ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

‘ಕಾಡು ಜೀವಿ’ಗೆ ‘ನಾಡ’ ಗೌರವ: 92 ವರ್ಷದ ಹಿರಿಯ ವೆಳಿಪ್‌ಗೆ ರಾಜ್ಯೋತ್ಸವ ಪ್ರಶಸ್ತಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ನ.1: ಜೊಯಿಡಾ ತಾಲೂಕಿನ ಕಾರ್ಟೋಲಿ ಗ್ರಾಮದ 92 ವರ್ಷದ ಹಿರಿಯ ಜೀವ ಮಹಾದೇವ ವೆಳಿಪ್ ಅವರನ್ನು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅತೀ ಹಿಂದುಳಿದ ಕುಣಬಿ ಬುಡಕಟ್ಟು ಸಮುದಾಯದ ಇವರು, ಹುಟ್ಟಿದಾಗಿನಿಂದ ಕಾಡಿನೊಂದಿಗೆ ಬೆರೆತು ಪರಿಸರ ಮತ್ತು ಕಾಲಮಾನಕ್ಕೆ ತಕ್ಕಂತೆ ಜಾನಪದ ಹಾಡುಗಳನ್ನು ಸುಮಾರು ಸಾವಿರ ಲೆಕ್ಕದಲ್ಲಿ ನಿರಂತರವಾಗಿ ಹಾಡುವಂಥ ಕಲೆ ಕರಗತ ಮಾಡಿಕೊಂಡಿದ್ದಾರೆ.

ತಮ್ಮ ಹಾಡುಗಳ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. 60 ವರ್ಷಗಳಿಂದ ಜಾನಪದ ಕಲಾವಿದರಾಗಿದ್ದು, ಕುಣಬಿ ಸಾಂಪ್ರದಾಯಿಕ ಕುಣಿತ, ಕಾಡು, ಪ್ರಾಣಿ ಮತ್ತು ಪ್ರಕೃತಿಗೆ ಸಂಬಂಧಿಸಿದ ಅನೇಕ ಕಥೆಗಳು, ತುಳಸಿ ಪದ, ರಾಮಾಯಯಣ, ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ಹಾಡುಗಳನ್ನು ಇವರು ಹಾಡಬಲ್ಲರು. ಕುಣಬಿಗಳ ಶ್ರಮ ಸಂಸ್ಕೃತಿಯನ್ನು ಬಿಂಬಿಸುವಂತಹ ಅನೇಕ ಹಾಡುಗಳನ್ನು ಹಾಡಬಲ್ಲರು.

Mahadev Velip

ಕುಣಬಿಗಳ ಶಿಗ್ಮೋ ಖೇಳ ಹಾಡುಗಳು, ಉತ್ತರ ಕನ್ನಡ ಜಿಲ್ಲೆಯ ಜೀವ ನದಿಯಾದ ಕಾಳಿ ನದಿಯ ಹುಟ್ಟಿಗೆ ಸಂಬಂಧಿಸಿದ ಹಾಡುಗಳು, ಮಳೆ ಬರಲು ಪ್ರಾರ್ಥಿಸುವ ಹಾಡುಗಳು, ಕಾಡುಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿದ ಹಾಡುಗಳು, ಕುಂಬ್ರಿ (ರಾಗಿ) ಬೇಸಾಯ ಪಧ್ದತಿಗೆ ಸಂಬಂಧಿಸಿದ ಹಾಡುಗಳು ಇಂದಿಗೂ ಕೂಡ ನೆನಪಿಟ್ಟುಕೊಂಡು ಹಾಡುತ್ತಾ, ಇಲ್ಲಿನ ಸಸ್ಯಗಳು, ಕಾಡಿನಲ್ಲಿ ಇರುವ ಉಂಬಳ, ಪಕ್ಷಿ, ಪ್ರಾಣಿಗಳ ಸಂರಕ್ಷಣೆಯ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕಾಡಿನ ಬಗ್ಗೆ ಅಪಾರ ಜ್ಞಾನ ಹೊಂದಿದವರ ಸಾಲಿನಲ್ಲಿ ಅಗ್ರಗಣ್ಯರಾಗಿರುವ ಇವರನ್ನು ವನ್ಯ ತಜ್ಞ ಅಂತಲೂ ಕರೆಯುತ್ತಾರೆ.

ಪರಿಸರ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದ ಇವರು, ಅರಣ್ಯ ಇಲಾಖೆಯಿಂದ ಈ ಹಿಂದೆ ಬೇಣಗಳಲ್ಲಿ ಅಕೇಶಿಯವನ್ನು ನೆಡಲು ಬಂದಾಗ ಅದನ್ನು ತಡೆದು ಕಾಡು ಜಾತಿಯ ಗಿಡಗಳನ್ನು ನೆಡಿಸುವಲ್ಲಿ ಯಶಸ್ವಿಯಾಗಿದ್ದರು. ಡಿಗ್ಗಿ ಸುತ್ತಮುತ್ತಲಿನ ಸುಮಾರು 20 ಹಳ್ಳಿಗಳ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೂ ಪಾದಯಾತ್ರೆ ತೆರಳುವ ಮೂಲಕ ಹೋರಾಟ ಮಾಡಿದ್ದರು.

ತಮ್ಮೂರಿನಲ್ಲಿ ಸಿಗುವ 38ಕ್ಕಿಂತಲೂ ಹೆಚ್ಚಿನ ಅಪರೂಪದ ಗೆಡ್ಡೆ- ಗೆಣಸುಗಳನ್ನು ಬಗ್ಗೆ ಜ್ಞಾನ ಹೊಂದಿ, ಅವುಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಎಂದೂ ಕೂಡ ಪ್ರಚಾರವನ್ನು ಬಯಸದ ಇವರಿಗೆ ನಾಲ್ಕು ವರ್ಷಗಳ ಹಿಂದೆ ಜಾನಪದ ಪ್ರಶಸ್ತಿ ಲಭಿಸಿತ್ತು. ಜೇನುಹುಳುಗಳ ಜೊತೆಗೆ ಉಂಬಳಗಳ ರಕ್ಷಣೆಗೂ ನಿಂಥವರು. ಪಕ್ಷಿಗಳ ಕೂಗನ್ನು ಆಧರಿಸಿ ನಿಖರವಾಗಿ ಸಮಯ ಹೇಳುವ ಇವರು, ವಿದ್ಯಾಭ್ಯಾಸ ಕಲಿತವರಲ್ಲ. ಆದರೆ ಇವರು ನಾಟಿ ವೈದ್ಯರೂ ಹೌದು. ಈ ಇಳಿ ವಯಸ್ಸಿನಲ್ಲಿಯೂ ಇವರ ಪರಿಸರ ಕಾಳಜಿಯನ್ನು ನೋಡಿ ಈ ಹಿಂದೆ ಖುದ್ದು ದಿ.ಪುನೀತ್ ರಾಜಕುಮಾರ್ ಸಹ ಇವರನ್ನು ಭೇಟಿ ಮಾಡಿ ಹೋಗಿದ್ದರು.

ಅನೇಕ ಹಳ್ಳಿಗಳಲ್ಲಿ ಯುವಕ/ಯುವತಿಯರಿಗೆ ಜಾನಪದ ಕಲೆ ಕಲಿಸಿ ಅರಣ್ಯವಾಸಿ ಕುಣಬಿ ಸಮುದಾಯದ ಜನಪದ ಕಲೆಗೆ ಇಂದಿಗೂ ಪ್ರೋತ್ಸಾಹಿಸುತ್ತಿರುವ ಇವರ ಜಾನಪದ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗಮನಿಸಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಸಹ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಹಾಗೂ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಪ್ರಶಸ್ತಿ ಸನ್ಮಾನಗಳಿಗೆ ಇಂದಿನ ದಿನದಲ್ಲಿ ಲಾಬಿ ಮಾಡುವಾಗ, ಯಾವುದೇ ಲಾಬಿ ಇಲ್ಲದೇ ತಳಮಟ್ಟದಲ್ಲಿ ಸಾಧನೆ ಮಾಡಿದ ಜನರನ್ನು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಗುರುತಿಸಿರುವುದು ನಿಜವಾಗಿಯೂ ಶ್ಲಾಘನೀಯ. ಈ ಬಾರಿ ಸೇವಾ ಸಿಂಧು ಮೂಲಕ ಸಾರ್ವಜನಿಕರು ಮಾಡಿದ ಶಿಫಾರಸನ್ನು ಪರಿಗಣಿಸಿ ಹಾಗೂ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸಿದ ಮಹನೀಯರನ್ನು ಪ್ರಶಸ್ತಿಗೆ ಸಮಿತಿ ಆಯ್ಕೆ ಮಾಡಿರುವುದು ಮೆಚ್ಚುವಂಥದ್ದೇ ಸರಿ.

English summary
Get Rajyotsava award a man of wildlife, Mahadeva Velip, a 92-year-old veteran of Kartoli village of Zoida Taluk, has been selected for this year's Rajyotsava Award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X