ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ತೌಕ್ತೆ' ಅವಾಂತರಕ್ಕೆ ನಡುಗಿದ ಕರಾವಳಿ: ಆತಂಕದಲ್ಲಿ ಉತ್ತರ ಕನ್ನಡ ತೀರದ ವಾಸಿಗಳು

|
Google Oneindia Kannada News

ಕಾರವಾರ, ಮೇ 15: ರಾಜ್ಯದ ಕರಾವಳಿಯಲ್ಲಿ ಶನಿವಾರ ತೌಕ್ತೆ ಚಂಡಮಾರುತದ ಪ್ರಭಾವ ಜೋರಾಗಿದ್ದು, ಉತ್ತರ ಕನ್ನಡದ ಕರಾವಳಿ ತಾಲೂಕುಗಳಲ್ಲಿ ಭಾರೀ ಗಾಳಿ, ಮಳೆಯಾಗಿದೆ. ಇದರ ನಡುವೆ ಹಲವೆಡೆ ಕಡಲ್ಕೊರೆತಗಳು ಉಂಟಾಗಿದ್ದು, ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ತೌಕ್ತೆ ಚಂಡಮಾರುತ ಹಾಗೂ ಅದರೊಟ್ಟಿಗೆ ಭಾರೀ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದ ಕಾರಣ ಕರಾವಳಿಯ ಕಡಲತೀರದ ನಿವಾಸಿಗಳಿಗೆ ಮುಂಜಾಗ್ರತೆ ವಹಿಸುವಂತೆ ಉತ್ತರ ಕನ್ನಡ ಜಿಲ್ಲಾಡಳಿತ ಅದಾಗಲೇ ಸೂಚನೆ ನೀಡಿತ್ತು.

ಅಲೆಗಳು ರೌದ್ರಾವತಾರ

ಅಲೆಗಳು ರೌದ್ರಾವತಾರ

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಉತ್ತರ ಕನ್ನಡದ ಕರಾವಳಿಯಾದ್ಯಂತ ಶನಿವಾರ ಭಾರೀ ಮಳೆಯಾಗಿದೆ. ಶುಕ್ರವಾರ ರಾತ್ರಿಯಿಂದಲೇ ಕೆಲವೆಡೆ ಮಳೆ ಸುರಿದಿದ್ದು, ಕೆಲವೆಡೆ ಗದ್ದೆಗಳಲ್ಲೆಲ್ಲ ನೀರು ನಿಂತು ನಷ್ಟವುಂಟಾಗಿದೆ. ಇನ್ನು ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಗಾಳಿ ರಭಸದಿಂದ ಬೀಸುತ್ತಿರುವ ಕಾರಣ ಅಲೆಗಳು ಕೂಡ ರೌದ್ರಾವತಾರ ತಾಳಿದ್ದು, ಕಡಲಂಚಿನ ಅನೇಕ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಡಲಂಚಿನ ಗ್ರಾಮಗಳ ಮನೆಗಳ ನಿವಾಸಿಗಳು ಸಾಮಾನು, ಸರಂಜಾಮು ಉಳಿಸಿಕೊಳ್ಳಲು, ಮನೆಯಿಂದ ನೀರು ಹೊರ ಹಾಕಲು ಶ್ರಮಪಡುತ್ತಿದ್ದ ದೃಶ್ಯಗಳು ಕಂಡುಬಂದಿವೆ.

ರಕ್ಕಸ ಗಾತ್ರದ ಅಲೆಗಳು

ರಕ್ಕಸ ಗಾತ್ರದ ಅಲೆಗಳು

ಭಟ್ಕಳ ತಾಲ್ಲೂಕಿನ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಲಿ ಸಮುದ್ರ ತೀರವನ್ನು ಡೇಂಜರ್ ಝೋನ್ ಎಂದು ಘೋಷಿಸಲಾಗಿದ್ದು, ಅಲ್ಲಿನ ಕಡಲತೀರದ ನಿವಾಸಿಗಳಿಗೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕರಿಗಳು ಸೂಚಿಸಿದ್ದಾರೆ. ಇನ್ನುಳಿದಂತೆ ಬಂದರ್, ಬೆಳಕೆ, ಸೇರಿದಂತೆ ಇತರೆಡೆ ಕಡಲಿನ ಅಬ್ಬರ ಜೋರಾಗಿದ್ದು, ಸಮುದ್ರ ಕೊರೆತ ಉಂಟಾಗಿದೆ. ಕರಿಕಲ್ ಭಾಗದಲ್ಲಿ ರಕ್ಕಸ ಗಾತ್ರದ ಅಲೆಗಳು ಗ್ರಾಮದೊಳಕ್ಕೆ ನುಗ್ಗಿವೆ. ಮುರುಡೇಶ್ವರ ಕಡಲತೀರದಲ್ಲಿ ಇಟ್ಟಿದ್ದ ಗೂಡಂಗಡಿಗಳಿಗೆ ಸಮುದ್ರದಲೆಗಳು ಅಪ್ಪಳಿಸಿವೆ.

ಇನ್ನು ಜಾಲಿಕೋಡಿ ಸಮುದ್ರ ತೀರದಲ್ಲಿ ಗುರುವಾರ ಲಂಗರು ಹಾಕಿದ್ದ ದೋಣಿಯನ್ನು ಸಮುದ್ರದ ಅಲೆಗಳಿಂದ ರಕ್ಷಣೆ ಮಾಡಲು ಹೋಗಿದ್ದ ಜಾಲಿಕೋಡಿ ನಿವಾಸಿ ಲಕ್ಷ್ಮಣ ನಾಯ್ಕ(60) ಅವರಿಗೆ ಅಲೆ ಅಪ್ಪಳಿಸಿ ಇನ್ನೊಂದು ದೋಣಿ ಬಡಿದು, ಎರಡು ದೋಣಿಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ರಾತ್ರಿ ಅಲೆಗಳ ಭೀಕರತೆ ಇನ್ನಷ್ಟು ಹೆಚ್ಚಾಗುವ ಆತಂಕ

ರಾತ್ರಿ ಅಲೆಗಳ ಭೀಕರತೆ ಇನ್ನಷ್ಟು ಹೆಚ್ಚಾಗುವ ಆತಂಕ

ಇನ್ನು ಹೊನ್ನಾವರ ತಾಲೂಕಿನ ಮಂಕಿ ಪಾವಿನಕುರ್ವಾ, ಅಪ್ಸರಕೊಂಡ ಭಾಗದ ನಿವಾಸಿಗಳ ಕಷ್ಟ ಹೇಳತೀರದಾಗಿ. ಸಮೀಪದ ಗ್ರಾಮಗಳಿಗೆ ಕಡಲ ಅಲೆಗಳು ನುಗ್ಗಿದ್ದು, ನಾಳೆ ಏನಾಗುತ್ತವೆಯೇನೋ ಎಂಬ ಆತಂಕ ಜನರಲ್ಲಿ ಎದುರಾಗಿದೆ. ಕುಮಟಾ ಫಿಶ್ ಮಾರ್ಕೆಟ್, ಚಿತ್ರರಂಜನ್ ಟಾಕೀಸ್, ವನ್ನಳ್ಳಿ, ಹೊಲನಗದ್ದೆ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ವನ್ನಳ್ಳಿ ಬೀಚ್ ರಸ್ತೆಯ ಮೇಲೆ ರಕ್ಕಸ ಗಾತ್ರದ ಅಲೆಗಳು ಬಡಿಯುತ್ತಿದ್ದು, ಸಮೀಪದ ನಿವಾಸಿಗಳು ಮನೆಯಿಂದ ಹೊರಬಂದು ಪಟ್ಟಣ ಪ್ರದೇಶದ ಸಂಬಂಧಿಗಳ ಮನೆ ಸೇರಲು ಕೆಲವರು ಮುಂದಾಗಿದ್ದಾರೆ. ರಾತ್ರಿ ಅಲೆಗಳ ಭೀಕರತೆ ಇನ್ನಷ್ಟು ಹೆಚ್ಚಾಗುವ ಕಾರಣ ಕೆಲವರು ಮನೆಗಳ ಸಾಮಾನು, ಸರಂಜಾಮುಗಳ ಕಥೆ ಏನು ಎಂದು ದಿಕ್ಕು ತೋಚದೆ ಕುಳಿತುಕೊಂಡಿದ್ದಾರೆ.

ಕೊರೊನಾ ಮಧ್ಯೆ ಚಂಡಮಾರುತ ಭೀತಿ

ಕೊರೊನಾ ಮಧ್ಯೆ ಚಂಡಮಾರುತ ಭೀತಿ

ಗೋಕರ್ಣದ ದುಬ್ಬನಶಶಿ, ಮೇನ್ ಬೀಚ್ ಪ್ರದೇಶಗಳಲ್ಲೂ ಅಲೆಗಳ ಅಬ್ಬರ ಜೋರಾಗಿದೆ. ಅಂಕೋಲಾದ ಹಾರವಾಡದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಸಮೀಪದ ಗಾಳಿ ಮರಗಳು, ಕಲ್ಲುಗಳು ಸಮುದ್ರದ ಪಾಲಾಗುತ್ತಿವೆ. ಕಾರವಾರದ ಟ್ಯಾಗೋರ್ ಕಡಲತೀರದಲ್ಲಂತೂ ಅಲೆಗಳು ಮಕ್ಕಳ ಪಾರ್ಕ್ ವರೆಗೆ ಬಡಿದಿದ್ದು, ಇದರಿಂದಾಗಿ ಇನ್ನಷ್ಟು ಆತಂಕ ಎದುರಾಗಿದೆ. ದೇವಬಾಗದಲ್ಲೂ ಸಮುದ್ರ ಮಟ್ಟ ಹೆಚ್ಚಾಗಿ ದಡಕ್ಕೆ ಅಪ್ಪಳಿಸುತ್ತಿವೆ.

ಒಟ್ಟಾರೆಯಾಗಿ ಕೊರೊನಾ ಆತಂಕದಲ್ಲಿ ದಿನ ಕಳೆಯುತ್ತಿದ್ದ ಜನರಿಗೆ ಇದೀಗ ತೌಕ್ತೆಯ ಆತಂಕ ಭೀತಿ ಹುಟ್ಟಿಸಿದೆ. ಸದ್ಯ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಈ ಭೀತಿ ಇನ್ನಷ್ಟು ಹೆಚ್ಚಾಗಿದ್ದು, ಕರಾವಳಿ ತೀರದ ಜನರು ಜಾಗೃತಿ ವಹಿಸುವ ಅನಿವಾರ್ಯತೆ ಇದೆ.

Recommended Video

ಪಾಕಿಸ್ತಾನ ಲೀಗನ್ನು (PSL) IPL ಗೆ ಹೋಲಿಸಬೇಡಿ | Oneindia Kannada

English summary
Cyclone Tauktae hit the state's coast on Saturday, with heavy wind and rain in the Uttara Kannada coastal taluks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X