• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರಕ್ಕೆ ಸೆಡ್ಡು ಹೊಡೆದ ಹಾಡಗೇರಿಯ ಸ್ವಾಭಿಮಾನಿಗಳು; ಮರುನಿರ್ಮಾಣವಾಯ್ತು ಗ್ರಾಮಸೇತು

|
Google Oneindia Kannada News

ಕಾರವಾರ, ಜೂನ್ 29: ಸಂಪರ್ಕ ಸಾಧನವಾಗಿದ್ದ ಕಾಲು ಸಂಕ ಮಳೆಯ ನೀರಿಗೆ ಕೊಚ್ಚಿಹೋಗಿ ಊರಿಗೆ ಊರೇ ಕಷ್ಟದಲ್ಲಿರುವಾಗ ಜನರ ಕೈ ಹಿಡಿಯಬೇಕಿದ್ದ ಆಳುವ ಸರ್ಕಾರ ಅಸಡ್ಡೆ ಮಾಡಿತಾದರೂ, ಇದರಿಂದ ವಿಚಲಿತರಾಗಿ ಕೈಕಟ್ಟಿ ಕೂರದ ಯುವಕರು ಸರ್ಕಾರಕ್ಕೇ ಸೆಡ್ಡು ಹೊಡೆದು ಶ್ರಮದಾನದ ಮೂಲಕ ತಮ್ಮೂರಿನ ಹೊಳೆಗೆ ಮರದ ಸೇತುವೆ ನಿರ್ಮಿಸಿ ಸ್ವಾಭಿಮಾನ ಮೆರೆದಿದ್ದಾರೆ.

ಇಂತಹದ್ದೊಂದು ಘಟನೆ ನಡೆದಿದ್ದು ಬೇರಾವುದೋ ರಾಜ್ಯದಲ್ಲಲ್ಲ. ನಮ್ಮದೇ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ನಗರಬಸ್ತಿಕೇರಿ ಪಂಚಾಯತ ವ್ಯಾಪ್ತಿಗೆ ಸೇರಿದ ಹಾಡಗೇರಿಯಲ್ಲಿ. ಪಶ್ಚಿಮಘಟ್ಟದ ಸೆರಗಿನಲ್ಲಿ ಸೂರ್ಯನ ಕಿರಣ ನೆಲಕ್ಕೆ ತಾಗದಷ್ಟು ದಟ್ಟವಾಗಿರುವ ಕಾಡಿನ ನಡುವೆ ಕಳೆದುಹೋದಂತಿರುವ ಊರಿನಲ್ಲಿ ಬದುಕು ಕಟ್ಟಿಕೊಂಡವರ ಕಷ್ಟ ಮನೆಬಾಗಿಲಿಗೆ ರಸ್ತೆ, ನೀರು ಸವಲತ್ತಿರುವವರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ.

ಮಳೆಗಾಲ ಆರಂಭದಲ್ಲಿಯೇ ಆಘಾತ

ಮಳೆಗಾಲ ಆರಂಭದಲ್ಲಿಯೇ ಆಘಾತ

ಹಲವು ಇಲ್ಲಗಳನ್ನು ಬೆನ್ನಿಗೆ ಕಟ್ಟಿಕೊಂಡು ದಿನದೂಡುತ್ತಿದ್ದವರಿಗೆ ಈ ವರ್ಷದ ಮಳೆಗಾಲ ಆರಂಭದಲ್ಲಿಯೇ ಆಘಾತವನ್ನುಂಟು ಮಾಡಿತ್ತು. ಹೊಳೆ ದಾಟುವುದಕ್ಕೆ ಗ್ರಾಮಸ್ಥರೇ ಸ್ವತಃ ಕಟ್ಟಿಕೊಂಡಿದ್ದ ಮರದ ಸೇತುವೆಯ ಮೇಲೆ ಬೃಹತ್ ಮರ ಉರುಳಿ ಸಂಕ ನೆಲಸಮವಾಗಿತ್ತು. ಮಾತ್ರವಲ್ಲ, ಪೂರ್ತಿ ಸಂಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು.

ಉತ್ತರ ಕನ್ನಡ: ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಪತ್ತೆ ಕಾರ್ಯವೇ ಸವಾಲು!ಉತ್ತರ ಕನ್ನಡ: ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಪತ್ತೆ ಕಾರ್ಯವೇ ಸವಾಲು!

40 ಮಂದಿ ಮೂರು ದಿನ ಹಗಲು- ರಾತ್ರಿ ಶ್ರಮಪಟ್ಟರು

40 ಮಂದಿ ಮೂರು ದಿನ ಹಗಲು- ರಾತ್ರಿ ಶ್ರಮಪಟ್ಟರು

ಊರಿಗೆ ಸಂಪರ್ಕ ಕಡಿತವಾದಾಗ ಒಂದೆರಡು ದಿನ ಮನೆಯಲ್ಲಿಯೇ ಕುಳಿತ ಜನರು ನಂತರ ಮಳೆ ಕಡಿಮೆಯಾಗಿ ಸ್ವಲ್ಪ ನೀರಿಳಿದಾಗ ಬೈಕ್‌ನ್ನು ಮರದ ತುಂಡಿಗೆ ಕಟ್ಟಿಕೊಂಡು ಆರೇಳು ಜನ ಸೇರಿ ಸೊಂಟಮಟ್ಟ ನೀರನ್ನು ಹಾದು ಆಚೆ ದಡ ಸೇರುವ ಸಾಹಸ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಈಗಿನ್ನೂ ಮಳೆಗಾಲದ ಆರಂಭ ಮಾತ್ರ ಹೊಳೆಯನ್ನು ಹಾದು ಆಚೆಗೆ ಹೋಗುವಂತಹ ಹುಚ್ಚು ಸಾಹಸಗಳನ್ನು ಹೆಚ್ಚು ದಿನ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡು, ಊರವರೆಲ್ಲಾ ಒಂದಾಗಿ ಸುಮಾರು 40 ಮಂದಿ ಮೂರು ದಿನ ಹಗಲು- ರಾತ್ರಿ ಶ್ರಮಪಟ್ಟು ಹೊಸ ಕಾಲು ಸಂಕವನ್ನು ನಿರ್ಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮಸ್ಥರಿಗೆ ನೆರವಾದ ಉದಯ ನಾಯ್ಕ

ಗ್ರಾಮಸ್ಥರಿಗೆ ನೆರವಾದ ಉದಯ ನಾಯ್ಕ

ಅದೆಷ್ಟೇ ಕಷ್ಟಪಟ್ಟರೂ ಜನರ ಕೈ ಸೋಲುತ್ತಿದ್ದಾಗ ಉದಯ ನಾಯ್ಕ ಎಂಬ ಮಹಾನುಭಾವ ಜನರೊಟ್ಟಿಗೆ ಗಟ್ಟಿಯಾಗಿ ನಿಂತು ಗ್ರಾಮಸೇತುವೆ ಪೂರ್ಣಗೊಳ್ಳಲು ನೆರವಾಗಿದ್ದನ್ನು, ಅಗತ್ಯವಿರುವ ಕಟ್ಟಿಗೆಯನ್ನು ಕಾಡಿನಿಂದ ಬಳಸಿಕೊಳ್ಳಲು ಸಹಕಾರ ನೀಡಿದ ಅರಣ್ಯ ಇಲಾಖೆಯ ನೆರವನ್ನು ಗ್ರಾಮಸ್ಥರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಆಳುವ ಸರ್ಕಾರ, ಆಡಳಿತಯಂತ್ರ ಯಾವುದೊಂದೂ ಕಣ್ಣೆತ್ತಿ ನೋಡದಿದ್ದರೂ ಕೊಚ್ಚಿಹೋದ ಸೇತುವೆಯನ್ನು ಅದೇ ಜಾದಲ್ಲಿ ಕಟ್ಟಿ ನಿಲ್ಲಿಸಿದ ಹಳ್ಳಿ ಹೈದರು, ಜನಸಾಮಾನ್ಯರ ಉದ್ಧಾರಕರು ತಾವು ಎಂದು ಹೇಳಿಕೊಂಡು ತಿರುಗುವವರೇ ನಾಚಿಕೆಪಟ್ಟುಕೊಳ್ಳಬೇಕು ಅಂತಹ ಅದ್ಭುತ ಸಾಧನೆ ಮಾಡಿದ್ದಾರೆನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

  Rajnath Singh ಅವರು ಧಿಡೀರ್ ಎಂದು ಗಡಿಗೆ ಹೋಗಿದ್ದೇಕೆ | Rajnath Singh warns China | Oneindia Kannada
  ಪುಟ್ಟ ಪುಟ್ಟ ಸೇತುವೆಗಳ ಅಗತ್ಯ ಜಿಲ್ಲೆಗಿದೆ

  ಪುಟ್ಟ ಪುಟ್ಟ ಸೇತುವೆಗಳ ಅಗತ್ಯ ಜಿಲ್ಲೆಗಿದೆ

  ಸಂಪೂರ್ಣ ಕರಾವಳಿಯೂ ಅಲ್ಲದ ಅತ್ತ ಪೂರ್ತಿ ಮಲೆನಾಡೂ ಅಲ್ಲದ ಜಿಲ್ಲೆಯಲ್ಲಿ ಊರಿಗೊಂದು, ಮಾರಿಗೊಂದು ಹಳ್ಳವಿದೆ, ಹೊಳೆಗಳಿವೆ. ಬೇಸಿಗೆಯಲ್ಲಿ ಪೊರೆ ಬಿಟ್ಟ ಹಾವಿನಂತೆ ತಣ್ಣಗೆ ಸಪ್ಪಳವಿಲ್ಲದೆ ಹರಿಯುವ ನೀರು ಮಳೆಗಾಲದಲ್ಲಿ ಸಾವಿರ ಪಟ್ಟು ಹೆಚ್ಚು ಶಕ್ತಿಯನ್ನು ಪಡೆದು ಎದುರಿಗೆ ಸಿಕ್ಕ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುವ ರಭಸದಲ್ಲಿ ಮುನ್ನುಗ್ಗುವ ನೀರಿನ ಅಪಾಯ ಎದುರಾಗುವುದು ಏನಿದ್ದರೂ ಮಳೆಗಾಲದಲ್ಲಿಯೇ.

  ಹಾಗಾಗಿಯೇ ಮಳೆಗಾಲದಲ್ಲಿ ಜೋರಾಗಿ ಕೇಳಿಬರುವ ಕಾಲುಸಂಕ, ಸೇತುವೆಗಳ ಬೇಡಿಕೆ ಬೇಸಿಗೆಯಲ್ಲಿ ತಣ್ಣಗಾಗುತ್ತದೆ. ಮುಂದಿನ ದಿನಗಳಲ್ಲಾದರೂ ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಲಕ್ಷಣವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚೆಚ್ಚು ಕಾಲುಸಂಕ, ಸಣ್ಣ ಸಣ್ಣ ಸೇತುವೆಗಳನ್ನು ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡುವತ್ತ ಜಿಲ್ಲಾಡಳಿತ, ಸಂಬಂಧಪಟ್ಟ ಶಾಸಕರು, ಸಚಿವರು ಆಸಕ್ತಿ ವಹಿಸಬೇಕಿದೆ.

  English summary
  Villagers of Hadageri, located in Honavar taluk of Uttara Kannada, constructed an bridge over a flowing stream without any government help.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X