ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡ: ಬದುಕಿನ ಹಾಡು ಮುಗಿಸಿದ ‘ಹನುಮಿ ಗೌಡ’

|
Google Oneindia Kannada News

ಕಾರವಾರ, ಜೂನ್ 22: ಎಳೆ ಬದುಕಿನ ಮುಂಜಾನೆಯಿಂದ ಇಳಿ ಬದುಕಿನ ಮುಸ್ಸಂಜೆಯವರೆಗೂ ಸಾಲು ಸಾಲು ನೋವು, ಸವಾಲುಗಳಿಂದ ಜರ್ಝರಿತವಾಗುತ್ತಲೇ ಸಾಗಿದರೂ ನಾನು ಹಾಡುವುದು ನನಗೆಂದು, ಎದೆಯ ಭಾರ ಇಳಿಯಲೆಂದು ಎಂದುಕೊಳ್ಳುತ್ತಾ ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ನಾಲಿಗೆಯ ತುದಿಯಲ್ಲಿಟ್ಟುಕೊಂಡು ಕೇಳುಗರನ್ನು ಮೂಕವಿಸ್ಮಿತರನ್ನಾಗಿಸುತ್ತಲೇ ಸಾಧನೆಯ ಪಥದಲ್ಲಿ ಹೆಜ್ಜೆಹಾಕಿದ್ದ ಗ್ರಾಮೊಕ್ಕಲ ಸಮಾಜದ ಹೆಮ್ಮೆಯೆನಿಸಿದ್ದ ಜಾನಪದಶ್ರೀ ಹನುಮಿ ಗೌಡ ಇನ್ನು ನೆನಪು ಮಾತ್ರ.

ಕೆಲ ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಹನುಮಜ್ಜಿ ಜೂನ್ 21ರಂದು ತಮ್ಮ 74ರ ಹರೆಯದಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾಳೆ. ಕೇವಲ 4ನೇ ತರಗತಿ ಓದಿಕೊಂಡು, 13 ಹರೆಯದಲ್ಲಿ ಮದುವೆಯ ಬಂಧನಕಕ್ಕೊಳಗಾಗಿ, 40 ಜನರಿದ್ದ ಅವಿಭಕ್ತ ಕುಟುಂಬದಲ್ಲಿ ಹಿರಿ- ಕಿರಿಯರೊಂದಿಗೆ ಏಗಬೇಕಾದ ಸವಾಲುಗಳೊಂದಿಗೆ ಜೀಕುತ್ತಲೇ ಜಾನಪದ ಹಾಡುಗಳ ಕಣಜವೆನ್ನಿಸಿಕೊಂಡಿದ್ದೊಂದು ಅದ್ಭುತವೇ ಸರಿ.

2002ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜ್ಞಾನ ವಿಜ್ಞಾನ ಪ್ರಶಸ್ತಿ, ಕರ್ನಾಟಕ ಸರ್ಕಾರದ ಜಾನಪದ ಶ್ರೀ ಗೌರವಗಳನ್ನು ಮುಡಿಗೇರಿಸಿಕೊಂಡಿರುವ 73 ವರ್ಷದ ಹಿರಿಯ ಜೀವ ಹನುಮಜ್ಜಿ. ಈಶಾನ್ಯ ರಾಜ್ಯ ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ತೇಜನ ಕೇಂದ್ರದ ಕಾರ್ಯಕ್ರಮದಲ್ಲಿಯೂ ಭಾಗವಹಿಸಿ ಗ್ರಾಮೊಕ್ಕಲ ಜಾನಪದ ಲೋಕದ ವೈಭವವನ್ನು ಶಕ್ತಿಯುತವಾಗಿ ಹಾಡುಗಳ ಮೂಲಕ ತೆರೆದಿಟ್ಟ ಸಾಧನೆ ಮಾಡಿದ್ದಾಳೆ.

Karwar: Folk Artist Hanumi Gowda Passes Away

ಎಲೆಮರೆಯ ಕಾಯಿಯಂತಿದ್ದ ಹನುಮಜ್ಜಿಯ ಜಾನಪದ ಪ್ರತಿಭೆಯ ಮೇಲೆ ಬೆಳಕು ಚೆಲ್ಲಿ ಹೊರ ಜಗತ್ತಿಗೆ ಪರಿಚಯಿಸಿದ್ದು, ಖ್ಯಾತ ಜಾನಪದ ವಿದ್ವಾಂಸ ಡಾ.ಎನ್.ಆರ್. ನಾಯಕ, ಡಾ.ಶಾಂತಿ ನಾಯಕ ದಂಪತಿ ಒಡನಾಟ ಮತ್ತು ಅವರ ಮಗಳಾದ ಸವಿತಾ ಉದಯ ಅವರ ಸಹಕಾರ ಎನ್ನುವುದು ಸ್ಮರಣೀಯ.

ಜೀವನ ವೃತ್ತಾಂತ

ದಿ.ಗಣಪಿ ಮತ್ತು ದಿ.ನಾರಾಯಣ ಗೌಡರ ಮಗಳಾಗಿ ಜನಿಸಿದ ಹನುಮಿ ಅಜ್ಜಿಯ ತವರು ಹೊನ್ನಾವರ ತಾಲೂಕಿನ ಅಳ್ಳಂಕಿ ಯರ್ಜಿನಮೂಲೆ ಎನ್ನುವ ಪುಟ್ಟ ಊರಾದರೂ ಆಕೆ ಹುಟ್ಟಿ ಬೆಳೆದಿದ್ದು ಮಾತ್ರ ತಾಯಿಯ ತವರುಮನೆ ಇದ್ದ ಶರಾವತಿಯ ನಡುಗಡ್ಡೆ ಹೈಗುಂದದಲ್ಲಾಗಿತ್ತು. 13ರ ಹರೆಯದಲ್ಲಿ ಮದುವೆಯಾಗಿ ಮಾಳಕೋಡಿನ ಗಂಡನ ಮನೆ ಸೇರಿದ ಈಕೆ ಐದು ಗಂಡು ಒಂದು ಹೆಣ್ಣುಮಗುವಿಗೆ ಜನ್ಮವಿತ್ತು ಸಾಕಿ ಸಲಹುತ್ತಲೇ ಹೆತ್ತವ್ವಳಿಂದ ಬಳುವಳಿಯಾಗಿ ಬಂದಿದ್ದ ಜಾನಪದ ಹಾಡುಗಳನ್ನು ಗುನುಗುನಿಸುತ್ತಾ ಕಲಾಲೋಕದಲ್ಲಿ ಬೆಳೆದ ಪರಿ ಅನನ್ಯ.

ನೆರೆ ಹೊರೆಯ ಹಿರಿಯರು ಹೇಳುತ್ತಿದ್ದ ಹಾಡುಗಳು ಕಿವಿದರೆಗೆ ತಾಕಿದರೆ ತಕ್ಷಣ ಅದನ್ನು ನೆನಪಿಟ್ಟುಕೊಂಡು ಊರುಕೇರಿಯಲ್ಲಿ ಯಾರ ಮನೆಯಲ್ಲಿ ಮದುವೆ, ಮುಂಜಿ, ಸೀಮಂತ, ನಾಮಕರಣ, ದೇವರ ಕಾರ್ಯ, ಹಬ್ಬ ಹರಿದಿನ ಶುಭ ಕಾರ್ಯವಿರಲಿ ಅಲ್ಲಿ ಹನುಮಜ್ಜಿ ಮತ್ತವಳ ಬಳಗದ ಹಾಡಿನ ಸುಗ್ಗಿ ನಡೆಯುತ್ತಿತ್ತು.

ಬಹುಮುಖ ಪ್ರತಿಭೆ ಹನುಮಜ್ಜಿ ತನ್ನನ್ನು ಕೇವಲ ಜಾನಪದ ಹಾಡುಗಳಿಗೆ ಮಾತ್ರ ಸೀಮಿತವಾಗಿಸಿಕೊಂಡವಳಲ್ಲ. ಕೇದಿಗೆ ಎಲೆಗಳಿಂದ ಚಾಪೆ ನೇಯುವುದು, ಶೇಡಿ (ಜೇಡಿ ಮಣ್ಣಿನ ಹುಡಿ) ಕಲೆಯಲ್ಲಿಯೂ ನಿಷ್ಣಾತರಾಗಿದ್ದಾಳೆ ಈಕೆ. ಅಡಿಕೆ ಸಿಪ್ಪೆಯನ್ನು ಕುಂಚಗಳನ್ನಾಗಿ ಮಾಡಿಕೊಂಡು ಬಾಗಿಲ ತೋರಣ, ಕೊಡೆಶೇಡಿ, ಕಳಸದ ಶೇಡಿ, ಸರ್ಪ ಶೇಡಿ, ಪೆಟ್ಟಿಗೆ ಶೇಡಿ, ಹಸಗಾರ (ಮಧು ಮಕ್ಕಳು ಕುಳಿತುಕೊಳ್ಳುವ ಸ್ಥಳದ ಹಿಂದಿನ ಗೋಡೆಯ ಮೇಲೆ ಬಿಡಿಸಲಾಗುವ ಕಲೆ) ತಳಕಲ ಶೇಡಿ, ಬಾಸಿಂಗ, ತೊಂಡ್ಲ ಹೀಗೆ ನಾನಾ ಬಗೆಯ ಚಿತ್ತಾರಗಳನ್ನು ಸೃಷ್ಟಿಸುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದಳು.

Recommended Video

ಭವಿಷ್ಯ ನುಡಿದ ಗೊರವಯ್ಯ ಮಾಲತೇಶಪ್ಪ ಇನ್ನಿಲ್ಲ | Oneindia Kannada

ತನ್ನ ಹಾಡುಗಳಿಂದ ಜಾನಪದ ಲೋಕವನ್ನು ಶ್ರೀಮಂತಗೊಳಿಸಿದ ಹನಮಿ ಗೌಡ ನಿಧನಕ್ಕೆ ಮಾಜಿ ಶಾಸಕ ಮಂಕಾಳ ವೈದ್ಯ, ತಾಲೂಕು ಪಂಚಾಯತಿ ಸದಸ್ಯ ಗಣಪಯ್ಯ ಗೌಡ, ಜಾನಪದ ವಿದ್ವಾಂಸರಾದ ಡಾ.ಎನ್.ಆರ್. ನಾಯಕ, ಡಾ.ಶಾಂತಿ ನಾಯಕ, ನಿವೃತ್ತ ಉಪನ್ಯಾಸಕ ಸಾಹಿತಿ ಡಾ.ಶ್ರೀಪಾದ ಶೆಟ್ಟಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ, ಶಿಕ್ಷಕರಾದ ಗಣಪಯ್ಯ ಗೌಡ ಮಾಳ್ಕೋಡ ಸೇರಿದಂತೆ ಸಾವಿರಾರು ಮಂದಿ ಸಂತಾಪ ಸೂಚಿಸಿದ್ದಾರೆ.

English summary
Folk artist Hanumi Gowda of Honnavar in Uttara Kannada district passed away on Tuesday, June 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X