ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಕೋಲದ ಈ ಮನೆಗೆ ಪ್ರತಿದಿನ ತಪ್ಪದೇ ಹಾಜರ್; ಯಾರೀ ಅತಿಥಿ?

|
Google Oneindia Kannada News

ಕಾರವಾರ, ಆಗಸ್ಟ್ 18: ಮಾನವನ ವಾಸ ಸ್ಥಳಗಳಿಂದ ದೂರವಿದ್ದು, ಸುರಕ್ಷಿತ ಕಾಡಿನೊಳಗೆ ವಾಸಿಸುವ ಹಾರ್ನ್ ಬಿಲ್ ಗಳು ಕಾಣಸಿಗುವುದು ಅಪರೂಪ. ಆದರೆ, ಅಂಕೋಲಾ ತಾಲೂಕಿನ ಗ್ರಾಮವೊಂದರ ಮನೆಗೆ ಪ್ರತಿದಿನವೂ ಹಾರ್ನ್ ಬಿಲ್ ಭೇಟಿ ನೀಡುತ್ತಿದೆ. ಕುಟುಂಬದ ಸದಸ್ಯರೊಂದಿಗೆ ಬೆರೆತು ಆಟ ಆಡಿಕೊಂಡು ತಿಂಡಿ ತಿನ್ನುತ್ತಾ ಕುಟುಂಬದೊಂದಿಗೇ ಒಂದಾಗಿದೆ.

Recommended Video

ಚೀನಾ ಕಂಪನಿ Vivo ಗೆ ಸೆಡ್ಡು ಹೊಡೆದು IPL ಗೆ ಎಂಟ್ರಿ ಕೊಟ್ಟ Dream 11 | Oneindia Kannada

ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಯುವ ಹಾರ್ನ್ ಬಿಲ್ ಗಳಲ್ಲಿ ಏಳು ಪ್ರಕಾರಗಳಿವೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಾಲ್ಕು ಪ್ರಕಾರದ ಮಂಗಟ್ಟೆಗಳು ಕಾಣಸಿಗುತ್ತವೆ. ಇವುಗಳಲ್ಲಿ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್ ಬಿಲ್ ಗಳು ಅಪರೂಪದ್ದೂ ಬಹಳ ನಾಚಿಕೆ ಸ್ವಭಾವದ್ದು ಹಾಗೂ ಗಾತ್ರದಲ್ಲಿಯೂ ಬಹಳ ದೊಡ್ಡದಾಗಿದೆ. ಆದರೆ ಈ ಹಕ್ಕಿ ಈ ಮನೆಯವರೊಂದಿಗೆ ಬೆರೆತಿರುವ ರೀತಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸುತ್ತದೆ.

 ಪ್ರತಿದಿನ ಬರುವ ಹಾರ್ನ್ ಬಿಲ್

ಪ್ರತಿದಿನ ಬರುವ ಹಾರ್ನ್ ಬಿಲ್

ಅಚ್ಚರಿ ಎಂಬಂತೆ ಈ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಂಕೋಲಾ ತಾಲೂಕಿನ ಹೊನ್ನಿಕೇರಿ ಗ್ರಾಮದ ಕೃಷ್ಣಾನಂದ ಶೆಟ್ಟಿ ಎನ್ನುವವರ ಮನೆಗೆ ಪ್ರತಿದಿನ ಭೇಟಿ ನೀಡುತ್ತಿದೆ. ಶೆಟ್ಟಿಯವರ ಮಕ್ಕಳೊಂದಿಗೆ ಆಟ ಆಡಿ, ಮನೆಯವರು ಕೊಟ್ಟ ಹಣ್ಣುಗಳನ್ನು ತಿಂದು ಮತ್ತೆ ವಾಪಸ್ ಮರಗಳನ್ನೇರುತ್ತಿದೆ. ಹೀಗೆ ಕಳೆದ ಆರು ತಿಂಗಳಿನಿಂದ ಈ ಹಾರ್ನ್ ಬಿಲ್ ಕೃಷ್ಣಾನಂದ ಶೆಟ್ಟಿಯ ಕುಟುಂಬದ ಸದಸ್ಯರ ಸಂಗ ಬೆಳೆಸಿಕೊಂಡಿದೆ.

 ಮನೆಯವರೊಂದಿಗೆ ಕಾಲ ಕಳೆಯುವ ಹಕ್ಕಿ

ಮನೆಯವರೊಂದಿಗೆ ಕಾಲ ಕಳೆಯುವ ಹಕ್ಕಿ

ಅಪರೂಪದ ಪಕ್ಷಿಯಾಗಿರುವ ಈ ಹಾರ್ನ್ ಬಿಲ್ ನೋಡಲು ಸಾಕಷ್ಟು ಜನ ಇವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮೂರು ಹೊತ್ತು ಇವರ ಮನೆಗೆ ಭೇಟಿ ನೀಡುವ ಈ ಹಾರ್ನ್ ಬಿಲ್, ಶೆಟ್ಟಿಯವರ ಮಕ್ಕಳೊಂದಿಗೆ ಆಟ ಆಡುತ್ತದೆ. ಮಕ್ಕಳು ತಿನ್ನಿಸಿದ ಹಣ್ಣುಗಳನ್ನು ತಿನ್ನುತ್ತದೆ. ಕಣ್ಣಾಮುಚ್ಚಾಲೆ ಆಟದಲ್ಲಿ ಭಾಗಿಯಾಗುತ್ತದೆ. ಅಪರೂಪಕ್ಕೆ ಬರುತ್ತದೆ ಅಂದುಕೊಂಡಿದ್ದ ಕೃಣ್ಣಾನಂದ ಕುಟುಂಬಕ್ಕೆ ಇದೀಗ ಕುಟುಂಬದ ಒಂದು ಭಾಗವೇ ಆಗಿಬಿಟ್ಟಿದೆ. ಅದರಲ್ಲೂ ಶೆಟ್ಟಿಯವರ ಚಿಕ್ಕ ಮಗ ಅಕ್ಷಯ್ ಎಂದರೆ ಈ ಹಾರ್ನ್ ಬಿಲ್ ಗೆ ಎಲ್ಲಿಲ್ಲದ ಪ್ರೀತಿ. ಆತನೊಂದಿಗೇ ಹೆಚ್ಚು ಸಮಯ ಈ ಹಾರ್ನ್ ಬಿಲ್ ಕಳೆಯುತ್ತಿದೆ.

 ಹಳದಿ ಬಣ್ಣದ ಕೊಕ್ಕು ವಿಶೇಷ ಗುರುತು

ಹಳದಿ ಬಣ್ಣದ ಕೊಕ್ಕು ವಿಶೇಷ ಗುರುತು

ಈ ಹಾರ್ನ್ ಬಿಲ್ ನ ವೈಜ್ಞಾನಿಕ ಹೆಸರು ‘ಬುಸಿರೊಸ್ ಬಿಕೊರ್ನಿಸ್' ಆಗಿದ್ದು, ಸುಮಾರು ಆರು ಕೆಜಿಯವರೆಗೂ ಭಾರ ಇರುತ್ತದೆ. 95 ಸೆಂ.ಮೀ. ನಿಂದ 120 ಸೆಂ.ಮೀವರೆಗೂ ಉದ್ದವಿದ್ದು, ದೊಡ್ಡದಾದ ಹಳದಿ ಬಣ್ಣದ ಕೊಕ್ಕು ಈ ಪಕ್ಷಿಯ ವಿಶೇಷ ಗುರುತಾಗಿದೆ. ಇದು ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತಾರಣ್ಯದ ಭಾಗದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇಲ್ಲಿ ಹೆಚ್ಚು ಒಣಮರಗಳಿದ್ದು, ಈ ಪಕ್ಷಿಗಳ ಗೂಡು ಕಟ್ಟುವುದಕ್ಕೆ ಸೂಕ್ತವಾದ ತಾಣವಾಗಿದೆ. 2008ರಲ್ಲಿ ಕಾಳಿ ಅರಣ್ಯ ಸಂರಕ್ಷಿತ ಪ್ರದೇಶವನ್ನು ಹಾರ್ನ್ ಬಿಲ್ ಸಂರಕ್ಷಿತ ವಲಯ ಎಂದೂ ಘೋಷಿಸಲಾಗಿದೆ.

 ಹಾರ್ನ್ ಬಿಲ್ ಸಂರಕ್ಷಿತ ವಲಯ

ಹಾರ್ನ್ ಬಿಲ್ ಸಂರಕ್ಷಿತ ವಲಯ

ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಹಾರ್ನ್ ಬಿಲ್ ಸಂರಕ್ಷಿತ ವಲಯ ಎಂದು ಘೋಷಿಸಿದ್ದ ಕಾರಣಕ್ಕೆ ಸಾವಿರಾರು ಪ್ರವಾಸಿಗರು ಇದರ ವೀಕ್ಷಣೆಗೆ ಅಲ್ಲಿಗೆ ತೆರಳುತ್ತಾರೆ. ಅಪರೂಪಕ್ಕೆ ಮಾತ್ರ ಈ ಹಾರ್ನ್ ಬಿಲ್ ಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತವೆ. ಆದರೆ ಅಂಕೋಲಾದ ಕೃಷ್ಣಾನಂದ ಶೆಟ್ಟಿಯವರ ಮನೆಗೆ ಪ್ರತಿದಿನ ಭೇಟಿ ನೀಡುವ ಮೂಲಕ ಈ ಹಾರ್ನ್ ಬಿಲ್ ಇದೀಗ ಎಲ್ಲರಿಗೂ ಅಚ್ಚರಿಗೊಳಿಸಿದೆ.

English summary
Hornbill visits house of krishnananda shetty of ankola village in uttara kannada everyday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X