ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯಾಪಿ ಬರ್ತ್‌ಡೇ: 77 ವರ್ಷದ ಯಡಿಯೂರಪ್ಪ ಹೈಕಮಾಂಡ್ ಮಣಿಸಿದ ಕತೆ!

|
Google Oneindia Kannada News

ಬೆಂಗಳೂರು, ಫೆ. 27: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಳೆದ 2018ರ ಫೆಬ್ರವರಿ 27ರಂದು ಮಂಗಳವಾರ ಆಚರಿಸಿಕೊಂಡ ಜನ್ಮದಿನಕ್ಕೂ ಇಂದು ಅವರು ಆಚರಿಸಿಕೊಳ್ಳುತ್ತಿರುವ 78ನೇ ಜನ್ಮದಿನಕ್ಕೂ ಬಹಳಷ್ಟು ವ್ಯತ್ಯಾಸವಿದೆ. ತಾವೇ ಕಟ್ಟಿ ಬೆಳೆಸಿದ ಪಕ್ಷದಲ್ಲಿ ಹೈಕಮಾಂಡ್ ನಿಯಮದಿಂದ ಕಳೆದ ಎರಡು ವರ್ಷಗಳ ಹಿಂದೆ ಹುಟ್ಟುಹಬ್ಬ ಆಚರಿಸಿಕೊಳ್ಳಲೂ ಯಡಿಯೂರಪ್ಪ ಅವರು ಹಿಂದುಮುಂದು ಮಾಡಿದ್ದರು.

ಅದಕ್ಕೆ ಕಾರಣವಾಗಿದ್ದು 75 ವರ್ಷ ವಯೋಮಿತಿ ಮೀರಿದವರಿಗೆ ಬಿಜೆಪಿಯಲ್ಲಿ ಅಧಿಕಾರವಿಲ್ಲ ಎಂಬ ಅಲಿಖಿತ ನಿಯಮ. ಮತ್ತು ಆ ಅಲಿಖಿತ ನಿಯಮದಂತೆ ನಡೆದುಕೊಳ್ಳಲು ಬಿಜೆಪಿಯ ಭೀಷ್ಮ ಲಾಲಕೃಷ್ಣ ಅಡ್ವಾಣಿಯವರೇ ಮುಂದಾಗಿದ್ದರು. ಇದು ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ನೇರ ಪರಿಣಾಮವನ್ನುಂಟು ಮಾಡಿತ್ತು. ಇದರಿಂದಾಗಿಯೆ 2018ರಲ್ಲಿ ಬಿಎಸ್‌ವೈ ಅವರ ಹುಟ್ಟುಹಬ್ಬ ಆಚರಣೆಯೇ ಬೇಡ ಎಂಬ ತೀರ್ಮಾನಕ್ಕೆ ಯಡಿಯೂರಪ್ಪ ಆಪ್ತರು ಬಂದಿದ್ದರು.

BS Yediyurappa Birthday Celebrations Live : ಯಡಿಯೂರಪ್ಪಗೆ ಶುಭಾಶಯ ಹೇಳಲು ಬಂದ ಸಿದ್ದರಾಮಯ್ಯBS Yediyurappa Birthday Celebrations Live : ಯಡಿಯೂರಪ್ಪಗೆ ಶುಭಾಶಯ ಹೇಳಲು ಬಂದ ಸಿದ್ದರಾಮಯ್ಯ

ಇನ್ನು ಅವತ್ತು ಹಾಕಿದ್ದ ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಎಲ್ಲಿಯೂ ಅಪ್ಪಿತಪ್ಪಿಯೂ ಯಡಿಯೂರಪ್ಪ ಅವರ ಎಷ್ಟನೇ ಹುಟ್ಟುಹಬ್ಬ ಎಂಬುದನ್ನು ತೋರಿಸಿರಲಿಲ್ಲ. ಅದಾಗಲೇ ಬಿಜೆಪಿಯಿಂದ ಹೊರಹೋಗಿ, ಕೆಜೆಪಿ ಕಟ್ಟಿ ಮತ್ತೆ ಬಿಜೆಪಿಗೆ ಬಂದಿದ್ದರಿಂದ ಯಡಿಯೂರಪ್ಪ ಅವರು ಹೈಕಮಾಂಡ್ ಹೇಳಿದಂತೆಯೆ ಕೇಳಬೇಕಾಗಿತ್ತು.

ಹೈಕಮಾಂಡ್ ನಿಯಮ ಯಡಿಯೂರಪ್ಪ ಅವರನ್ನು ಚಿಂತೆಗೆ ದೂಡಿತ್ತು!

ಹೈಕಮಾಂಡ್ ನಿಯಮ ಯಡಿಯೂರಪ್ಪ ಅವರನ್ನು ಚಿಂತೆಗೆ ದೂಡಿತ್ತು!

ಬಿಜೆಪಿಯಲ್ಲಿ 75ವರ್ಷ ವಯಸ್ಸಾದವರಿಗೆ ಅಧಿಕಾರವಿಲ್ಲ ಎಂಬ ನಿಯಮ ಎಲ್ಲರಿಗೂ ಅನ್ವಯ ಎಂಬುದನ್ನು ಬಿಜೆಪಿ ಹೈಕಮಾಂಡ್ ಕಟ್ಟುನಿಟ್ಟಾಗಿ ಪಾಲಿಸಿತ್ತು. ಅದೇ ನೆಪವನ್ನು ಇಟ್ಟುಕೊಂಡು ಆಗ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೊಷಣೆ ಮಾಡಿರಲೇ ಇಲ್ಲ. ಮತ್ತೆ ಮುಖ್ಯಮಂತ್ರಿ ಆಗಲೇಬೇಕು ಎಂದುಕೊಂಡಿದ್ದ ಯಡಿಯೂರಪ್ಪ ಅವರಿಗೆ ಎಲ್ಲೊ ಒಂದು ಕಡೆ ಇದೇ ಆತಂಕ ಕಾಡಿತ್ತು. ಹೀಗಾಗಿಯೇ ವಿಧಾನಸಭೆ ಚುನಾವಣೆ ನಡೆಯುವ ವರ್ಷ, ಅಂದರೆ 2018ರಲ್ಲಿ ಯಡಿಯೂರಪ್ಪ ಅವರು 75ನೇ ಹುಟ್ಟುಹಬ್ಬ ಎಂದು ತೋರಿಸಿ ಕೊಳ್ಳಲೇ ಇಲ್ಲ! ಡಾಲರ್ಸ್ ಕಾಲನಿ ಸೇರಿದಂತೆ ಅಭಿಮಾನಿಗಳು ಎಲ್ಲೆಡೆ ಹಾಕಿದ್ದ ಬ್ಯಾನರ್‌ಗಳಲ್ಲಿಯೂ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಮಾತ್ರ ಹಾಕಲಾಗಿತ್ತು. ಎಲ್ಲಿಯೂ ವಯಸ್ಸು ಕಾಣದಂತೆ ಯಡಿಯೂರಪ್ಪ ಆಪ್ತರು ಎಚ್ಚರಿಕೆ ವಹಿಸಿದ್ದರು.

ಕೊನೆಗೂ ಸಿಎಂ ಅಭ್ಯರ್ಥಿ ಎಂದು ಘೋಷಣೆ, ಬಿಎಸ್‌ವೈ ಸಮಾಧಾನ

ಕೊನೆಗೂ ಸಿಎಂ ಅಭ್ಯರ್ಥಿ ಎಂದು ಘೋಷಣೆ, ಬಿಎಸ್‌ವೈ ಸಮಾಧಾನ

ಆದರೆ ಪಕ್ಷದಲ್ಲಿನ ವಿರೋಧಿಗಳನ್ನು ಮಟ್ಟಹಾಕುವಲ್ಲಿ ಬಿ.ಎಸ್. ಯಡಿಯೂರಪ್ಪ ಸಫಲರಾಗಿದ್ದರು. ಆ ಕಡೆ ಹೈಕಮಾಂಡ್ ಕೂಡ ಯಡಿಯೂರಪ್ಪ ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದೇ 'ವಯೋಮಿತಿ ಅಸ್ತ್ರ'ವನ್ನು ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡಿತ್ತು. ಹೀಗಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ, ಚುನಾವಣಾ ಪ್ರಚಾರ ತಂತ್ರ ಎಲ್ಲವೂ ಬಿಜೆಪಿ ಹೈಕಮಾಂಡ್ ನಿರ್ಧರಿಸಿದಂತೆಯೆ ಆಗಿತ್ತು.

2018ರ ವಿಧಾನಸಭಾ ಚುನಾವಣೆಯಲ್ಲಿ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ವಿಫಲರಾದರು. ಹೈಕಮಾಂಡ್ ನಿರ್ಣಯದಂತೆಯೆ ಟಿಕೆಟ್ ಹಂಚಿಕೆ ಮಾಡಲಾಯಿತು. ಆದರ ಪರಿಣಾಮ ಚುನಾವಣೆ ಫಲಿತಾಂಶದ ಮೇಲಾಗಿತ್ತು. ಇದು ಕೊನೆಗೆ ಹೈಕಮಾಂಡ್ ಗಮನಕ್ಕೆ ಬಂದಿದ್ದರಿಂದ ಕರ್ನಟಕದಲ್ಲಿ ಯಡಿಯೂರಪ್ಪ ಅವರನ್ನು ಕೈಬಿಟ್ಟರೆ ಬಿಜೆಪಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಾಗಿತ್ತು. ಹೈಕಮಾಂಡ್ ವಿರೋಧದ ಮಧ್ಯೆಯೂ ಅಲ್ಪಮತದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಯಡಿಯೂರಪ್ಪ ಮೂರು ದಿನಗಳ ಕಾಲ ಮುಖ್ಯಮಂತ್ರಿಯೂ ಆದರು. ಆದರೆ ರಾಜೀನಾಮೆ ಕೊಡುವಾಗ ವಿಧಾನಸಭೆಯಲ್ಲಿ ಬಿಎಸ್‌ವೈ ಮಾಡಿದ ಭಾಷಣ ಅವರನ್ನು ಬಿಜೆಪಿಯಲ್ಲಿ ಮತ್ತೆ ಪ್ರಶ್ನಾತೀತ ನಾಯಕನನ್ನಾಗಿ ಮಾಡಿತು.

ಸಿಎಂ ಯಡಿಯೂರಪ್ಪ ಅವರಿಗೆ 78ನೇ ಹುಟ್ಟುಹಬ್ಬದ ಸಂಭ್ರಮ, ಶುಭಕೋರಿದ ಪ್ರಧಾನಿಸಿಎಂ ಯಡಿಯೂರಪ್ಪ ಅವರಿಗೆ 78ನೇ ಹುಟ್ಟುಹಬ್ಬದ ಸಂಭ್ರಮ, ಶುಭಕೋರಿದ ಪ್ರಧಾನಿ

ಲೋಕಸಭಾ ಚುನಾವಣೆಯಲ್ಲಿ ಕೈಹಿಡಿದ ಅಭೂತಪೂರ್ವ ಗೆಲವು

ಲೋಕಸಭಾ ಚುನಾವಣೆಯಲ್ಲಿ ಕೈಹಿಡಿದ ಅಭೂತಪೂರ್ವ ಗೆಲವು

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಸಫಲವಾಗಲಿಲ್ಲ. ಅದಕ್ಕೆ ಹೈಕಮಾಂಡ್ ಕೂಡ ಕಾರಣ ಎಂಬಂತೆ ಬಿಂಬಿಸುವಲ್ಲಿ ಬಿಎಸ್‌ವೈ ಆಪ್ತರು ಸಫಲರಾದರು. ಹೀಗಾಗಿ ಲೋಕಸಭಾ ಚುನಾವಣೆ ಹೊತ್ತಿಗೆ ಯಡಿಯೂರಪ್ಪ ಅವರು ಹೈಕಮಾಂಡ್‌ನಷ್ಟೇ ಸಶಕ್ತರಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಸಲಹೆಯಂತೆಯೆ ಎಲ್ಲವೂ ನಡೆಯಿತು.

ಬಿಜೆಪಿಯಿಂದ 25 ಸಂಸದರು ಆಯ್ಕೆಯಾಗಿದ್ದು, ಬಿಜೆಪಿಗೆ ಬಲವಿಲ್ಲದ ಮಂಡ್ಯ ಲೋಕಸಬಾ ಕ್ಷೇತ್ರದಲ್ಲಿ ತಟಸ್ಥರಾಗಿ ಉಳಿಯುವ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರು ಗೆಲುವಿಗೆ ಸಹಾಯಕವಾಗಿದ್ದು ಯಡಿಯೂರಪ್ಪ ಅವರ ರಾಜಕೀಯ ತಂತ್ರಗಾರಿಕೆ ಮೆರೆಯುವಂತೆ ಮಾಡಿತು. ಇದು ಸಹಜವಾಗಿಯೇ ಬಿಜೆಪಿ ಹೈಕಮಾಂಡ್ ಕೂಡ ತಣ್ಣಗಾಗುವಂತೆ ಮಾಡಿತು. ಜೊತೆಗೆ ಕೇಂದ್ರದಿಂದಲೇ ಎಲ್ಲವನ್ನೂ ನಿಭಾಯಿಸುತ್ತೇವೆ ಎಂದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಜೋಡಿ ಒಂದೊಂದಾಗಿ ಅನೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದೂ ಕೂಡ ಯಡಿಯೂರಪ್ಪ ಅವರು ಹಿಂದಿನ ಚಾರ್ಮ್ ಪಡೆದುಕೊಳ್ಳುವಲ್ಲಿ ಸಹಾಯವಾಯಿತು.

ದೇಶದಲ್ಲಿದ್ದಾರೆ 70 ವರ್ಷ ಮೀರಿದ 7 ಮುಖ್ಯಮಂತ್ರಿಗಳು

ದೇಶದಲ್ಲಿದ್ದಾರೆ 70 ವರ್ಷ ಮೀರಿದ 7 ಮುಖ್ಯಮಂತ್ರಿಗಳು

ಇನ್ನು ದೇಶದಲ್ಲಿ ಯಡಿಯೂರಪ್ಪ ಅವರೂ ಸೇರಿದಂತೆ 70 ವರ್ಷ ವಯೋಮಿತಿ ಮೀರಿದ 7 ಜನರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಆದರೆ ಅವರೆಲ್ಲರಿಗಿಂತಲೂ ಸಿಎಂ ಯಡಿಯೂರಪ್ಪ ಅವರೆ ಹಿರಿಯರು ಎಂಬುದು ವಿಶೇಷ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಈಗ 77 ವರ್ಷ ವಯಸ್ಸು, ಮಿಝೋರಾಂ ಸಿಎಂ ಝೋರಾಮ್‌ಥಂಗ್ ಅವರಿಗೆ 75 ವರ್ಷ, ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರಿಗೆ 74 ವರ್ಷ, ಹಾಗೆಯೆ ಓಡಿಸ್ಸಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರಿಗೆ 74 ವರ್ಷ, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಈಗ 73 ವರ್ಷ ವಯಸ್ಸು ಹಾಗೂ ಪಾಂಡಿಚೇರಿ ಸಿಎಂ ನಾರಾಯಣಸ್ವಾಮಿ ಅವರಿಗೆ ಈಗ 72ರ ಹರೆಯ. ಹೀಗಾಗಿ ವಯಸ್ಸಿಗೂ ಸಿಎಂ ಗಾದಿಗೂ ಯಾವುದೆ ಸಂಬಂಧವಿಲ್ಲ ಎಂಬುದನ್ನು ಯಡಿಯೂರಪ್ಪ ಅವರು ಇದೀಗ ತೋರಿಸುತ್ತಿದ್ದಾರೆ.

ಬಿಜೆಪಿ ಆಡಳಿತ 11 ರಾಜ್ಯಗಳಲ್ಲಿ ಯಡಿಯೂರಪ್ಪ ಹಿರಿಯರು!

ಬಿಜೆಪಿ ಆಡಳಿತ 11 ರಾಜ್ಯಗಳಲ್ಲಿ ಯಡಿಯೂರಪ್ಪ ಹಿರಿಯರು!

ಇನ್ನು ಬಿಜೆಪಿ ಆಡಳಿತವಿರುವ 11 ರಾಜ್ಯಗಳನ್ನು ನೋಡುವುದಾದರೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಎಲ್ಲರಿಗಿಂತ ಹಿರಿಯರು. ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿ ಹೆಚ್ಚಿನ ಮುಖ್ಯಮಂತ್ರಿಗಳು 50 ರಿಂದ 60 ವರ್ಷಗಳ ವಯೋಮಿತಿಯಲ್ಲಿದ್ದಾರೆ. ಇದು ಬಿಜೆಪಿಯ 75 ವರ್ಷ ಮೀರಿದವರಿಗೆ ಅಧಿಕಾರವಿಲ್ಲ ಎಂಬುದಕ್ಕೆ ಇದು ಮತ್ತಷ್ಟು ಪುಷ್ಟಿಕೊಡುತ್ತಿದೆ.

ಉತ್ತರ ಪ್ರದೇಶ, ಗೋವಾ, ತ್ರಿಪುರ ಹಾಗೂ ಅರುಣಾಚಲ ಪ್ರದೇಶ, ಈ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ವಯಸ್ಸು 50 ವರ್ಷಗಳಿಗಿಂತ ಕಡಿಮೆಯಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ್, ಮಣಿಪುರ ಹಾಗೂ ಆಸ್ಸಾಂ,ಈ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ವಯಸ್ಸು 60 ವರ್ಷಕ್ಕಿಂತ ಕಡಿಮೆಯಿದೆ. ಉಳಿದಂತೆ ಗುಜರಾತ್ ಸಿಎಂ ವಿಜಯ್ ರೂಪಾನಿ, ಹರಿಯಾಣಾ ಸಿಎಂ ಮನೋಹರ್ ಲಾಲ್ ಕಟ್ಟರ್ ಇಬ್ಬರೂ 70ಕ್ಕಿಂತ ಕಡಿಮೆ ವಯೋಮಿತಿಯಲ್ಲಿದ್ದಾರೆ. ಆದರೆ ಇದೆಲ್ಲವನ್ನೂ ಮೀರಿ ಯಡಿಯೂರಪ್ಪ ಅವರು ತಮ್ಮ 78ನೇ ವರ್ಷದ ಹುಟ್ಟುಹಬ್ಬಕ್ಕೆ ಹೈಕಮಾಂಡ್ ಶುಭಕೋರುವಂತೆ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹಿಂದುಮುಂದು ಮಾಡಿಕೊಂಡಿದ್ದ ಯಡಿಯೂರಪ್ಪ ಅವರು, ಈಗ ಅದ್ದೂರಿಯಾಗಿ ಆಚರಣೆಗೆ ಮುಂದಾಗಿರುವುದು ಮುಂದಿನ ಮೂರು ವರ್ಷಗಳ ಅವಧಿಗೆ ಬೇರೆ ಯಾರನ್ನೂ ಸಿಎಂ ಹುದ್ದೆಗೆ ನೇಮಕ ಮಾಡದಂತೆ ತಡೆಯುವುದೇ ಆಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

English summary
Yediyurappa is the CM beyond the BJP's unwritten rule that those over the age of 75 have no powers. BJP High Command wishes Chief Minister Yeddyurappa on his 78th birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X