ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿದು ‘ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ’ ಹೊಡೆದ ರೂಪಾಲಿ ನಾಯ್ಕ
ಕಾರವಾರ, ನವೆಂಬರ್ 03: ಅಂಕೋಲಾ ಪುರಸಭೆ ಹಾಗೂ ಕಾರವಾರ ನಗರಸಭೆಯ ಆಡಳಿತವನ್ನು ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಶಾಸಕಿ ರೂಪಾಲಿ ನಾಯ್ಕರ ನಿರಂತರ ಪ್ರಯತ್ನದಿಂದ ಅಧಿಕಾರಕ್ಕೇರಲು ಕಾರಣವಾಗಿದ್ದು, ಈ ಮೂಲಕ ಕ್ಷೇತ್ರದಲ್ಲಿ ರೂಪಾಲಿ ನಾಯ್ಕ ತನ್ನ ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಇಡೀ ಜಿಲ್ಲೆಯಲ್ಲಿ ಅತಂತ್ರ ಸ್ಥಿತಿಗೆ ತಲುಪಿದ್ದ ಕಾರವಾರ ನಗರಸಭೆ ಹಾಗೂ ಅಂಕೋಲಾ ಪುರಸಭೆಯಲ್ಲಿ ಯಾವ ಪಕ್ಷ ಆಡಳಿತಕ್ಕೆ ಬರಲಿದೆ ಎನ್ನುವ ಕುತೂಹಲ ಮೂಡಿತ್ತು. ಸದ್ಯ ಆಡಳಿತ ಪಕ್ಷ ಬಿಜೆಪಿ ಇರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಒಂದಾಗಿ ಕಾರವಾರದಲ್ಲಿ ನಗರಸಭೆ ಆಡಳಿತ ಹಿಡಿಯುತ್ತದೆ, ಪಕ್ಷೇತರರ ಸಹಾಯದಿಂದ ಅಂಕೋಲಾ ಪುರಸಭೆ ಆಡಳಿತವನ್ನು ಕಾಂಗ್ರೆಸ್ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ-ಜೆಡಿಎಸ್ ಮೈತ್ರಿ?
ಇನ್ನೊಂದೆಡೆ ಅಧಿಕಾರ ಹಿಡಿಯುವುದು ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಗೆ ಪ್ರತಿಷ್ಠೆಯ ಕಣ ಸಹ ಆಗಿತ್ತು. ಇದರ ನಡುವೆ ಕಳೆದ ಒಂದು ವಾರದಿಂದ ಶಾಸಕಿ ರೂಪಾಲಿ ನಾಯ್ಕ ಅಧಿಕಾರ ಹಿಡಿಯಲೇಬೇಕು ಎನ್ನುವ ಪ್ರಯತ್ನ ನಡೆಸಿ ಅಂತಿಮವಾಗಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಚ್ಚಿದ ರೂಪಾಲಿ ನಾಯ್ಕ ವರ್ಚಸ್ಸು
ಕಾರವಾರದಲ್ಲಿ ಜೆಡಿಎಸ್ ಪಕ್ಷದ ಬಾಹ್ಯ ಬೆಂಬಲ ಪಡೆಯುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಯನ್ನು ತಮ್ಮದೇ ಪಕ್ಷದವರಿಗೆ ಕೊಡಿಸಿದ್ದರೆ ಇನ್ನೊಂದೆಡೆ ಅಂಕೋಲದಲ್ಲೂ ತನ್ನದೇ ಬೆಂಬಲಿಗರನ್ನು ಅಧಿಕಾರಕ್ಕೆ ತರುವಲ್ಲಿ ಶಾಸಕಿ ರೂಪಾಲಿ ನಾಯ್ಕ ಯಶಸ್ವಿಯಾಗಿದ್ದು, ಇದರಿಂದ ರೂಪಾಲಿ ನಾಯ್ಕ ವರ್ಚಸ್ಸು ಕ್ಷೇತ್ರದಲ್ಲಿ ಹೆಚ್ಚಿದೆ ಎನ್ನುವ ಮಾತು ಕೇಳಿ ಬಂದಿದೆ.

ನಗರ ಸಭೆಯಲ್ಲಿ ಬಿಜೆಪಿ ಪ್ರಾಬಲ್ಯ
ನಗರಸಭೆಯಲ್ಲಿ ಜೆಡಿಎಸ್ ಬಾಹ್ಯ ಬೆಂಬಲ ನೀಡಿದ್ದರೂ ಅಂತಿಮವಾಗಿ ಬಿಜೆಪಿಯೇ ಪ್ರಾಬಲ್ಯ ಮೆರೆದಿದೆ. ಬೆಂಬಲ ನೀಡಿದ ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯರು ಚುನಾವಣೆ ನಂತರ ಬಿಜೆಪಿ ಟೋಪಿ, ಶಾಲು ಹಾಕಿಕೊಂಡು ಬಿಜೆಪಿಯ ಕಾರ್ಯಕರ್ತರ ರೀತಿಯಲ್ಲಿಯೇ ಸಂಭ್ರಮಿಸಿದ್ದು, ಈ ಮೂಲಕ ಜೆಡಿಎಸ್ ಪಕ್ಷದವರನ್ನು ತನ್ನ ಪಕ್ಷದ ಕಡೆಗೆ ಸೆಳೆಯುವಲ್ಲೂ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಚುನಾವಣಾ ನಿಯಮ ಉಲ್ಲಂಘಿಸಿದರೆ ಶಾಸಕಿ ರೂಪಾಲಿ? ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ಸಿಗರು ಸಿಡಿಮಿಡಿ

ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಎನ್ನಲಾಗಿತ್ತು
ಈ ಹಿಂದೆ ನಗರಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆಯುತ್ತಾರೆ ಎನ್ನಲಾಗಿತ್ತು. ಒಂದೊಮ್ಮೆ ಹಾಗಾಗಿದ್ದರೆ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಆನಂದ್ ಅಸ್ನೋಟಿಕರ್ ಪ್ರಭಾವ ಕಾರವಾರದಲ್ಲಿ ಹೆಚ್ಚಾಗಿ ರೂಪಾಲಿ ನಾಯ್ಕ ಪ್ರಭಾವ ಕಡಿಮೆಯಾಗುತ್ತಿತ್ತು. ಅಧಿಕಾರ ಒಂದೊಮ್ಮೆ ಬಿಜೆಪಿ ಕೈ ತಪ್ಪಿದ್ದರೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವ ವೇಳೆಯಲ್ಲೂ ಬಿಜೆಪಿ ಸೋಲು ಕಂಡಿದೆ ಎಂದು ಸೋಲಿನ ಹಣೆಪಟ್ಟಿಯನ್ನು ಶಾಸಕಿಯ ಮೇಲೆ ಕಟ್ಟಲು ಕೆಲ ಬಿಜೆಪಿ ಪ್ರಮುಖರೇ ಮುಂದಾಗಿದ್ದರು ಎನ್ನಲಾಗಿದೆ. ಆದರೆ ಇದೀಗ ಜೆಡಿಎಸ್ ಸದಸ್ಯರ ಬೆಂಬಲವನ್ನೇ ಪಡೆದು ತನ್ನದೇ ಪಕ್ಷದ ಇಬ್ಬರನ್ನು ಅಧಿಕಾರಕ್ಕೆ ತರುವ ಮೂಲಕ ರೂಪಾಲಿ ನಾಯ್ಕ ಒಂದೇ ಕಲ್ಲಿನಲ್ಲಿ ಸೈಲ್ ಹಾಗೂ ಆನಂದ್ ಇಬ್ಬರನ್ನೂ ಹೊಡೆದಿದ್ದಾರೆನ್ನಲಾಗಿದೆ.

ಪಂಚಾಯತ್ ಚುನಾವಣೆಯ ಮೇಲೆ ಪರಿಣಾಮ?
ಇನ್ನೊಂದೆಡೆ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗಳ ಆಯ್ಕೆ ಸಂದರ್ಭ ಪಕ್ಷದಲ್ಲಿಯೇ ಕೆಲ ಭಿನ್ನಾಭಿಪ್ರಾಯಗಳು ಕೇಳಿಬಂದಿತ್ತು. ಅಂಕೋಲಾದಲ್ಲಿ ಪಕ್ಷದ ಕೆಲ ನಾಯಕರೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಅಂತಿಮವಾಗಿ ಚುನಾವಣೆಯಲ್ಲಿ ಏನು ಬೇಕಾದರು ಆಗಬಹುದು ಎನ್ನುವ ಮಾತು ಪಟ್ಟಣದಲ್ಲಿ ಹರಿದಾಡಿತ್ತು. ಆದರೆ ಎಲ್ಲವನ್ನು ಸರಿಮಾಡಿ ಪಟ್ಟು ಹಿಡಿದು ತಾನು ಆಯ್ಕೆ ಮಾಡಿದವರಿಗೆ ಅಧಿಕಾರ ಕೊಡುವಲ್ಲಿ ಶಾಸಕಿ ಯಶಸ್ವಿಯಾಗಿದ್ದು ಶಾಸಕಿಯ ನಿರಂತರ ಪ್ರಯತ್ನದ ಬಗ್ಗೆ ಇದೀಗ ಪಕ್ಷದಲ್ಲಿ ಒಳ್ಳೆ ಅಭಿಪ್ರಾಯ ಕೇಳಿಬಂದಿದೆ ಎನ್ನಲಾಗಿದೆ. ನಗರಸಭೆಯ ಆಡಳಿತವನ್ನು ಬಿಜೆಪಿ ಹಿಡಿಯುವ ಮೂಲಕ ಇನ್ನೇನು ಕೆಲ ದಿನದಲ್ಲಿಯೇ ನಡೆಯುವ ಪಂಚಾಯತ್ ಚುನಾವಣೆಯ ಮೇಲೂ ಇದರ ಪರಿಣಾಮ ಬೀರಲಿದೆ ಎನ್ನಲಾಗಿದೆ.