• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದಿ ಜನಾಂಗದ ಏಳಿಗೆಯ ಕೈ ಶಾಂತಾರಾಮ ಸಿದ್ದಿ

|

ಕಾರವಾರ, ಜುಲೈ 22: ಕಳೆದ ಮೂರು ಶತಮಾನಗಳಿಗೂ ಹೆಚ್ಚು ಕಾಲ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ಸಿದ್ದಿ ಸಮುದಾಯದ ಜನರು ವಾಸಿಸುತ್ತಿದ್ದಾರೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಸಿದ್ದಿ ಬುಡಕಟ್ಟು ಜನಾಂಗದವರು ಮೂಲತಃ ಆಫ್ರಿಕಾದವರು. ಭಾರತದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದರೂ, ಭಾರತೀಯ ಸಮಾಜದ ಮುಖ್ಯ ವಾಹಿನಿಯೊಂದಿಗೆ ಬೆರೆಯಲು ವಿಫಲರಾಗಿದ್ದರು. ಹಗಲು- ರಾತ್ರಿ ಈ ಸಮುದಾಯವನ್ನು ಉನ್ನತಿಗೇರಿಸಲು ಶ್ರಮಿಸಿದವರು ಶಾಂತಾರಾಮ ಸಿದ್ದಿಯವರು.

   ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ | Oneindia Kannada

   ಶಾಂತಾರಾಮ ಸಿದ್ದಿಯವರನ್ನು ಇದೀಗ ರಾಜ್ಯ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿರುವುದು ಹಲವು ಅಚ್ಚರಿಗಳನ್ನು ಮೂಡಿಸಿದೆ. ಬುಡಕಟ್ಟು ಜನಾಂಗದ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ, ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದಲ್ಲಿ ಬೆಳೆದ ಶಾಂತರಾಮ ಸಿದ್ದಿ ಅವರನ್ನು ಇದೀಗ ವಿಶಿಷ್ಟ ಸೇವಾ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಅವರ ಕುರಿತ ಸಂಪೂರ್ಣ ಪರಿಚಯ ಇಲ್ಲಿದೆ...

    ಸಿದ್ದಿ ಸಮುದಾಯದಲ್ಲಿ ಪದವಿ ಪಡೆದ ಮೊದಲ ವ್ಯಕ್ತಿ

   ಸಿದ್ದಿ ಸಮುದಾಯದಲ್ಲಿ ಪದವಿ ಪಡೆದ ಮೊದಲ ವ್ಯಕ್ತಿ

   1970ರ ದಶಕದ ಸಿದ್ದಿಗಳ ಜೀವನವನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಅಂದು ಇವರೆಲ್ಲ ಅಕ್ಷರಶಃ ಅರಣ್ಯವಾಸಿಗಳಾಗಿದ್ದರು ಮತ್ತು ಅಲೆಮಾರಿ ಜೀವನವನ್ನು ನಡೆಸುತ್ತಿದ್ದರು. ಹೊಟ್ಟೆ ತುಂಬಿಸಿಕೊಳ್ಳಲು ಹೆಣಗಾಡುತ್ತಿದ್ದರು. ಇಂಥ ಕಠಿಣ ಪರಿಸ್ಥಿತಿಯಲ್ಲೂ ಶಾಲೆಗೆ ಸೇರಿಕೊಂಡ ಶಾಂತಾರಾಮ ಸಿದ್ದಿ, ಅಂದಿನಿಂದ ತರಗತಿಯಲ್ಲಿ ಅಗ್ರಸ್ಥಾನದಲ್ಲಿರುತ್ತಿದ್ದರು. ಆದರೆ, ಏಳನೇ ತರಗತಿಯ ನಂತರ ಅವರ ಶಿಕ್ಷಣವನ್ನು ಮೊಟಕುಗೊಳಿಸಲು ಪಾಲಕರು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಇವರ ಅಧ್ಯಯನದ ಆಸಕ್ತಿಯನ್ನು ನೋಡಿ ಅವರ ಹಳ್ಳಿಯ ಜನರು ಒಟ್ಟಾಗಿ 150 ರೂ. ಕೂಡಿಸಿ, ಉನ್ನತ ಶಿಕ್ಷಣಕ್ಕಾಗಿ ಅವರನ್ನು ಸಮೀಪದ ಅಂಕೋಲಾ ಪಟ್ಟಣಕ್ಕೆ ಕಳುಹಿಸಿದ್ದರು.

   ವಿಧಾನ ಪರಿಷತ್: ಎಚ್‌. ವಿಶ್ವನಾಥ್ ಸೇರಿ 4 ಸದಸ್ಯರ ನೇಮಕ

   1965ರಲ್ಲಿ ಹಿತ್ಲಳ್ಳಿಯ ಸಿದ್ದಿ ಸಮುದಾಯದ ಬಡ ಕುಟುಂಬದಲ್ಲಿ ಜನಿಸಿದ ಶಾಂತಾರಾಮ ಸಿದ್ದಿ, ಕಷ್ಟದ ನಡುವೆಯೂ ಛಲದಿಂದ ಶಿಕ್ಷಣ ಪಡೆಯಲು ಮುಂದಾದರು. ಹಿತ್ಲಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಅಂಕೋಲಾದ ಕೆನರಾ ವೆಲ್ ‌ಫೇರ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಪಿಯುಸಿ ಅಭ್ಯಸಿಸಿದರು.

    ನೂರಾರು ಬುಡಕಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟವರು

   ನೂರಾರು ಬುಡಕಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟವರು

   ಶೈಕ್ಷಣಿಕವಾಗಿ ಮುಂದಿದ್ದರೂ ಬಣ್ಣದಲ್ಲಿ ವಿಭಿನ್ನವಾಗಿ ಕಾಣುತ್ತಿದ್ದರಿಂದ ಇವರು ಉಳಿದ ಸಹಪಾಠಿಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದರು. ಹಿರಿ- ಕಿರಿಯರೆಲ್ಲರೂ ಇವರನ್ನು ಅಂದು ದಿಟ್ಟಿಸಿ ನೋಡುತ್ತಿದ್ದರು, ನೋಡಿ ನಗುತ್ತಿದ್ದರು ಮತ್ತು ಗುಂಗುರು ಕೂದಲಿನೊಂದಿಗೆ ಚೇಷ್ಟೆ ಮಾಡುತ್ತಿದ್ದರು. ಆದರೆ, ಏನಾದರೂ ಮಾಡಬೇಕೆಂಬ ಇವರ ಛಲ ಮುಂದುವರಿದಿತ್ತು. ಇಡೀ ಸಿದ್ದಿ ಸಮುದಾಯದಲ್ಲಿ ಪದವಿ ಪಡೆದ ಮೊದಲ ವ್ಯಕ್ತಿಯಾಗಿ ಇವರು ಹೊರ ಹೊಮ್ಮಿದರು.

   ಅಂದಿನ ದಿನಗಳಲ್ಲಿ ಈಗಿನ ಎಂಜಿನಿಯರಿಂಗ್ ನಷ್ಟೇ ಮಹತ್ವದ್ದಾಗಿದ್ದ ಅರ್ಥಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದಿದ್ದ ಇವರಿಗೆ ಅನೇಕ ಉತ್ತಮ ಉದ್ಯೋಗ ಅವಕಾಶಗಳು ಬಂದಿದ್ದವು. ಆದರೆ, ಅವರ ಮಾರ್ಗದರ್ಶಕ ಮತ್ತು ಹಿತೈಷಿ ಪ್ರಕಾಶ್ ಕಾಮತ್ ಅವರ ಸಲಹೆ ಮೇರೆಗೆ ಜೀವನದ ತಿರುವು ಬದಲಿಸಿಕೊಂಡರು. ಯಲ್ಲಾಪುರದ ತಮ್ಮ ಹಳ್ಳಿಗೆ ಹಿಂತಿರುಗಿದ ಅವರು, ಕೆಲವು ಸ್ನೇಹಿತರ ಸಹಾಯದಿಂದ ತಮ್ಮ ಪ್ರದೇಶದ ಬುಡಕಟ್ಟು ಜನಾಂಗದವರಿಗೆ (ಸಿದ್ದಿ, ಗೌಳಿ, ಲಂಬಾಣಿ ಇತ್ಯಾದಿ) ಹಾಸ್ಟೆಲ್ ಪ್ರಾರಂಭಿಸಿದರು. ತಾವೇ ಅಡುಗೆಯವರಾಗಿ, ವಾರ್ಡನ್ ಮತ್ತು ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು. ಬಹಳ ಕಷ್ಟಪಟ್ಟು ನೂರಾರು ಬುಡಕಟ್ಟು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಒದಗಿಸಿಕೊಟ್ಟ ಹಿರಿಮೆ ಇವರದು.

    ಸಮಾಜಮುಖಿ ಕೆಲಸ ಮಾಡುವ ಸರಳ ವ್ಯಕ್ತಿ

   ಸಮಾಜಮುಖಿ ಕೆಲಸ ಮಾಡುವ ಸರಳ ವ್ಯಕ್ತಿ

   ಬಳಿಕ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಬದ್ಧವಾಗಿರುವ ರಾಷ್ಟ್ರ ಮಟ್ಟದ ಸಂಘಟನೆಯಾದ ‘ವನವಾಸಿ ಕಲ್ಯಾಣ ಸಂಘ'ಕ್ಕೆ ಸೇರಿಕೊಂಡ ಇವರು, ಭಾರತದ ವಿವಿಧ ಭಾಗಗಳಿಗೆ, ಗುಜರಾತ್‌ನಿಂದ ಅಂಡಮಾನ್‌ಗೆ, ಮೇಘಾಲಯದವರೆಗೆ ಪ್ರಯಾಣಿಸಿದರು. ಅಂದಿನಿಂದ ಈವರೆಗೆ ಬುಡಕಟ್ಟು ಜನಾಂಗದವರಿಗೆ ಶಿಕ್ಷಣ ನೀಡುವ ಆಂದೋಲನವನ್ನು ವಿಸ್ತರಿಸಿದರು.

   ಉಚಿತವಾಗಿ ಆರೋಗ್ಯ ಸೌಲಭ್ಯಗಳನ್ನು ನೀಡುವ, ಕೌಶಲ್ಯ- ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅರಣ್ಯ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಗಳನ್ನು ಪಡೆಯಲು ಸಹಕಾರಿ ಸಂಘವನ್ನು ಸ್ಥಾಪಿಸಿದ್ದಾರೆ. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಡೆಸಿದ್ದಾರೆ. ಇದರ ಪ್ರತಿಫಲವಾಗಿ, ನಾಗರಿಕ ಸೇವೆ ಹಾಗೂ ಕಾನೂನು ಪದವೀಧರರಾಗಿ ಈಗ ಕೆಲವಷ್ಟು ಸಿದ್ದಿ ಸಮುದಾಯದ ಯುವಕರು ಹೊರ ಹೊಮ್ಮುತ್ತಿದ್ದಾರೆ.

   ವಿಧಾನ ಪರಿಷತ್ ಸದಸ್ಯರಾಗಿ ಯಲ್ಲಾಪುರದ ಶಾಂತಾರಾಮ ಸಿದ್ಧಿ ಅಚ್ಚರಿ ಆಯ್ಕೆ

   ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿರುವ ಇವರು, ಕೊಂಕಣಿ ಅಕಾಡೆಮಿ ಸದಸ್ಯರಾಗಿ ಎರಡು ಅವಧಿ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಘಟ್ಟ ಕಾರ್ಯಪಡೆಯ ಸದಸ್ಯರಾಗಿದ್ದು, ಆಕಾಶವಾಣಿಯ ಸಲಹಾ ಸಮಿತಿಯ ಸದಸ್ಯರಾಗಿರುವುದಲ್ಲದೇ ಹತ್ತು ಹಲವು ಸಂಘಟನೆಗಳ ಮೂಲಕ ಸದಾ ಸಮಾಜಮುಖಿಯಾಗಿ ಕೆಲಸ ಮಾಡುವ ಅತ್ಯಂತ ಸರಳ ವ್ಯಕ್ತಿ.

    ಸಿದ್ದಿ ಜನಾಂಗಕ್ಕೆ ನೀಡಿದ ಗೌರವ

   ಸಿದ್ದಿ ಜನಾಂಗಕ್ಕೆ ನೀಡಿದ ಗೌರವ

   ಇನ್ನೂ ಬಡತನದಲ್ಲಿಯೇ ಇರುವ ಇವರು, ಪದವಿ ಮುಗಿಸಿದ ಮಗಳು, ಪಿಯುಸಿ ಓದುವ ಓರ್ವ ಮಗ ಹಾಗೂ ಪತ್ನಿಯೊಂದಿಗೆ ಇಂದಿಗೂ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. 31 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದು, ಪ್ರಸ್ತುತ ವನವಾಸಿ ಕಲ್ಯಾಣದ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಹಿತರಕ್ಷಣಾ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಸಂಘಟಕರಾಗಿ, ವಾಗ್ಮಿಯಾಗಿ ಗುರುತಿಸಿಕೊಂಡಿದ್ದಾರೆ. ಪತ್ನಿ ಸುಶೀಲಾ ಶಾಂತಾರಾಮ ಅವರ ಸಾಮಾಜಿಕ ಕಾರ್ಯಗಳಲ್ಲಿ ಸಹಕರಿಸುತ್ತಾರೆ. ಮಕ್ಕಳಾದ ಸಂಗೀತಾ ಹಾಗೂ ಮಂಜುನಾಥ ವ್ಯಾಸಂಗ ಮಾಡುತ್ತಿದ್ದಾರೆ.

   ಸಾಮಾಜಿಕ ಸೇವೆಗಾಗಿ ಹಲವು ಗೌರವ ಸನ್ಮಾನಗಳು ಶಾಂತಾರಾಮ ಅವರನ್ನು ಅರಸಿ ಬಂದಿವೆ. ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದವರಿಗೆ ಸಮಾಜದಲ್ಲಿ ಗೌರವ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿರುವ ಇವರು ಹಿಂದುಳಿದ, ಬುಡಕಟ್ಟು ಸಮುದಾಯ ಯುವ ಪೀಳಿಗೆಯವರಿಗೆ ಮಾದರಿಯಾಗಿ ನಿಲ್ಲುತ್ತಾರೆ.

   ಯಾವುದೇ ರಾಜಕೀಯ ಪ್ರಭಾವ ಬಳಸದೆ ಕಾಡಿನಲ್ಲಿ ಬದುಕು ಕಳೆಯುತ್ತಿರುವ ಸಿದ್ದಿ ಜನಾಂಗದ ಅಭಿವೃದ್ಧಿಗಾಗಿ ಹಾಗೂ ಹಸಿರು ಉಳಿವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಹೋರಾಟದ ಬದುಕು ಕಟ್ಟಿಕೊಂಡಿರುವ ಶಾಂತಾರಾಮ ಸಿದ್ದಿಯವರಿಗೆ ಈ ಸ್ಥಾನ ದೊರೆತಿದ್ದು ಸಿದ್ದಿ ಜನಾಂಗಕ್ಕೆ ನೀಡಿದ ಗೌರವವಾಗಿದೆ.

   English summary
   Raised in a educational and economically backward siddi community, Shantarama Siddi has struggled to the development of siddi community. Now he has been nominated from the service sector to legislative council. Here is the full profile of him...
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X