ಗಡಿ ತಂಟೆಗೆ ಬಂದರೆ ಎಚ್ಚರ: ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ ಶಾಸಕಿ ರೂಪಾಲಿ
ಕಾರವಾರ, ಜನವರಿ 18: ಕರ್ನಾಟಕದ ಗಡಿ ಪ್ರದೇಶವನ್ನು ನಾವು ಹರಾಜಿಗಿಟ್ಟಿಲ್ಲ. ಪದೇ ಪದೇ ಕನ್ನಡಿಗರನ್ನು ಕೆರಳಿಸುವ ಕೆಲಸ ಬಿಡದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಶಾಸಕಿ ರೂಪಾಲಿ ನಾಯ್ಕ್ ಎದುರೇಟು ನೀಡಿದ್ದಾರೆ.
ಮಹಾರಾಷ್ಟ್ರ ಸಿಎಂ ಹೇಳಿಕೆಯನ್ನು ಖಂಡಿಸಿರುವ ರೂಪಾಲಿ ನಾಯ್ಕ್, ಶಾಸಕಿಯಾಗಿರುವ ನಾನು ಕೂಡ ಮರಾಠಾ ಸಮುದಾಯವನ್ನು ಪ್ರತಿನಿಧಿಸುತ್ತೇನೆ. ಗಡಿ ಪ್ರದೇಶದ ಎಲ್ಲರೂ ಕರ್ನಾಟಕದ ನೆಲ, ಜಲ ಬಳಸಿಕೊಂಡು ಇಲ್ಲಿನವರಾಗಿಯೇ ಇದ್ದೇವೆ. ಅವರೇನಾದರೂ ನಮ್ಮ ತಂಟೆಗೆ ಬಂದರೆ ಬಿಡುವುದಿಲ್ಲ. ಎಚ್ಚರ ಇರಲಿ ಎಂದು ಗುಡುಗಿದ್ದಾರೆ.
ಉದ್ಧವ್ ಠಾಕ್ರೆ ಹೇಳಿಕೆ; ಪ್ರತಿಕ್ರಿಯೆಗೆ ನಿರಾಕರಿಸಿದ ಅನಂತಕುಮಾರ್ ಹೆಗಡೆ!
ಉದ್ಧವ್ ಠಾಕ್ರೆ ಅವರೇ, ನೀವು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದೀರಾ. ಅಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಕಷ್ಟು ಅವಕಾಶಗಳಿವೆ. ಮೊದಲು ಅಲ್ಲಿನ ಜನರ ವಿಶ್ವಾಸಗಳಿಸಿ. ಅದು ಬಿಟ್ಟು ಪದೇ ಪದೇ ನಮ್ಮ ತಂಟೆಗೆ ಬರಬೇಡಿ.
ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಣ ಗಡಿ ವಿವಾದಕ್ಕೆ ಸಂಬಂಧಿಸಿದ ಮಹಾಜನ್ ವರದಿ ಕುರಿತು ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ನಡೆಯುತ್ತಿದೆ. ಈ ಹಂತದಲ್ಲಿ ಹೇಳಿಕೆ ನೀಡಿದರೆ ನ್ಯಾಯಾಂಗ ನಿಂದನೆಯಾಗಲಿದೆ ಎನ್ನುವ ಕನಿಷ್ಠ ಪ್ರಜ್ಞೆಯೂ ಅವರಿಗೆ ಇದ್ದಂತಿಲ್ಲ ಎಂದಿದ್ದಾರೆ.
ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಸಾಂಗ್ಲಿ ಹೀಗೆ ಮಹಾರಾಷ್ಟ್ರದ 18 ವಿಧಾನಸಭಾ ಕ್ಷೇತ್ರಗಳಲ್ಲಿ ಕನ್ನಡಿಗರೇ ನಿರ್ಣಾಯಕರು. ಹಾಗಂತ ಕನ್ನಡಿಗರು ಈ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಪ್ರಯತ್ನ ನಡೆಸಿಲ್ಲ. ಆದರೆ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ರಾಜಕೀಯ ಉದ್ದೇಶಕ್ಕಾಗಿ ಇಂತಹ ಹೇಳಿಕೆ ನೀಡುವ ಮೂಲಕ ಗೊಂದಲ ಹುಟ್ಟುಹಾಕುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ರಾಜ್ಯದಲ್ಲಿನ ಮರಾಠಿಗರಲ್ಲಿ ಭರವಸೆ ಮೂಡಿಸುತ್ತಿದೆ. ಮರಾಠಿಗರು ಹಾಗೂ ಕನ್ನಡಿಗರು ಅನ್ಯೋನ್ಯವಾಗಿರುವ ಸಂದರ್ಭದಲ್ಲಿ ಇಂತಹ ಕುತಂತ್ರದ ಹೇಳಿಕೆಗಳಿಗೆ ಬೆಲೆ ಬರಲಾರದು ಎಂದು ತಿಳಿಸಿದ್ದಾರೆ.