• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸಂಕಷ್ಟದ ಕಾಲದಲ್ಲಿ ಯಕ್ಷಗಾನಕ್ಕೆ ಡಿಜಿಟಲ್ ಸ್ಪರ್ಶ!

By ಎಂ.ಎಸ್.ಶೋಭಿತ್ ಮೂಡ್ಕಣಿ
|

ಕಾರವಾರ, ಆ 14: 'ಯಕ್ಷಗಾನ' ಕರಾವಳಿಯ 'ಗಂಡು ಕಲೆ' ಎಂದೇ ಜನಜನಿತ. ಪ್ರತಿವರ್ಷ ಸಾಮಾನ್ಯವಾಗಿ ಡಿಸೆಂಬರ್‌ನಿಂದ, ಜೂನ್ ತಿಂಗಳವರೆಗೆ ಕರಾವಳಿಯ ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ ಮತ್ತು ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಅಷ್ಟೇ ಅಲ್ಲದೇ ದೇಶ-ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನ ನಡೆಯುತ್ತಿರುತ್ತದೆ. ಆದರೆ ಈ ಬಾರಿ ಮಳೆಗಾಲಕ್ಕೂ ಮುನ್ನವೇ ಯಕ್ಷಗಾನ ಪ್ರದರ್ಶನಗಳೆಲ್ಲವೂ ಸ್ಥಗಿತಗೊಂಡವು. ಕಾರಣ ಕೊರೊನಾ!

ಹೌದು. ಕೊರೊನಾ ಎಂಬ ವೈರಸ್ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ನೀಡಿದೆ. ಇದರಿಂದ ಕಲಾರಂಗ ಕೂಡಾ ಹೊರತಾಗಿಲ್ಲ. ಕಲೆಯನ್ನೇ ನಂಬಿ ಜೀವನವನ್ನು ಸಾಗಿಸುತ್ತಿದ್ದ ಎಷ್ಟೋ ಕಲಾವಿದರ ಬದುಕನ ನರಕವಾಗಿವೆ.

ಕೊಲ್ಲೂರು ದೇವಸ್ಥಾನದ ವತಿಯಿಂದ ಯಕ್ಷಗಾನ ಕಲಾವಿದರಿಗೆ ನೆರವು

ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕಲಾಭಿಮಾನಿಗಳಿಗೆ ಯಕ್ಷಗಾನದ ರಸದೌತಣವನ್ನು ಬಡಿಸಬೇಕೆನ್ನುವ ಉದ್ದೇಶದಿಂದ ತಾಲೂಕಿನ ನೀಲ್ಕೋಡಿನ ವೃತ್ತಿಪರ ಯಕ್ಷಗಾನ ಕಲಾವಿದ, ಅಭಿನೇತ್ರಿ ಆರ್ಟ್ಸ್ ಟ್ರಸ್ಟ್ ಸಂಸ್ಥೆಯ ಮುಖ್ಯಸ್ಥ ಶಂಕರ ಹೆಗಡೆ ಯಕ್ಷಗಾನ ಪ್ರದರ್ಶನಕ್ಕೆ ಡಿಜಿಟಲ್ ಸ್ಪರ್ಶ ನೀಡಿದ್ದು, ಯಕ್ಷಗಾನ ಕಲಾಸಕ್ತರು ಇದೀಗ ಅಂಗೈ ತುದಿಯಲ್ಲಿಯೇ ಯಕ್ಷಗಾನವನ್ನು ವೀಕ್ಷಿಸಬಹುದಾಗಿದೆ.

ಏನಿದು ಡಿಜಿಟಲ್ ಪ್ರದರ್ಶನ?: ಸಾಮಾನ್ಯವಾಗಿ ಡೇರೆ ಮೇಳಗಳಲ್ಲಿ ಫಸ್ಟ್ ಕ್ಲಾಸ್, ನೆಲ ಎಂದು ಪ್ರತ್ಯೇಕವಾಗಿ ವಿಂಗಂಡಿಸಿ, ಟಿಕೇಟ್ ದರ ನಿಗದಿಪಡಿಸಲಾಗಿರುತ್ತದೆ. ಇದು ಕೇವಲ ಒಂದೇ ಪ್ರದರ್ಶನಕ್ಕೆ ಸೀಮಿತವಾಗಿರುತ್ತದೆ. ಆದರೆ ಡಿಜಿಟಲ್ ಪ್ರದರ್ಶನದಲ್ಲಿ https://shaale.com ಮೂಲಕ ಒಮ್ಮೆ ₹199 ಪಾವತಿಸಿದರೆ 15 ದಿನಗಳ ಅವಧಿಯಲ್ಲಿ ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದಾಗಿದೆ.

"ಕೊರೊನಾ ಎಂಬ ಮಹಾಮಾರಿ ವಿಧಿಸಿದ ದಿಗ್ಬಂಧನದಿಂದಾಗಿ ಎಲ್ಲಿಯೂ ನೇರವಾಗಿ ಯಕ್ಷಗಾನ ಪ್ರದರ್ಶನ ನೀಡುವಂತಿಲ್ಲ. ಪ್ರೇಕ್ಷಕರೂ ಸೇರುವಂತಿಲ್ಲ. ಆದರೆ ಇಂತಹ ದುರಿತ ಕಾಲದಲ್ಲಿ ಕಲಾವಿದ ಮತ್ತು ಪ್ರೇಕ್ಷಕರ ನಡುವೆ ಸಂಪರ್ಕ ಸೇತುವೆ ಕಲ್ಪಿಸುವ ಒಂದು ಪ್ರಯತ್ನವೇ ಈ ಡಿಜಿಟಲ್ ಯಕ್ಷಗಾನ" ಎನ್ನುತ್ತಾರೆ ಅಭಿನೇತ್ರಿ ಸಂಸ್ಥೆಯ ಮುಖ್ಯಸ್ಥ ನೀಲ್ಕೋಡು ಶಂಕರ್ ಹೆಗಡೆ.

ತೆಂಕು-ಬಡಗಿನ ಕಲಾವಿದರ ಸಂಗಮ: ಈಗಾಗಲೇ ಶಾಲೆ.ಕಾಂ ವೆಬ್‌ಸೈಟ್ ಮೂಲಕ ತೆಂಕು ಬಡಗು ಕಲಾವಿದರಿಂದ 'ಸುದರ್ಶನ ವಿಜಯ' ಪ್ರಸಂಗ ಪ್ರದರ್ಶನಗೊಂಡಿದೆ. ವಿಷ್ಣುವಾಗಿ ವಾಸುದೇವ ರಂಗ ಭಟ್, ಸುದರ್ಶನನಾಗಿ ನೀಲ್ಕೋಡು ಶಂಕರ ಹೆಗಡೆ, ಡಾ.ಪ್ರದೀಪ ಸಾಮಗ ಲಕ್ಷ್ಮೀ, ದೇವೇಂದ್ರನಾಗಿ ನಾಗೇಂದ್ರ ಮೂರೂರು, ಶತ್ರುಪ್ರಸೂದನನಾಗಿ ಮಾಗೋಡ್ ಅಣ್ಣಪ್ಪ ಪಾತ್ರವರ್ಗದಲ್ಲಿದ್ದು, ಬಡಗು ಹಿಮ್ಮೇಳದಲ್ಲಿ ಭಾಗವತರಾಗಿ ಬ್ರಹ್ಮೂರು ಶಂಕರ ಭಟ್, ಸುನೀಲ್ ಭಂಡಾರಿ ಮತ್ತು ಪ್ರಸನ್ನ ಹೆಗ್ಗಾರ್ ಭಾಗವಹಿಸಿದರೆ, ತೆಂಕು ಹಿಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ಅಜೇರು, ಕೃಷ್ಣ ಪ್ರಕಾಶ, ಶ್ರೀನಿವಾಸ ಪ್ರಭು, ಶ್ರೀಪತಿ ಅಜೇರು ಭಾಗವಹಿಸಿದ್ದಾರೆ.

ಬಡಗುತಿಟ್ಟು ಯಕ್ಷಗಾನದ ಮೇರು ಚಂಡೆ ವಾದಕ ಇಡಗುಂಜಿ ಕೃಷ್ಣಯಾಜಿ ಅಸ್ತಂಗತ

ಯಕ್ಷಗಾನದ ಏಳಿಗೆಗೆ ಶ್ರಮಿಸುತ್ತಿರುವ ಅಭಿನೇತ್ರಿ ಸಂಸ್ಥೆ: ಅಭಿನೇತ್ರಿ ಆರ್ಟ್ಸ್ ಟ್ರಸ್ಟ್ ಇದು ವೃತ್ತಿಪರ ಕಲಾವಿದ ನೀಲ್ಕೋಡು ಶಂಕರ ಹೆಗಡೆ ಅವರ ಬಹುದೊಡ್ಡ ಕನಸಿನ ಕೂಸು. ಯಕ್ಷಗಾನದ ಉಳಿಸುವ ಮತ್ತು ಬೆಳೆಸುವ ಕನಸನ್ನು ಹೊತ್ತ ಸಂಸ್ಥೆ ಇದಾಗಿದ್ದು, ಕಲಾವಿದರಿಗೆ ಮತ್ತು ಸಾಧಕರಿಗೆ ಸನ್ಮಾನ, ತರಬೇತಿ ಸಂಸ್ಥೆಗಳ ಸ್ಥಾಪನೆ, ಇನ್ನಿತರ ಕಲೆಗಳಲ್ಲಿ ಯಕ್ಷಗಾನದ ಸೇರ್ಪಡೆ, ಹಳೆ ತಲೆಮಾರಿನ ಎಲ್ಲಾ ವಿಧಗಳನ್ನು ಉಳಿಸಿ ಬೆಳೆಸುವುದು ಹೀಗೆ ನೂರಾರು ಕನಸನ್ನು ಹೊತ್ತಿರುವ ಅಪರೂಪದ ಸಂಸ್ಥೆಗಳಲ್ಲೊಂದು.

ಖ್ಯಾತ ಯಕ್ಷಗಾನ ಕಲಾವಿದ ದಿ. ಗಣಪತಿ ಭಟ್ ಕಣ್ಣಿ ಹೆಸರಿನಲ್ಲಿ 'ಕಣ್ಣಿ ಪ್ರಶಸ್ತಿ', ಹಾಗೂ ಅಭಿನೇತ್ರಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಹಲವಾರು ಕಲಾವಿದರಿಗೆ, ಅನಾರೋಗ್ಯದಿಂದ ಬಳಲುತ್ತಿರುವ ಅಶಕ್ತ ಕಲಾವಿದರಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಧನಸಹಾಯ ನೀಡಿದ ಹೆಗ್ಗಳಿಕೆ ಅಭಿನೇತ್ರಿ ಸಂಸ್ಥೆಯದ್ದು‌. "ಡಿಜಿಟಲ್ ಯಕ್ಷಗಾನ ಪ್ರದರ್ಶನ ಒಂದು ಪ್ರಯೋಗವಷ್ಟೆ. ಮುಂದಿನ ತಲೆಮಾರಿನವರಿಗೆ ಇದೊಂದು ಹೊಸ ದಾರಿಯಾಗಬಲ್ಲದು. ಆ ನಿಟ್ಟಿನಲ್ಲಿ ನಮ್ಮದೊಂದು ಪ್ರಯತ್ನ" ಎಂಬುದು ಶಂಕರ ಹೆಗಡೆಯವರ ಅಭಿಮತ.

ನಾಳೆಯಿಂದ 'ದ್ರೋಣ ಕಥಾ' ಪ್ರಸಂಗ ಪ್ರಾರಂಭ: ಈಗಾಗಲೇ 'ಸುದರ್ಶನ ವಿಜಯ' ಯಕ್ಷಗಾನ ಪ್ರದರ್ಶನಗೊಂಡಿದ್ದು, ನಾಳೆಯಿಂದ ಅಗಸ್ಟ್ 15. ನೂತನ ಪ್ರಸಂಗ 'ದ್ರೋಣ ಕಥಾ' ಪ್ರದರ್ಶನಗೊಳ್ಳಲಿದ್ದು, https://shaale.com ನಲ್ಲಿ ವೀಕ್ಷಿಸಬಹುದಾಗಿದೆ.

ವಿ.ಉಮಾಕಾಂತ ಭಟ್ ಕೆರೆಕೈ ಮಾರ್ಗದರ್ಶನದಲ್ಲಿ ನೂತನ ಪ್ರಸಂಗ ಚಿತ್ರೀಕರಣಗೊಂಡಿದ್ದು, ಮುಮ್ಮೇಳದಲ್ಲಿ ಬಳ್ಕೂರು ಕೃಷ್ಣ ಯಾಜಿ, ತೀರ್ಥಹಳ್ಳಿ ಗೋಪಾಲ ಆಚಾರ್ಯ, ಕೊಂಡದಕುಳಿ ರಾಮಚಂದ್ರ ಹೆಗಡೆ, ಉದಯ ಹೆಗಡೆ ಕಡಬಾಳ, ವಿನಯ್ ಬೇರೊಳ್ಳಿ, ಶ್ರೀಧರ ಕಾಸರಕೋಡ, ಪ್ರಸನ್ನ, ವೆಂಕಟೇಶ ಬೊಗರಿಮಕ್ಕಿ ಮುಂತಾದವರು ಭಾಗವಹಿಸಲಿದ್ದು, ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ರಾಮಕೃಷ್ಣ ಹೆಗಡೆ ಹಿಲ್ಲೂರು ಮುಂತಾದವರು ಭಾಗವಹಿಸಲಿದ್ದಾರೆ.

"ಡಿಜಿಟಲ್ ಯಕ್ಷಗಾನ ಪ್ರದರ್ಶನ ಇದೊಂದು ಹೊಸ ಪ್ರಯೋಗ. ಮೊದಲ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರೋತ್ಸಾಹ ದೊರೆತಿದೆ. ವಿದೇಶದಲ್ಲಿರುವ ಕಲಾಸಕ್ತರು ಕೂಡ ವೀಕ್ಷಿಸಿದ್ದಾರೆ. ಇದೇ ಹುಮ್ಮಸ್ಸಿನಿಂದ ಎರಡನೇ ಪ್ರದರ್ಶನ ಪ್ರಾರಂಭಿಸುತ್ತಿದ್ದೇವೆ" ಎನ್ನುತ್ತಾರೆ ಅಭಿನೇತ್ರಿ ಸಂಸ್ಥೆಯ ಮುಖ್ಯಸ್ಥ ನೀಲ್ಕೋಡು ಶಂಕರ ಹೆಗಡೆ.

English summary
During Corona Pandemic Abhinetri Art Trust Has Given Digital Touch To Yakshagana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X