ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬೇಕರಿ ಹೊಕ್ಕಿ ಬದುಕಬೇಕುರೀ' ಅಂದನಾ ಸಿಂಗರ್ ಹನುಮಂತು?

|
Google Oneindia Kannada News

ಕಾರವಾರ, ಜನವರಿ 9: ಝೀ ಕನ್ನಡ ವಾಹಿನಿಯ ಸರಿಗಮಪ ಸೀಸನ್-15ರ ರನ್ನರ್ ಅಪ್, ಹಾವೇರಿ ಜಿಲ್ಲೆ ಮೂಲದ ಹನುಮಂತನ ಕುರಿತು ಸದ್ಯ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಹನುಮಂತನ ಚರ್ಚೆಗೆ ಕಾರಣವಾಗಿರುವುದು ಪತ್ರಿಕೆಯೊಂದರ ತುಣುಕು. ಹಾಗಿದ್ದರೆ ಆ ಪತ್ರಿಕೆಯಲ್ಲಿ ಏನಿದೆ? ಅಷ್ಟಕ್ಕೂ ನಡೆದಿದ್ದೇನು? ಹನುಮಂತನ ಬಗ್ಗೆ ಮತ್ತೆ ಚರ್ಚೆ ಹುಟ್ಟಿಕೊಂಡಿದ್ದಾದರೂ ಯಾಕೆ ಎಂಬ ಬಗ್ಗೆ ಮುಂದೆ ಓದೋಣ ಬನ್ನಿ...

ಹನುಮಂತ, ಬಹುಶಃ ಟಿವಿ ನೋಡದಿದ್ದರೂ, ಮೊಬೈಲ್ ಬಳಸುವ ಪ್ರತಿಯೊಬ್ಬರೂ ಈತನ ಚಹರೆ ನೋಡಿಯೇ ಇರ್ತಾರೆ. ಆತನ ಮುಗ್ಧ ಸ್ವಭಾವ, ಹಳ್ಳಿಯ ಭಾಷೆ, ಕುರಿಗಾಹಿ ವೇಷ, ಆತನ ಹಾಡುಗಾರಿಕೆ, ಜಾನಪದ ಗಾಯನಗಳಿಂದಲೇ ಪ್ರಸಿದ್ಧಿಯಾಗಿರುವ ಹನುಮಂತ, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ-ಬಡ್ನಿ ಮೂಲದವನು. ಹೆಚ್ಚೇನು ಓದು- ಬರಹ ಕಲಿಯದ ಹನುಮಂತ, ಜಾನಪದ ಹಾಡುಗಳನ್ನ ಹೇಳುತ್ತ ಕುರಿ ಮೇಯಿಸುತ್ತ ತನ್ನಷ್ಟಕ್ಕೆ ತಾನಿದ್ದ. ಆದರೆ, ಹನುಮಂತನ ಬದುಕು ಬದಲಾಯಿಸಿದ್ದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾಮಾಜಿಕವಾಗಿಯೂ ಹನುಮಂತನಿಗೂ ಇನ್ನಷ್ಟು ಪ್ರಚಾರ, ಕೀರ್ತಿ, ಪ್ರಸಿದ್ಧತೆ ತಂದುಕೊಟ್ಟಿದ್ದು ಝೀ ಕನ್ನಡದ "ಸರಿಗಮಪ ರಿಯಾಲಿಟಿ ಶೋ.'

ಒಂದು ಜಿಲ್ಲೆ, ಒಂದು ಉತ್ಪನ್ನ: ಉತ್ತರ ಕನ್ನಡದ ಸಾಂಬಾರು ಪದಾರ್ಥಕ್ಕಿದೆ ಜಗತ್ತಿನಾದ್ಯಂತ ಬೇಡಿಕೆಒಂದು ಜಿಲ್ಲೆ, ಒಂದು ಉತ್ಪನ್ನ: ಉತ್ತರ ಕನ್ನಡದ ಸಾಂಬಾರು ಪದಾರ್ಥಕ್ಕಿದೆ ಜಗತ್ತಿನಾದ್ಯಂತ ಬೇಡಿಕೆ

ಹನುಮಂತನಿಗೆ ಪ್ರಸಿದ್ಧಿ ತಂದುಕೊಟ್ಟ ಶೋ

ಹನುಮಂತನಿಗೆ ಪ್ರಸಿದ್ಧಿ ತಂದುಕೊಟ್ಟ ಶೋ

ಈ ಶೋನಲ್ಲಿ ಹನುಮಂತ ಕಾಲಿಟ್ಟಿದ್ದೇ ತಡ, ಶೋ ಇನ್ನಷ್ಟು ಹಿಟ್ ಆಗಲು ಆರಂಭಿಸಿತ್ತು. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಹನುಮಂತನ ಹಾಡುಗಳು ವೈರಲ್ ಆಗ ತೊಡಗಿದವು. ಇಷ್ಟಕ್ಕೂ ಹೀಗೆ ವೈರಲ್ ಆಗುವುದಕ್ಕೆ ಕಾರಣ ಒಬ್ಬ ಕುರಿಗಾಹಿ ಯುವಕನಲ್ಲಿ ಪ್ರತಿಭೆ ಇದೆ, ಹಾಡುಗಾರಿಕೆ ಇದೆ ಎಂಬ ವಿಚಾರ. ಹನುಮಂತನಿಗೆ ವಾಹಿನಿಯಲ್ಲಿ ಸಾಕಷ್ಟು ಪ್ರಚಾರ ಕೊಟ್ಟಿದ್ದಲ್ಲದೇ, ಶೋನ ಟಿಆರ್ ಪಿಗಾಗಿ ಕೊನೆಯವರೆಗೂ ಆತನನ್ನು ಉಳಿಸಿಕೊಂಡರು. ಸೀಸನ್ 15ರಲ್ಲಿ ಹನುಮಂತನೇ ವಿನ್ನರ್ ಎಂದು ಜನ ಅಂದುಕೊಂಡಿರುವ ಹೊತ್ತಿಗೆ ರನ್ನರ್ ಅಪ್ ಪ್ರಶಸ್ತಿ ಕೊಟ್ಟು ಸಮಾಧಾನಗೊಳಿಸಿದರು. ಇಷ್ಟಕ್ಕೇ ಹನುಮಂತನ ವಿಚಾರ ಮುಗಿದಿರಲಿಲ್ಲ. ಶೋ ಮುಗಿಯುವಷ್ಟರಲ್ಲಿ ಹನುಮಂತ ಬ್ರಾಂಡ್ ಆಗಿಬಿಟ್ಟಿದ್ದ. ಆತ ಹೋದಲ್ಲೆಲ್ಲ ಜನ ಮುಗಿಬಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಹೀಗೆ ಪ್ರಸಿದ್ಧಿ ಪಡೆದರೂ ಹನುಮಂತ ಈಗಲೂ ಸಾದಾ ಬಟ್ಟೆ ಧರಿಸಿ, ಸಾಮಾನ್ಯಂತೆಯೇ ಎಲ್ಲೆಡೆ ತಿರುಗಾಡುತ್ತಿರುತ್ತಾನೆ.

ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದರು

ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದರು

ಹೀಗೆ ಜ.1ಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಹನುಮಂತ ಭೇಟಿ ನೀಡಿದ್ದ. ಅಲ್ಲಿಂದ ವಾಪಸ್ಸಾಗುವಾಗ ಕುಮಟಾ ಪಟ್ಟಣದ ವರ್ಷಾ ಬೇಕರಿಯಲ್ಲಿ ಐಸ್ ಕ್ರೀಂ ಸವಿದು, ಕೇಕ್ ತಿಂದಿದ್ದಾನೆ. ಹನುಮಂತನ ಗುರುತಿಸಿದ ಬೇಕರಿಯ ಮಾಲಕಿ ತಾರಾ ಗೌಡ, ಹೀಗೆ ಕುಶಲೋಪರಿ ವಿಚಾರಿಸಿದ್ದಾರೆ. ಹನುಮಂತ ಕೂಡ ತನ್ನ ಮುಗ್ಧ ದನಿಯಲ್ಲೇ ಮಾತಾಡಿದ್ದಾನೆ.

ಬೇಕರಿಯಲ್ಲಿ ಹನುಮಂತ ಹೇಳಿದ್ದೇನು?

ಬೇಕರಿಯಲ್ಲಿ ಹನುಮಂತ ಹೇಳಿದ್ದೇನು?

ಹಾಗಿದ್ದರೆ ಅಲ್ಲಿ ಏನೇನು ನಡೀತು? ಎಂಬ ಬಗ್ಗೆ ಖುದ್ದು ತಾರಾ ಗೌಡ ಅವರೇ ಹೇಳಿಕೆ ನೀಡಿದ್ದಾರೆ. "ಹನುಮಂತ ನಮ್ಮ ಬೇಕರಿಗೆ ಬಂದು ಐಸ್ ಕ್ರೀಮ್ ತಿಂದಿದ್ದ. ಹೀಗೆ ಮಾತಾಡ್ತಾ, "ಸರಿಗಮಪ'ದಲ್ಲಿ ನಿನಗೆ ಬೆಂಗಳೂರಲ್ಲಿ ಮನೆ ಕೊಟ್ಟಿದ್ರು. ನೀನೀಗ ಬೆಂಗಳೂರಲ್ಲೇ ಇದ್ದೀಯಾ ಎಂದು ಕೇಳಿದ್ದಕ್ಕೆ "ಇಲ್ಲ ಮೇಡಮ್, ಇನ್ನು ರಿಜಿಸ್ಟ್ರೇಶನ್ ಮಾಡ್ಕೊಟ್ಟಿಲ್ಲ. ಅವ್ರು ದುಬೈನಲ್ಲಿದ್ದಾರೆ' ಎಂದ. ಇದಕ್ಕೆ ನಮಗೂ ಸ್ಬಲ್ಪ ಬೇಜಾರು ಎನಿಸಿತು. ಕಾರ್ಯಕ್ರಮ ನಡೆದು ವರ್ಷ ಆಗಿದೆಯೇನೋ. ತುಂಬಾ ಬಡ ಕುಟುಂಬದಿಂದ ಬಂದವನು. ಬೇಗ ಮನೆ ಕೊಡ್ಬೇಕಿತ್ತು ಎಂದು ನಾವು ಕೂಡ ಬೇಜಾರು ಮಾಡ್ಕೊಂಡ್ವಿ. ಅಲ್ಲದೇ, ಬೇಗ ಮನೆಯಾಗುತ್ತೆ ಅಂತ ನಾವು ಕೂಡ ಅವನಿಗೆ ಧೈರ್ಯ ಹೇಳಿದೆವು. ಅಂದು ಬೇಕರಿಯ ಬಳಿ ತುಂಬಾ ಜನ ಇದ್ರು. ಅದರಲ್ಲಿ ಯಾರೋ ಪತ್ರಿಕೆಯವರಿಗೆ ಹೇಳಿರಬಹುದು. ಶುಕ್ರವಾರದ ಪತ್ರಿಕೆಯಲ್ಲಿ ಇನ್ನೂ ಎರಡು ರಿಯಾಲಿಟಿ ಶೋಗೆ ಹೋದವರ ಬಗ್ಗೆಯೂ ಉಲ್ಲೇಖಿಸಿ, ಶೋಗಳಿಗೆ ಹೋದರೆ ಬಂಡಲ್ ಎಂದೆಲ್ಲ ಬಂದಿದೆ. ಈ ಬಗ್ಗೆ ಬೇಜಾರಿದೆ. ಹಾಗೇನಾದರೂ ನಡೆದಿದ್ದಲ್ಲಿ ಶೀಘ್ರವೇ ಅವರಿಗೆ ಬರುವ ಹಣ, ಮನೆ ಸಿಗಲಿ' ಎಂದಿದ್ದಾರೆ.

ಹಾಗಿದ್ದರೆ ಪತ್ರಿಕೆಯಲ್ಲಿ ಬಂದಿದ್ದೇನು?

ಹಾಗಿದ್ದರೆ ಪತ್ರಿಕೆಯಲ್ಲಿ ಬಂದಿದ್ದೇನು?

ಇನ್ನು, ಇವು ಹನುಮಂತನ ಖುದ್ದು ಮಾತನಾಡಿಸಿದವರ ಹೇಳಿಕೆಯಾದರೆ, ಪತ್ರಿಕೆಯಲ್ಲಿ ಹನುಮಂತನೇ ಪತ್ರಿಕೆಯವರೊಂದಿಗೆ ತನ್ನ ಭಾವನೆ ತೋಡಿಕೊಂಡಿದ್ದಾನೆ!? ಎಂಬ ಬಗ್ಗೆ ಬರೆಯಲಾಗಿದೆ. ಸ್ಥಳೀಯ "ಕರಾವಳಿ ಮುಂಜಾವು' ಪತ್ರಿಕೆಯಲ್ಲಿ, "ಬೇಕರಿ ಹೊಕ್ಕಿ ಬದುಕಬೇಕುರೀ ಎಂದ ಸಿಂಗರ್ ಹನುಮಂತು' ಎಂಬ ಶೀರ್ಷಿಕೆಯೊಂದಿಗೆ ಹಾಗೂ "ರಿಯಾಲಿಟಿ ಶೋಗಳು ಪಕ್ಕಾ ಬಂಡಲ್' ಎಂಬ ಬಾಕ್ಸ್ ಐಟಮ್ ನೊಂದಿಗೆ ಸುದ್ದಿ ಪ್ರಕಟವಾಗಿದೆ. "ಜೀವನ ಮೂರಾಬಟ್ಟೆ ರೀ. ಜೀ ಕನ್ನಡ ವಾಹಿನಿ ಉತ್ತಮ ವೇದಿಕೆ ಕೊಟ್ಟು, ನಾಡಿಗೆ ನನ್ನ ಪರಿಚಯ ಮಾಡಿಸಿತು. ಹಾಗೆಯೇ ಬೆಂಗಳೂರಲ್ಲಿ ಹೊಸ ಫ್ಲಾಟ್ ನೀಡುತ್ತೇವೆ ಎಂದು ಭರವಸೆ ನೀಡಿದರು. ಆದರೆ, ವಾಸ್ತವವಾಗಿ ಏನೇನೂ ಇಲ್ಲಾರೀ. ನಾನು ಮೊದಲಿನ ತರ ಝೀರೋ ಆಗಿಯೇ ಇದ್ದೇನೆ' ಎಂದು ಹನುಮಂತ ಬೇಸರದಿಂದ ಹೇಳಿದ್ದಾರೆ.

ನನ್ನ ಕಲೆ ಜೀವಂತವಾಗಿರಲಿ

ನನ್ನ ಕಲೆ ಜೀವಂತವಾಗಿರಲಿ

"ಜೀ ಕನ್ನಡ ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೊಸ ಅನುಭವ. ರಾಜ್ಯದ ಜನ ನನ್ನನ್ನು ಗುರುತಿಸಿದ್ದಾರೆ. ಕಲೆಗೆ ತಕ್ಕ ಪ್ರೋತ್ಸಾಹ ಸಿಕ್ಕಿತು. ಆದರೆ, ಬೆಲೆ ಮಾತ್ರ ಸಿಗಲಿಲ್ಲ. ರನ್ನರ್ ಆಪ್ ಆಗಿದ್ದ ನನಗೆ ಬೆಂಗಳೂರಲ್ಲಿ ಫ್ಲಾಟ್ ಕೊಡಿಸುತ್ತೇವೆ ಎಂದರು. ಆದರೆ, ಇದುವರೆಗೂ ನೋಂದಣಿ ಕೆಲಸವೇ ಆಗಿಲ್ಲ. ಅವೆಲ್ಲವೂ ಕ್ಯಾಮೆರಾ ಎದುರು ಹೇಳುವ ಆಶ್ವಾಸನೆ ಎಂದು ಅನಿಸುತ್ತಿದೆ. ಪ್ರಚಾರಕ್ಕಾಗಿ ಏನೇನೂ ಹೇಳಿ ನಮ್ಮಂತ ಕುರಿಗಾಹಿಗಳ ಬದುಕಲ್ಲಿ ಆಸೆ ಹುಟ್ಟಿಸುತ್ತಾರೆ. ಅದರ ಬದಲು ಕಲೆ ಮೆಚ್ಚಿ ಕಳುಹಿಸಿದರೆ ನಾವು ಯಾವುದಕ್ಕೂ ಆಸೆ ಪಡದೆ ಮೊದಲಿನಂತೆ ಬದುಕುತ್ತೇವೆ. ಮೇಡಂ.. ನನಗೆ ಹಾಡುವುದು ಇಷ್ಟ. ನಿಮ್ಮ ಊರು ಅಥವಾ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶ ಇದ್ದರೆ ಮಾಹಿತಿ ನೀಡಿ, ನಾನು ಬಂದು ಸಂಗೀತ ಕಾರ್ಯಕ್ರಮ ನೀಡಲು ಸಿದ್ಧ. ಹಣದ ಮುಖ ನೋಡಿ ಬರುವ ಮನಸ್ಸಿಲ್ಲ. ಬದಲಾಗಿ ನನ್ನ ಕಲೆ ಜೀವಂತವಾಗಿರಲಿ ಎನ್ನುವ ಕಾರಣಕ್ಕೆ' ಎಂದು ವಿಶ್ವಾಸದ ನೋಟ ಬೀರಿ ಹೇಳಿದ್ದಾರೆ ಎಂದು ಸುದ್ದಿ ಪ್ರಕಟವಾಗಿದೆ. ಈ ಸುದ್ದಿಯ ಪತ್ರಿಕಾ ತುಣುಕು ಸಾಕಷ್ಟು ವೈರಲ್ ಆಗಿದ್ದು, ಅನೇಕರು ರಿಯಾಲಿಟಿ ಶೋಗಳ ಬಗ್ಗೆ ಕಿಡಿಕಾರಿದರೆ, ಇನ್ನಷ್ಟು ಮಂದಿ ಸುದ್ದಿ ಶುದ್ಧ ಸುಳ್ಳು ಎಂದು ವರದಿಯ ಬಗ್ಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದರು.

ಹನುಮಂತನ ಸ್ಪಷ್ಟನೆ ಏನು?

ಹನುಮಂತನ ಸ್ಪಷ್ಟನೆ ಏನು?

ಈ ನಡುವೆ ಇದು ಝೀ ಕನ್ನಡ ಹಾಗೂ ಹನುಮಂತನ ಕಿವಿಗೂ ಬಿದ್ದು, ಝೀ ಕನ್ನಡ ಹನುಮಂತನಿಂದಲೇ ಸ್ಪಷ್ಟನೆ ಕೊಡಿಸಿದೆ. "ನಾನು ಕುಮಟಾಕ್ಕೆ ಹೋಗಿದ್ದು ನಿಜ, ನನ್ನ ಜೊತೆ ಅಣ್ಣ ಸಹ ಇದ್ದರು. ಪತ್ರಿಕೆಯಲ್ಲಿ ಬಂದಂತೆ ನಾನು ಏನೂ ಹೇಳಿಲ್ಲ. ಜೀ ಕನ್ನಡ ಅನ್ನ ಕೊಟ್ಟು ಹೆಸರು ಕೊಟ್ಟಿದೆ. ನನಗೆ ಪ್ಲಾಟ್ ಕೊಡದೇ ಇರೋದು ನಿಜ. ಆದರೆ ಪ್ಲಾಟ್ ಬದಲು ಅದೇ ಮೌಲ್ಯದ 21 ಲಕ್ಷ ರೂಪಾಯಿ ನೀಡಿದ್ದಾರೆ‌. ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬಂದಿದ್ದು ಕೇಳಿ ನಂಗೆ ಬಾಳ ಬೇಜಾರಾಗಿದೆ. ನಾನ್ಯಾಕೆ ಹಾಗೆಲ್ಲ ಹೇಳಲಿರೀ.. ಈ ತರ ಯಾಕೆ ಬರೆದಿದ್ದಾರೆ ಅಂತ ನಂಗೆ ಗೊತ್ತಿಲ್ಲ. ಪತ್ರಿಕೆಯಲ್ಲಿ ಬಂದ ಸುದ್ದಿ ಎಲ್ಲಾ ಸುಳ್ಳೈತ್ರಿ. ನಿಜ ಇಲ್ರಿ, ಅದಕ್ಕೆ ನಾನೇ ವೀಡಿಯೋ ಮಾಡಿ ಬಿಟ್ಟೀನ್ರಿ' ಎಂದಿದ್ದಾರೆ.

ರಿಯಾಲಿಟಿ ಶೋಗಳು ಪಕ್ಕಾ ಬಂಡಲ್?

ರಿಯಾಲಿಟಿ ಶೋಗಳು ಪಕ್ಕಾ ಬಂಡಲ್?

ಇದು ಹನುಮಂತನ ವಿಚಾರವಾದರೆ, ಪತ್ರಿಕೆಯ ಬಾಕ್ಸ್ ಐಟಮ್ ನಲ್ಲಿ, "ರಿಯಾಲಿಟಿ ಶೋಗಳು ಪಕ್ಕಾ ಬಂಡಲ್' ಎಂಬ ಶೀರ್ಷಿಕೆಯಲ್ಲಿ, 'ಸದ್ಯ ಚಾಲ್ತಿಯಲ್ಲಿರುವ ಎಲ್ಲಾ ವಾಹಿನಿಗಳ ರಿಯಾಲಿಟಿ ಶೋಗಳು ಬಂಡಲ್ ಎಂಬುದು ಈಗ ಜಗಜ್ಜಾಹೀರು. ಎರಡು ವರ್ಷಗಳ ಹಿಂದೆ ಕನ್ನಡದ ಕೋಟ್ಯಾಧಿಪತಿ ಶೋಗೆ ಪಾಲ್ಗೊಂಡಿದ್ದ ಹೊನ್ನಾವರದ ಮೀನುಗಾರರ ಮಹಿಳೆ ಲಕ್ಷಗಟ್ಟಲೆ ಗಳಿಸಿದ್ದಳು. ಆದರೆ, ಅದು ಕೇವಲ ಟಿವಿ ವೀಕ್ಷಕರ ಕಣ್ಣಿಗೆ ಮಾತ್ರ. ದುರಾದೃಷ್ಟವೆಂದರೆ ನಿಮಗೆ ಫೋನ್ ಮಾಡಿ ಹೇಳುತ್ತೇವೆ ಎಂದು ಬರಿಗೈಯಲ್ಲಿ ಕಳುಹಿಸಿದ್ದರು.

ಪಾರಿತೋಷಕವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕು

ಪಾರಿತೋಷಕವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕು

ಇತ್ತೀಚೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ರಿಯಾಲಿಟಿ ಶೋಗೆ ಹೊನ್ನಾವರ ಮೂಲದ ಮತ್ತೋರ್ವ ಯುವತಿ ಪಾಲ್ಗೊಂಡಿದ್ದಳು. ಆದರೆ, ಆಕೆ ಹೇಳುವ ಪ್ರಕಾರ ನೀನು ಕೇವಲ ಪಾಲ್ಗೊಳ್ಳುವವಳು, ಗೆಲ್ಲಬಾರದು. ಗೆಲ್ಲುವವರು ಬೇರೆಯವರು ಇದ್ದಾರೆ ಎಂದು ಸೂಚನೆ ನೀಡಿದ್ದರು. ಜೊತೆಗೆ ಜನರ ಮನಕಲಕುವ ರೀತಿಯಲ್ಲಿ ಹೀಗೆಯೇ ವರ್ತಿಸಬೇಕು. ಮಾತನಾಡಬೇಕು. ಕಣ್ಣೀರು ಹಾಕಬೇಕು ಎಂದು ಮೊದಲೇ ನಿರೂಪಿಸಿಕೊಂಡಿದ್ದ ಸ್ಕ್ರೀನ್ ಪ್ಲೇ ಹೇಳಿದ್ದರು' ಎಂಬುದಾಗಿ ಪ್ರಕಟವಾಗಿದೆ. ಜೊತೆಗೆ 'ಇಲ್ಲಿಂದ ಬೆಂಗಳೂರಿಗೆ ಹೋಗಿ ಬಂದ ಖರ್ಚು ವೆಚ್ಚ ಕೂಡ ನಮ್ಮದೇ. ಜೊತೆಗೆ ವಿಜೇತರಿಗೆ ನೀಡುವ ಪಾರಿತೋಷಕವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕು ಎಂದು ಗದರಿಸುತ್ತಾರೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ' ಎಂದು ಕೂಡ ವರದಿಯಲ್ಲಿದೆ.

ವರದಿ ಸುಳ್ಳು ಎಂದ ಸ್ಪರ್ಧಿಗಳು

ವರದಿ ಸುಳ್ಳು ಎಂದ ಸ್ಪರ್ಧಿಗಳು

ಈಗ ಈ ಎಲ್ಲಾ ಸ್ಪರ್ಧಿಗಳು/ ವಿಜೇತರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದು, ಪತ್ರಿಕೆಯಲ್ಲಿ ಬಂದಿರುವ ವಿಚಾರವನ್ನು ತಳ್ಳಿಹಾಕಿದ್ದಾರೆ. "ನಮಗೆ ಪತ್ರಿಕೆಯಲ್ಲಿ ಬಂದ ರೀತಿ ವಾಹಿನಿಯವರು ನಡೆಸಿಕೊಂಡಿಲ್ಲ. ಗೆದ್ದ ಹಣವನ್ನು, ಊರಿಂದ ಹೋಗಿ ಬರುವ ವಾಹನದ ಚಾರ್ಜ್, ಊಟ- ತಿಂಡಿ, ರೂಮು ಬಾಡಿಗೆ ಎಲ್ಲವನ್ನೂ ಕೊಟ್ಟಿದ್ದರು' ಎಂದು ಹೇಳಿಕೊಂಡಿದ್ದಾರೆ.

ಪತ್ರಕರ್ತನಿಗೆ ಜೀವ ಬೆದರಿಕೆ ಕರೆ?

ಪತ್ರಕರ್ತನಿಗೆ ಜೀವ ಬೆದರಿಕೆ ಕರೆ?

ಇಷ್ಟೆಲ್ಲ ನಡೆದ ಬಳಿಕ ಸುದ್ದಿ ಬರೆದ ಪತ್ರಕರ್ತ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವರದಿಯ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. "ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡವರ ದುರಾದೃಷ್ಟ ನೆನೆದು ಬೇಸರ ಆಗ್ತಿದೆ. ಅನ್ಯಾಯ ಆಗಿದೆ ಎಂದು ತಿಳಿದರೂ ಬಲವಂತಕ್ಕೆ ನಮಗೆ ಅನ್ಯಾಯ ಆಗಿಲ್ಲ ಅಂತ ಹೇಳ್ಕೊತಾ ಇದ್ದಾರೆ. ಪಾಪ... ಹನುಮಂತಪ್ಪ ಒಳ್ಳೆಯ ಪ್ರತಿಭೆ. ಆದರೆ, ಬಲಿಪಶು ಆಗಿದ್ದು ಖೇದಕರ' ಎಂದಿದ್ದಾರೆ. ಅಲ್ಲದೇ, "ಯಾವುದೋ ಗಂಜಿ ಗಿರಾಕಿಗಳು ಅನ್ಯಾಯ ಮಾಡುವವರ ಪರ ಪೋಸ್ಟ್ ಹಾಕ್ತಿವೆ. ಡೋಂಟ್ ಕೇರ್. ಜೀವ ಬೆದರಿಕೆ ಕರೆಗಳು ಬರುತ್ತಿವೆ. ಹೆದ್ರೋದಿಲ್ಲ. ಹೆಚ್ಚೆಂದರೆ ಕೊಲೆ ಮಾಡಬಹುದು, ಅಷ್ಟೇ. ಆದರೆ ನಮ್ಮ ಜಿಲ್ಲೆ ಪ್ರತಿಭೆಗಳಿಗಾದ ಅನ್ಯಾಯದ ವಿರುದ್ಧ ನಾನು ಖಂಡಿತಾ ಹೊರಾಡ್ತೇನೆ' ಎಂದಿದ್ದಾರೆ.

English summary
The runner-up of Season-15 Reality Show of Zee Kannada channel, Hanumantha, based in Haveri district, has once again been debated on social networking sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X