದಂತೆ. ಅರಿವನ್ನು ಜ್ಞಾನವನ್ನು ಮಠ ಹೆಚ್ಚಿಸಬೇಕು. ಅದಕ್ಕೆ ಶಂಕರಾಚಾರ್ಯರ ಆಶೀರ್ವಾದ ಬೇಕು ಎಂದು ಹೇಳಿದರು.

ರಾಘವೇಶ್ವರ ಶ್ರೀಗಳ ವಿರುದ್ದ ಷಡ್ಯಂತ್ರ: ಸೋಲಿನ ಸರಮಾಲೆಗೆ ಮತ್ತೊಂದು ಸೇರ್ಪಡೆ

ಕೆಲಸ ಕೈಗೂಡಲು ರಾಮನ ಶಕ್ತಿಯೂ ಅದಕ್ಕೆ ಸಮ್ಮಿಳಿತವಾಗಬೇಕು. ಶಂಕರರಿಲ್ಲದಿದ್ದರೆ ಗುರುಪೀಠ, ಗೋಸ್ವರ್ಗ, ನಾವು ನೀವು ಇಲ್ಲಿ ಸೇರುತ್ತಿರಲಿಲ್ಲ. ಶಂಕರಾಚಾರ್ಯರನ್ನು ನೆನಪಿಸಿಕೊಳ್ಳುವುದೇ ಶಂಕರ ಪಂಚಮೀ ಉತ್ಸವದ ಉದ್ದೇಶ. ಈ ಉತ್ಸವ ಅವರಿಗಾಗಿ ಅಲ್ಲ. ನಮ್ಮ ಮನಸ್ಸಿನ ಕೊಳೆ ನಿವಾರಿಸಿಕೊಳ್ಳಲು ಎಂದು ಶ್ರೀಗಳು ಹೇಳಿದರು.

"ಶಂಕರ ಕಿಂಕರ" ಪ್ರಶಸ್ತಿ ಸ್ವೀಕರಿಸಿದ ಡಾ.ಎಸ್.ರಂಗನಾಥರು ಸೌಜನ್ಯ, ವಿನಯಗಳ ಮೂರ್ತಿ. ಅವರು ಬಯಕೆ ವ್ಯಕ್ತಪಡಿಸಿದಂತೆ ಮುಂದಿನ ಶಂಕರ ಪಂಚಮಿಯಲ್ಲಿ ಶಾಸ್ತ್ರಗಳ ವಾಖ್ಯಾರ್ಥ ನಡೆಯಲಿದೆ. ಶಾಂಕರ ಚರ್ಚೆ ಸರಳವಾಗಿ ನಡೆಯಲಿದೆ ಎಂದ ಶ್ರೀಗಳು, ಮುಂದಿನ ಶಂಕರ ಪಂಚಮೀ ಒಳಗೆ 50 ಲಕ್ಷ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ ಪಠಣವನ್ನು ಪೂರೈಸುವಂತೆ ಸಮಾಜಕ್ಕೆ ಆದೇಶ ನೀಡಿ, ಈ ವರ್ಷ ಭಜನ ರಾಮಾಯಣ ಅಭಿಯಾನಕ್ಕೆ ಸಮಾಜದಿಂದ ವ್ಯಕ್ತವಾದ ಸ್ಪಂದನೆಯನ್ನು ಶ್ಲಾಘಿಸಿದರು.

ಜನರಿಗೂ, ದೇವರಿಗೂ ಸರ್ಕಾರದ ಆಡಳಿತ ಇಷ್ಟವಿಲ್ಲ: ರಾಘವೇಶ್ವರ ಶ್ರೀ

ಪ್ರಶಸ್ತಿ ಸ್ವೀಕರಿಸಿದ ಮಹಾಮಹೋಪಾಧ್ಯಾಯ ಎಸ್.ರಂಗನಾಥ ಮಾತನಾಡಿ ಗೋವನ್ನು ಕಡೆಗಣಿಸುವುದು, ಕೊಲ್ಲುವುದು ಅಪರಾಧ. ಕ್ರೂರವಾದ ಹುಲಿ ನಮ್ಮ ರಾಷ್ಟ್ರ ಪ್ರಾಣಿ ಎನಿಸದೇ ಸಾತ್ವಿಕವಾದ ಗೋವು ರಾಷ್ಟ್ರಪ್ರಾಣಿಯಾಗಬೇಕು ಎಂದರು. ಅನಾಚಾರ ತಾಂಡವವಾಡುತ್ತಿದ್ದ ಸಮಯದಲ್ಲಿ ಶಂಕರರ ಅವತಾರವಾಯಿತು, ಅವರಿಂದ ಧರ್ಮದ ಪುನರುತ್ಠಾನವಾಯಿತು. ಇಂದು ರಾಘವೇಶ್ವರ ಶ್ರೀಗಳು ಗೋಸ್ವರ್ಗದಂತ ವಿಶ್ವದ 8ನೇ ಅದ್ಭುತ ನಿರ್ಮಿಸಿ ಪುನಃ ಶಂಕರರ ನೆನಪು ಮಾಡುತ್ತಿದ್ದಾರೆ ಎಂದರು.

ವೇದಿಕೆಯಲ್ಲಿ ನಂದಿಗುಡಿಯ ಶ್ರೀ ಶಿವಾಚಾರ್ಯ ಸ್ವಾಮಿಗಳು, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿದ್ದರು. ಡಾ. ರಾಘವೇಂದ್ರ ಭಟ್ಟ ಕ್ಯಾದಗಿ ಹಾಗೂ ರಮೇಶ ಗುಂಡೂಮನೆ ಅಭಿನಂದನಾ ಮಾತುಗಳನ್ನಾಡಿದರು. ಸಂದೇಶ ತಲಕಾಲಕೊಪ್ಪ ಹಾಗೂ ಆನಂದ ಹಿರೇಕೋಡ ಪ್ರಶಸ್ತಿಪತ್ರಗಳನ್ನು ವಾಚಿಸಿದರು. ಆರ್.ಎಸ್.ಹೆಗಡೆ ದಂಪತಿಗಳು ಸಭಾಪೂಜೆ ನೆರವೇರಿಸಿದರು.

ಗೋಕರ್ಣ ದೇವಾಲಯ: ಪಟ್ಟಭದ್ರ ಸ್ವಹಿತಾಸಕ್ತಿಗಳಿಗೆ ಮತ್ತೆಮತ್ತೆ ಮುಖಭಂಗ

ಶಂಕರಪಂಚಮೀ ಉತ್ಸವ ಸಮಿತಿಯ ಅಧ್ಯಕ್ಷ ಮಹೇಶ ಚಟ್ನಳ್ಳಿ ಅವಲೋಕನ ನಡೆಸಿಕೊಟ್ಟರು. ರಾಘವೇಂದ್ರ ಮಧ್ಯಸ್ಥ ಹಾಗೂ ವಿನಾಯಕ ತಲವಾಟ ನಿರ್ವಹಿಸಿದರು. ಅತಿರುದ್ರಾನುಷ್ಠಾನ, ಮಹಾರುದ್ರ ಹವನ, ಚಂಡಿಹವನ, ಶಾಂಕರಭಾಷ್ಯ ಪಾರಾಯಣ, ಶಂಕರ ಗುರುಪೂಜಾ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶಂಕರ ಪಂಚಮೀ ಉತ್ಸವ ನಿಮಿತ್ತ ಗೋಸ್ವರ್ಗದಲ್ಲಿ ನಡೆದ "ಮಕ್ಕಳ ಮಹಾಸಮ್ಮೇಳನ"ದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ರಾಘವೇಶ್ವರ ಶ್ರೀಗಳು, ಮಕ್ಕಳಿಗೆ ಹಾಲು ಜೇನು ಇಷ್ಟ. ಗೋವು ಹಾಲಿನಂತೆ, ಮಕ್ಕಳು ಜೇನಿನಂತೆ, ಇವೆರಡರ ಸಮಾಗಮವು ಇಂದು ಗೋಸ್ವರ್ಗದಲ್ಲಿ ಸಾಕ್ಷಾತ್ಕಾರವಾಗಿದೆ. ಗೋವುಗಳು ಮಕ್ಕಳು ಒಂದಾಗಬೇಕು, ಮಕ್ಕಳಲ್ಲಿ ಗೋವಿನ ಕುರಿತು ಪ್ರೀತಿ ಹೆಚ್ಚಬೇಕು ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿ ಮಕ್ಕಳೊಂದಿಗೆ ಆತ್ಮೀಯ ಸಂವಾದ ನಡೆಸಿಕೊಟ್ಟರು.

ಸಪ್ತ ಸನ್ನಿಧಿಯ ಕುರಿತು ವಿವರಿಸಿದ ಶ್ರೀಗಳು ಸೀತಾರಾಮಚಂದ್ರ, ಚಂದ್ರಮೌಳೀಶ್ವರ, ರಾಜರಾಜೇಶ್ವರೀ, ಆಂಜನೇಯ, ಗುರುಪರಂಪರೆ, ರಾಮೇಶ್ವರ, ಭುವನೇಶ್ವರೀ ದೇವತೆಗಳ ಆವಾಸವಿದಾಗಿದೆ ಎಂದರು. ವಿಷ್ಣುವಿನಿಂದ ಗುರುಪರಂಪರೆ ಆರಂಭವಾಗಿ ಗೌಡಪಾದರಿಂದ ಶಂಕರಾಚಾರ್ಯರಿಗೆ ಬಂದು ಈ ವರೆಗೂ ಅನೂಚಾನವಾಗಿದೆ ಎಂದು ಶ್ರೀಗಳು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು.

ಡಿ.ಎಸ್.ಹೆಗಡೆ ದೇಶೀಯ ಆಕಳ ಹಾಲಿನಲ್ಲಿಯ ವಿವಿಧ ಅಂಶಗಳ ಕುರಿತು ವಿವರಣೆ ನೀಡಿದರು. ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಕುಮಾರಸ್ವಾಮಿ ವರ್ಮುಡಿ(ಕೊಚ್ಚಿ), ಆರ್.ಎಸ್.ಹೆಗಡೆ ಹರಗಿ, ಆರ್.ಎಸ್.ಎಸ್‍ನ ಅ.ಪು.ನಾರಾಯಣ ಭಟ್ಟ ಮುಂತಾದವರು ಪಾಲ್ಗೊಂಡಿದ್ದರು. ಮಹಾಮಂಡಲ ವ್ಯಾಪ್ತಿಯ ಮಂಗಳೂರು, ಕಾಸರಗೋಡು, ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಕ್ಕಳು ವಿವಿಧ ಆಟ-ಪಾಠಗಳಲ್ಲಿ ತನ್ಮಯತೆ, ಉತ್ಸಾಹದಿಂದ ಪಾಲ್ಗೊಂಡು ಹರ್ಷೋದ್ಘಾರ ಮಾಡಿದರು.

English summary
Ramachandrapura Math's Raghaveshwara Seer religious speech in Shankara Jayanthi at Siddapura on May 9th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more