ಬೆಂಗಳೂರಿಗೆ ಬಂದ ಎಲೋನ್ ಮಸ್ಕ್ 'ಟೆಸ್ಲಾ': ಮಾಯವಾದ ಯಡಿಯೂರಪ್ಪ ಟ್ವೀಟ್!
ಬೆಂಗಳೂರು, ಜನವರಿ 13: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿದ್ದ ಟ್ವೀಟ್ ರಾಜ್ಯದ ಯುವ ಜನತೆಯಲ್ಲಿ ಬಹಳ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆದರೆ ಆ ಟ್ವೀಟ್ ಅನ್ನು ಅವರು ಅಳಿಸಿ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಬೆಂಗಳೂರಿನಲ್ಲಿ ತಮ್ಮ ಉದ್ಯಮ ಸ್ಥಾಪಿಸುತ್ತಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸ್ವಾಗತಿಸಿದ್ದಾರೆ. ಅಮೆರಿಕ ಎಲೆಕ್ಟ್ರಿಕ್ ಕಾರ್ ದಿಗ್ಗಜ ಟೆಸ್ಲಾ ಕೊನೆಗೂ ಭಾರತಕ್ಕೆ ಪ್ರವೇಶಿಸಿದೆ. ಅದೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಂಪೆನಿ ನೋಂದಣಿ ನಡೆದಿದೆ. ವಿದ್ಯುತ್ ಚಾಲಿತ ಕಾರು ತಯಾರಕಾ ಸಂಸ್ಥೆ ಬೆಂಗಳೂರಿನಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಘಟಕವನ್ನು ಸ್ಥಾಪಿಸಿದೆ. ಇದನ್ನು ಬಿಎಸ್ ಯಡಿಯೂರಪ್ಪ ಅವರು ಟ್ವಿಟ್ಟರ್ನಲ್ಲಿ ಖಚಿತಪಡಿಸಿದ್ದರು.
ಜೆಫ್ ಬೇಜೋಸ್ರನ್ನ ಹಿಂದಿಕ್ಕಿದ ಎಲೋನ್ ಮಸ್ಕ್: ವಿಶ್ವದ ನಂಬರ್ 1 ಶ್ರೀಮಂತ
ಈ ಟ್ವೀಟ್ ಅನ್ನು ಹಂಚಿಕೊಂಡ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ ಎಂಬ ನಿರೀಕ್ಷೆ ಉಂಟಾಗಿದೆ. ಕನ್ನಡಿಗರಿಗೇ ಹೆಚ್ಚಿನ ಉದ್ಯೋಗ ಸಿಗಲಿ ಎಂದು ಆಶಿಸಿದ್ದಾರೆ. ಆದರೆ ಯಡಿಯೂರಪ್ಪ ಅವರು ಮಂಗಳವಾರ ರಾತ್ರಿ ಮಾಡಿದ್ದ ಟ್ವೀಟ್ ಮಾಯವಾಗಿದೆ. ಮುಂದೆ ಓದಿ.

ಮಸ್ಕ್ಗೆ ಯಡಿಯೂರಪ್ಪ ಸ್ವಾಗತ
'ಹಸಿರು ವಾಹನ ಕ್ಷೇತ್ರದತ್ತ ಭಾರತದ ಪಯಣವನ್ನು ಕರ್ನಾಟಕ ಮುನ್ನಡೆಸಲಿದೆ. ವಿದ್ಯುತ್ ಚಾಲಿತ ವಾಹನ ಉತ್ಪಾದಕ ಟೆಸ್ಲಾ ಬೆಂಗಳೂರಿನಲ್ಲಿ ಆರ್ ಆಂಡ್ ಡಿ ಘಟಕದ ಮೂಲಕ ಶೀಘ್ರದಲ್ಲಿಯೇ ಭಾರತದಲ್ಲಿ ತನ್ನ ಕಾರ್ಯಾಚರಣೆ ನಡೆಸಲಿದೆ. ಎಲೋನ್ ಮಸ್ಕ್ ಅವರನ್ನು ಭಾರತ ಮತ್ತು ಕರ್ನಾಟಕಕ್ಕೆ ನಾನು ಸ್ವಾಗತಿಸುತ್ತೇನೆ ಮತ್ತು ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ' ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದರು.

ಬೆಂಗಳೂರಿನಲ್ಲಿ ನೋಂದಣಿ
ಟೆಸ್ಲಾ ಕಂಪೆನಿಯು ಐದು ರಾಜ್ಯ ಸರ್ಕಾರಗಳ ಜತೆಗೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲಿಯೇ ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಟೆಸ್ಲಾ ಮೋಟಾರ್ಸ್ ಇಂಡಿಯಾ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ಗಳು ಜನವರಿ 8ರಂದು ಜತೆಗೂಡಿದ್ದು, ಬೆಂಗಳೂರಿನಲ್ಲಿ ಕಚೇರಿಯನ್ನು ನೋಂದಾಯಿಸಿವೆ.
ಕರಗಿತು ವಿಶ್ವದ ಟಾಪ್ ಶ್ರೀಮಂತರ ಸಂಪತ್ತು: ಒಂದೇ ದಿನದಲ್ಲಿ ಜೆಫ್ ಬೇಜೋಸ್, ಮಸ್ಕ್ ಕಳೆದುಕೊಂಡಿದೆಷ್ಟು?

ಬೇರೆ ರಾಜ್ಯಗಳಲ್ಲಿಯೂ ಮಾತುಕತೆ
ಟೆಸ್ಲಾದ ಹಿರಿಯ ಕಾರ್ಯಕಾರಿ ಅಧಿಕಾರಿ ಡೇವಿಡ್ ಫೀನ್ಸ್ಟೀನ್ ಸೇರಿದಂತೆ ಮೂವರು ನಿರ್ದೇಶಕರು ಭಾರತದ ಘಟಕಕ್ಕೆ ನೇಮಕವಾಗಿದ್ದಾರೆ. ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಕೂಡ ಟೆಸ್ಲಾ ಘಟಕ ಸ್ಥಾಪನೆಗೆ ಮಾತುಕತೆ ನಡೆಯುತ್ತಿದೆ.

ಖಚಿತಪಡಿಸಿದ್ದ ಮಸ್ಕ್
ಭಾರತದ ಮಾರುಕಟ್ಟೆಯನ್ನು ಟೆಸ್ಲಾ 2021ರಲ್ಲಿ ಪ್ರವೇಶಿಸಲಿದೆ ಎಂದು ಎಲೋನ್ ಮಸ್ಕ್ ಕೂಡ ಖಚಿತಪಡಿಸಿದ್ದಾರೆ. ಕಳೆದ ತಿಂಗಳು ಟ್ವಿಟ್ಟರ್ನಲ್ಲಿ 'ಭಾರತ ಟೆಸ್ಲಾ ಬಯಸುತ್ತಿದೆ' ಎಂಬ ಬರಹವುಳ್ಳ ಟಿ-ಶರ್ಟ್ ಚಿತ್ರ ಪೋಸ್ಟ್ ಮಾಡಿದ್ದ ಮಸ್ಕ್, ಮುಂದಿನ ವರ್ಷ ಖಚಿತ ಎಂದು ಪ್ರತಿಕ್ರಿಯೆ ನೀಡಿದ್ದರು.

ಲೀಥಿಯಂಗಾಗಿ ಬಂದಿದ್ದಾರೆ
ಆದರೆ, ಯಡಿಯೂರಪ್ಪ ಅವರು ಮಂಗಳವಾರ ರಾತ್ರಿ 9.42ಕ್ಕೆ ಮಾಡಿದ್ದ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ. ಅದನ್ನು ಅನೇಕರು ಪ್ರಶ್ನಿಸಿದ್ದಾರೆ. ಕರ್ನಾಟಕ, ರಾಜಸ್ಥಾನ ಮುಂತಾದ ಕಡೆ ಲೀಥಿಯಂ ಪತ್ತೆಯಾಗಿದೆ. ವಿದ್ಯುತ್ ಬ್ಯಾಟರಿಗಳ ತಯಾರಿಕೆಗೆ ಲೀಥಿಯಂ ಅತಿ ಮುಖ್ಯ. ಈ ನಿಕ್ಷೇಪ ಪತ್ತೆಯಾಗಿರುವುದರಿಂದಲೇ ಮಸ್ಕ್ ಭಾರತಕ್ಕೆ ಕಾಲಿರಿಸುತ್ತಿದ್ದಾರೆ. ಇದು ಮತ್ತೊಂದು ಗಣಿ ಹಗರಣಕ್ಕೆ ಎಡೆ ಮಾಡಿಕೊಡಲಿದೆ ಎಂದು ಅನೇಕರು ಆರೋಪಿಸಿದ್ದಾರೆ.