ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ: ಕ್ರಿಮ್ಸ್ ಕೋವಿಡ್ ಐಸಿಯು ಭರ್ತಿ!

|
Google Oneindia Kannada News

ಕಾರವಾರ, ಮೇ 6: ಕೊರೊನಾ ಸೋಂಕು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಹಬ್ಬತೊಡಗಿದ್ದು, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಇರುವ ಒಂದು ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡ್‌ನ ವೆಂಟಿಲೇಟರ್, ಆಕ್ಸಿಜನ್ ಸಹಿತ ಬೆಡ್ ಭರ್ತಿಯಾಗಿದೆ. ದಾಖಲಾಗುವ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು, ನರ್ಸ್ ಹಾಗೂ ತಾಂತ್ರಿಕ ಸಿಬ್ಬಂದಿ ನಿಯೋಜನೆ ಇದೀಗ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ.

ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾದ ಉತ್ತರ ಕನ್ನಡದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗತೊಡಗಿದೆ. ಪ್ರತಿನಿತ್ಯ 800ಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದು, ಜಿಲ್ಲೆಯಲ್ಲಿ ಇರುವ ಏಕೈಕ ಮೆಡಿಕಲ್ ಕಾಲೇಜಿನ ಅತಿದೊಡ್ಡ ಕೋವಿಡ್ ಆಸ್ಪತ್ರೆಯ ಐಸಿಯು ಭರ್ತಿಯಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ಅಥವಾ ಸರ್ಕಾರಿ ದೊಡ್ಡ ಮಟ್ಟದ ಆಸ್ಪತ್ರೆಗಳು ಹೆಚ್ಚಿನ ಕೋವಿಡ್ ಚಿಕಿತ್ಸೆಗೆ ಇಲ್ಲದಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

450 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ

450 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ

ಸದ್ಯ ಸೋಂಕಿಗೆ ತುತ್ತಾದವರ ಪೈಕಿ ಗಂಭೀರ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕರಿಗೆ ಹೋಂ ಐಸೋಲೇಷನ್ ಮೂಲಕವೇ ಚಿಕಿತ್ಸೆಗೆ ಸೂಚಿಸಲಾಗಿದೆ. ಸದ್ಯ 3,459 ಸಕ್ರಿಯ ಸೋಂಕಿತ ಪ್ರಕರಣಗಳಿದ್ದು, ಅದರಲ್ಲಿ 3,009 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ 450 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 233 ಮಂದಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ತಜ್ಞ ವೈದ್ಯರು, ಸಿಬ್ಬಂದಿ ಕೊರತೆ

ತಜ್ಞ ವೈದ್ಯರು, ಸಿಬ್ಬಂದಿ ಕೊರತೆ

ಸದ್ಯ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗಾಗಿ ಆಕ್ಸಿಜನ್ ಬೆಡ್ ಮತ್ತು ಸಾಮಾನ್ಯ ಬೆಡ್ ವ್ಯವಸ್ಥೆ ಇದೆ. ಆದರೆ ಐಸಿಯು ಆಕ್ಸಿಜನ್ ಬೆಡ್ ಕೊರತೆ ಇದೆ. ಜಿಲ್ಲೆಯ ಯಾವುದೇ ತಾಲ್ಲೂಕಿನ ಕೊವಿಡ್ ವಾರ್ಡ್‌ಗಳಲ್ಲಿ ಐಸಿಯು ಆಕ್ಸಿಜನ್ ಬೆಡ್‌ನಲ್ಲಿ ಕೆಲಸ ಮಾಡಲು ವೈದ್ಯಕೀಯ ಸಿಬ್ಬಂದಿ ಇಲ್ಲ. ಕಾರವಾರದಲ್ಲಿ ಮಾತ್ರ ಈ ಸೌಲಭ್ಯ ಇರುವುದರಿಂದ ಗಂಭೀರ ಪ್ರಕರಣಗಳನ್ನು ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಈಗ ಇಲ್ಲಿ ಬೆಡ್‌ಗಳು ಭರ್ತಿಯಾಗಿವೆ. ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಮೆಡಿಕಲ್ ಕಾಲೇಜು ಹೊರತುಪಡಿಸಿ ಎಲ್ಲಿಯೂ ತಜ್ಞ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ಇಲ್ಲದ ಕಾರಣ ಗಂಭೀರ ಪ್ರಕರಣಗಳನ್ನು ಕಾರವಾರಕ್ಕೇ ತರಲಾಗುತ್ತಿದೆ. ಉಳಿದ ಕೋವಿಡ್ ಸೋಂಕಿತರಿಗೆ ಆಯಾ ತಾಲ್ಲೂಕು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಜಿಲ್ಲೆಯ ಮೆಡಿಕಲ್ ಕಾಲೇಜು, ಕೋವಿಡ್ ಲ್ಯಾಬ್ ಸೇರಿದಂತೆ ತಾಂತ್ರಿಕ ಸಿಬ್ಬಂದಿಯೂ ಕರ್ತವ್ಯದ ನಡುವೆ ಸೋಂಕಿತರಾಗುತ್ತಿದ್ದಾರೆ. ಆದರೂ ಪ್ರತಿನಿತ್ಯ 1700ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.

ತರಬೇತಿ ವೈದ್ಯರ ನೇಮಕಕ್ಕೆ ಸೂಚನೆ

ತರಬೇತಿ ವೈದ್ಯರ ನೇಮಕಕ್ಕೆ ಸೂಚನೆ

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಚಿಕಿತ್ಸೆಗೆ ಜಿಲ್ಲಾಡಳಿತ ಕೂಡ ಶ್ರಮಪಡುತ್ತಿದೆ. ಆದರೆ ಸೋಂಕಿತರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚುತ್ತಿರುವುದರಿಂದ ಜನರೇ ಜಾಗೃತರಾಗಿ ಸೋಂಕು ತಗುಲದಂತೆ ಎಚ್ಚರವಹಿಸುವ ಅವಶ್ಯಕತೆ ಇದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ವೈದ್ಯರ ಕೊರತೆ ನೀಗಿಸುವ ಸಂಬಂಧ ಈಗಾಗಲೇ ತರಬೇತಿ ವೈದ್ಯರ ನೇಮಕಕ್ಕೆ ಸೂಚಿಸಿದ್ದೇನೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆ ಸ್ಥಿತಿಗತಿ ಬಗ್ಗೆ ತಿಳಿದು ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಕೋವಿಡ್ ವಾರ್ ರೂಮ್ ರಚಿಸಲಾಗಿದೆ. ಅಂಕೋಲಾದಲ್ಲಿ ಕೂಡ ಕಾರವಾರದಲ್ಲಿರುವಂತೆಯೇ ಕೋವಿಡ್ ಕೇಂದ್ರದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಬೆಡ್ ಬಳಕೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Recommended Video

ಕರ್ನಾಟಕಕ್ಕೆ 1200 ಮೆ.ಟನ್‌ ಆಕ್ಸಿಜನ್‌ ಪೂರೈಕೆ ವಿಚಾರ- ಹೈ ಕೋರ್ಟ್‌ ಆದೇಶ ಎತ್ತಿಹಿಡಿದ ಸುಪ್ರೀಂ | Oneindia Kannada
ಬೆಡ್ ಸಿಗದೆ ಪರದಾಡಿದ ಸೋಂಕಿತ

ಬೆಡ್ ಸಿಗದೆ ಪರದಾಡಿದ ಸೋಂಕಿತ

ಇನ್ನು ಕಾರವಾರ ನಗರದಲ್ಲಿ ಕೋವಿಡ್ ಐಸಿಯು ಬೆಡ್ ಸಿಗದೆ ಸೋಂಕಿತನೋರ್ವ ಬುಧವಾರ ಸುಮಾರು ಒಂದು ಗಂಟೆಗಳ ಕಾಲ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಪರದಾಡಿರುವ ಘಟನೆ ವರದಿಯಾಗಿದೆ. ವಾರದಿಂದ ಜ್ವರ ಹಾಗೂ ಅಶಕ್ತತೆ ಇತ್ತು. ಹೀಗಾಗಿ ಖಾಸಗಿ ವೈದ್ಯರುಗಳ ಬಳಿ ತಪಾಸಣೆ ಮಾಡಿಕೊಂಡಿದ್ದೆ. ಸಿಟಿ ಸ್ಕ್ಯಾನ್ ಕೂಡ ಮಾಡಿಸಿದ್ದೆ. ಕೋವಿಡ್ ತಪಾಸಣೆಗೆ ಒಳಗಾದ ಬಳಿಕ ಮಂಗಳವಾರ ರಾತ್ರಿ ಪಾಸಿಟಿವ್ ಎಂದು ವರದಿ ಬಂದಿತ್ತು. ಈ ವೇಳೆ ಮನೆಯಲ್ಲೇ ಐಸೋಲೇಷನ್ ಇರಲು ಸೂಚಿದ್ದರಿಂದ ಮನೆಯಲ್ಲೇ ಇದ್ದೆ. ಆದರೆ ಮಧ್ಯಾಹ್ನದ ಅವಧಿಗೆ ಸುಸ್ತು ಹೆಚ್ಚಾಗಿ, ಉಸಿರಾಟದ ಸಮಸ್ಯೆ ಎದುರಾಗಿ ಆಸ್ಪತ್ರೆಗೆ ದಾಖಲಾಗಲೆಂದು ಇಲ್ಲಿಗೆ ಬಂದರೆ ಬೆಡ್ ಇಲ್ಲ ಎನ್ನುತ್ತಿದ್ದಾರೆ ಎಂದು ಸೋಂಕಿತ ತಿಳಿಸಿದರು. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ ಬಳಿಕ ಬೆಡ್ ವ್ಯವಸ್ಥೆ ಮಾಡಿದ್ದಾರೆನ್ನಲಾಗಿದೆ.

English summary
No Covid-19 ventilator And oxygen beds available at KRIMS Hospital in Uttara Kannada due to rise in Covid cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X