ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳಿಬ್ಬರಿಂದ ತಯಾರಾದ ಮೋಟರೀಕೃತ ಇಕೋ‌ ಫ್ರೆಂಡ್ಲಿ ಸೈಕಲ್!

|
Google Oneindia Kannada News

ಕಾರವಾರ, ಜನವರಿ 14: ಲಾಕ್ ಡೌನ್ ಅವಧಿಯಲ್ಲಿ ಶಾಲಾ- ಕಾಲೇಜುಗಳು ತೆರೆಯದೆ ವಿದ್ಯಾರ್ಥಿಗಳು ಮನೆಯಲ್ಲೇ ಬಂಧಿಯಾಗಿದ್ದರು. ಆದರೆ ಈ ಸಮಯವನ್ನು ಕಾರವಾರ ನಗರದ ಕಾಲೇಜು ವಿದ್ಯಾರ್ಥಿಗಳಿಬ್ಬರು ಸದುಪಯೋಗಪಡಿಸಿಕೊಂಡು, ಕಡಿಮೆ ವೆಚ್ಚದಲ್ಲಿ ಬ್ಯಾಟರಿ ಚಾಲಿತ ಸೈಕಲ್‌ ಅನ್ನು ತಯಾರಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

ನಗರದ ಸೇಂಟ್ ಜೋಸೆಫ್ ಕಾಲೇಜಿನ ಪಿಯು ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ತನ್ವಿ ಚಿಪ್ಕರ್ ಹಾಗೂ ಕುನಾಲ್ ತಮ್ಮ ಸೈಕಲ್‌ಗಳನ್ನೇ ಬ್ಯಾಟರಿ ಚಾಲಿತ ಸೈಕಲ್‌ಗಳನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂದನಗದ್ದಾ ನಿವಾಸಿಗಳಾಗಿರುವ ತನ್ವಿ ಹಾಗೂ ಕುನಾಲ್ ಪ್ರತಿನಿತ್ಯ ಸುಮಾರು 6 ಕಿ.ಮೀ ಸೈಕಲ್ ತುಳಿದುಕೊಂಡು ಕಾಲೇಜಿಗೆ ತೆರಳಬೇಕಾಗಿತ್ತು.

ಇದರಿಂದಾಗಿ ತಮ್ಮ ಸೈಕಲ್‌ ಅನ್ನೇ ಮೋಟಾರು ಚಾಲಿತವನ್ನಾಗಿ ಮಾಡುವ ಯೋಚನೆ ಹೊಳೆದಿದ್ದು, ಕುನಾಲ್ ತಂದೆ ಜಗದೀಶ ಅವರ ಬಳಿ ಮಕ್ಕಳಿಬ್ಬರೂ ಸಲಹೆ ಪಡೆದುಕೊಂಡರು. ಸೈಕಲ್‌ ಅನ್ನು ಬ್ಯಾಟರಿ ಚಾಲಿತವನ್ನಾಗಿಸುವ ಕುರಿತಾಗಿ ಆನ್‌ಲೈನ್ ಮೂಲಕವೂ ಮಾಹಿತಿ ಕಲೆಹಾಕಿ ಅಗತ್ಯ ವಸ್ತುಗಳನ್ನು ತರಿಸಿಕೊಂಡು ಬ್ಯಾಟರಿ ಸೈಕಲ್ ಸಿದ್ಧಪಡಿಸುವ ಕೆಲಸ ಪ್ರಾರಂಭಿಸಿದ್ದರು. ಸುಮಾರು ಒಂದು ತಿಂಗಳ ಪರಿಶ್ರಮದ ಬಳಿಕ ಬ್ಯಾಟರಿ ಚಾಲಿತ ಇಕೋ ಫ್ರೆಂಡ್ಲಿ ಸೈಕಲ್ ಸಿದ್ಧವಾಗಿದೆ.

12 ವೋಲ್ಟ್‌ನ ಡಿಸಿ ಮೋಟಾರ್‌ ಅನ್ನು ಅಳವಡಿಸಲಾಗಿದೆ

12 ವೋಲ್ಟ್‌ನ ಡಿಸಿ ಮೋಟಾರ್‌ ಅನ್ನು ಅಳವಡಿಸಲಾಗಿದೆ

ಈ ಸೈಕಲ್‌ನ ಬಂಪರ್ ಭಾಗದಲ್ಲಿ 12 ವೋಲ್ಟ್‌ನ ಎರಡು ಬ್ಯಾಟರಿಗಳನ್ನು ಇರಿಸುವ ಕಂಪಾರ್ಟ್‌ಮೆಂಟ್‌ ಅನ್ನು ಮಾಡಲಾಗಿದೆ. ಸೈಕಲ್‌ನ ಹಿಂಬದಿ ಚಕ್ರವನ್ನು ಚೈನ್ ಮೂಲಕ ತಿರುಗಿಸುವ ಪ್ರೀವ್ಹೀಲ್ ಪಕ್ಕದಲ್ಲಿ ಇನ್ನೊಂದು ಪ್ರೀವ್ಹೀಲ್ ಅನ್ನು ಅಳವಡಿಸಿದ್ದು, ಅದಕ್ಕೆ ಇನ್ನೊಂದು ಸಣ್ಣ ಚೈನ್ ಮೂಲಕ 12 ವೋಲ್ಟ್‌ನ ಡಿಸಿ ಮೋಟಾರ್‌ ಅನ್ನು ಅಳವಡಿಸಲಾಗಿದೆ. ಮೋಟಾರಿನ ಸ್ವಿಚ್‌ ಅನ್ನು ಬೈಕಿನ ಎಕ್ಸಿಲೇಟರ್ ಮಾದರಿಯಲ್ಲಿ ಸೈಕಲ್‌ನ ಬಲಬದಿಯ ಹ್ಯಾಂಡಲ್‌ಗೆ ಜೋಡಿಸಲಾಗಿದೆ. ಜೊತೆಗೆ ಸೈಕಲ್‌ಗೆ ಹೆಡ್‌ಲೈಟ್ ಹಾಗೂ ಹಿಂಬದಿಯ ಲೈಟ್‌ ಅನ್ನು ಸಹ ಅಳವಡಿಸಿದ್ದು, ರಾತ್ರಿ ವೇಳೆಯಲ್ಲೂ ಚಲಾಯಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸುತ್ತಾರೆ ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ ವಿದ್ಯಾರ್ಥಿ ಕುನಾಲ್.

ಚಾರ್ಜ್ ಆಗಲು ಮೂರರಿಂದ ನಾಲ್ಕು ಗಂಟೆಗಳು

ಚಾರ್ಜ್ ಆಗಲು ಮೂರರಿಂದ ನಾಲ್ಕು ಗಂಟೆಗಳು

ಇನ್ನು ಬ್ಯಾಟರಿಯಿಂದ ಮೋಟರ್ ಚಾಲನೆ ಪ್ರಾರಂಭಿಸಲು ಕೀ ಒಂದನ್ನು ಅಳವಡಿಸಲಾಗಿದ್ದು, ಅದನ್ನು ಆನ್ ಮಾಡಿದಾಗ ಮಾತ್ರ ಸೈಕಲ್ ಮೋಟರ್ ಸಹಾಯದಿಂದ ಚಲಿಸುತ್ತದೆ. ಉಳಿದ ಸಂದರ್ಭದಲ್ಲಿ ಸಾಮಾನ್ಯ ಸೈಕಲ್‌ನಂತೆ ಪೆಡಲ್ ತುಳಿದು ಸಹ ಈ ಸೈಕಲ್‌ ಅನ್ನು ಚಲಾಯಿಸಬಹುದಾಗಿದೆ. ಇನ್ನು ಬ್ಯಾಟರಿ ಚಾರ್ಜಿಂಗ್ ಮಾಡಲು ಸೈಕಲ್‌ನಲ್ಲಿ ಪ್ಲಗ್ ವೊಂದನ್ನು ಅಳವಡಿಸಿದ್ದು, ಬ್ಯಾಟರಿಯನ್ನು ತೆಗೆಯದೇ ಸೈಕಲ್‌ನಲ್ಲಿಯೇ ಇರಿಸಿ ಚಾರ್ಜ್ ಮಾಡಬಹುದಾಗಿದೆ. ಸೈಕಲ್‌ನ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಮೂರರಿಂದ ನಾಲ್ಕು ಗಂಟೆಗಳು ತಗುಲಲಿದ್ದು, ಒಮ್ಮೆ ಚಾರ್ಜ್ ಮಾಡಿದಲ್ಲಿ ಸುಮಾರು 25 ರಿಂದ 30 ಕಿಲೋ ಮೀಟರ್‌ವರೆಗೆ ಚಲಾಯಿಸಬಹುದು ಎನ್ನುತ್ತಾಳೆ ವಿದ್ಯಾರ್ಥಿನಿ ತನ್ವಿ ಚಿಪ್ಕರ್.

ಪಾಲಕರಿಗೂ ಸಂತಸ ಉಂಟುಮಾಡಿದೆ

ಪಾಲಕರಿಗೂ ಸಂತಸ ಉಂಟುಮಾಡಿದೆ

ಆನ್‌ಲೈನ್‌ನಲ್ಲಿ ಬ್ಯಾಟರಿ ಚಾಲಿತ ಸೈಕಲ್‌ಗಳಿಗೆ 30 ರಿಂದ 50 ಸಾವಿರದವರೆಗೆ ತಗುಲಲಿದ್ದು, ಈ ಇಬ್ಬರು ವಿದ್ಯಾರ್ಥಿಗಳು ಸುಮಾರು 16 ರಿಂದ 18 ಸಾವಿರ ರೂಪಾಯಿ ವೆಚ್ಚದಲ್ಲಿಯೇ ತಮ್ಮ ಸೈಕಲ್‌ಗಳನ್ನು ಬ್ಯಾಟರಿ ಚಾಲಿತವನ್ನಾಗಿ ಪರಿವರ್ತಿಸಿದ್ದಾರೆ. ಇನ್ನು ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಿ ತಾವೇ ಬ್ಯಾಟರಿ ಚಾಲಿತ ಸೈಕಲ್‌ನ್ನು ಸಿದ್ಧಪಡಿಸಿರುವುದು ಅವರ ಪಾಲಕರಿಗೂ ಸಂತಸ ಉಂಟುಮಾಡಿದೆ. ಕಾಲೇಜಿಗೆ ತೆರಳಲು ಬೈಕಿನ ಬೇಡಿಕೆ ಇಡುವ ವಿದ್ಯಾರ್ಥಿಗಳಿರುವ ಈ ಕಾಲದಲ್ಲಿ ಇಕೋ ಫ್ರೆಂಡ್ಲಿ ಸೈಕಲ್‌ನ್ನು ಆಯ್ದುಕೊಂಡಿದಕ್ಕೆ ಮಕ್ಕಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಪಾಲಕ ಜಗದೀಶ.

ಎಲ್ಲ ವಿದ್ಯಾರ್ಥಿಗಳಿಗೂ ಮಾದರಿ

ಎಲ್ಲ ವಿದ್ಯಾರ್ಥಿಗಳಿಗೂ ಮಾದರಿ

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್- ಡೀಸೆಲ್ ದರಗಳು ಗಗನಕ್ಕೇರುತ್ತಿದ್ದು, ಸರ್ಕಾರ ಸಹ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಈ ವಿದ್ಯಾರ್ಥಿಗಳಿಬ್ಬರು ಕಡಿಮೆ ವೆಚ್ಚದಲ್ಲಿ ಸೈಕಲ್‌ನ್ನು ಮೋಟಾರು ಚಾಲಿತವನ್ನಾಗಿ ಪರಿವರ್ತಿಸಿರುವುದು ನಿಜಕ್ಕೂ ಎಲ್ಲ ವಿದ್ಯಾರ್ಥಿಗಳಿಗೂ ಮಾದರಿಯಾಗುವಂಥದ್ದಾಗಿದೆ.

English summary
Two college students in the city of Karwar on the model of maked a low cost battery powered bicycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X