ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಕ್ತರ ಪಾಲಿನ ಭೂ ಕೈಲಾಸ ಶ್ರೀ ಕ್ಷೇತ್ರ ಗೋಕರ್ಣದ ಇತಿಹಾಸ, ಮಹಿಮೆ

|
Google Oneindia Kannada News

ಭೂ ಕೈಲಾಸ, ಪರಶುರಾಮ ಭೂಮಿ, ಶ್ರೀ ಕ್ಷೇತ್ರ ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಪ್ರಸಿದ್ಧವಾದ ಯಾತ್ರಾಸ್ಥಳ ಕಾಶಿ, ರಾಮೇಶ್ವರದಷ್ಟೆ ಪವಿತ್ರ ಸ್ಥಳ ಎಂದು ಭಕ್ತರು ಭಾವಿಸುತ್ತಾರೆ. ಕಡಲತೀರದ ಈ ಸ್ಥಳ ಸುಂದರವಾಗಿದೆ. ತೆಂಗಿನ ತೋಟಗಳು, ಗದ್ದೆಗಳು ಇದನ್ನು ರಮಣೀಯವಾಗಿ ಮಾಡಿದೆ. ಗೋ ಎನ್ನುವುದು ಮೊಟ್ಟ ಮೊದಲಿಗೆ ಭೂಮಿಗೆ ಬಂದ ಸಂಜ್ಞೆಯಾಗಿದೆ.

ಈ ಕ್ಷೇತ್ರವು ಕರ್ಣವಾಗಿದ್ದು ಶಿವನ ಸಂಯೋಗದಿಂದ ಇಲ್ಲಿ ಗ್ರಹಗಳಿಗೆ ಅಧಿಪನಾದ ಅಂಗಾರಕನು (ಆತನಿಗೆ ಕರ್ಣ ಸಂಜ್ಞೆ) ಹುಟ್ಟುತ್ತಾನೆ. ಭೂಮಿ ಹಾಗೂ ಅಂಬುಗ್ರಹ (ಅಂಗಾರಕ) ಕೊಡುವಿಕೆ ಅಥವಾ ಭೂಮಿ ಹಾಗೂ ರುದ್ರಯೋನಿ ಎಂದು ಖ್ಯಾತವಾದ ಗೋಕರ್ಣದ ಸ್ಥಳ ಇವುಗಳ ಕೊಡುವಿಕೆಯಿಂದಾಗಿ ಇದು ಗೋಕರ್ಣ ಎಂದು ಖ್ಯಾತವಾಗಿದೆ. ರಾಮಾಯಣ ಕಾಲದಷ್ಟು ಹಳೆಯದಾದ ಗೋಕರ್ಣ ಜಾಗತಿಕವಾಗಿ ಹೆಸರಾದ ಕ್ಷೇತ್ರವಾಗಿದೆ.

ಜಗದೊಡೆಯ ಶಿವಗೆ ನಮನ, ಮಹಾಶಿವರಾತ್ರಿಯ ಮಹತ್ವವೇನು?ಜಗದೊಡೆಯ ಶಿವಗೆ ನಮನ, ಮಹಾಶಿವರಾತ್ರಿಯ ಮಹತ್ವವೇನು?

ಗೋಕರ್ಣದಲ್ಲಿ ಪ್ರಾಚೀನವಾದ ಶಿಲಾಲೇಖನಗಳು, ಪ್ರಾಚೀನವಾದ ಮಹಾಬಲೇಶ್ವರ ದೇವಾಲಯ ಇದೆ. ಪ್ರಾಚೀನವಾದ ವಾಯು ಪುರಾಣದಂತಹ ಪುರಾಣಗಳಲ್ಲಿ ಈ ಕ್ಷೇತ್ರ ಉಲ್ಲೇಖಿತವಾಗಿದೆ. ಈ ಕ್ಷೇತ್ರವು ತ್ರಿಸ್ಥಳವೆಂದು ಖ್ಯಾತವಾದ ಗೋಕರ್ಣ, ರಾಮಸೇತು, ಕಾಶಿ ಕ್ಷೇತ್ರಗಳಲ್ಲಿ ಒಂದಾಗಿದೆ. ಭರತ ಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಈ ಕ್ಷೇತ್ರವು ಸಮುದ್ರದಲ್ಲಿ ಸೇರಿತು. ಪರಶುರಾಮನು ಇದನ್ನು ಉದ್ದರಿಸಿದನೆಂದು ವಾಯುಪುರಾಣದಲ್ಲಿ ಹೇಳುತ್ತದೆ.

ಗೋಕರ್ಣ ಕುರಿತು ಸ್ಕಂಧ ಪುರಾಣದಲ್ಲಿ ಕಾಶೀ ಖಂಡದಂತೆ ಗೋಕರ್ಣ ಖಂಡವೂ ಇದೆ ಎಂದು ಹೇಳಿದೆ. ಮುಂದೆ ಓದಿ...

 ಬೇಕಾದ ವರವನ್ನು ಬೇಡೆಂದನು

ಬೇಕಾದ ವರವನ್ನು ಬೇಡೆಂದನು

ಶ್ರೀ ಕೈಲಾಸಾಧಿಪತಿಯಾದ ಶಂಕರನ ಪರಮ ಭಕ್ತನಾದ ರಾವಣನ ತಾಯಿ ಕೈಕಸೆ ಎಂಬವಳು ಈಕೆ ಒಂದು ದಿನ ಪಾರ್ಥಿವ ಲಿಂಗಪೂಜೆಯನ್ನು ಮಾಡಲು ನಿಶ್ಚಯಿಸಿ ಸಮುದ್ರದಲ್ಲಿ ಸ್ಥಾನ ಮಾಡಿ ಮಳಲು ಲಿಂಗವನ್ನು ಮಾಡಿಕೊಂಡು ಪೂಜಿಸುತ್ತಿದ್ದಳು. ಆಗ ಸಮುದ್ರದ ತೆರೆಗಳು ಲಿಂಗವನ್ನು ಕೊಚ್ಚಿಕೊಂಡು ಹೋದವು. ಕೈಕಸೆಯು ದುಃಖಿಸುತ್ತಾ ಮಗನಾದ ರಾವಣನನ್ನು ಕರೆದಳು. ಅವನು ಇದನ್ನು ನೋಡಿ ಎಲ್ಲವನ್ನೂ ಸಹಿಸಿ, ತಾಯಿ ದುಃಖಿಸಬೇಡ ಶಿವನನ್ನು ತಪಸ್ಸಿನಿಂದ ಒಲಿಸಿ ಅವನು ಪೂಜಿಸುವ ಆತ್ಮ ಲಿಂಗವನ್ನೇ ತಂದು ಕೊಡುತ್ತೇನೆಂದು ಸಮಾಧಾನ ಪಡಿಸಿ ಕೈಲಾಸಕ್ಕೆ ಹೋದನು. ರಾವಣ ತನ್ನ ಶಕ್ತಿಯಿಂದ ಕೈಲಾಸವನ್ನೇ ಲಂಕೆಗೆ ಒಯ್ದರೆ ಹೇಗೆ ಎಂಬ ವಿಚಾರ ಮಾಡಿದ. ಆತ ತನ್ನ ಇಪ್ಪತ್ತು ತೋಳುಗಳ ಬಲದಿಂದ ಕೈಲಾಸವನ್ನು ಎತ್ತಲು ಕೈಲಾಸವು ಅಲುಗಾಡಿತು. ಪಾರ್ವತಿಯು ಭೀತಿಯಿಂದ ಶಿವನನ್ನು ಅಪ್ಪಿದಳು. ಶಿವನು ಪಾರ್ವತಿಯನ್ನು ಸಮಾಧಾನಪಡಿಸಿ ತನ್ನ ಎಡಗಾಲಿನಿಂದ ಭೂಮಿಗೆ ಒತ್ತಿದನು. ರಾವಣನ ಕೈಗಳು ಪರ್ವತದ ಬುಡದಲ್ಲಿ ಸಿಕ್ಕಿದವು. ಅವನು ಬಾಧೆಯಿಂದ ನರಳುತ್ತ ಹರನನ್ನು ಪ್ರಾರ್ಥಿಸಲು ಶಿವನು ಕಾಲನ್ನು ಎತ್ತಿದನು. ರಾವಣನು ನೋವಿಗೆ ಹೆದರದೇ ತಪಸ್ಸನ್ನು ಮಾಡಿದನು. ಅದಕ್ಕೂ ಶಿವ ಪ್ರಸನ್ನನಾಗದಿದ್ದಾಗ ತನ್ನ ತಲೆಯನ್ನೇ ಕಡಿದು ಬುರುಡೆಯನ್ನು ತಯಾರಿಸಿ ದೇಹದ ನಾಳಗಳಿಂದ ತಂತಿಯನ್ನು ಮಾಡಿ ಸಾಮಗಾನವನ್ನು ಹಾಡಿದನು. ರಾವಣನ ಸಾಮಗಾನಕ್ಕೆ ರುದ್ರ ಪ್ರಸನ್ನನಾಗಿ ಬೇಕಾದ ವರವನ್ನು ಬೇಡೆಂದನು.

 ಲೋಕ ಸಂಚಾರಿಯಾದ ನಾರದನಿಗೆ ತಿಳಿಯಿತು

ಲೋಕ ಸಂಚಾರಿಯಾದ ನಾರದನಿಗೆ ತಿಳಿಯಿತು

ರಾವಣನು ನಮಸ್ಕರಿಸಿ ಶಿವನೇ, ನಿನ್ನ ಅನುಗ್ರಹದಿಂದ ಸಕಲ ಭಾಗ್ಯಗಳೂ, ದೇವತೆಗಳೂ ನನ್ನ ದಾಸರಾಗಿರುವರು. ನನ್ನ ತಾಯಿಯು ನಿತ್ಯವೂ ಪೂಜಿಸಲು ನಿನ್ನಿಂದ ಪೂಜಿಸಲ್ಪಡುವ ಪ್ರಾಣಲಿಂಗವನ್ನು ಅನುಗ್ರಹಿಸು ಎಂದನು. ಭವನು ಆತ್ಮಲಿಂಗವನ್ನು ರಾವಣನಿಗೆ ಕೊಡುತ್ತ ಇದನ್ನು ಭೂಮಿಯಲ್ಲಿ ಎಲ್ಲಿಯೂ ಇಡದೇ ತೆಗೆದುಕೊಂಡು ಹೋಗಬೇಕು. ಭೂಮಿಯಲ್ಲಿ ಇಟ್ಟಿದ್ದಾದರೆ ಅದು ಅಲ್ಲೇ ಗಟ್ಟಿಯಾಗಿ ನಿಲ್ಲುತ್ತದೆ ಮತ್ತು ಅದು ಪುನಃ ಎತ್ತಲು ಸಾಧ್ಯವಿಲ್ಲ ಎಂದು ತಿಳಿಸಿ ಶಿವನು ಅಂತರ್ಧಾನನಾದನು. ರಾವಣನು ಹರ್ಷಿತನಾಗಿ ಹರನಿಗೆ ನಮಸ್ಕರಿಸಿ ಲಂಕೆಗೆ ಹೊರಟನು. ಇದನ್ನೆಲ್ಲವನ್ನೂ ಲೋಕ ಸಂಚಾರಿಯಾದ ನಾರದನು ತಿಳಿದು ದೇವಲೋಕದಲ್ಲಿ ಸುಖಾಸೀನರಾಗಿರುವ ದೇವತೆಗಳನ್ನು ಕಮಡು "ಹೇ ದೇವತೆಗಳಿರಾ ರಾವಣನು ಕೈಲಾಸನಾಥನನ್ನು ತಪ್ಪಸಿನಿಂದ ಒಲಿಸಿಕೊಂಡು ಅವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಹೋಗುತ್ತಿದ್ದಾನೆ. ಅವನು ಲಂಕೆಯನ್ನು ಸೇರಿದರೆ ಅದೇ ಕೈಲಾಸವಾಗುವುದು. ಅವನನ್ನು ದೇವ, ದಾನವ, ರಾಕ್ಷಸ, ಯಕ್ರ, ಕನ್ನರ ಮನುಷ್ಯನಿಂದ ಜಯಿಸಲು ಸಾಧ್ಯವಿಲ್ಲ. ನೀವು ಕಾಲ ಕಳೆಯದೇ ಮಾರ್ಗ ಮಧ್ಯದಲ್ಲಿ ಅವನನ್ನು ತಡೆದು ಅವನ ಕೈಯಿಂದ ಆತ್ಮ ಲಿಂಗವನ್ನು ತಪ್ಪಿಸಿ ಭೂಮಿಯಲ್ಲಿ ಇಡುವಂತೆ ಮಾಡಿದರೆ ಪುನಃ ಆ ದುಷ್ಟನಿಗೆ ಅದು ಸಿಗುವುದಿಲ್ಲವೆಂದು ಶಿವನೇ ಹೇಳಿದ್ದಾನೆ. ಬೇಗನೇ ಕಾರ್ಯತತ್ಪರರಾಗಿ ಎಂದು ಹೇಳಿ ನಾರದರು ಹೊರಟು ಹೋದರು.

ಶಿವನ ಪಾದ ಸೇರಿದ ಗೋಕರ್ಣ ಮಹಾಬಲೇಶ್ವರನ ರಾಜ ನಂದಿಶಿವನ ಪಾದ ಸೇರಿದ ಗೋಕರ್ಣ ಮಹಾಬಲೇಶ್ವರನ ರಾಜ ನಂದಿ

 ಬ್ರಹ್ಮಚಾರಿಯ ರೂಪ ಧರಿಸಿದ ಗಣಪತಿ

ಬ್ರಹ್ಮಚಾರಿಯ ರೂಪ ಧರಿಸಿದ ಗಣಪತಿ

ದೇವತೆಗಳು ಗಾಬರಿಯಿಂದ ಏನೊಂದು ತಿಳಿಯದೇ ತಮ್ಮನ್ನು ಯಾವಾಗಲೂ ಕಷ್ಟದಲ್ಲಿ ರಕ್ಷಿಸುವ ಮಹಾ ವಿಷ್ಣುವಿನ ಸ್ತೋತ್ರ ಮಾಡಿ ಅವನಿಗೆ ಎಲ್ಲವನ್ನೂ ಅರಿಕೆ ಮಾಡಿದರು. ವಿಷ್ಣುವು ಹೊಸ ಸಂಕಟವು ಪ್ರಾಪ್ತವಾಯಿತಲ್ಲಾ ಎಂದು ಚಿಂತಿಸಿ ಅದಕ್ಕೊಂದು ಪರಿಹಾರವನ್ನು ಯೋಚಿಸಿ ಗಣಪತಿಯನ್ನು ಕರೆದು ರಾವಣನು ನಿನ್ನನ್ನು ಪೂಜಿಸದೇ ನಿನ್ನ ತಂದೆಯನ್ನು ತಪಸ್ಸಿನಿಂದ ಒಲಿಸಿಕೊಂಡು ಮನೆಗೆ ಹೋಗುತ್ತಿದ್ದಾನೆ. ಅವನಿಗೆ ನೀನು ವಿಘ್ನವನ್ನುಂಟು ಮಾಡು. ನೀನು ರಾವಣನಿಂದ ಆತ್ಮಲಿಂಗವನ್ನು ಪಡೆದು ಭೂಮಿಯಲ್ಲಿ ಇರಿಸಬೇಕೆಂದು ತಿಳಿಸಿದನು. ದೇವತೆಗಳೂ ಭಕ್ತಿಯಿಂದ ಗಣಪತಿಯನ್ನು ಪೂಜಿಸಿ ಸ್ತೋತ್ರ ಮಾಡಿ ನಮ್ಮನ್ನು ಉದ್ಧರಿಸಬೇಕೆಂದು ಬೇಡಿಕೊಂಡರು. ಗಣಪತಿಯು ಪಶ್ಚಿಮ ಸಮುದ್ರ ತೀರದಲ್ಲಿರುವ ಗೋಕರ್ಣದ ಸಮೀಪದಲ್ಲಿ ರಾವಣನು ಬರುತ್ತಿರುವುದನ್ನು ಕಂಡ ಬ್ರಹ್ಮಚಾರಿಯ ರೂಪವನ್ನು ಧರಿಸಿ ಕಬ್ಬು ತಿನ್ನುತ್ತಿದ್ದನು. ಆಕಾಲಕ್ಕೆ ಸರಿಯಾಗಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಮರೆಮಾಡಿ ಸಂಧ್ಯಾಕಾಲವೆಂಬ ಭ್ರಮೆಯನ್ನು ರಾವಣನಿಗೆ ಉಂಟು ಮಾಡಿದನು. ರಾವಣನು ಬ್ರಾಹ್ಮಣನೂ, ಜ್ಞಾನಿಯೂ, ಕರ್ಮನಿಷ್ಟನೂ ಆದ್ದರಿಂದ ಸೂರ್ಯನು ಅಸ್ತವಾದದ್ದನ್ನು ನೋಡಿ ಸಂಧ್ಯಾವಂದನೆಯನ್ನು ಮಾಡಬೇಕು. ಆದರೆ ಲಿಂಗವನ್ನು ಭೂಮಿಯ ಮೇಲೆ ಇಡುವಂತಿಲ್ಲ, ಏನು ಮಾಡಲಿ? ಎಂದು ಆಲೋಚಿಸುತ್ತಿರುವಾಗ ವಟುವೇಷಧಾರಿಯಾದ ಗಣಪತಿಯನ್ನು ಕಂಡನು. ಮುಗುಳು ನಗೆಯಿಂದ ಅವನನ್ನು ಹತ್ತಿರ ಕರೆದು ಬಾಲಕನೆ, ಈ ಲಿಂಗವನ್ನು ಸ್ವಲ್ಪ ಹಿಡಿದುಕೊಂಡಿರು ನಾನು ಸಂಧ್ಯಾವಂದನೆಯನ್ನು ಮುಗಿಸಿ ಬರುತ್ತೇನೆ. ಅಲ್ಲಿಯವರೆಗೆ ಭೂಮಿಯ ಮೇಲೆ ಇದನ್ನು ಇಡಬಾರದು, ಜೋಕೆ ಎಂದನು.

 ಗೋಕರ್ಣಕ್ಕೆ ಬಂದ ಪರಮೇಶ್ವರ

ಗೋಕರ್ಣಕ್ಕೆ ಬಂದ ಪರಮೇಶ್ವರ

ಗಣಪತಿಯು ಲಿಂಗವನ್ನು ತೆಗೆದುಕೊಂಡು ಇದು ಭಾರವಾಗಿದೆ, ನನ್ನಿಂದ ಬಹಳ ಹೊತ್ತು ಹಿಡಿದುಕೊಳ್ಳಲು ಸಾಧ್ಯವಿಲ್ಲ ಮೂರು ಬಾರಿ ನಿನ್ನನ್ನು ಕರೆಯುತ್ತೇನೆ, ನೀರು ಬರಬೇಕು, ಬರದಿದ್ದಲ್ಲಿ ಇದನ್ನು ಭೂಮಿಯ ಮೇಲೆ ಇಡುತ್ತೇನೆ, ಎಂದು ಹೇಳಲು ರಾವಣನು ಅದಕ್ಕೆ ಒಪ್ಪಿಕೊಂಡನು ರಾವಣನು ಶೌಚವನ್ನು ಪೂರೈಸಿ ಕಾಲು, ತೊಳೆಯುತ್ತಿರುವಾಗ ಒಮ್ಮೆ ರಾವಣಾ ಎಂದು ಕರೆದನು, ಅಘ್ರ್ಯವನ್ನು ಕೊಡುತ್ತಿರುವಾಗ ರಾವಣಾ ಎಂದು ಕರೆದನು ಜಪವನ್ನು ಪ್ರಾರಂಭಿಸುತ್ತಿರುವಾಗ ಓ ರಾವಣಾ ಎಂದು ಮೂರನೇ ಬಾರಿ ಕೂಗಿದನು. ರಾವಣನು ಓ ಬಂದೆ ಎಂದು ಕೂಗುತ್ತ ಓಡಿ ಬರುವುದೊಳಗಾಗಿ ಲಿಂಗವನ್ನು ಭೂಮಿಯ ಮೇಲೆ ಶಿವಸ್ಮರಣೆ ಮಾಡುತ್ತ ಇಟ್ಟನು. ರಾವಣನು ಸಿಟ್ಟಿನಿಂದ ಗಣಪತಿಯ ನೆತ್ತಿಯ ಮೇಲೆ ಮುಷ್ಠಿಯಿಂದ ಗುದ್ದಿದನು, ಬಲಿಷ್ಟವಾದ ರಾವಣನ ಗುದ್ದಿನಿಂದ ನೆತ್ತಿಯ ಮೇಲೆ ಒಂದು ಕುಳಿಯಾಗಿ ಹೊಟ್ಟೆಯು ಕುಸಿಯಿತು. ರಾವಣನು ತನ್ನ ಶಕ್ತಿಯ ಗರ್ವದಿಂದ ಲಿಂಗವನ್ನು ಕೀಳಲು ಪ್ರಯತ್ನಿಸಿದನು. ಆದರೂ ಅದನ್ನು ಕೀಳಲು ಅವನಿಂದ ಆಗಲಿಲ್ಲ. ಆಗ ತನ್ನ ತಪಸ್ಸು ನಿಷ್ಟವಾದ ಸಿಟ್ಟಿನಿಂದ ಅಲ್ಲಿಯೇ ಇದ್ದ ಆತ್ಮಲಿಂಗವನ್ನು ಶಕ್ತಿಯಿಂದ ಎಳೆಯುತ್ತಾನೆ. ಕೈಗೆ ಬಂದ ಆತ್ಮಲಿಂಗದ ಭಾಗಗಳನ್ನು ನಾಲ್ಕು ದಿಕ್ಕಿಗೆ ಬೀಸಿದನು. ಅದುವೆ ಸಜ್ಜೇಶ್ವರ, ಗುಣವಂತೇಶ್ವರ, ಧಾರೇಶ್ವರ, ಮೃಡೇಶ್ವರ ಎಂಬ ಹೆಸರಿನಿಂದ ಪ್ರಖ್ಯಾತವಾಗಿವೆ. ತನ್ನ ರಾಕ್ಷಸ ಶಕ್ತಿಯು ಸೋತು ಹೋಗಲು ನೀನೇ ಮಹಾಬಲನೆಂದು ಕೂಗಿದನು. ಆಕಾಲಕ್ಕೆ ದೇವತೆಗಳು ಮಂದಾರದ ಮಳೆಗಳನ್ನು (ಪುಷ್ಪ ವೃಷ್ಟಿ) ಸುರಿಸಿದರು. ವಿಷ್ಣುವು ಚಕ್ರವನ್ನು ತೆಗೆಯಲು ಸೂರ್ಯನು ಕಾಣಿಸಿಕೊಂಡನು. ಸುರರು ರಾವಣನನ್ನು ನೋಡಿ ನಕ್ಕರು, ರಾವಣನು ನಾಚಿಕೆಯಿಂದ ಓಡಿ ಹೋದನು. ಇದನ್ನೆಲ್ಲವನ್ನೂ ಪರಮೇಶ್ವರನು ವಾಯುವಿನಿಂದ ತಿಳಿದು ಗೋಕರ್ಣಕ್ಕೆ ಬಂದನು.

ಗೋಕರ್ಣ ಕ್ಷೇತ್ರಕ್ಕೂ ಟಿಪ್ಪು ಸುಲ್ತಾನ್ ಗೌರವ ಸಲಾಂ, ಹೀಗೊಂದು ಇತಿಹಾಸ ಗೋಕರ್ಣ ಕ್ಷೇತ್ರಕ್ಕೂ ಟಿಪ್ಪು ಸುಲ್ತಾನ್ ಗೌರವ ಸಲಾಂ, ಹೀಗೊಂದು ಇತಿಹಾಸ

 ಸಿದ್ಧಿಕ್ಷೇತ್ರವೆಂದು ಖ್ಯಾತಿಯಾದ ಗೋಕರ್ಣ

ಸಿದ್ಧಿಕ್ಷೇತ್ರವೆಂದು ಖ್ಯಾತಿಯಾದ ಗೋಕರ್ಣ

ಲಿಂಗವು ರಾವಣನಿಂದ ಬಹಳ ಘಾಸಿಯಾಗಿದ್ದನ್ನು ನೋಡಿ ಪಶ್ಚಾತ್ತಾಪಪಟ್ಟನು ತಾನು ಲಿಂಗವನ್ನು ಪೂಜಿಸಿದನು. ಆಗ ಅಲ್ಲಿಗೆ ಬಂದ ದೇವತೆಗಳನ್ನು ಕುರಿತು ತನ್ನ ಜನ್ಮಸ್ಥಳವಾದ ಗೋಕರ್ಣದಲ್ಲಿಯೇ ಗಣಪತಿಯು ಲಿಂಗವನ್ನು ಸ್ಥಾಪಿಸಿದ್ದರಿಂದ ಮೊದಲು ಗಣಪತಿಯನ್ನು ಪೂಜಿಸಿ ನಂತರ ಆತ್ಮಲಿಂಗವನ್ನು ಪೂಜಿಸಬೇಕೆಂದು ಅಪ್ಪಣೆ ಮಾಡಿ ಆತ್ಮಲಿಂಗವನ್ನು ಭಕ್ತಿಯಿಂದ ಪೂಜಿಸುವ ಭಕ್ತರ ಇಷ್ಟಾರ್ಥಗಳು ಕೈಗೂಡುವವು. ತಾನು ಇಲ್ಲಿಯೇ ವಾಸವಾಗುತ್ತೆನೆಂದು ಹೇಳಿ ಅಂತರ್ಧಾನನಾದನು. ಇದಕ್ಕೆ ಭೂ ಕೈಲಾಸವೆಂಬ ಹೆಸರಾಗಲಿ ಎಂದು ದೇವತೆಗಳಿಗೆ ಹೇಳಿ ಗಣಪತಿಯನ್ನೂ, ಆತ್ಮಲಿಂಗವನ್ನು ಭಕ್ತಿಯಿಂದ ಪೂಜಿಸಿ ಅಂತರ್ಧಾನರಾದರು. ನಂತರ ರಾವಣನು ಪುನಃ ತಾಯಿಯೊಡನೆ ಗೋಕರ್ಣಕ್ಕೆ ಬಂದು ಗಣಪತಿಯನ್ನೂ, ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿದನು. ಆಗ ಶಿವನು ಪ್ರತ್ಯಕ್ಷನಾಗಿ ನೀನು ದುಃಖಿಸುವ ಕಾರಣವಿಲ್ಲ ನಿನ್ನಿಂದಲೇ ಲೋಕಕ್ಕೆ ಉಪಕಾರವಾಗಬೇಕಿತ್ತು. ನೀನು ನೆಪ ಮಾತ್ರ ನಿನ್ನಿಂದ ಲಿಂಗಕ್ಕೆ ಘಾಸಿಯಾದರೂ, ನನ್ನ ಜನ್ಮಸ್ಥಳದಲ್ಲಿಯೇ ನನ್ನ ಮಗನಿಂದ ಸ್ಥಾಪಿಸಲ್ಪಟ್ಟಿದ್ದರಿಂದ ನನಗೆ ಆನಂದವಾಗಿದೆ. ನಿನಗೆ ಶುಭವಾಗಲಿ ಎಂದು ಹೇಳಿ ಅಂತರ್ಧಾನನಾದನು ಹೀಗೆ ರಾವಣನಿಂದ ಸ್ಥಾಪಿಸಲ್ಪಟ್ಟು ಶಿವನ ಆತ್ಮಲಿಂಗವು ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತ ಸಿದ್ಧಿಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಶ್ರೀ ರಾಮನು ಸೀತಾ-ಲಕ್ಷ್ಮಣ ಸಹಿತವಾಗಿ ರಾವಣಾದಿಗಳನ್ನು ಕೊಂದ ಪಾಪ ಪರಿಹಾರಕ್ಕಾಗಿ ಈ ಕ್ಷೇತ್ರಕ್ಕೆ ಬಂದು ಶಿವನನ್ನು ಪೂಜಿಸಿ ಕೃತಾರ್ಥನಾದನೆಂದೂ, ಪಾಂಡವರು, ಕೌರವಾದಿಗಳು ಬಂದು ಬಾಂಧವರೊಂದಿಗೆ ಹನನದ ಪಾಪ ಪರಿಮಾರ್ಜನೆಗಾಗಿ ಇಲ್ಲಿ ಬಂದಿದ್ದರೆಂಬುದಕ್ಕೂ ಆದಿ ಕಾವ್ಯಗಳಲ್ಲಿ ಸಾಕಷ್ಟು ಆಧಾರಗಳಿವೆ.

 ಅನೇಕ ಐತಿಹಾಸಿಕ ಸಂಗತಿಗಳಿವೆ

ಅನೇಕ ಐತಿಹಾಸಿಕ ಸಂಗತಿಗಳಿವೆ

ಗೋಕರ್ಣದಲ್ಲಿಯೇ ಶಿಲಾಶಾಸನಗಳು, ದೇವಾಲಯಗಳಲ್ಲಿಯ ಬರಹಗಳು, ಮದ್ರಾಸನಲ್ಲಿರುವ ಪುರಾತತ್ವ ಇಲಾಖೆ ದಾಖಲೆಗಳು ಅನೇಕ ಐತಿಹಾಸಿಕ ಸಂಗತಿಗಳನ್ನು ಹೊರಹಾಕುತ್ತದೆ. ಶ್ರೀ ಮಹಾಬಲೇಶ್ವರ ದೇವಾಲಯದ ನಂದೀ ಮಂಟಪದ ಪಶ್ಚಿಮ ದ್ವಾರದ ಮೇಲೆ ಪಾರುಪತ್ಯಗಾರ ಹಲಸುನಾಡು ವಿಶ್ವೇಶ್ವರಯ್ಯನ ಮುಖಾಂತರ ಶರ್ವರೀ ಸಂವತ್ಸರದ ಕಾರ್ತಿಕ ಶುದ್ಧರಲ್ಲೂ ರಂಗಮಂಟಪದ ಕೆಲಸ ಮುಗಿದಿದೆ ಎಂದು ಶಿಲಾಲೇಖವಿದೆ. ಆದರೆ ಇದರಲ್ಲಿ ಶಕೆ ಬರೆದಿಲ್ಲ. ಅದಾಗ್ಯೂ ಇದನ್ನು ಕಟ್ಟಿ ಬಹು ಕಾಲವಾಗಿರಬೇಕೆಂದು ಸ್ಪಷ್ಟವಾಗುತ್ತದೆ. ಇದನ್ನು ನಗರ ಸಂಸ್ಯಾನಿಕರು ಈ ಪಾರುಪತ್ಯಗಾರನ ಮುಖಾಂತರ ಕಟ್ಟಿಸಿದರೆಂಬ ಇತಿಹಾಸವಿದೆ. ದೇವತೆಗಳ ಲೋಕದ ಶಿಲಪ ವಿಶ್ವಕರ್ಮ ನಿರ್ಮಿಸಿದನೆಂದು ಭಕ್ತರು ನಂಬುವ ಮಹಾಬಲೇಶ್ವರ ದೇವಾಲಯ ಪ್ರಮುಖ ದೇವಾಲಯ ಇಂದೂರಿನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದಳೆಂದು ಹೇಳುವ ಅಹಲ್ಯಾಬಾಯಿ ಗುಡಿ ಮತ್ತು ಧರ್ಮಛತ್ರಗಳಿವೆ.

 ತೆಪ್ಪೋತ್ಸವ ನಡೆದು ಮುಕ್ತಾಯ

ತೆಪ್ಪೋತ್ಸವ ನಡೆದು ಮುಕ್ತಾಯ

ಇತ್ತೀಚಿನ ಇತಿಹಾಸವನ್ನು ಅವಲೋಕಿಸಿದರೆ ಕ್ರಿ.ಶ. 4 ರಲ್ಲಿ ಕದಂಬ ರಾಜ್ಯ ಸ್ಥಾಪಕ ಮಯೂರವರ್ಮ ದೂರದ ಅಹಿಚ್ಛತ್ರದಿಂದ ಬ್ರಾಹ್ಮಣರನ್ನು ಇಲ್ಲಿಗೆ ಕರೆತಂದು ಇಲ್ಲಿನ ದೇವಾಲಯಗಳ ಪೂಜಾದಿ ಉತ್ಸವಗಳು ಸರಾಗವಾಗಿ ನೆರವೇರುವಂತೆ ನೋಡಿಕೊಂಡ ಬಗ್ಗೆ ದಾಖಲೆಗಳಿವೆ. ವಿಜಯ ನಗರದ ಪ್ರಖ್ಯಾತ ಅರಸು ಬುಕ್ಕರಾಯ ಈ ಕ್ಷೇತ್ರವನ್ನು ಸಂದರ್ಶಿಸಿದ ಬಗ್ಗೆ; ಮಹಾರಾಷ್ಟ್ರದ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರು ಇಲ್ಲಿಗೆ ಆಗಮಿಸಿ, ಬ್ರಾಹ್ಮಣೋತ್ತಮರನ್ನು ಸನ್ಮಾನಿಸಿದ ಬಗ್ಗೆ ಇತಿಹಾಸ ನಮಗೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ. ಈ ಪ್ರಾಂತವು ಮೈಸೂರು ಅರಸನಾದ ಹೈದರಲಿ ವಂಶಕ್ಕೆ ಹೋಗುವ ಮೊದಲು ಕೆಳದಿ (ಇಕ್ಕೇರಿ) ಸಂಸ್ಥಾನಿಕರ ವಶದಲ್ಲಿತ್ತೆಂದೂ ಚೆನ್ನಮ್ಮಾಜಿ ಎಂಬ ರಾಣಿಯೂ, ಸೋಮಶೇಖರನೆಂದು ನಾಯಕನೂ ಆಳಿದರೆಂದೂ ಇವರು ಲಿಂಗಾಯತ ಮತದವರಿರಬೇಕೆಂತಲೂ ಈ ಅರಸರ ಮೊಹರುಳ್ಳ ಕೆಲ ಸನದುಗಳಿಂದ ತಿಳಿಯುತ್ತದೆ. ಗೋಕರ್ಣ ಕ್ಷೇತ್ರ ಸ್ಥಳದಲ್ಲಿ ಇರುವ ಮುಖ್ಯ ದೇವಾಲಯಗಳು ಶ್ರೀ ಮಹಾಗಣಪತಿ, ಶ್ರೀ ಆತ್ಮಲಿಂಗ, ತಾಮ್ರಗೌರಿ, ಕೋಟಿತಿರ್ಥ, ಶ್ರೀ ಭದ್ರಕಾಳಿ, ಶ್ರೀ ವೆಂಕಟೇಶ, ಶ್ರಿ ಪಟ್ಟ ವಿನಾಯ, ಶ್ರೀ ಕೃಷ್ಣ ದೇವಾಲಯ, ಶ್ರೀ ಶಂಕರನಾರಾಯಣ, ಶ್ರೀ ಶಾರದಾಂಬಾ ದೇವಾಲಯ, ಶ್ರೀ ಕಾಲಬೇರವ, ಶ್ರೀ ಸೂರ್ಯ ದೇವಾಲಯ. ಗೋಕರ್ಣದಲ್ಲಿ ಮುಖ್ಯವಾಗಿ ಇರುವ ಸಮುದ್ರ ತೀರಗಳು, ದೇವಾಲಯದ ಎದುರಿಗಿರುವುದು "ಮುಖ್ಯ ಸಮುದ್ರ ತೀರ", "ರಾಮ ತೀರ್ಥ", "ಕುಡ್ಲೆ ಸಮುದ್ರ ತೀರ", "ಪ್ರಸಿದ್ಧ ಓಂ ಬೀಚ್", "ಅರ್ಧ ಚಂದ್ರ ತೀರ". ಶ್ರೀ ಮಹಾಬಲೇಶ್ವರ ದೇವರ ಮಹೋತ್ಸವ ಮಾಘ ಶುದ್ಧ ಏಕಾದಶಿಯೇ ಮಹಾಶಿವರಾತ್ರಿ. ಫಾಲ್ಗುಣ ಶುದ್ಧ ಪ್ರತಿಪದೆಗೆ ಶ್ರೀ ದೇವರ "ರಥೋತ್ಸವ" ನಡೆಯುತ್ತದೆ. ಮತ್ತೆ ಮಾರನೇ ದಿನ ಪುನಃ ತೆಪ್ಪೋತ್ಸವ ನಡೆದು ಶಿವರಾತ್ರಿಯ ಮಹಾಜಾತ್ರೆ ಮುಕ್ತಾಯಗೊಳ್ಳುತ್ತದೆ.

English summary
Here is information about Gokarna in the Kumta Taluk of Uttara Kannada district. Devotees believe that this place is a sacred place like Kashi and Rameshwaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X