ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರಕ್ಕೆ ಸಚಿವರ ಸಭೆಗೆ ಬರುತ್ತಿದ್ದ ಕಾರು ಪಲ್ಟಿ: ಓರ್ವ ಅಧಿಕಾರಿ ಸಾವು

|
Google Oneindia Kannada News

ಕಾರವಾರ, ಆಗಸ್ಟ್ 07: ಉಸ್ತುವಾರಿ ಸಚಿವರ ಸಭೆಗೆಂದು ಕಾರವಾರಕ್ಕೆ ಬರುತ್ತಿದ್ದ ಕಾರು ಪಲ್ಟಿಯಾಗಿ ಓರ್ವ ಅಧಿಕಾರಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸಮೀಪ ನಡೆದಿದೆ.

ಅಂಕೋಲಾ ತಾಲೂಕಿನ ಬಾಳೇಗುಳಿ ಬಳಿ ಕಾರು ಪಲ್ಟಿಯಾಗಿದ್ದು, ಓರ್ವ ಅಧಿಕಾರಿ ಸಾವಿನ ಜೊತೆಗೆ ನಾಲ್ವರಿಗೆ ಗಂಭೀರ ಗಾಯಗೊಂಡು ಅಂಕೋಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಚಿವ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೆರೆ ಪರಿಸ್ಥಿತಿ ಹಾಗೂ ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಸಭೆ ಕರೆಯಲಾಗಿತ್ತು. ಸಭೆಗೆ ಲೋಕೋಪಯೋಗಿ ಇಲಾಖೆಯ ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕಿನ ಇಂಜಿನಿಯರ್‌ಗಳು ಒಂದೇ ಕಾರಿನಲ್ಲಿ ಕಾರವಾರಕ್ಕೆ ಬರುತ್ತಿದ್ದರು.

ಆದರೆ ಅಂಕೋಲಾ ತಾಲೂಕಿನ ಬಾಳೇಗುಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮುದುಕಣ್ಣನವರ್ (58) ಮೃತಪಟ್ಟಿದ್ದಾರೆ.

ಆಸ್ಪತ್ರೆಗೆ ಸಚಿವ ಶಿವರಾಮ ಹೆಬ್ಬಾರ್ ಭೇಟಿ

ಆಸ್ಪತ್ರೆಗೆ ಸಚಿವ ಶಿವರಾಮ ಹೆಬ್ಬಾರ್ ಭೇಟಿ

ಕಾರು ಪಲ್ಟಿಯಾಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಆ್ಯಂಬುಲೆನ್ಸ್ ಮೂಲಕ ಅಂಕೋಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಅಪಘಾತದ ಬಳಿಕ ಮೃತದೇಹ ಇಟ್ಟಿದ್ದ ಅಂಕೋಲಾ ತಾಲೂಕು ಆಸ್ಪತ್ರೆಗೆ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿದರು. ಈ ವೇಳೆ ಕುಮಟಾ ಶಾಸಕ ದಿನಕರ ಶೆಟ್ಟಿ ಕೂಡ ಹಾಜರಿದ್ದರು. ಯಲ್ಲಾಪುರದಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರುತ್ತಿದ್ದ ವೇಳೆ ಅಂಕೋಲಾ ಆಸ್ಪತ್ರೆಗೆ ತೆರಳಿದ ಸಚಿವ ಹೆಬ್ಬಾರ್, ಪೊಲೀಸರಿಂದ ಅಪಘಾತದ ಮಾಹಿತಿ ಪಡೆದರು.

ಮೊದಲ ಬಾರಿ ಉತ್ತರ ಕನ್ನಡಕ್ಕೆ ಶಿವರಾಮ ಹೆಬ್ಬಾರ್

ಮೊದಲ ಬಾರಿ ಉತ್ತರ ಕನ್ನಡಕ್ಕೆ ಶಿವರಾಮ ಹೆಬ್ಬಾರ್

ಸಚಿವರಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಶಿವರಾಮ ಹೆಬ್ಬಾರ್ ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರಕ್ಕೆ ಶನಿವಾರ ಭೇಟಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯ ಕುರಿತು ಅವಲೋಕನ ಮಾಡಲು, ಪರಿಹಾರ ಕಾರ್ಯ ಕುರಿತು ಮಾಹಿತಿ‌ ಪಡೆಯಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಹಮ್ಮಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕೂಡ ನಿಧಾನಗತಿಯಲ್ಲಿ ಏರುತ್ತಿದ್ದು, ಈ ಬಗ್ಗೆಯೂ ಸಭೆ ನಡೆಸಿ ಅಧಿಕಾರಿಗಳಿಂದ ಸಚಿವ ಹೆಬ್ಬಾರ್ ಮಾಹಿತಿ ಪಡೆಯಲಿದ್ದಾರೆ.

ನೂರಾರು ಕಿ.ಮೀ ಘಟ್ಟ ಇಳಿದು ಬರಬೇಕು

ನೂರಾರು ಕಿ.ಮೀ ಘಟ್ಟ ಇಳಿದು ಬರಬೇಕು

ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಜೋಯಿಡಾ, ಮುಂಡಗೋಡ, ಹಳಿಯಾಳ, ಯಲ್ಲಾಪುರ ತಾಲೂಕಿನ ಅಧಿಕಾರಿಗಳು ಪ್ರತಿ ಬಾರಿ ಸಭೆಗೆ ನೂರಾರು ಕಿಲೋ‌ಮೀಟರ್ ಘಟ್ಟ ಇಳಿದು ಕರಾವಳಿಗೆ ಬರಬೇಕಿದೆ.

ಈಗಂತೂ ಜೋಯಿಡಾ ಜೊತೆ ಕಾರವಾರ ಸಂಪರ್ಕಿಸುವ ರಸ್ತೆಯ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿದಿರುವ ಕಾರಣ ಜಿಲ್ಲಾ ಕೇಂದ್ರಕ್ಕೆ ಬರುವವರು ಸುತ್ತು ಹಾಕಿ ಬರಬೇಕಾಗಿದೆ.‌ ಇನ್ನು ಶಿರಸಿ- ಕುಮಟಾ ರಸ್ತೆ ಕೂಡ ಹದಗೆಟ್ಟಿದ್ದು, ಇಲ್ಲೂ ಕೂಡ ಸಂಚರಿಸಬೇಕೆಂದರೆ ಹರಸಾಹಸ ಪಡಬೇಕು.‌

Recommended Video

ಬೊಮ್ಮಾಯಿ ಸಂಪುಟದಿಂದ ವಿಜಯೇಂದ್ರ ಹೊರಗೆ | Oneindia Kannada
ಹುಬ್ಬಳ್ಳಿ- ಅಂಕೋಲಾ ಮಾರ್ಗದ ಗುಡ್ಡ ಕುಸಿತ

ಹುಬ್ಬಳ್ಳಿ- ಅಂಕೋಲಾ ಮಾರ್ಗದ ಗುಡ್ಡ ಕುಸಿತ

ಇನ್ನು ಯಲ್ಲಾಪುರದಿಂದ ಜಿಲ್ಲಾ ಕೇಂದ್ರಕ್ಕೆ ಬರಲು ಇದ್ದ ಹುಬ್ಬಳ್ಳಿ- ಅಂಕೋಲಾ ಮಾರ್ಗದ ಅರಬೈಲ್ ಘಟ್ಟದಲ್ಲೂ ಗುಡ್ಡ ಕುಸಿತವಾಗಿ ನೂರಾರು ಲಾರಿಗಳು ರಸ್ತೆಗಳಲ್ಲೇ ನಿಂತಿವೆ. ಇಲ್ಲಿ ಲಘು ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದ್ದು, ಭಾರೀ ವಾಹನಗಳ ಸಂಚಾರಕ್ಕೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಜಿಲ್ಲಾಡಳಿತ ಅವಕಾಶ ನೀಡಿದೆ.

ಇನ್ನು ಕರಾವಳಿಯ ಅಪೂರ್ಣ ಹೆದ್ದಾರಿ ಕಾಮಗಾರಿಯಂತೂ ಪ್ರತಿದಿನ ಒಂದಲ್ಲಾ ಒಂದು ಅಪಘಾತಕ್ಕೆ ಕಾರಣವಾಗುತ್ತಿದೆ. ಒಟ್ಟಾರೆಯಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಜಿಲ್ಲೆಯ ಯಾವುದೇ ಹೆದ್ದಾರಿಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಅಧಿಕಾರಿಗಳಾಗಲಿ, ಸಾರ್ವಜನಿಕರೇ ಆಗಲಿ, ಜಿಲ್ಲೆಯ ಹೆದ್ದಾರಿಗಳಲ್ಲಿ ಸಂಚರಿಸಬೇಕೆಂದರೆ ಜೀವ ಕೈಯಲ್ಲಿ ಹಿಡಿದೇ ಸಾಗಬೇಕು. ಈ ನಡುವೆ ಸಭೆಗೆಂದು ಬರುತ್ತಿದ್ದ ಕಾರು ಪಲ್ಟಿಯಾಗಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದು ದುರಂತವೇ ಸರಿ.

English summary
An officer was died in a car accident on the way to a minister's meeting, this incident took place near Ankola in Uttara Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X