ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ‘ಹಾಟ್‌ಸ್ಪಾಟ್’ ಆಗುತ್ತಿದೆ ಕಾರವಾರ!

|
Google Oneindia Kannada News

ಕಾರವಾರ, ಏಪ್ರಿಲ್ 27: ಕೊರೊನಾ ವೈರಸ್ ಎರಡನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಾರವಾರ ತಾಲ್ಲೂಕು ಒಂದರಲ್ಲೇ ಒಂದು ವಾರದಲ್ಲಿ 327 ಪ್ರಕರಣಗಳು ಪತ್ತೆಯಾಗುವ ಮೂಲಕ ಕೊರೊನಾ ಹಾಟ್‌ಸ್ಪಾಟ್ ಆಗಿ ಬದಲಾಗುತ್ತಿದೆ.

ಕೊರೊನಾ ಮೊದಲ ಅವಧಿಯ ವೇಳೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಶಿರಸಿ, ಮುಂಡಗೋಡ ಹಾಗೂ ಹಳಿಯಾಳ (ದಾಂಡೇಲಿ ಸೇರಿ) ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದವು. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸಾಕಷ್ಟು ಬಿಗಿ ಕ್ರಮ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಈ ಬಾರಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವ ಜಿಲ್ಲೆಯ ತಾಲೂಕುಗಳ ಪೈಕಿ ಕಾರವಾರ ಮುಂಚೂಣಿಯಲ್ಲಿದೆ.

ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳ

ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳ

ಕಾರವಾರ ತಾಲ್ಲೂಕಿನಲ್ಲಿ ಕಳೆದ ಏಪ್ರಿಲ್ 19ರಂದು 13 ಪ್ರಕರಣಗಳು ಪತ್ತೆಯಾಗಿದ್ದವು. ಇದಾದ ನಂತರ 20ರಂದು 26 ಪ್ರಕರಣ ಪತ್ತೆಯಾಗಿದ್ದರೆ, 21ರಂದು 35 ಪ್ರಕರಣ, 22ರಂದು 26 ಪ್ರಕರಣ, 23ರಂದು 42 ಪ್ರಕರಣ, 24ರಂದು 62 ಪ್ರಕರಣ, 25ರಂದು 95 ಪ್ರಕರಣ ಹಾಗೂ 26ರಂದು 28 ಪ್ರಕರಣಗಳು ಪತ್ತೆಯಾಗಿವೆ. ಒಂದು ವಾರದಲ್ಲಿ ಒಟ್ಟು 327 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

ಕಾರವಾರ ತಾಲೂಕಿನ ಅರಗಾ ಗ್ರಾಮದ ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಹಲವು ಖಾಸಗಿ ಕಂಪನಿಗಳು ಅಲ್ಲಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದಾರೆ. ಇನ್ನು ಈ ಕಂಪನಿಗಳ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಬಹುತೇಕ ಹೊರ ರಾಜ್ಯದವರಾಗಿದ್ದು, ಅವರಲ್ಲಿಯೇ ಹೆಚ್ಚು ಸೋಂಕು ಕಂಡು ಬಂದಿದೆ ಎನ್ನಲಾಗಿದೆ.

ಕಾರವಾರಕ್ಕೆ ಬರುವಾಗ ನೆಗೆಟಿವ್ ವರದಿ

ಕಾರವಾರಕ್ಕೆ ಬರುವಾಗ ನೆಗೆಟಿವ್ ವರದಿ

ಬಹುತೇಕ ಕಾರ್ಮಿಕರು ಕಾರವಾರ ನಗರದಲ್ಲಿ ಕೆಲ ರೂಂಗಳನ್ನು ಬುಕ್ ಮಾಡಿ ಉಳಿದಿದ್ದು, ಒಂದು ಕೋಣೆಯಲ್ಲಿ ಐದಾರು ಜನರಿಗಿಂತ ಹೆಚ್ಚು ಮಂದಿ ಉಳಿಯುವುದರಿಂದ ಸೋಂಕು ಹೆಚ್ಚಾಗಿ ಹರಡಲು ಕಾರಣವಾಗಿದೆ ಎನ್ನಲಾಗಿದೆ. ಇದಲ್ಲದೇ ಕೈಗಾದಲ್ಲಿ ಕೆಲಸ ಮಾಡುವ ಖಾಸಗಿ ಉದ್ಯೋಗಿಗಳಲ್ಲೂ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇನ್ನೊಂದೆಡೆ ಕಾರವಾರ ಮೂಲಕ ಸದ್ಯ ಮುಂಬೈನಲ್ಲಿ ನೆಲೆಸಿರುವವರು ಲಾಕ್‌ಡೌನ್ ಭೀತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರವಾರಕ್ಕೆ ಆಗಮಿಸುತ್ತಿದ್ದಾರೆ. ಕಾರವಾರಕ್ಕೆ ಬರುವಾಗ ನೆಗೆಟಿವ್ ವರದಿ ಹಿಡಿದುಕೊಂಡು ಬರುತ್ತಿರುವ ಮುಂಬೈ ಮೂಲದವರು, ನಂತರ ಅವರನ್ನು ಪರೀಕ್ಷಿಸಿದಾಗ ಹಲವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರ ಕುಟುಂಬಸ್ಥರಿಗೂ ಸೋಂಕು ಹರಡಿದ ಘಟನೆಗಳು ಬೆಳಕಿಗೆ ಬಂದಿದೆ.

ಉತ್ತರ ಕನ್ನಡ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ

ಉತ್ತರ ಕನ್ನಡ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ

ಕೊರೊನಾ ಸೋಂಕು ದೃಢಪಟ್ಟ ನಂತರ ಕೆಲವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಹಲವರನ್ನು ಹೋಮ್ ಐಸೋಲೇಷನ್‌ನಲ್ಲಿಯೇ ಇಟ್ಟು ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಕಾರವಾರದಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಒಂದೇ ವಾರದಲ್ಲಿ 327 ಪ್ರಕರಣ ಪತ್ತೆಯಾಗಿ ಸೋಂಕು ಅಧಿಕವಾಗುತ್ತಿರುವುದು ಇಡೀ ಕಾರವಾರ ನಾಗರಿಕರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಸೋಂಕು ಹರಡದಂತೆ ತಡೆಯಲು ಉತ್ತರ ಕನ್ನಡ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಾಗಿದೆ.

ಜಿಲ್ಲೆಯಲ್ಲಿ 1193 ಪಾಸಿಟಿವ್, 10 ಸಾವು

ಜಿಲ್ಲೆಯಲ್ಲಿ 1193 ಪಾಸಿಟಿವ್, 10 ಸಾವು

ಉತ್ತರ ಕನ್ನಡ ಜಿಲ್ಲೆಯಲ್ಲೂ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ. ಒಂದು ವಾರದಲ್ಲಿ ಜಿಲ್ಲೆಯಲ್ಲಿ ಒಟ್ಟು 1193 ಪ್ರಕರಣಗಳು ಪತ್ತೆಯಾಗಿದ್ದು, 10 ಸೋಂಕಿತರು ಮೃತಪಟ್ಟಿದ್ದಾರೆ.

ಏ.19ರಂದು ಜಿಲ್ಲೆಯಲ್ಲಿ 11 ಪ್ರಕರಣ ಪತ್ತೆಯಾಗಿದ್ದರೆ, 20ರಂದು 95 ಪ್ರಕರಣ ಮಾತ್ರ ಪತ್ತೆಯಾಗಿದ್ದವು. ಇನ್ನು 21ರಂದು 169, 22ರಂದು 144, 23ರಂದು 193, 24ರಂದು 164, 25ರಂದು 275 ಹಾಗೂ 26 ರಂದು 142 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಶಿರಸಿ ಹಾಗೂ ಅಂಕೋಲಾದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ರಾಜ್ಯ ಸರ್ಕಾರ ಇಂದು ರಾತ್ರಿ 9 ಗಂಟೆಯಿಂದ ಇನ್ನಷ್ಟು ಕಠಿಣ ಕ್ರಮವನ್ನು ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ, ಅದರಲ್ಲೂ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯತ್ತ ಜನರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಕೆಲವರು.

English summary
Karwar Taluk in Uttara Kannada district has become a coronavirus hotspot after 327 cases reported in a single week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X