ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪಗೆ ಸರಿಸಾಟಿ ಯಾರಾದ್ರೂ ಇದ್ದಾರಾ?

By ಬಾಲರಾಜ್ ತಂತ್ರಿ
|
Google Oneindia Kannada News

ಹುಟ್ಟು ಹೋರಾಟದಿಂದಲೇ ಬೆಳೆದು ಬಂದವನು ನಾನು, ಈ ಯಡಿಯೂರಪ್ಪನನ್ನು ಮೂಲೆಗುಂಪು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅದೆಷ್ಟೋ ಬಾರಿ ಸಾರ್ವಜನಿಕ ಸಭೆಯಲ್ಲಿ ಮತ್ತು ಪಕ್ಷದೊಳಗಿನ ಸಭೆಯಲ್ಲಿ ಗುಡುಗಿದ್ದುಂಟು.

ಹೌದು, ಯಡಿಯೂರಪ್ಪ ರಾಜ್ಯ ರಾಜಕಾರಣದ, ಲಿಂಗಾಯಿತ ಸಮುದಾಯದ ಅದಕ್ಕಿಂತಲೂ ಹೆಚ್ಚಾಗಿ ಉತ್ತರ ಕರ್ನಾಟಕದ ಭಾಗದಲ್ಲಿನ ಪ್ರಶ್ನಾತೀತ ನಾಯಕ, ರಾಜ್ಯದ ಮಾಸ್ ಲೀಡರ್ ನಲ್ಲೊಬ್ಬರು.

ಯಡಿಯೂರಪ್ಪ ಎನ್ನುವ ಹೆಸರು ಬಿಜೆಪಿ ಕಾರ್ಯಕರ್ತರಲ್ಲಿ ಈಗಲೂ ಎಷ್ಟು ಸಂಚಲನ ಮೂಡಿಸುವಲ್ಲಿ ಸಾಮರ್ಥ್ಯವನ್ನು ಹೊಂದಿದೆ ಎನ್ನುವುದಕ್ಕೆ ಇತ್ತೀಚೆಗೆ ಮುಕ್ತಾಯಗೊಂಡ ರೈತ ಚೈತನ್ಯ ಯಾತ್ರೆ ಒಂದು ಲೇಟೆಸ್ಟ್ ಉದಾಹರಣೆ. (ಸಿದ್ದು ತವರು ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ)

ರೈತರ ಸರಣಿ ಆತ್ಮಹತ್ಯೆಯ ವೇಳೆ ಬಿಜೆಪಿ ಎರಡು ತಂಡದಲ್ಲಿ ರಾಜ್ಯಾದ್ಯಂತ ಯಾತ್ರೆ ಆರಂಭಿಸಿತ್ತು. ಒಂದು ಪ್ರಲ್ಹಾದ್ ಜೋಷಿ ನೇತೃತ್ವದಲ್ಲಿ ಇನ್ನೊಂದು ಯಡಿಯೂರಪ್ಪ ಮುಖಂಡತ್ವದಲ್ಲಿ. ಆದರೆ ಜೋಷಿ ಸಭೆಗೂ, ಬಿಎಸ್ವೈ ಸಭೆಗೂ ಜನರ ಪ್ರತಿಕ್ರಿಯೆಯ ವಿಚಾರದಲ್ಲಿ ಅಜಗಜಾಂತರದ ವ್ಯತ್ಯಾಸವಿತ್ತು.

ಬಿಎಸ್ವೈ ರೈತ ಚೈತನ್ಯ ಯಾತ್ರೆಯ ವೇಳೆ ಪಕ್ಷಕ್ಕೆ ಸಿಗುತ್ತಿದ್ದ ಜನಸ್ಪಂದನೆ, ಕಾರ್ಯಕರ್ತರ ಉತ್ಸಾಹ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೆ ಸರಿಸಾಟಿ ಯಾರೂ ಇಲ್ಲ ಎನ್ನುವುದನ್ನು ಮಗುದೊಮ್ಮೆ ರುಜುವಾತು ಪಡಿಸಿದೆ.

ಹಾವೇರಿಯಲ್ಲಿ ಆರಂಭವಾದ ರೈತ ಚೈತನ್ಯ ಯಾತ್ರೆಯ ಆರಂಭದಲ್ಲೇ ರಾಜ್ಯ ರಾಜಕಾರಣಕ್ಕೆ ಹಿಂದಿರುಗುವ ಇಂಗಿತ ವ್ಯಕ್ತ ಪಡಿಸಿದ್ದ ಯಡಿಯೂರಪ್ಪ, ಮೈಸೂರಿನಲ್ಲಿ ನಡೆದ ಸಮಾರೋಪ ಸಭೆಯಲ್ಲಿ 'ಸಿದ್ದು ಸರಕಾರ ಕೋಮಾದಲ್ಲಿದೆ, ಯಾವನಿಗೆ ಬೇಕು ರಾಷ್ಟ್ರ ರಾಜಕಾರಣ'ಎಂದು ಬಹಿರಂಗವಾಗಿಯೇ ಘೋಷಿಸಿ ಬಿಟ್ಟರು.

ರಾಜ್ಯ ರಾಜಕಾರಣದಲ್ಲಿ ಬಿಜೆಪಿಗೆ ಯಡಿಯೂರಪ್ಪ ಎಷ್ಟು ಅವಶ್ಯ? ಬಿಎಸ್ವೈ ರಾಜ್ಯ ರಾಜಕಾರಣಕ್ಕೆ ಮರಳಲು ವೇದಿಕೆ ಸಜ್ಜಾಗುತ್ತಿದೆಯೇ? ಕೆಲವೊಂದು ಅಂಶಗಳು ಸ್ಲೈಡಿನಲ್ಲಿ..

ಮೈಸೂರಿನ ಸಮಾರೋಪ ಸಭೆ

ಮೈಸೂರಿನ ಸಮಾರೋಪ ಸಭೆ

ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ ಹೆಸರು ಪ್ರಸ್ತಾಪವಾಗುತ್ತಿದಂತೆಯೇ ಕಾರ್ಯಕರ್ತರ ಮತ್ತು ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟುತ್ತಿದ್ದದ್ದು, ಬಿಎಸ್ವೈ ಅವರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದವರಿಗೆ ವೇದಿಕೆಯಲ್ಲೇ ತಿರುಗೇಟು ನೀಡುವಂತಿತ್ತು.

ಕೆಜೆಪಿ ಹುಟ್ಟುಹಾಕಿದಾಗ

ಕೆಜೆಪಿ ಹುಟ್ಟುಹಾಕಿದಾಗ

ಕಳೆದ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಹುಟ್ಟುಹಾಕಿದ್ದ ಕೆಜೆಪಿಗೆ ನಿರೀಕ್ಷಿತ ಫಲಿತಾಂಶ ಬರದಿದ್ದರೂ, ಬಿಜೆಪಿ ಮತಬ್ಯಾಂಕಿಗೆ ಲಗ್ಗೆಯಿಟ್ಟದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದನ್ನು ಬಿಜೆಪಿಯ ಮುಖಂಡರೇ ಹಲವು ಬಾರಿ ಬಹಿರಂಗವಾಗಿ ಒಪ್ಪಿಕೊಟ್ಟಿದ್ದುಂಟು. ಕೆಜೆಪಿ ಹುಟ್ಟು ಹಾಕಿದ ಸಂದರ್ಭದಲ್ಲೂ ಯಡಿಯೂರಪ್ಪ ತನ್ನ ಶಕ್ತಿಯನ್ನು ತೋರಿದ್ದರು.

ಸಂಸದರಾದ ಯಡಿಯೂರಪ್ಪ

ಸಂಸದರಾದ ಯಡಿಯೂರಪ್ಪ

ರಾಜ್ಯ ರಾಜಕಾರಣದಿಂದ ಯಡಿಯೂರಪ್ಪ ಅವರನ್ನು ದೂರವಿರಿಸಲು ಮೊದಲ ಪ್ರಯತ್ನವಾಗಿ ಬಿಜೆಪಿ ಅವರನ್ನು ಲೋಕಸಭೆಗೆ ಸ್ಪರ್ಧಿಸುವಂತೆ ಮಾಡಿತು, ಭಾರೀ ಅಂತರದಿಂದ ಶಿವಮೊಗ್ಗ ಕ್ಷೇತ್ರದಿಂದ ಬಿಎಸ್ವೈ ಗೆದ್ದರೂ ಕೂಡಾ. ನಂತರ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ಆದರೂ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲೇ ತನ್ನ ಒಲವು ಮುಂದುವರಿಸಿದರು, ರಾಜ್ಯ ಬಿಜೆಪಿಗೆ ತಾನೆಷ್ಟು ಮುಖ್ಯ ಎನ್ನುವುದನ್ನು ಕೇಂದ್ರದ ನಾಯಕರಿಗೂ ಮನವರಿಕೆ ಕೂಡಾ ಮಾಡಿದ್ದರು.

ರಾಜ್ಯ ಪ್ರವಾಸ

ರಾಜ್ಯ ಪ್ರವಾಸ

ಬಿಎಸ್ವೈ ಸಂಸದರಾಗುತ್ತಿದ್ದಂತೆಯೇ, ಇತ್ತ ರಾಜ್ಯ ಬಿಜೆಪಿ ಮುಖಂಡರೂ ಯಡಿಯೂರಪ್ಪ ಅವರನ್ನು ಸೈಡ್ಲೈನ್ ಮಾಡಲಾರಂಭಿಸಿದರು, ಅವರ ಸಲಹೆ ಕೇಳುವುದನ್ನು ಕಮ್ಮಿ ಮಾಡಿದರು. ಆದರೆ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಯಡಿಯೂರಪ್ಪ ರಾಜ್ಯದೆಲ್ಲಡೆ ಪ್ರವಾಸ ಮಾಡುತ್ತಲೇ ಇದ್ದರು. ಎಪ್ಪತ್ತರ ವಯಸ್ಸಿನಲ್ಲೂ ಪಾದರಸದಂತೆ ರಾಜ್ಯದೆಲ್ಲಡೆ ಸುತ್ತಾಡಿ ಕಾರ್ಯಕರ್ತರು, ರೈತರ ಜೊತೆ ಒಡನಾಟವನ್ನು ಮುಂದುವರಿಸಿದರು. ಬಿಜೆಪಿಯನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇನೆ ಎನ್ನುವುದೇ ಇವರ ಧ್ಯೇಯ ವಾಕ್ಯವಾಗಿತ್ತು.

ಪ್ರತಿಪಕ್ಷವಾಗಿ ಬಿಜೆಪಿ ವೈಫಲ್ಯ

ಪ್ರತಿಪಕ್ಷವಾಗಿ ಬಿಜೆಪಿ ವೈಫಲ್ಯ

ಸಿದ್ದರಾಮಯ್ಯ ಸರಕಾರದ ಹಲವು ವೈಫಲ್ಯವನ್ನು ವಿರೋಧ ಪಕ್ಷವಾಗಿ ಬಿಜೆಪಿ, ಸಾರ್ವಜನಿಕರಿಗೆ ಮನದಟ್ಟು ಮಾಡುವಲ್ಲಿ ವಿಫಲವಾಯಿತು. ಅಸೆಂಬ್ಲಿಯಲ್ಲಿ ಯಡಿಯೂರಪ್ಪನವರ ಅನುಪಸ್ಥಿತಿಯನ್ನು ಜೆಡಿಎಸ್ ಸಮರ್ಥವಾಗಿ ಬಳಸಿಕೊಂಡಿತು. ರಾಜ್ಯದಲ್ಲಿ ಪ್ರತಿಪಕ್ಷ ಯಾವುದು ಜೆಡಿಎಸ್ಸೋ ಅಥವಾ ಬಿಜೆಪಿಯೋ ಎಂದು ಯಡಿಯೂರಪ್ಪ ಗುಡುಗಿದ ನಂತರ ರಾಜ್ಯ ಬಿಜೆಪಿ ನಾಯಕರು ತಮ್ಮ ಹೋರಾಟವನ್ನು ತೀವ್ರಗೊಳಿಸಿದರು.

ರೈತರ ಆತ್ಮಹತ್ಯೆ

ರೈತರ ಆತ್ಮಹತ್ಯೆ

ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಮಲಗಿದ್ದ ರಾಜ್ಯ ಬಿಜೆಪಿ ನಾಯಕರನ್ನು ಬಡಿದೆಬ್ಬಿಸಿದ್ದು ಯಡಿಯೂರಪ್ಪನವರೇ. ನಿಮ್ಮಲ್ಲಿದ್ದ ಶಕ್ತಿ ಏನಾಯಿತು? ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಅವರನ್ನು ಭೇಟಿಯಾಗಿ ಸ್ವಾಂತ್ವನ ಹೇಳಲು ನಿಮಗೇನು ದಾಡಿ ಎಂದು ಯಡಿಯೂರಪ್ಪ ಬೆಂಡೆತ್ತಿದ್ದ ನಂತರ ರಾಜ್ಯ ಬಿಜೆಪಿ ನಾಯಕರು ಪ್ರವಾಸಕ್ಕೆ ಮುಂದಾದರು. ಆದರೆ ಯಡಿಯೂರಪ್ಪ ಹೊರತಾದ ಬಿಜೆಪಿ ನಾಯಕರ ಭೇಟಿ ಅಷ್ಟಾಗಿ ಸುದ್ದಿಯಾಗಲೇ ಇಲ್ಲ.

ಬಿಬಿಎಂಪಿ ಚುನಾವಣೆ

ಬಿಬಿಎಂಪಿ ಚುನಾವಣೆ

ಬಿಬಿಎಂಪಿ ಚುನಾವಣೆಯಲ್ಲೂ ಯಡಿಯೂರಪ್ಪನವರ ಅನುಭವವನ್ನು ಹಂಚಿಕೊಳ್ಳಲು ತಯಾರಿಲ್ಲದವರು, ಕೊನೇ ಕ್ಷಣದಲ್ಲಿ ಅವರ ಜನಪ್ರಿಯತೆಯನ್ನು ಅರಿತು ಪ್ರಚಾರಕ್ಕೆ ಬಳಸಿಕೊಂಡಿದ್ದು ನಮ್ಮ ಮುಂದಿದೆ. ಸೀಟು ಹಂಚಿಕೆ ವಿಚಾರದಲ್ಲಿ ಮುನಿಸಿಕೊಂಡು ನಿಮ್ಮ ಸಹವಾಸವೇ ಬೇಡ, ದೆಹಲಿಯಲ್ಲಿ ಅಧಿವೇಶನ ನಡೆಯುತ್ತಿದೆ ಅಲ್ಲೇ ಇರುತ್ತೇನೆಂದು ಗುಡುಗಿದ್ದ ಯಡಿಯೂರಪ್ಪನವರನ್ನು ಮನವೊಲಿಸಿ ಪ್ರಚಾರಕ್ಕೆ ಬಳಸಿಕೊಳ್ಳಲಾಯಿತು. ಬಿಬಿಎಂಪಿ ಚುನಾವಣೆಯ ವೇಳೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ವೀರಶೈವ ಮಠಾಧೀಶರನ್ನು ಸಮಾಧಾನ ಪಡಿಸಿದ್ದು ಯಡಿಯೂರಪ್ಪನವರೇ..

ಬಿಬಿಎಂಪಿ ಮೇಯರ್ ಚುನಾವಣೆ

ಬಿಬಿಎಂಪಿ ಮೇಯರ್ ಚುನಾವಣೆ

ನೂರು ಸ್ಥಾನ ಗೆದ್ದು ಆರಾಮಾಗಿದ್ದು ಸೂಕ್ತ ರಣತಂತ್ರ ರೂಪಿಸುವಲ್ಲಿ ಎಡವಿದ್ದ ರಾಜ್ಯ ಬಿಜೆಪಿಗೆ, ಯಡಿಯೂರಪ್ಪ ಸರಿಯಾಗಿ ರಾಜಕೀಯ ಅನುಭವದ ಪಾಠವನ್ನು ವಿವರಿಸಿದ್ದಾರೆ. ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದರೆ ಮೇಯರ್ ಚುನಾವಣೆ ಗೆಲ್ಲಲು ಶ್ರಮ ಪಡುವ ಅವಶ್ಯಕತೆಯೇ ಬರುತ್ತಿರಲಿಲ್ಲ ಎನ್ನುವ ನೋವೂ ಬಿಜೆಪಿ ಆಪ್ತವಲಯದಿಂದ ಕೇಳಿ ಬರುತ್ತಿತ್ತು.

ರೈತ ಚೈತನ್ಯ ಯಾತ್ರೆ

ರೈತ ಚೈತನ್ಯ ಯಾತ್ರೆ

ಮೈಸೂರಿನಲ್ಲಿ ಮುಕ್ತಾಯಗೊಂಡ ರೈತ ಚೈತನ್ಯ ಯಾತ್ರೆ ಕಂಪ್ಲೀಟ್ ಯಡಿಯೂರಪ್ಪನವರ ಶೋ ಆಗಿತ್ತು. ರಾಜ್ಯದ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಯಾಕೆ ರಾಜ್ಯ ಬಿಜೆಪಿಗೆ ಮುಖ್ಯ ಎನ್ನುವುದನ್ನು ಚೈತನ್ಯ ಯಾತ್ರೆಯ ಸಮಾರೋಪ ಸಭೆ ಮತ್ತೆ ಮತ್ತೆ ರುಜುವಾತು ಪಡಿಸಿತು. ಸಭೆಯಲ್ಲಿ ಯಡಿಯೂರಪ್ಪ ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಶೆಟ್ಟರ್, ಸದಾನಂದ ಗೌಡ, ಪ್ರಲ್ಹಾದ್ ಜೋಷಿ, ಅಶೋಕ್ ಆದಿಯಾಗಿ ಎಲ್ಲರೂ ಮುಜುಗರಕ್ಕೀಡಾಗುವಂತೆ ಮಾಡಿತು.

 RSS ಮುಖಂಡರಿಂದ ಮಾಹಿತಿ

RSS ಮುಖಂಡರಿಂದ ಮಾಹಿತಿ

ಯಶಸ್ವೀ ರೈತ ಚೈತನ್ಯ ಯಾತ್ರೆ, ಯಾತ್ರೆಯುದ್ದಕ್ಕೂ ಯಡಿಯೂರಪ್ಪನವರಿಗೆ ಸಿಗುತ್ತಿದ್ದ ಅಭೂತಪೂರ್ವ ಜನಸ್ಪಂದನೆ ಎಲ್ಲವನ್ನೂ ರಾಜ್ಯ RSS ಮುಖಂಡರು, ಕೇಂದ್ರದ ಬಿಜೆಪಿ ನಾಯಕರಿಗೆ ವಿವರಿಸಿದ್ದಾರೆ. ಬಿಬಿಎಂಪಿ ಮೇಯರ್ ಗದ್ದುಗೇರುವಲ್ಲಿ ಬಿಜೆಪಿ ವಿಫಲವಾಗಿದ್ದು ಸೇರಿದಂತೆ ಹಲವು ವಿಚಾರವನ್ನು ಸಂಘದ ಪ್ರಮುಖರು ಬಿಜೆಪಿ ವರಿಷ್ಠರಿಗೆ ವಿವರಿಸಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಸಂಘದ ಪ್ರಮುಖರ ಜೊತೆ ಬಿಎಸ್ವೈ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಸದ್ಯದ ರಾಜಕೀಯ ವಾತಾವರಣದಲ್ಲಿ ಯಡಿಯೂರಪ್ಪ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ದಿನ ದೂರವಿಲ್ಲ ಎಂದೇ ಹೇಳಲಾಗುತ್ತಿದೆ.

English summary
BJP Leader, MP and former Karnataka Chief Minister B S Yeddyurappa popularity increasing day by day, will he returning into State Politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X