• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಡೂರು ಮತದಾರರಿಗೆ ವೈ.ಎಸ್.ವಿ ದತ್ತ ಬರೆದ ಭಾವುಕ ಪತ್ರ

By ವೈ.ಎಸ್.ವಿ.ದತ್ತ
|
   ಕಡೂರು ಕ್ಷೇತ್ರದ ಮತದಾರರಿಗೆ ವೈ ಎಸ್ ವಿ ದತ್ತಾರವರ ಭಾವುಕ ಪತ್ರ | Oneindia Kannada

   ವೈಎಸ್ ವಿ ದತ್ತ ಎಂದೇ ಪ್ರಸಿದ್ಧರಾದ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಅವರು ಜೆಡಿ ಎಸ್ ನ ಕಟ್ಟಾಳು ಮತ್ತು ಅಪ್ರತಿಮ ಸಂಸದೀಯ ಪಟು. ಈ ಬಾರಿ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದಿಂದ ಬಿಜೆಪಿಯ ಬೆಳ್ಳಿಪ್ರಕಾಶ್ ಅವರ ವಿರುದ್ಧ ಅಚ್ಚರಿಯ ಸೋಲುಕಂಡಿದ್ದಾರೆ. ಸದ್ಯಕ್ಕೆ ಒಂದರ್ಥದಲ್ಲಿ ನಿರಾಳರಾಗಿರುವ ದತ್ತ ಅವರು, ಜೂನ್ 24 ರಂದು ತಮ್ಮ ಜನ್ಮದಿನದ ನಿಮಿತ್ತ ತಮ್ಮ ಕಡೂರು ಕ್ಷೇತ್ರದ ಮತದಾರರಿಗೆ ಬರೆದ ಭಾವುಕ ಪತ್ರ ಇಲ್ಲಿದೆ.

   ***

   ಆತ್ಮೀಯರೇ,

   ಜೂನ್ 24, ನಾನು ಹುಟ್ಟಿದ ದಿನ. ನನಗೀಗ 65 ವರ್ಷ . ಸರಳತೆ ಮತ್ತು ನಿರಾಡಂಬರತೆ ನಾನು ನಂಬಿರುವ ಮೌಲ್ಯಗಳು.

   ನಾನೆಂದೂ ನನ್ನ ಹುಟ್ಟುಹಬ್ಬವನ್ನು ಕುಟುಂಬಸ್ಥನಾಗಿ ಹೊರತುಪಡಿಸಿ ಸಾರ್ವಜನಿಕವಾಗಿ ಆಡಂಬರವಾಗಿ ಆಚರಿಸಿಕೊಂಡವನಲ್ಲ. ಈ ಪತ್ರದಲ್ಲಿ ಇದನ್ನು ತಿಳಿಸಲು ಒಂದು ಕಾರಣವಿದೆ. ಇಷ್ಟು ವರ್ಷ ಅಂದರೆ ಸುಮಾರು 12 ವರ್ಷಗಳ ಕಾಲ ನಿಮ್ಮ ಪ್ರೀತಿಯನ್ನು ಹಂಚಿಕೊಂಡು, ಬಳಸಿಕೊಂಡು ಸಾರ್ವಜನಿಕವಾಗಿ ಬೆಳೆದ ನಾನು ಈ ವರ್ಷದ ಹುಟ್ಟಿದ ದಿನದಂದು ಒಂದು ರೀತಿ ನಿರಮ್ಮಳನಾಗಿದ್ದೀನಿ.

   ವ್ಯಕ್ತಿಚಿತ್ರ: ಸಂಸದೀಯ ಪಟು, ಜೆಡಿಎಸ್ ಕಟ್ಟಾಳು ! ವೈಎಸ್ವಿ ದತ್ತ

   ಸಾರ್ವಜನಿಕ ಬದುಕೇ ಅಂತಹುದು. ಅದರಲ್ಲೂ ಬದ್ಧತೆ ಮತ್ತು ಜನನಿಷ್ಠೆಯುಳ್ಳ ಜನಪ್ರತಿನಿಧಿಯೊಬ್ಬ ತನ್ನ ಕರ್ತವ್ಯ, ಜವಾಬ್ದಾರಿ, ಸ್ಪಂದನೆ, ಕ್ರಿಯಾಶೀಲತೆ - ಇಂತಹ ಹತ್ತು ಹಲವು ಕಾರಣಗಳಿಂದಾಗಿ ಉಂಟಾಗುವ ಒತ್ತಡಗಳ ದೆಸೆಯಿಂದ ತಾನು ಇಷ್ಟಪಡುವ ವ್ಯಕ್ತಿಗಳು , ಹವ್ಯಾಸಗಳು , ಅಭಿರುಚಿಗಳು , ಚಟುವಟಿಕೆಗಳಿಂದ ದೂರವಾಗಿ ತನ್ನತನವನ್ನು ಕಳೆದುಕೊಂಡುಬಿಡುತ್ತಾನೆ.

   ಆದರೆ ನಾನೀಗ ನಿರಮ್ಮಳನಾಗಿದ್ದೇನೆ ಎಂದು ಹೇಳಲು ಕಾರಣ, ನಾನು ಕಳೆದುಕೊಂಡಿರುವ 'ನನ್ನತನ' ವನ್ನು ಮತ್ತೆ ಕುದುರಿಸಿಕೊಳ್ಳಲು ನೀವು ಅಷ್ಟರ ಮಟ್ಟಿಗೆ ನನ್ನನ್ನು ಒತ್ತಡಮುಕ್ತನನ್ನಾಗಿ ಮಾಡಿ ಉಪಕರಿಸಿದ್ದೀರಿ. ಇದಕ್ಕಾಗಿ ನಾನು ನಿಮಗೆ ಕೃತಜ್ಞ.

   ಮೊನ್ನೆ ನನ್ನ ವಿಚಾರವಾದಿ ಗೆಳೆಯ ರವಿಕೃಷ್ಣಾರೆಡ್ಡಿಯವರು ಕನ್ನಡಕ್ಕೆ ಅನುವಾದಿಸಿರುವ ಪುಸ್ತಕದ ಕೆಲವು ಸಾಲುಗಳನ್ನು ಓದಿ ನನಗೆ ಒಂದು ರೀತಿ ಖುಷಿಯಾಯಿತು. ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಸ್ವಾಮಿ ವಿವೇಕಾನಂದರು ಪ್ರವಚನ ನೀಡಿದ ಜಾಗದಲ್ಲಿ ಸನಾತನ ಪ್ರವಚನಕಾರರೊಬ್ಬರು ತಮ್ಮ ಪ್ರವಚನದಲ್ಲಿ ಕೆಂಟ್ ಎಂಬುವರು ಹೇಳಿದ ಕೆಲವು ಮಾತುಗಳನ್ನು ಉದಹರಿಸಿದರಂತೆ.

   ಅವರ ಪ್ರವಚನ ಕೇಳಿದ ಗೆಳೆಯ ರವಿಕೃಷ್ಣಾರೆಡ್ಡಿಯವರು ಕೆಂಟರವರ ಆ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ಹೊರತಂದಿದ್ದಾರೆ. ಅದರ ಹೆಸರು " ವಿರೋಧಾಬಾಸದ ಹತ್ತು ಆದರ್ಶಗಳು" ಎಂದು . ಆ ಹತ್ತು ಆದರ್ಶಗಳನ್ನು ನಾನು ಓದಿದ ಮೇಲೆ 'ಛೆ, ನಾನು ಇದನ್ನು ಓದದೆಯೇ ರೂಢಿಸಿಕೊಳ್ಳುತ್ತಿದ್ದೆ , ಈಗ ಇದನ್ನು ಹಾಗೆಯೇ ಕಾಪಾಡಿಕೊಂಡು ಹೋಗೋಣ' ಎಂದು ಸಂತಸಪಟ್ಟೆ . ಆ ಹತ್ತು ಆದರ್ಶಗಳು ಹೀಗಿವೆ.

   ದೇವೇಗೌಡರ ಇಬ್ಬರು ಅತೃಪ್ತ ಮಾನಸಪುತ್ರರ ಮುಂದಿನ ನಡೆ ಏನು?

   1. ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು. ಏನೇ ಇರ್ಲಿ, ಅವರನ್ನು ಪ್ರೀತಿಸಿ.

   2. ನೀವು ಒಳ್ಳೆಯದನ್ನು ಮಾಡಿದ್ದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ.

   ಯಾರು ಏನೇ ಹೇಳ್ಲಿ, ಒಳ್ಳೆಯದನ್ನು ಮಾಡಿ.

   3. ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ. ಆದ್ರೂ ಯಶಸ್ವಿಯಾಗಿ.

   4. ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ. ಆದ್ರೂ ಒಳ್ಳೆಯದನ್ನು ಮಾಡಿ.

   5. ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ. ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ.

   6. ಉನ್ನತವಾದ ದೊಡ್ಡದೊಡ್ಡ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳು ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು. ಆದ್ರೂ ದೊಡ್ಡದಾಗಿಯೇ ಆಲೋಚಿಸಿ.

   ಜೆಡಿಎಸ್ ನ ಬೆಳವಣಿಗೆಯಿಂದ ಬೇಸತ್ತ ವೈಎಸ್ ವಿ ದತ್ತ

   7. ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ. ಹಾಗಿದ್ರೂ ಕೆಲವಾದರೂ ದಲಿತ-ದುರ್ಬಲರ ಪರ ಹೋರಾಡಿ.

   8. ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು. ಏನೇ ಆಗ್ಲಿ, ಕಟ್ಟಿಯೇ ಕಟ್ಟಿ.

   9. ಜನರಿಗೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೇ ಆಕ್ರಮಣ ಮಾಡಬಹುದು. ಆದ್ರೂ, ಸಹಾಯ ಮಾಡಿ.

   10. ನಿಮ್ಮ ಕೈಲಾದುದನ್ನು ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲೂ ಜನ ನಿಮ್ಮ ಹಲ್ಲುದುರಿಸಬಹುದು.

   ಆದ್ರೂ ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ.

   ಚುನಾವಣಾ ಫಲಿತಾಂಶ: ಪಾಪ ಕಣ್ರಿ ಇವರು ಸೋಲಬಾರದಿತ್ತು

   ಕೆಂಟ್ ನ ಮೇಲಿನ ಹತ್ತು ವಿರೋಧಾಬಾಸದ ಆದೇಶ ಅಥವಾ ಆದೇಶಗಳು ನನಗೆ ಪ್ರೇರೇಪಣೆ ಮಾಡಿದಂತವು ಎಂದು ಭಾವಿಸಿದೆ. ಹಾಗಾಗಿ ನಿಮ್ಮೊಂದಿಗೆ ಹಂಚಿಕೊಂಡೆ.

   ಕಳೆದ 5 ವರ್ಷಗಳ ಕಾಲ ನಾನು ನಿಮ್ಮ ಶಾಸಕನಾಗಿ ಮಾಡಿದ ಅಪಚಾರ , ನಿಮಗೆ ಮಾಡಿದ ಅನ್ಯಾಯ , ಮಾಡಿರುವ ಪ್ರಮಾದಗಳಿಂದಾಗಿ ನೀವು ದುಷ್ಟನೆಂಬಂತೆ ನನ್ನನ್ನು ಶಿಕ್ಷಿಸಿ , ಶಿಷ್ಟರೆನಿಸಕೊಂಡವರಿಗೆ ಮಾನ್ಯತೆ ಸಿಗುವಂತೆ ಮಾಡಿದ್ದೀರಿ . ಜನತಂತ್ರದ ಧರ್ಮವನ್ನು ಸರಿಯಾಗಿಯೇ ಪಾಲಿಸಿದ್ದೀರಿ . ನಿಮಗೆಲ್ಲಾ ಒಳ್ಳೆಯದಾಗಲಿ.

   ನನ್ನನ್ನು ಮತ್ತು ನನ್ನ ತಪ್ಪುಗಳನ್ನು ದಯವಿಟ್ಟು ಕೆಟ್ಟ ಕನಸೆಂದು ಮರೆತುಬಿಡಿ

   ಎಂದಿನ ಅಭಿಮಾನದೊಂದಿಗೆ ,

   ನಿಮ್ಮ ವಿಶ್ವಾಸಿ ,

   ವೈ.ಎಸ್.ವಿ.ದತ್ತ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   YSV Datta is a JDS leader who was the MLA of Kadur constituency of Chikkamagaluru district. In Karnataka assembly elections 2018, he was defeated by BJP's Belliprakash. Here is a emotional letter he wrote to his voters of Kadur constituency.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more