ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡದಲ್ಲಿ ಹನುಮಂತನ ಬಾಲದಂತಾದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ

|
Google Oneindia Kannada News

ಕಾರವಾರ, ಅಕ್ಟೋಬರ್ 26: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಷ್ಟು ವರ್ಷ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಯುತ್ತಿತ್ತು. ಆದರೆ ಈ ಬಾರಿ ಬಿಜೆಪಿ ಪಕ್ಷದಲ್ಲಿ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಾಗಿದ್ದು, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಇಪ್ಪತ್ತಕ್ಕೂ ಅಧಿಕ ಜನರನ್ನು ದಾಟಿದ್ದು, ಹೇಗಾದರೂ ಮಾಡಿ ಟಿಕೆಟ್ ಪಡೆಯಲೇಬೇಕು ಎಂದು ವಾಮಾರ್ಗದ ರಾಜಕೀಯಕ್ಕೂ ಕೆಲ ಆಕಾಂಕ್ಷಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಸ್ಥಾನದ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚಟುವಟಿಕೆ ಸಹ ಚುರುಕುಗೊಂಡಿದೆ. ಅದರಲ್ಲೂ ಜಿಲ್ಲೆಯ ಬಿಜೆಪಿ ಮಟ್ಟಿಗೆ ಸದ್ಯ ಹೇಗಾದರೂ ಮಾಡಿ ಈ ಬಾರಿ ಟಿಕೆಟ್ ಪಡೆಯಲೇಬೇಕು ಎಂದು ಹಲವರು ಪ್ರಯತ್ನಕ್ಕೆ ಇಳಿದಿದ್ದು, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಸಹ ಇದರಿಂದ ಹೆಚ್ಚಾಗಿದೆ.

ಪರಿಷತ್ ಚುನಾವಣೆಯಲ್ಲಿ ಹಾಲಿ ಪರಿಷತ್ ಕಾಂಗ್ರೆಸ್ ಸದಸ್ಯ ಎಸ್.ಎಲ್. ಘೋಟ್ನೇಕರ್ ತಾನು ಕಣಕ್ಕೆ ಇಳಿಯುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದು, ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಈವರೆಗೆ ಯಾರೊಬ್ಬರ ಹೆಸರು ಪ್ರಬಲವಾಗಿ ಕೇಳಿ ಬಂದಿಲ್ಲ. ಸದ್ಯ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಐದರಲ್ಲಿ ಬಿಜೆಪಿ ಸದಸ್ಯರು ಇದ್ದು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅತಿ ಹೆಚ್ಚಾಗಿ ಬಿಜೆಪಿ ಬೆಂಬಲಿತರೇ ಇರುವ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಈ ಬಾರಿ ಗೆಲುವು ಸುಲಭವಾಗಿ ಎಟುಕಲಿದೆ ಎನ್ನಲಾಗಿದೆ.

Karwar: Increase Of BJP MLC Ticket Aspirants List In Uttara Kannada

ಇದೇ ಕಾರಣಕ್ಕೆ ಪರಿಷತ್ ಪ್ರವೇಶ ಮಾಡಲು ಹಲವು ನಾಯಕರು ಮುಂದಾಗಿದ್ದಾರೆ. ಆರಂಭದಲ್ಲಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಮೂರ್ನಾಲ್ಕು ಜನರು ಮಾತ್ರವಿದ್ದರು. ಆದರೆ ಎಸ್.ಎಲ್. ಘೋಟ್ನೇಕರ್ ಕಣಕ್ಕೆ ಇಳಿಯುವುದಿಲ್ಲ ಎಂದು ಘೋಷಣೆ ಮಾಡಿದ ನಂತರ ಕಾಂಗ್ರೆಸ್‌ನಲ್ಲಿ ಪ್ರಬಲ ಅಭ್ಯರ್ಥಿ ಯಾರು ಕಣಕ್ಕೆ ಇಳಿಯುವುದಿಲ್ಲ ಎನ್ನುವ ಮುನ್ಸೂಚನೆ ದೊರೆತು ಕೆಲ ನಾಯಕರು ಈ ಪ್ರಯತ್ನಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಾಗರಾಜ ನಾಯಕ, ಭಾಸ್ಕರ್ ನಾರ್ವೇಕರ್, ನಾಗರಾಜ ನಾಯ್ಕ ತೊರ್ಕೆ, ಗಣಪತಿ ಉಳ್ವೇಕರ್, ಗೋವಿಂದ ನಾಯ್ಕ, ಎನ್.ಎಸ್. ಹೆಗಡೆ, ಸುಬ್ರಾಯ್ ವಾಳ್ಕೆ, ಜಗದೀಶ್ ಮೊಗಟಾ, ವಿಜಯ್ ಮಿರಾಶಿ, ಸೇರಿ ಸುಮಾರು ಹದಿನೈದಕ್ಕೂ ಅಧಿಕ ಮುಖಂಡರು ಬಿಜೆಪಿಯಿಂದ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಕೆಲ ಮುಖಂಡರುಗಳು ಪಕ್ಷದ ವೇದಿಕೆಯಲ್ಲಿ ತಾವು ಟಿಕೇಟ್ ಆಕಾಂಕ್ಷಿಯಾಗಿದ್ದು, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದು ಹೇಳಿ ಸುಮ್ಮನಾಗಿದ್ದಾರೆ.

ಇನ್ನು ಕೆಲವರು ಪಕ್ಷದ ನಾಯಕರ ಮುಂದೆ ತಾವು ಆಕಾಂಕ್ಷಿ ಎಂದು ಹೇಳಿ, ವಾಮಮಾರ್ಗದಲ್ಲಾದರೂ ಟಿಕೆಟ್ ಪಡೆಯಬೇಕು ಎಂದು ಮುಖಂಡರುಗಳ ಮನವೊಳಿಸಲು ಹಿಂಬಾಗಿಲಿನ ರಾಜಕೀಯದ ಮೂಲಕ ಹರಸಾಹಸ ಪಡುತ್ತಿದ್ದಾರೆ.

ಈಗಾಗಲೇ ಸಚಿವ ಶಿವರಾಮ್ ಹೆಬ್ಬಾರ್, ಸಂಸದ ಅನಂತ್‌ಕುಮಾರ್ ಹೆಗಡೆ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬಳಿ ಮನವೊಲಿಸಲು ಇನ್ನಿಲ್ಲದ ಪ್ರಯತ್ನವನ್ನು ನಡೆಸಿದ್ದು, ನಿಮ್ಮ ನಂಬಿಕೊಂಡ ನಮಗೆ ಟಿಕೆಟ್ ಕೊಡಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಸದ್ಯ ಯಲ್ಲಾಪುರದಲ್ಲಿ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ತೆಗೆದುಕೊಂಡು ಹೈಕಮಾಂಡ್ ಬಳಿ ಪಕ್ಷದ ನಾಯಕರು ಹೋಗಿದ್ದು, ಇನ್ನು ಕೆಲ ದಿನದಲ್ಲಿಯೇ ಯಾರಿಗೆ ಟಿಕೇಟ್ ಸಿಗಲಿದೆ ಎನ್ನುವ ಮಾಹಿತಿ ಹೊರ ಬೀಳಲಿದ್ದು, ಯಾರ ಪ್ರಯತ್ನಕ್ಕೆ ಯಶಸ್ಸು ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

21 ಜನರ ಹೆಸರು ಹೈಕಮಾಂಡ್‌ಗೆ: ವೆಂಕಟೇಶ ನಾಯಕ
"ಮುಂದಿನ ವಿಧಾನ ಪರಿಷತ್ ಚುನಾವಣೆಗೆ ಜಿಲ್ಲೆಯಿಂದ ಸ್ಪರ್ಧಿಸಲು ಒಟ್ಟು 21 ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಇವರ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ," ಎಂದು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ತಿಳಿಸಿದ್ದಾರೆ.

ಶುಕ್ರವಾರ ಕಾರವಾರದಲ್ಲಿ ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡ ಅವರು, "ಜನವರಿ ಒಳಗೆ ಪರಿಷತ್ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಬಿಜೆಪಿ ಕಾರ್ಯಕರ್ತರ ಆದಿಯಾಗಿ ಬೆಳೆದು ಬಂದ ಪಕ್ಷ. ಅದಕ್ಕಾಗಿ ಟಿಜೆಟ್ ನೀಡುವ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳುತ್ತೇವೆ. ಬಿಜೆಪಿ ಪಕ್ಷದಲ್ಲಿ ಹಣ ಕೊಟ್ಟು ಟಿಕೆಟ್ ಪಡೆದುಕೊಳ್ಳುವ ಅವಕಾಶವಿಲ್ಲ. ಪಂಚಾಯತ್‌ನಿಂದ ಸಂಸತ್ ಚುನಾವಣೆಗೆ ಪಕ್ಷದ ವ್ಯವಸ್ಥೆಯಲ್ಲಿ ಹೆಸರು ಕೊಟ್ಟು ನಂತರ ಟಿಕೆಟ್ ಪಡೆಯಬೇಕು," ಎಂದರು.

"ಯಲ್ಲಾಪುರದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಿಷತ್ ಚುನಾವಣೆಯ ಕುರಿತು ಚರ್ಚೆ ನಡೆಸಲಾಯಿತು. ಜಿಲ್ಲೆಯಿಂದ ಸುಮಾರು 21 ಜನರು ಪರಿಷತ್‌ಗೆ ಆಯ್ಕೆ ಬಯಸಿ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದು, ಎಲ್ಲಾ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ," ಎಂದು ತಿಳಿಸಿದ್ದಾರೆ.

"ಪಕ್ಷದಲ್ಲಿ ಕಾರ್ಯಕರ್ತರಿಗೆ ಗೌರವ ಕೊಡುವುದೇ ಮುಖ್ಯ ಉದ್ದೇಶ. ಹಲವು ವರ್ಷದಿಂದ ಪಕ್ಷದ ದುಡಿದವರು ಪ್ರಮುಖ ಜವಾಬ್ದಾರಿ ವಹಿಸಿರುತ್ತಾರೋ ಅವರಿಗೆ ಟಿಕೆಟ್ ನೀಡಲಾಗುವುದು. ಪಕ್ಷದ ಹಿರಿಯರು ಯಾರಿಗೆ ಟಿಕೆಟ್ ಕೊಡಬೇಕು," ಎಂದು ನಿರ್ಧರಿಸಲಿದ್ದಾರೆಂದು ವೆಂಕಟೇಶ ನಾಯಕ ತಿಳಿಸಿದ್ದಾರೆ.

Recommended Video

ಚೆನ್ನಾಗಾಡ್ತಿಲ್ಲ,ಫಿಟ್ನೆಸ್ ಸಮಸ್ಯೆ,ಇಷ್ಟಾದ್ರೂ ಯಾಕ್ ಗುರೂ ಇವ್ನುನ್ ಬಿಡ್ತಾಯಿಲ್ಲ | Oneindia

English summary
The number of BJP MLC ticket aspirants has increased in the Uttara Kannada district this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X