ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆಮನೆ ಶಿವರಾಮ, ಗಜಾನನ ಹೆಗಡೆ ಪ್ರಶಸ್ತಿ ಘೋಷಣೆ

By ಎಂ.ಎಸ್.ಶೋಭಿತ್, ಮೂಡ್ಕಣಿ
|
Google Oneindia Kannada News

ಹೊನ್ನಾವರ, ಮಾರ್ಚ್ 13: ಯಕ್ಷಗಾನದ ಮೇರು ಕಲಾವಿದ ಕೆರೆಮನೆ ಶಿವರಾಮ ಹೆಗಡೆ ಅವರ ಹೆಸರಿನಲ್ಲಿ ಸ್ಥಾಪಿತವಾದ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಹಾಗೂ ಕೆರೆಮನೆ ಗಜಾನನ ಹೆಗಡೆ ಹೆಸರಿನಲ್ಲಿ ಸ್ಥಾಪಿತವಾದ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಪ್ರಸಿದ್ಧ ಯಕ್ಷಗಾನ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ ಅವರಿಗೆ ಘೋಷಿಸಿರುವುದಾಗಿ ಕೆರೆಮನೆ ಯಕ್ಷಗಾನ ಮಂಡಳಿಯ ನಿರ್ದೇಶಕ ಶಿವಾನಂದ ಹೆಗಡೆ ಕೆರೆಮನೆ ತಿಳಿಸಿದ್ದಾರೆ.

ಈ ಪ್ರಶಸ್ತಿ ಕಲೆ, ಸಂಸ್ಕೃತಿ, ಸಾಹಿತ್ಯ ಹೀಗೆ ಸಕಲ ಕಲಾಕ್ಷೇತ್ರಕ್ಕೆ ವಿಸ್ತಾರಗೊಂಡಿದ್ದು, 2004ರಲ್ಲಿ ಸ್ಥಾಪನೆಯಾಗಿದೆ. ಮೊದಲ ಪ್ರಶಸ್ತಿ ಗುರು ಡಾ. ಶ್ರೀಮತಿ ಮಾಯಾರಾವ್ ನಟರಾಜನ್, ಬೆಂಗಳೂರು (ಶಾಸ್ತ್ರೀಯ ನೃತ್ಯ) ಇವರಿಗೆ, ನಂತರ 2005ರ ಪ್ರಶಸ್ತಿಯನ್ನು ಶ್ರೀ ನೆಬ್ಬೂರು ನಾರಾಯಣ ಭಾಗವತ (ಯಕ್ಷಗಾನ) ಇವರಿಗೆ ನೀಡಲಾಗಿತ್ತು.

2006ರಲ್ಲಿ ಖ್ಯಾತರಂಗ ನಟ ಶ್ರೀ ಏಣಗಿ ಬಾಳಪ್ಪ ಅವರಿಗೆ, 2007ರಲ್ಲಿ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ (ಸಂಗೀತ), 2008ರಲ್ಲಿ ಕೆ.ಎಸ್. ನಾರಾಯಣ ಆಚಾರ್ಯ, ಮೈಸೂರು (ಸಾಹಿತ್ಯ), 2009ರಲ್ಲಿ ಪ್ರಶಸ್ತಿಯನ್ನು ಹೊಸ್ತೋಟ ಮಂಜುನಾಥ ಭಾಗ್ವತ್, ಶಿರಸಿ (ಯಕ್ಷಗಾನ) ನೀಡಲಾಗಿತ್ತು.

Keremane Shivarama Hegade And Keremae Gajanana Hegade Award Announced

2010ರಲ್ಲಿ ಪ್ರಶಸ್ತಿಯನ್ನು ಸಂತ ಭದ್ರಗಿರಿ ಅಚ್ಯುತದಾಸ, ಬೆಂಗಳೂರು (ಹರಿಕಥಾ ವಿದ್ವಾಂಸರು), 2011ರ ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್.ಅನಂತಮೂರ್ತಿ, ಬೆಂಗಳೂರು, 2012ರಲ್ಲಿ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ಟ, 2013ರ ಪ್ರಶಸ್ತಿಯನ್ನು ಬಡಗುತಿಟ್ಟಿನ ಯಕ್ಷಗಾನ ಕಲಾವಿದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ನೀಡಲಾಗಿತ್ತು.

2014ರ ಪ್ರಶಸ್ತಿಯನ್ನ ಪದ್ಮಶ್ರೀ ಪುರಸ್ಕೃತ ಸುರಭಿ ನಾಗೇಶ್ವರ ರಾವ್, ಹೈದ್ರಾಬಾದ್, 2015ರ ಪ್ರಶಸ್ತಿ ದೆಹಲಿಯ ಸ್ಪಿಕ್ ಮೆಕೆ ಸಂಸ್ಥೆ, 2016ರ ಪ್ರಶಸ್ತಿಯನ್ನು ಮೇಲಟ್ಟೂರಿನ ಕಲೈಮಾಮಣಿ ಎಸ್. ನಟರಾಜ, ತಮಿಳುನಾಡು ಹಾಗೂ 2017ರ ಪ್ರಶಸ್ತಿಯನ್ನು ಕರ್ಕಿಯ ಹಾಸ್ಯಗಾರ ಮೇಳಕ್ಕೆ, 2018ರ ಪ್ರಶಸ್ತಿ ನೀನಾಸಂನ ಹೆಗ್ಗೋಡು ಸಂಸ್ಥೆಗೆ ಹಾಗೂ 2019ರಲ್ಲಿ ಪದ್ಮಭೂಷಣ ಡಾ. ಪದ್ಮಸುಬ್ರಹ್ಮಣ್ಯ, ಚೆನ್ನೈ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯು 25 ಸಾವಿರ ನಗದು, ಪ್ರಶಸ್ತಿ ಪತ್ರ, ಇತರ ಗೌರವಗಳನ್ನು ಹೊಂದಿದೆ.

ಕಳೆದ 11 ವರ್ಷದಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -12 ಬರುವ 2021ರ ಏಪ್ರಿಲ್. 2 ಮತ್ತು 3 ರಂದು ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಜರುಗಲಿದೆ.

Keremane Shivarama Hegade And Keremae Gajanana Hegade Award Announced

ಈ ನಾಟ್ಯೋತ್ಸವದಲ್ಲಿ ದೇಶದ ಶ್ರೇಷ್ಠ ಕಲಾ ಪರಿಣಿತರು, ಚಿಂತಕರು ಭಾಗವಹಿಸಲಿದ್ದಾರೆ. ಸಂಗೀತ, ನೃತ್ಯ, ಜನಪದ ಮುಂತಾದ ವಿವಿಧ ಪ್ರಕಾರಗಳ ವಿಶಿಷ್ಟ ಕಲಾತಂಡಗಳು ಭಾಗವಹಿಸುವ ಈ ನಾಟ್ಯೋತ್ಸವದಲ್ಲಿ ಕಲಾವಿದರಿಗೆ ಸನ್ಮಾನ, ವಿಚಾರ ಗೋಷ್ಠಿ ಮುಂತಾದವು ನಡೆಯಲಿದೆ ಎಂದು ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.

ಸುಬ್ರಾಯ ಭಾಗವತರಿಗೆ ಗಜಾನನ ಹೆಗಡೆ ಪ್ರಶಸ್ತಿ:

ಯಕ್ಷಗಾನ ಕಲಾವಿದ ಕೆರೆಮನೆ ಗಜಾನನ ಹೆಗಡೆ ಹೆಸರಿನಲ್ಲಿ ಸ್ಥಾಪಿತವಾದ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಯಕ್ಷಗಾನದ ಹಿರಿಯ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ ಅವರಿಗೆ ಘೋಷಿಸಲಾಗಿದೆ.

ಮಂಡಳಿಯ ಸರ್ವಸಮರ್ಥ ಯಕ್ಷಗಾನ ಕಲಾವಿದ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮಿಂಚಿ ಮರೆಯಾದ, ಕೆರೆಮನೆ ಶಿವರಾಮ ಹೆಗಡೆಯವರ ಕಿರಿಯ ಪುತ್ರ, ಕೆರೆಮನೆ ಗಜಾನನ ಹೆಗಡೆ ಅವರ ಹೆಸರಿನಲ್ಲಿ ಕಳೆದ 8 ವರ್ಷದಿಂದ (2012) ಯಕ್ಷಗಾನ ಕ್ಷೇತ್ರಕ್ಕೆ ಮೀಸಲಾದ ಪ್ರಶಸ್ತಿಯನ್ನು ಘೋಷಿಸಲಾಗುತ್ತಿದೆ. ಪ್ರಶಸ್ತಿಯ 15 ಸಾವಿರ ನಗದು, ಪ್ರಶಸ್ತಿ ಪತ್ರ ಇತರ ಗೌರವಗಳನ್ನು ಹೊಂದಿದೆ.

ಮೊದಲು ಡಾ. ಕೊಳ್ಯೂರು ರಾಮಚಂದ್ರ ರಾವ್ (2012), ಶ್ರೀ ಕುಂಜಾಲು ರಾಮಕೃಷ್ಣ ನಾಯಕ (2013), ಶ್ರೀ ಪ್ರಭಾಕರ ಭಂಡಾರಿ, ಕರ್ಕಿ (2014), ಶ್ರೀ ಪಾತಾಳ ವೆಂಕಟ್ರಮಣ ಭಟ್, ಉಪ್ಪಿನಂಗಡಿ (2015) ಶ್ರೀ ಗೋವಿಂದ ಶೇರಿಗಾರ ಮಾರ್ಗೋಳಿ (2016) ಹಾಗೂ ಶ್ರೀ ಗೋಡೆ ನಾರಾಯಣ ಹೆಗಡೆ (2017), ಶ್ರೀ ತಿಮ್ಮಣ್ಣ ಯಾಜಿ ಮಣ್ಣಿಗೆ (2018) ಹಾಗೂ ಶ್ರೀ ಕೃಷ್ಣ ಯಾಜಿ ಇಡಗುಂಜಿ (2019) ಅವರಿಗೆ ನೀಡಲಾಗಿದೆ.

ಬಿ.ಜಯಶ್ರೀ:

ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಗುರುತಿಸಿಕೊಂಡಿರುವ ಬಿ.ಜಯಶ್ರೀ ರಂಗಭೂಮಿಯ ಹೆಸರಾಂತ ಕಲಾವಿದ ಗುಬ್ಬಿ ವೀರಣ್ಣನವರ ಮೊಮ್ಮಗಳು. 4ನೇ ವಯಸ್ಸಿಗೆ ರಂಗಭೂಮಿಯನ್ನು ಪ್ರವೇಶಿಸಿದ ಜಯಶ್ರೀ ಅವರು ಪ್ರಸಿದ್ಧ ಗಾಯಕರೂ ಹೌದು.

2010 ರಲ್ಲಿ ರಾಜ್ಯಸಭೆ ಸದಸ್ಯರಾಗಿದ್ದ ಇವರು 'ರಂಗಾಯಣ'ದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ. ಡೆತ್ ಆಫ್ ಎ ಸೇಲ್ಸ್‌ಮನ್, ಕರಿಮಾಯಿ, ನಾಗಮಂಡಲ, ಸಿರಿಸಂಪಿಗೆ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ನಾಗಮಂಡಲ, ಕೌರವ, ಜೇನಿನ ಹೊಳೆ, ಇಷ್ಟಕಾಮ್ಯ ಮುಂತಾದ ಚಲನಚಿತ್ರದಲ್ಲಿ ನಟಿಸಿದ ಹೆಗ್ಗಳಿಕೆ ಜಯಶ್ರೀ ಅವರದ್ದು. ಗಾಯಕಿಯಾಗಿ ಹಲವಾರು ಹಾಡುಗಳನ್ನು ಹಾಡಿದ್ದು, ಇವರಿಗೆ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಪ್ರಶಸ್ತಿ, ಬಿ.ವಿ.ಕಾರಂತ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳು ಸಂದಿವೆ.

ಕಪ್ಪೆಕೆರೆ ಸುಬ್ರಾಯ ಭಾಗವತ:

ಪೂರ್ವ ಯಕ್ಷಗಾನದ ಗಾನ ಘರಾನವನ್ನು ಸಮೃದ್ಧವಾಗಿ ಪೋಷಿಸಿಕೊಂಡು, ಸಂಪನ್ನ ಪ್ರತಿಭೆಯಾಗಿ ಬೆಳೆದ ಹಿರಿಯ ತಲೆಮಾರಿನ ಅಗ್ರಮಾನ್ಯ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ 1947 ರಲ್ಲಿ ಜನಿಸಿದ ಸುಬ್ರಾಯ ಹೆಗಡೆ ಹದಿನಾರರ ಹರೆಯದಲ್ಲೇ ಯಕ್ಷಗಾನದ ಗಾನಬದುಕಿಗೆ ಮನ ಮಾಡಿದವರು.

ಮರವಂತೆ ನರಸಿಂಹದಾಸರು, ಉಪ್ಪೂರು ನಾರ್ಣಪ್ಪ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು. ಗುಂಡಬಾಳ, ಇಡಗುಂಜಿ, ಸಾಲಿಗ್ರಾಮ, ಪಂಚಲಿಂಗ ಹೀಗೆ ವಿವಿಧ ಮೇಳಗಳಲ್ಲಿ 45 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದು, ವಿಶೇಷ ಕೀರ್ತಿಗೆ ಭಾಜನರಾಗಿದ್ದಾರೆ.

ಒಬ್ಬ ಶ್ರೇಷ್ಠ ಭಾಗವತ ಮಾತ್ರವಲ್ಲದೇ, ಚಂಡೆ-ಮದ್ದಳೆ‌ ವಾದನದಲ್ಲಿಯೂ ಪರಿಣಿತಿ ಹೊಂದಿದ್ದು, ನೃತ್ಯಾಭಿನಯವೂ ಇವರಿಗೆ ಕರಗತ. ಹಾಗಾಗಿ ಯಕ್ಷಗಾನ ರಂಗದ ಸರ್ವಾಂಗೀಣ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಭಾಗವತ ನಾರ್ಣಪ್ಪ ಉಪ್ಪೂರು ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನ, ಗೌರವಗಳು ಸುಬ್ರಾಯ ಭಾಗವತರಿಗೆ ಸಂದಿವೆ.

English summary
Keremane Shivarama Hegade And Keremae Gajanana Hegade Award Announced
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X