ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಟಾ; ಬೆಳ್ಳಂಬೆಳಿಗ್ಗೆ ಬಾವಿಯಲ್ಲಿ ಬಗ್ಗಿ ನೋಡಿದವರಿಗೆ ಕಾದಿತ್ತು ಆಶ್ಚರ್ಯ

|
Google Oneindia Kannada News

ಕುಮಟಾ, ಫೆಬ್ರುವರಿ 1: ಬೇಟೆ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಶುಕ್ರವಾರ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ. ಕೊಂಕಣ ರೈಲ್ವೆ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾಮದ ವಸಂತ್ ನಾಯ್ಕ ಎನ್ನುವವರ ಮನೆಯ ಬಾವಿಯಲ್ಲಿ ಚಿರತೆ ಬಿದ್ದಿದ್ದು, ಪ್ರಾಣಿ ರಕ್ಷಣೆ ಮಾಡುವ 'ಡೇರಿಂಗ್ ಟೀಮ್' ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ವಸಂತ್ ನಾಯ್ಕ ಕೆಲಸಕ್ಕೆ ತೆರಳಿದ್ದರಿಂದ ಗುರುವಾರ ರಾತ್ರಿ ಮನೆಯಲ್ಲಿ ಯಾರೂ ಇರಲಿಲ್ಲ. ಶುಕ್ರವಾರ ಬೆಳಿಗ್ಗೆ ಮನೆಗೆ ಬಂದು ತೋಟಕ್ಕೆ ನೀರನ್ನು ಹಾಯಿಸಲು ಪಂಪ್ ‍ಸೆಟ್ ಚಾಲು ಮಾಡಿದ್ದರು. ಆದರೆ, ನೀರು ಮಾತ್ರ ಬರುತ್ತಿರಲಿಲ್ಲ. ಯಾಕೆ ನೀರು ಬರುತ್ತಿರಲಿಲ್ಲ ಎಂದು ವಸಂತ್ ನಾಯ್ಕ ಬಾವಿಯಲ್ಲಿ ನೋಡಲು ಮುಂದಾದಾಗ ಚಿರತೆ ಬಾವಿಯಲ್ಲಿ ಬಿದ್ದಿರುವುದನ್ನು ಕಂಡು ಅಚ್ಚರಿಯಾಗಿದ್ದಾರೆ.

 ಪೈಪ್ ತುಂಡು ಮಾಡಿದ್ದ ಚಿರತೆ

ಪೈಪ್ ತುಂಡು ಮಾಡಿದ್ದ ಚಿರತೆ

ಬಾವಿಯಲ್ಲಿ ನೀರು ಬಾವಿಯಿಂದ ಮೇಲಕ್ಕೆ ಬರಲು ಹಾಕಿದ್ದ ಪೈಪ್ ಅನ್ನು ಚಿರತೆ ತುಂಡು ಮಾಡಿ ಹಿಡಿದುಕೊಂಡಿರುವುದನ್ನು ವಸಂತ್ ನಾಯ್ಕ ಗಮನಿಸಿ, ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಆಗಮಿಸಿದ ಕುಮಟಾ ಎಸಿಎಫ್ ಪ್ರವೀಣ್, ಚಿರತೆ ರಕ್ಷಣೆಗೆ ‘ಡೇರಿಂಗ್ ಟೀಮ್' ಸದಸ್ಯರಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಸದಸ್ಯರು, ಚಿರತೆ ರಕ್ಷಣೆಗೆ ಮುಂದಾಗಿದ್ದರು. ಬಾವಿಯಲ್ಲಿ ಬಿದ್ದಿದ್ದ ಚಿರತೆಗೆ ಕೂರಲು ಮೊದಲು ಬುಟ್ಟಿಯೊಂದನ್ನು ಹಾಕಿದ್ದರು. ಇದಾದ ನಂತರ ಬಲೆಯನ್ನು ಬಿಟ್ಟು ಚಿರತೆಯನ್ನು ರಕ್ಷಿಸಿದ್ದಾರೆ.

 ಚಿರತೆ ರಕ್ಷಣೆಗೆ ಒಂದು ಗಂಟೆ ಕಾರ್ಯಾಚರಣೆ

ಚಿರತೆ ರಕ್ಷಣೆಗೆ ಒಂದು ಗಂಟೆ ಕಾರ್ಯಾಚರಣೆ

ಚಿರತೆಯನ್ನು ರಕ್ಷಿಸಲು ಡೇರಿಂಗ್ ಟೀಮ್ ನಾಲ್ಕು ಸದಸ್ಯರು ಸುಮಾರು ಒಂದು ಗಂಟೆಗಳ ಕಾರ್ಯಾಚರಣೆ ನಡೆಸಿದ್ದಾರೆ. ಬುಟ್ಟಿ ಹಾಕಿ, ಬಲೆ ಬಿಟ್ಟು ಚಿರತೆಯನ್ನು ಮೇಲಕ್ಕೆ ಎತ್ತಿ, ಬೋನಿಗೆ ಸುರಕ್ಷಿತವಾಗಿ ಹಾಕಿದ್ದಾರೆ. ಇದಾದ ನಂತರ ಅರಣ್ಯ ಅಧಿಕಾರಿಗಳ ಸೂಚನೆಯಂತೆ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಬಿಟ್ಟಿದ್ದಾರೆ.

 ಚಿರತೆ ನೋಡಲು ಜನಜಂಗುಳಿ

ಚಿರತೆ ನೋಡಲು ಜನಜಂಗುಳಿ

ಗ್ರಾಮದ ವಸಂತ್ ನಾಯ್ಕರ ಮನೆಯ ಬಳಿ ಗ್ರಾಮಸ್ಥರು ಜಮಾವಣೆಗೊಂಡಿದ್ದರು. ಮನೆಯ ಮೇಲೆ ಹತ್ತಿ ಕಾರ್ಯಾಚರಣೆಯನ್ನು ಕೆಲವರು ನೋಡಿದರೆ, ಇನ್ನು ಕೆಲವರು ಬಾವಿಯ ಬಳಿಯೇ ಇದ್ದಿದ್ದರಿಂದ ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಚಿರತೆ ಮೇಲಕ್ಕೆ ಎತ್ತುವಾಗ ತಪ್ಪಿಸಿಕೊಂಡು ಮನೆಗಳ ಬಳಿ ನುಗ್ಗಬಹುದು ಎನ್ನುವ ಆತಂಕದಲ್ಲಿ ಗ್ರಾಮಸ್ಥರು ಮನೆಗಳ ಬಾಗಿಲನ್ನು ಹಾಕಿಕೊಂಡು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಿಮವಾಗಿ ಚಿರತೆ ರಕ್ಷಣೆ ಮಾಡಿ ಬೋನಿಗೆ ಹಾಕುತ್ತಿದ್ದಂತೆ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

 ಎಂಟನೇ ಚಿರತೆ ರಕ್ಷಣೆ ಮಾಡಿದ ಟೀಮ್

ಎಂಟನೇ ಚಿರತೆ ರಕ್ಷಣೆ ಮಾಡಿದ ಟೀಮ್

ಗ್ರಾಮದಲ್ಲಿ ಚಿರತೆಯನ್ನು ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡುವ ಮೂಲಕ ‘ಡೇರಿಂಗ್ ಟೀಮ್' ಸದಸ್ಯರು ಜಿಲ್ಲೆಯಲ್ಲಿ ಎಂಟನೇ ಚಿರತೆಯನ್ನು ರಕ್ಷಣೆ ಮಾಡಿದಂತಾಗಿದೆ. ಚಿರತೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ತಂಡದ ಸದಸ್ಯರಾದ ಅಶೋಕ್ ನಾಯ್ಕ, ಮಹೇಶ್ ನಾಯ್ಕ, ನಾಗರಾಜ್ ಶೇಟ್ ಹಾಗೂ ಪವನ್ ಸ್ಥಳಕ್ಕೆ ಆಗಮಿಸಿ ರಕ್ಷಣೆಗೆ ಮುಂದಾಗಿ ಯಶಸ್ವಿಯಾದರು. ವನ್ಯಜೀವಿ ರಕ್ಷಣೆ ಮಾಡುವುದು ನಮ್ಮ ಮೂಲ ಉದ್ದೇಶವಾಗಿದ್ದು, ಜಿಲ್ಲೆಯಲ್ಲಿ ಎಲ್ಲೇ ಕಾಡು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿದರೆ ನಮ್ಮ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡುತ್ತೇವೆ ಎಂದು ತಂಡದ ಅಶೋಕ್ ನಾಯ್ಕ ಹೇಳಿದರು.

English summary
The leopard which came from forest in search of hunting fell into well in the village of Burgi in kumata
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X