• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಸಕಿ ರೂಪಾಲಿಗೆ ಸಿಗಲಿದೆಯಾ ಸಂಕ್ರಾಂತಿ ಗಿಫ್ಟ್?

By ಕಾರವಾರ ಪ್ರತಿನಿಧಿ
|

ಕಾರವಾರ, ಜನವರಿ 12: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಜನವರಿ 13ರಂದು ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ನಡುವೆ ಮಹಿಳಾ ಕೋಟಾದಲ್ಲಿರುವ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಸಂಪುಟದಿಂದ ಕೈ ಬಿಟ್ಟು, ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸಚಿವ ಸ್ಥಾನ ಕೊಡುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ.

ಕಳೆದ ನಾಲ್ಕೈದು ತಿಂಗಳಿನಿಂದ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ನಡೆಯುತ್ತಿತ್ತು. ಅಂತಿಮವಾಗಿ ಹೈಕಮಾಂಡ್ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿದ್ದು, ಒಟ್ಟು 7 ಶಾಸಕರನ್ನು ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಂಪುಟ ವಿಸ್ತರಣೆ: 5 ಹಾಲೀ ಸಚಿವರಿಗೆ ಶುರುವಾಯಿತು ಢವಢವ..

ಏಳು ಜನರಲ್ಲಿ ವಲಸಿಗರಾದ ಮುನಿರತ್ನ, ಆರ್. ಶಂಕರ್ ಹಾಗೂ ಎಂಟಿಬಿ ನಾಗರಾಜ್‌ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಇನ್ನು ಮೂಲ ಬಿಜೆಪಿಗರಾದ ಅರವಿಂದ್ ಲಿಂಬಾವಳಿ, ಹಾಲಪ್ಪ ಆಚಾರ್, ಉಮೇಶ್ ಕತ್ತಿ ಹಾಗೂ ರೂಪಾಲಿ ನಾಯ್ಕ ಅಥವಾ ಹಿರಿಯೂರು ಶಾಸಕಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.

ಸಚಿವ ಸಂಪುಟ ವಿಸ್ತರಣೆ: ಯಾರು? ಎಲ್ಲಿ? ಏನಂದ್ರು?

ಹಾಲಿ ಸಚಿವರಾಗಿರುವ ಶಶಿಕಲಾ ಜೊಲ್ಲೆ, ಸೀಮಂತ್ ಪಾಟೀಲ್ ಹಾಗೂ ನಾಗೇಶ್ ಅವರನ್ನು ಕೈ ಬಿಡುವ ಚಿಂತನೆ ನಡೆದಿದೆ. ಮಹಿಳಾ ಕೋಟಾದಲ್ಲಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆಯವರನ್ನು ಈ ಬಾರಿ ಕೈ ಬಿಡುವುದು ಬಹುತೇಕ ಖಚಿತ ಎನ್ನಲಾಗಿದ್ದು, ಸರ್ಕಾರದ ಏಕೈಕ ಮಹಿಳಾ ಸಚಿವರಾಗಿದ್ದ ಜೊಲ್ಲೆ ಬದಲಿಗೆ ಮತ್ತೋರ್ವ ಮಹಿಳಾ ಶಾಸಕಿಗೆ ಆದ್ಯತೆ ಕೊಡುವ ನಿಟ್ಟಿನಲ್ಲಿ ರೂಪಾಲಿ ನಾಯ್ಕ ಅವರಿಗೆ ಸಚಿವ ಸ್ಥಾನ ಕೊಡುವ ಚಿಂತನೆ ಯಡಿಯೂರಪ್ಪ ಅವರದ್ದಾಗಿದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ?, ಪುನಾರಚನೆ?; ಗುಟ್ಟು ಬಿಟ್ಟುಕೊಡದ ಯಡಿಯೂರಪ್ಪ

ರೂಪಾಲಿ ನಾಯ್ಕ ಅವರಿಗೆ ಮಹಿಳಾ ಹಾಗೂ ಹಿಂದುಳಿದ ವರ್ಗದ ಕೋಟಾದಲ್ಲಿ ಸ್ಥಾನ ನೀಡಲು ಯೋಚಿಸಿದ್ದು, ಸಂಘಟನೆಯಲ್ಲಿ ಚುರುಕಾಗಿರುವ ಅವರಿಗೆ ಸಚಿವ ಸ್ಥಾನ ನೀಡಿ ರಾಜ್ಯದಲ್ಲಿ ಮಹಿಳೆಯರನ್ನು ಪಕ್ಷದಲ್ಲಿ ಸಂಘಟಿಸಲು ಯಡಿಯೂರಪ್ಪ ಹಾಗೂ ಹೈಕಮಾಂಡ್ ಚಿಂತನೆ ನಡೆಸಿದೆ. ಅಲ್ಲದೇ ಕರಾವಳಿ ಭಾಗದಲ್ಲಿ ಪಕ್ಷ ಸಾಕಷ್ಟು ಬಲಗೊಂಡಿರುವ ಹಿನ್ನಲೆಯಲ್ಲಿ ಕರಾವಳಿ ಭಾಗಕ್ಕೆ ಆದ್ಯತೆ ಕೊಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಇನ್ನು ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಹೆಸರು ಸಹ ಕೇಳಿ ಬಂದಿದೆಯಾದರೂ ಅವರ ಪತಿ ಇತ್ತೀಚಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿದ್ದರಿಂದ ಅವರಿಗೆ ಸಚಿವ ಸ್ಥಾನ ಸಿಗುವುದು ಕಷ್ಟ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಹೀಗಾಗಿ ಶಾಸಕಿ ರೂಪಾಲಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಈ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರದಿಂದ ಸಂಕ್ರಾಂತಿಯ ಗಿಫ್ಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.

ಸ್ಥಾನ ಸಿಕ್ಕರೆ ನಿಭಾಯಿಸುವೆ; "ನನಗೆ ಒಂದೊಮ್ಮೆ ಸಚಿವ ಸ್ಥಾನ ನೀಡಿದರೆ ಪಕ್ಷ ಕೊಡುವ ಜವಬ್ದಾರಿಯನ್ನು ನಿಭಾಯಿಸುವೆ" ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

"ಈವರೆಗೂ ನನಗೆ ಸಚಿವ ಸ್ಥಾನ ಕೊಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಕೂಡ ಪ್ರಯತ್ನ ಮಾಡಿಲ್ಲ. ಪಕ್ಷದ ಯಾವ ನಾಯಕರೂ ನನಗೆ ಕರೆ ಮಾಡಿಲ್ಲ. ಪಕ್ಷ ಒಂದೊಮ್ಮೆ ನನ್ನನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿ ಜವಾಬ್ದಾರಿ ನೀಡಿದರೆ ಉತ್ತಮ ಕೆಲಸ ಮಾಡುವ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕಾರ್ಯ ಮಾಡುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
Chief minister B. S. Yediyurappa cabinet may expand on January 13, 2020. Will BJP MLA form Karwar-Ankola seat Rupali Naik may get minister post under women's quota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X