ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್ ಚುನಾವಣೆಯಿಂದ ಅನಂತ್‌ಕುಮಾರ್ ಹೆಗ್ಡೆ ಅಂತರ; ಬಿಜೆಪಿ ವಿರುದ್ಧ ಮುನಿಸು?

|
Google Oneindia Kannada News

ಕಾರವಾರ, ನವೆಂಬರ್ 30: ಕರಾವಳಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ಜೋರಾಗಿದ್ದು, ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಐದು ಶಾಸಕರನ್ನು ಹೊಂದಿರುವ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆ ಪಡೆದಿದ್ದು, ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸೇರಿದಂತೆ ಪಕ್ಷದ ಎಲ್ಲ ಮುಖಂಡರೂ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗೆ ಸಾಥ್ ನೀಡುತ್ತಿದ್ದಾರೆ.

ಆದರೆ ಬಿಜೆಪಿ ಪಕ್ಷದ ಪ್ರಭಾವಿ ಮುಖಂಡ ಎನಿಸಿಕೊಂಡಿರುವ ಫೈರ್ ಬ್ರ್ಯಾಂಡ್ ಅನಂತ್​​ಕುಮಾರ್​​ ಹೆಗಡೆ ಮಾತ್ರ ಎಂಎಲ್‌ಸಿ ಚುನಾವಣಾ ಕಣದಿಂದ ಕಣ್ಮರೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದ್ದು, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಮಟ್ಟಿಗೆ ಅನಂತ್​​ಕುಮಾರ್​​ ಹೆಗಡೆ ಹೈಕಮಾಂಡ್ ಇದ್ದಂತಿದ್ದರು. ಯಾವುದೇ ಚುನಾವಣೆಗಳಿದ್ದರೂ ಸಹ ಅವರು ಸೂಚಿಸಿದ ಅಭ್ಯರ್ಥಿಗೇ ಮೊದಲು ಪ್ರಾಶಸ್ತ್ಯ ನೀಡಲಾಗುತ್ತದೆ ಅನ್ನೋದು ಪಕ್ಷದ ವಲಯದಲ್ಲೇ ಮಾತುಗಳು ಕೇಳಿಬರುತ್ತಿದ್ದವು. ಆದರೆ ಈ ಬಾರಿ ಪರಿಷತ್ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿದ್ದರೂ, ಸಂಸದ ಅನಂತ್​​ಕುಮಾರ್ ಮಾತ್ರ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗಾಗಲಿ ಅಥವಾ ಅಭ್ಯರ್ಥಿ ಪರ ಪ್ರಚಾರದಲ್ಲಾಗಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದು ಪಕ್ಷದ ಕಾರ್ಯಕರ್ತರಲ್ಲೂ ಸಹ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದು, ನಾಯಕರುಗಳಿಗೂ ಇರಿಸು ಮುರುಸು ಉಂಟುಮಾಡಿದೆ.

Karwar: MP Anant Kumar Hegde Not Campaigning For BJP MLC Candidate in Uttara Kannada, Why?

ಎಲ್ಲಾ ಕಾರ್ಯಕ್ರಮಗಳಿಗೂ ಗೈರು
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಕಾರವಾರದ ಗಣಪತಿ ಉಳ್ವೇಕರ್‌ಗೆ ಟಿಕೆಟ್ ನೀಡಲಾಗಿದ್ದು, ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಆದರೆ ಅನಂತ್​​ಕುಮಾರ್ ಹೆಗಡೆ ಸೂಚಿಸಿದ್ದ ಅಭ್ಯರ್ಥಿಗೆ ಟಿಕೆಟ್ ಸಿಗದ ಹಿನ್ನೆಲೆ ಅವರು ಮುನಿಸಿಕೊಂಡಿದ್ದು, ಈ ಕಾರಣದಿಂದಲೇ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊಂಡ ಜನಸ್ವರಾಜ್ ಯಾತ್ರೆ ವೇಳೆಯಲ್ಲಿಯೂ ಅನಂತ್‌ಕುಮಾರ್ ಹೆಗ್ಡೆ ಗೈರಾಗಿದ್ದರು.

ಈ ವೇಳೆ ದೆಹಲಿಯಲ್ಲಿದ್ದ ಅನಂತ್​​ಕುಮಾರ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಬೆಂಗಳೂರಿನಲ್ಲೇ ಉಳಿದುಕೊಳ್ಳುವ ಮೂಲಕ ಆ ಕಾರ್ಯಕ್ರಮದಿಂದಲೂ ದೂರ ಉಳಿದಿದ್ದರು. ಅಲ್ಲದೇ ಇದೀಗ ಪ್ರಚಾರ ವೇಳೆಯಲ್ಲಿಯೂ ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದು, ಅನಂತ್‌ಕುಮಾರ್ ಗೈರು ಎದ್ದು ಕಾಣುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತ್​​ಕುಮಾರ್ ಹೆಗಡೆ ಫೈರ್ ಬ್ರ್ಯಾಂಡ್ ಎಂದೇ ಪ್ರಸಿದ್ಧಿ ಪಡೆದಿರುವ ಪ್ರಭಾವಿ ನಾಯಕ. ಪಕ್ಷದಲ್ಲಿ ದೆಹಲಿಯವರೆಗೂ ಸಾಕಷ್ಟು ಪ್ರಭಾವವನ್ನು ಹೊಂದಿರುವ ಅನಂತ್‌ಕುಮಾರ್ ಹೆಗಡೆಗೆ ಜಿಲ್ಲೆಯಲ್ಲಿ ಸಾಕಷ್ಟು ಅಭಿಮಾನಿ ಬಳಗವಿದ್ದು, ಪರಿಷತ್ ಚುನಾವಣಾ ಪ್ರಚಾರದಲ್ಲಿ ಅವರ ಹಾಜರಾತಿಯಿಂದ ಬಹುಪಾಲು ಮತಗಳನ್ನು ಸೆಳೆಯಲು ಅನುಕೂಲವಾಗುತ್ತಿತ್ತು.

Karwar: MP Anant Kumar Hegde Not Campaigning For BJP MLC Candidate in Uttara Kannada, Why?

ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ
ಆದರೆ ಅನಂತ್‌ಕುಮಾರ್ ಹೆಗ್ಡೆ ಮಾತ್ರ ಬಹಿರಂಗವಾಗಿ ಎಲ್ಲಿಯೂ ಅಭ್ಯರ್ಥಿ ಪರ ಬೆಂಬಲ ವ್ಯಕ್ತಪಡಿಸಿಲ್ಲವಾಗಿದ್ದು, ಚುನಾವಣಾ ಕಣದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಇದರಿಂದ ಅನಂತ್‌ಕುಮಾರ್ ಬೆಂಬಲಿಗರಿಗೆ ಸಾಕಷ್ಟು ಗೊಂದಲ ಉಂಟುಮಾಡಿದ್ದು, ಇದು ಪರೋಕ್ಷವಾಗಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನು ಈ ಬಗ್ಗೆ ಪಕ್ಷದ ನಾಯಕರನ್ನು ಕೇಳಿದರೆ ಅನಂತ್‌ಕುಮಾರ್ ಹೆಗಡೆ ಜವಾಬ್ದಾರಿಯುತ ನಾಯಕನಾಗಿದ್ದು, ತಮ್ಮದೇ ಆದ ಕೆಲಸ ಕಾರ್ಯಗಳನ್ನು ಹೊಂದಿದ್ದಾರೆ. ಈ ಕಾರಣದಿಂದ ಬಹಿರಂಗವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲವಾಗಿದ್ದು, ಅವರು ಮುನಿಸಿಕೊಂಡಿರುವ ಅನುಮಾನವನ್ನು ತಳ್ಳಿಹಾಕಿದ್ದಾರೆ.

ಒಟ್ಟಿನಲ್ಲಿ ಮಹತ್ವದ ಚುನಾವಣೆಯ ಸಂದರ್ಭದಲ್ಲೇ ಪಕ್ಷದ ಪ್ರಭಾವಿ ಮುಖಂಡ ಅನಂತ್​​ಕುಮಾರ್ ಹೆಗಡೆ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸದಿರುವುದು ಬಿಜೆಪಿ ನಾಯಕರುಗಳಿಗೆ ನುಂಗಲಾರದ ತುತ್ತಾಗಿದ್ದು, ಇದು ಚುನಾವಣೆಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಅನ್ನುವುದನ್ನು ಚುನಾವಣಾ ಫಲಿತಾಂಶದವರೆಗೂ ಕಾದುನೋಡಬೇಕು.

Recommended Video

KL Rahul ಹಾಗು Rashid Khanಗೆ ಎದುರಾಯಿತು ಭಾರೀ ಕಂಟಕ | Oneindia Kannada

English summary
MLC ELection: MP Anant Kumar Hegde not campaigning for BJP mlc Candidate in Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X