ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ರಣತಂತ್ರ ಹೂಡಿದ ಕಾಂಗ್ರೆಸ್

By Sachhidananda Acharya
|
Google Oneindia Kannada News

Recommended Video

Karnataka Elections 2018 : ಕಾಂಗ್ರೆಸ್ ಹೈ ಕಮಾಂಡ್ ರಣತಂತ್ರದಿಂದ 12 ಶಾಸಕರಿಗೆ ಅನ್ಯಾಯ| Oneindia Kannada

ಬೆಂಗಳೂರು, ಏಪ್ರಿಲ್ 16: ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಭಾನುವಾರ ರಾತ್ರಿ ಹೊರ ಬಿದ್ದಿದೆ. ಅನಿರೀಕ್ಷಿತ ರೀತಿಯಲ್ಲಿ 12 ಹಾಲಿ ಕಾಂಗ್ರೆಸ್ ಶಾಸಕರು ಟಿಕೆಟ್ ತಪ್ಪಿಸಿಕೊಂಡಿದ್ದಾರೆ.

ಒಟ್ಟು 218 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಹಲವು ದಿನಗಳ ಕಾಲ ಅಳೆದೂ ತೂಗಿ ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇದರ ನಡುವೆ ಹಲವು ರಾಜಕಾರಣಿಗಳ ಪುತ್ರರಿಗೂ ಟಿಕೆಟ್ ನೀಡಲಾಗಿದೆ. ಆದರೆ 12 ಹಾಲಿ ಶಾಸಕರಿಗೆ ಮಾತ್ರ ಟಿಕೆಟ್ ಸಿಕ್ಕಿಲ್ಲ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಇದು ಪಕ್ಷದಲ್ಲಿ ಬಂಡಾಯಕ್ಕೂ ಕಾರಣವಾಗಿದೆ. ಆದರೆ ಇದಕ್ಕೆ ಸೊಪ್ಪು ಹಾಕದೆ ಕಾಂಗ್ರೆಸ್ ಲೆಕ್ಕಾಚಾರ ಹಾಕಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

ಕಾಂಗ್ರೆಸ್ ಟಿಕೆಟ್ ತಪ್ಪಿಕೊಂಡ ಶಾಸಕರು ಮತ್ತು ಅವರ ವಿವರಗಳು ಇಲ್ಲಿವೆ. ಅವುಗಳ ಮೇಲೆ ಕಣ್ಣಾಡಿಸಿದಾಗ ಮೇಲ್ನೋಟಕ್ಕೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ರಣತಂತ್ರ ಹೆಣೆದಿರುವುದು ಕಂಡು ಬರುತ್ತಿದೆ.

ಜಗಳೂರು -ಎಚ್.ಪಿ.ರಾಜೇಶ್

ಜಗಳೂರು -ಎಚ್.ಪಿ.ರಾಜೇಶ್

ದಾವಣಗೆರೆಯ ಪರಿಶಿಷ್ಟ ಮೀಸಲು ಕ್ಷೇತ್ರವಾದ ಜಗಳೂರಿನ ಹಾಲಿ ಶಾಸಕ ಎಚ್.ಪಿ ರಾಜೇಶ್ ಗೆ ಟಿಕೆಟ್ ಕೈತಪ್ಪಿದೆ. ಇಲ್ಲಿ ಕಾಂಗ್ರೆಸ್ ಎ.ಎಲ್. ಪುಷ್ಮಾ ಅವರಿಗೆ ಟಿಕೆಟ್ ನೀಡಿದೆ.

ಹಾಗೆ ನೋಡಿದರೆ 2013ರ ಚುನಾವಣೆಯಲ್ಲಿ ರಾಜೇಶ್ ಇಲ್ಲಿ ಭರ್ಜರಿ ಮತಗಳಿಂದ ಜಯಗಳಿಸಿದ್ದರು. 77,805 ಮತಗಳನ್ನು ಪಡೆದಿದ್ದ ಅವರು ಸಮೀಪದ ಸ್ಪರ್ಧಿ ಕೆಜೆಪಿಯ ಎಸ್.ವಿ.ರಾಮಚಂದ್ರರನ್ನು ಸುಮಾರು 37 ಸಾವಿರ ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಹೀಗಿದ್ದೂ ಅವರಿಗೆ ಇಲ್ಲಿ ಟಿಕೆಟ್ ನೀಡದಿರುವುದು ಹಲವರನ್ನು ಅಚ್ಚರಿಗೆ ದೂಡಿದೆ.

ಹಾಗೆ ನೋಡಿದರೆ ರಾಜೇಶ್ ಅವರಿಗೆ ವೈಯಕ್ತಿಕ ಮತಗಳೂ ಇಲ್ಲಿವೆ. ಬಿಜೆಪಿಯಿಂದ 2008ರ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ವಿರೋಚಿತ ಸೋಲುಂಡಿದ್ದರು. ಇದಾದ ಬಳಿಕ 2011ರಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ 37ಸಾವಿರ ಮತಗಳನ್ನು ಪಡೆದಿದ್ದರು. ನಂತರ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು.

ಹೀಗೆ ಕಾಂಗ್ರೆಸ್ ನಿಂದ ಶಾಸಕರಾದ ರಾಜೇಶ್ ಈಗ ಟಿಕೆಟ್ ತಪ್ಪಿಸಿಕೊಂಡಿದ್ದಾರೆ. ಇಲ್ಲಿ ಕಾಂಗ್ರೆಸ್ ತಂತ್ರ ಮಾತ್ರ ಅರ್ಥವಾಗುತ್ತಿಲ್ಲ.

ತರೀಕೆರೆ - ಶ್ರೀನಿವಾಸ

ತರೀಕೆರೆ - ಶ್ರೀನಿವಾಸ

ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ತರೀಕೆರೆಯಲ್ಲಿ 2013ರ ಚುನಾವಣೆಯಲ್ಲಿ ಜಿ.ಎಚ್. ಶ್ರೀನಿವಾಸ ಗೆಲುವು ಸಾಧಿಸಿದ್ದರು. 35,817 ಮತಗಳನ್ನು ಪಡೆದಿದ್ದ ಅವರು 899 ಮತಗಳ ಅಲ್ಪ ಅಂತರದಿಂದ ಪ್ರಯಾಸದ ಜಯ ದಾಖಲಿಸಿದ್ದರು. ಶ್ರೀನಿವಾಸ ಅವರಿಗೆ ಭಾರೀ ಪೈಪೋಟಿ ನೀಡಿದ್ದ ಕೆಜೆಪಿ ಅಭ್ಯರ್ಥಿ ಡಿ.ಎಸ್. ಸುರೇಶ್ 34,918 ಮತಗಳನ್ನು ಪಡೆದಿದ್ದರು.

ಇಲ್ಲಿ ಇದೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ಎಚ್.ಎಂ.ಗೋಪಿಕೃಷ್ಣ 34,554 ಮತಗಳನ್ನು ಪಡೆದು ಇಬ್ಬರಿಗೂ ಬಾರಿ ಪೈಪೋಟಿ ನೀಡಿದ್ದರು. ಇದೇ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಎಸ್.ಎಂ. ನಾಗರಾಜು ಅವರಿಗೆ ಟಿಕೆಟ್ ನೀಡಿದೆ. ಬಹುಶಃ ಈ ಬಾರಿ ಶ್ರೀನಿವಾಸ ಸೋಲಬಹುದು ಎಂಬ ಭಯದಲ್ಲಿ ಕಾಂಗ್ರೆಸ್ ಟಿಕೆಟ್ ಬದಲಾಯಿಸಿರುವ ಸಾಧ್ಯತೆ ಇದೆ.

ಎಸ್.ಎಂ. ನಾಗರಾಜು ಇಲ್ಲಿ 1994ರಲ್ಲಿ ಸ್ವತಂತ್ರವಾಗಿ ನಿಂತು ಜಯ ಸಾಧಿಸಿ ಶಾಸಕರಾಗಿದ್ದರು. ಮುಂದೆ ಅವರು ಜೆಡಿಯುಗೆ ಪಕ್ಷಾಂತರ ಮಾಡಿದ್ದರು. ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.

ತಿಪಟೂರು - ಕೆ.ಷಡಕ್ಷರಿ

ತಿಪಟೂರು - ಕೆ.ಷಡಕ್ಷರಿ

ಅಂದುಕೊಂಡಂತೆ ನಡೆದಿದ್ದರೆ ಕೆ. ಷಡಕ್ಷರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಬೇಕಿತ್ತು. ಕೊನೆಯ ಻ವಧದಿಯ ಸಂಪುಟ ವಿಸ್ತರಣೆ ವೇಳೆ ಅವರು ಇನ್ನೇನು ಸಚಿವರು ಆದರು ಎಂದೇ ಭಾವಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರ ಸ್ಥಾನ ಗೀತಾ ಮಹದೇವ ಪ್ರಸಾದ್ ಪಾಲಾಗಿತ್ತು.

ಹಾಗೆ ಸಚಿವ ಸ್ಥಾನ ತಪ್ಪಿಸಿಕೊಂಡ ತುಮಕೂರಿನ ತಿಪಟೂರು ಶಾಸಕ ಷಡಕ್ಷರಿ ಈ ಬಾರಿ ಕಾಂಗ್ರೆಸ್ ಟಿಕೆಟ್ ನ್ನೇ ತಪ್ಪಿಸಿಕೊಂಡಿದ್ದಾರೆ.

1999 ರಲ್ಲಿಯೂ ತಿಪಟೂರು ಶಾಸಕರಾಗಿದ್ದ ಷಡಕ್ಷರಿ 2013ರ ಚುನಾವಣೆಯಲ್ಲಿ 56,817 ಮತಗಳನ್ನು ಪಡೆದು ಬಿಜೆಪಿಯ ಬಿ.ಸಿ. ನಾಗೇಶ್ ರನ್ನು 11 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಇಲ್ಲಿ ಕಳೆದ ಬಾರಿ ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಸುಮಾರು 28 ಸಾವಿರ ಮತಗಳನ್ನು ಪಡೆದಿದ್ದು ಅವರ ಗೆಲುವಿಗೆ ಸಹಾಯಕವಾಗಿತ್ತು. ಹೀಗಾಗಿ ಈ ಬಾರಿ ಸೋಲಿನ ಭಯದಲ್ಲಿ ಕಾಂಗ್ರೆಸ್ ಟಿಕೆಟ್ ಬದಲಾಯಿಸಿದೆ.

ಇಲ್ಲಿ ಈ ಬಾರಿ ಕಾಂಗ್ರೆಸ್ ಬಿ. ನಂಜಮರಿಯವರಿಗೆ ಟಿಕೆಟ್ ನೀಡಿದೆ. ನಂಜಮರಿ ಈ ಹಿಂದೆ 1994ರಲ್ಲಿ ಬಿಜೆಪಿಯಿಂದ ಮತ್ತು 2004ರಲ್ಲಿ ಜೆಡಿಎಸ್ ನಿಂದ ಶಾಸಕರಾಗಿದ್ದರು.

ಬಳ್ಳಾರಿ ಗ್ರಾ. - ಎನ್.ವೈ.ಗೋಪಾಲಕೃಷ್ಣ

ಬಳ್ಳಾರಿ ಗ್ರಾ. - ಎನ್.ವೈ.ಗೋಪಾಲಕೃಷ್ಣ

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಬಳ್ಳಾರಿ ಗ್ರಾಮಾಂತರ ಶಾಸಕರಾಗಿದ್ದ ಎನ್.ವೈ. ಗೋಪಾಲಕೃಷ್ಣ ಅವರಿಗೂ ಕಾಂಗ್ರೆಸ್ ಕೈ ಕೊಟ್ಟಿದೆ. ಹಿರಿಯ ರಾಜಕಾರಣಿ ಗೋಪಾಲಕೃಷ್ಣ ನಾಲ್ಕು ಬಾರಿ ಮೊಳಕಾಲ್ಮೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2013ರ ಚುನಾವಣೆಯಲ್ಲಿ ಅವರು ಇದೇ ಕ್ಷೇತ್ರದಲ್ಲಿ 7 ಸಾವಿರ ಮತಗಳಿಂದ ಸೋಲೊಪ್ಪಿಕೊಂಡಿದ್ದರು.

ಆದರೆ ಅವರಿಗೆ 2014ರ ಉಪಚುನಾವಣೆ ಮೂಲಕ ಬಳ್ಳಾರಿ ಭಾಗ್ಯದ ಬಾಗಿಲು ತೆರೆದಿತ್ತು. ಶ್ರೀರಾಮುಲು ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಗೋಪಾಲಕೃಷ್ಣ 83,906 ಮತಗಳನ್ನು ಪಡೆದು ಬಿಜೆಪಿಯ ಓಬಳೇಶ್ ರನ್ನು 33 ಸಾವಿರ ಮತಗಳಿಂದ ಸೋಲಿಸಿದ್ದರು.

ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆಯಾಗಿರುವ ಬಿ. ನಾಗೇಂದ್ರಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. 2013ರಲ್ಲಿ ಅವರು ಕೂಡ್ಲಿಗಿ ಕ್ಷೇತ್ರದಿಂದ ಸ್ಪತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಅತ್ತ ಮೊಳಕಾಲ್ಮೂರಿನಲ್ಲೂ ಗೋಪಾಲಕೃಷ್ಣಗೆ ಟಿಕೆಟ್ ನೀಡಿಲ್ಲ. ಹೀಗೆ ಎರಡೂ ಕ್ಷೇತ್ರಗಳಲ್ಲಿ ಅವರಿಗೆ ಟಿಕೆಟ್ ಕೈತಪ್ಪಿದೆ.

ಮಾಯಕೊಂಡ – ಕೆ. ಶಿವಮೂರ್ತಿ ನಾಯಕ್

ಮಾಯಕೊಂಡ – ಕೆ. ಶಿವಮೂರ್ತಿ ನಾಯಕ್

1994ರಿಂದ ಬಿಜೆಪಿ ಹಿಡಿತದಲ್ಲಿದ್ದ ಪರಿಶಿಷ್ಟ ಜಾತಿಗೆ ಮೀಸಲಾದ ದಾವಣಗೆರೆ ಜಿಲ್ಲೆಯ ಮಾಯಾಕೊಂಡ ಕ್ಷೇತ್ರವನ್ನು 2013ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ತೆಕ್ಕೆಗೆ ತಂದವರು ಕಾಂಗ್ರೆಸ್ ನ ಕೆ. ಶಿವಮೂರ್ತಿ ನಾಯಕ್.

2013ರ ಚುನಾವಣೆಯಲ್ಲಿ 32,435 ಮತಗಳನ್ನು ಪಡೆದಿದ್ದ ಅವರು ಕೆಜೆಪಿಯ ಎನ್. ಲಿಂಗಣ್ಣರನ್ನು ಕೇವಲ 700 ಚಿಲ್ಲರೆ ಮತಗಳಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರೂ ಅವರು ಪಡೆದಿದ್ದ ಮತಗಳು ಕೇವಲ ಶೇ. 24.02 ಮಾತ್ರ. ಈ ಹಿನ್ನಲೆಯಲ್ಲಿ ಅವರಿಗೆ ಇಲ್ಲಿ ಈ ಬಾರಿ ಟಿಕೆಟ್ ಮಿಸ್ ಆಗಿರುವ ಸಾಧ್ಯತೆ ಇದೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕೆ.ಎಸ್.ಬಸವರಾಜ್ ಎನ್ನುವವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಈ ಬಾರಿಯೂ ಕ್ಷೇತ್ರವನ್ನು ವಶಕ್ಕೆ ಪಡೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ.

ಕೊಳ್ಳೇಗಾಲ – ಎಸ್. ಜಯಣ್ಣ

ಕೊಳ್ಳೇಗಾಲ – ಎಸ್. ಜಯಣ್ಣ

ಪರಿಶಿಷ್ಟ ಜಾತಿಗೆ ಮೀಸಲಾದ ಚಾಮರಾಜನಗರದ ಕೊಳ್ಳೇಗಾಲ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಶಾಸಕ ಎಚ್. ಜಯಣ್ಣಗೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. 1994ರಲ್ಲೂ ಶಾಸಕರಾಗಿದ್ದ ಜಯಣ್ಣ 2013ರ ಚುನಾವಣೆಯಲ್ಲಿ 47,402 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಬಿಎಸ್ಪಿಯ ಎನ್. ಮಹೇಶ್ ರನ್ನು 10 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಎಸ್ಪಿ, ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಇದ್ದು ಈ ಬಾರಿ ಇಲ್ಲಿ ಸೋಲಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್ ಟಿಕೆಟ್ ಬದಲಾಯಿಸಿರುವ ಸಾಧ್ಯತೆ ಇದೆ.

ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಬಿ.ರಾಚಯ್ಯ ಪುತ್ರ ಎ.ಆರ್.ಕೃಷ್ಣಮೂರ್ತಿಗೆ ಇಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಹಿಂದಿನ ಚಾಮರಾಜನಗರದ ಸಂತೇಮರಹಳ್ಳಿ ಕ್ಷೇತ್ರದಿಂದ ಻ಅವರು ಎರಡು ಬಾರಿ ಗೆಲುವು ಸಾಧಿಸಿದ್ದರು. ನಂತರ ಲೋಕಸಭೆ ಚುನಾವಣೆಗೂ ಎರಡು ಬಾರಿ ನಿಂತಿದ್ದರೂ ಗೆಲುವು ದಕ್ಕಿರಲಿಲ್ಲ.

ಈಗವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊಳ್ಳೇಗಾಲದಿಂದ ಸ್ಪರ್ಧಿಸಲಿದ್ದಾರೆ.

ಬದಾಮಿ - ಬಿ.ಬಿ. ಚಿಮ್ಮನಕಟ್ಟಿ

ಬದಾಮಿ - ಬಿ.ಬಿ. ಚಿಮ್ಮನಕಟ್ಟಿ

ಕುರುಬ ಸಮುದಾಯದ ಮತಗಳು ಹೆಚ್ಚಿರುವ ಬಾಗಲಕೋಟೆ ಜಿಲ್ಲೆಯ ಬದಾಮಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವನರೇ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಹಾಲಿ ಶಾಸಕ ಬಿಬಿ ಚಿಮ್ಮನಕಟ್ಟಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ದವಾಗಿದ್ದರು. ಆದರೆ ಭಾನುವಾರ ಘೋಷಣಯಾದ ಕಾಂಗ್ರೆಸ್ ಟಿಕೆಟ್ ನಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಜತೆಗೆ ಬಿಬಿ ಚಿಮ್ಮನಕಟ್ಟಿಯವರಿಗೂ ಟಿಕೆಟ್ ಕೈತಪ್ಪಿದೆ.

ಹಾಗೆ ನೋಡಿದರೆ ಬಿಬಿ ಚಿಮ್ಮನಕಟ್ಟಿ ಈ ಕ್ಷೇತ್ರವನ್ನು 1978ರಿಂದ ಪ್ರತಿನಿಧಿಸುತ್ತಿದ್ದಾರೆ. 1978, 83, 94, 99 ಹಾಗೂ 2013ರ ಚುನಾವಣೆಯಲ್ಲಿ ಇಲ್ಲಿ ಅವರು ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಅವರು 57,446 ಮತಗಳನ್ನು ಪಡೆದು ಜೆಡಿಎಸ್ ನ ಮಹಂತೇಶ್ ಗುರುಪಾದಪ್ಪ ಻ವರನ್ನು ಸುಮಾರು 15 ಸಾವಿರ ಮತಗಳಿಂದ ಸೋಲಿಸಿದ್ದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಡಾ. ದೇವರಾಜ ಪಾಟೀಲ್ ಗೆ ಟಿಕೆಟ್ ನೀಡಿದೆ.

ಕಲಬುರಗಿ ಗ್ರಾಮಾಂತರ – ಜಿ ರಾಮಕೃಷ್ಣ

ಕಲಬುರಗಿ ಗ್ರಾಮಾಂತರ – ಜಿ ರಾಮಕೃಷ್ಣ

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕಲಬುರಗಿ ಗ್ರಾಮಾಂತರದಲ್ಲಿ ಹಾಲಿ ಶಾಸಕ ಜಿ. ರಾಮಕೃಷ್ಣರಿಗೆ ಟಿಕೆಟ್ ಕೈತಪ್ಪಿದೆ. ವಯಸ್ಸಿನ ಕಾರಣಕ್ಕೆ ಅವರಿಗೆ ಟಿಕೆಟ್ ಕೈತಪ್ಪಿರುವ ಸಾಧ್ಯತೆ ಇದೆ. ಸದ್ಯ ಅವರಿಗೆ 80 ವರ್ಷ ವಯಸ್ಸು.

2013ರ ಚುನಾವಣೆಯಲ್ಲಿ 40,075 ಮತಗಳನ್ನು ಪಡೆದಿದ್ದ ಜಿ ರಾಮಕೃಷ್ಣ ಸತತ ನಾಲ್ಕು ಬಾರಿ ಗೆಲುವು ಕಂಡಿದ್ದ ರೇವೂ ನಾಯಕ್ ಬೆಳಮಗಿಯವರಿಗೆ 8 ಸಾವಿರ ಮತಗಳ ಅಂತರದಿಂದ ಸೋಲುಣಿಸಿದ್ದರು.

ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ವಿಜಯ್ ಕುಮಾರ್ ಗೆ ಟಿಕೆಟ್ ನೀಡಿದೆ. ವಿಜಯ್ ಕುಮಾರ್ ಜಿ. ರಾಮಕೃಷ್ಣ ಮಗನಾಗಿದ್ದಾರೆ.

ಸಿರಗುಪ್ಪ -ಬಿ.ಎಂ. ನಾಗರಾಜ್

ಸಿರಗುಪ್ಪ -ಬಿ.ಎಂ. ನಾಗರಾಜ್

ಬಳ್ಲಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದೆ. ಇಲ್ಲಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಬಿ.ಎಂ. ನಾಗರಾಜ್ 65,490 ಮತಗಳನ್ನು ಪಡೆದು ಭರ್ಜರಿ ಜಯ ದಾಖಲಿಸಿದ್ದರು. ಅವರು ಬಿಜೆಪಿಯ ಎಂ.ಎಸ್.ಸೋಮಲಿಂಗಪ್ಪ ಎಂಬವರನ್ನು ಸುಮಾರು 22 ಸಾವಿರ ಮತಳಿಂದ ಸೋಲಿಸಿದ್ದರು.

ಇಲ್ಲಿ ಈ ಬಾರಿ ಕಾಂಗ್ರೆಸ್ ಹೊಸ ಮುಖ ಮುರಳಿಕೃಷ್ಣ ಎನ್ನುವವರಿಗೆ ಟಿಕೆಟ್ ನೀಡಿದೆ. ಇಲ್ಲಿ ಬಿಜೆಪಿ ಬಿಎಸ್ಆರ್ ಕಾಂಗ್ರೆಸ್ ಒಟ್ಟಾಗಿರುವುದರಿಂದ ಅಭ್ಯರ್ಥಿ ಬದಲಾವಣೆಯಾಗಿರುವ ಸಾಧ್ಯತೆ ಇದೆ.

ವಿಜಯಪುರ ನಗರ -ಮಕಬುಲ್ ಭಗವಾನ್

ವಿಜಯಪುರ ನಗರ -ಮಕಬುಲ್ ಭಗವಾನ್

2013ರ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಮಕಬುಲ್ ಭಗವಾನ್ ಗೆಲುವು ಸಾಧಿಸಿದ್ದರು. 48,615 ಮತಗಳನ್ನು ಪಡೆದಿದ್ದ ಅವರು 9 ಸಾವಿರ ಮತಗಳ ಅಂತರದಿಂದ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ರನ್ನು ಸೋಲಿಸಿದ್ದರು.

ಈ ಬಾರಿ ಅವರು ಬಿಜೆಪಿಗೆ ಬಂದಿದ್ದಾರೆ. ಹೀಗಾಗಿ ಇಲ್ಲಿ ಪ್ರತಿಪಕ್ಷಗಳಿಂದ ಪ್ರಭಲ ಸ್ಪರ್ಧೆ ನಿರೀಕ್ಷೆ ಹಿನ್ನಲೆಯಲ್ಲಿ ಅಬ್ದುಲ್ ಹಮೀದ್ ಮುಶ್ರಿಫ್ ರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

ಹಾನಗಲ್ -ಮನೋಹರ ತಹಶೀಲ್ದಾರ್

ಹಾನಗಲ್ -ಮನೋಹರ ತಹಶೀಲ್ದಾರ್

1989, 99 ಮತ್ತು 2013ರ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದಿಂದ ಗೆದ್ದಿದ್ದ ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಮನೋಹರ್ ತಹಶೀಲ್ದಾರ್ ಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ.

2013ರಲ್ಲಿ ತಹಶೀಲ್ದಾರ್ 66,324 ಮತಗಳನ್ನು ಪಡೆದು ಬಿಜೆಪಿಯ ಪ್ರಬಲ ಅಭ್ಯರ್ಥಿ ಸಿಎಂ ಉದಾಸಿಯವರನ್ನು ಕೇವಲ 6 ಸಾವಿರ ಮತಗಳಿಂದ ಸೋಲಿಸಿದ್ದರು. ಈ ಬಾರಿಯೂ ಇಲ್ಲಿ ಪ್ರಬಲ ಸ್ಪರ್ಧೆ ಎದುರಾಗುವ ಭಯದಲ್ಲಿ ಮೊದಲೇ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಿದೆ.

ಇಲ್ಲಿ ಕಾಂಗ್ರೆಸ್ ಶ್ರೀನಿವಾಸ ಮಾನೆಯವರಿಗೆ ಟಿಕೆಟ್ ನೀಡಿದೆ. ಅವರು ಗೆಲುವು ಸಾಧಿಸುತ್ತಾರಾ ಕಾದು ನೋಡಬೇಕಿದೆ.

ಬ್ಯಾಡಗಿ -ಬಸವರಾಜ ಶಿವಣ್ಣವರ್

ಬ್ಯಾಡಗಿ -ಬಸವರಾಜ ಶಿವಣ್ಣವರ್

ಕಾಂಗ್ರೆಸ್ ಉತ್ತರ ವಿಭಾಗ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಅವರಿಗಾಗಿ ಬಸವರಾಜ ಶಿವಣ್ಣವರ್ ತಮ್ಮ ಕ್ಷೇತ್ರ ಖಾಲಿ ಮಾಡಬೇಕಾಗಿ ಬಂದಿದೆ.

ಬ್ಯಾಡಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಿವಣ್ಣವರ್ 2013ರ ಚುನಾವಣೆಯಲ್ಲಿ 57,707 ಮತಗಳನ್ನು ಪಡೆದು ಕೆಜೆಪಿಯ ಶಿವರಾಜ್ ಸಜ್ಜನವರ್ ರನ್ನು 13 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಕೆಜೆಪಿ ಮತ್ತು ಬಿಜೆಪಿ ಕ್ರಮವಾಗಿ 44,348 ಮತ್ತು 37,877 ಮತಗಳನ್ನು ಪಡೆದಿದ್ದು ಎರಡೂ ಮತಗಳು ಒಟ್ಟಾದರೆ ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟ ಬುತ್ತಿ. ಈ ಕಾರಣಕ್ಕೆ ಇಲ್ಲಿ ಸ್ವತಃ ಕಾಂಗ್ರೆಸ್ ಕಾರ್ಯಾಧ್ಯಕ್ಷರನ್ನೇ ಪಕ್ಷ ಕಣಕ್ಕಿಳಿಸಿದೆ.

English summary
Karnataka election: The list of congress candidates for the Karnataka assembly elections 2018 has been released on Sunday night. 12 Congress MLAs have missed tickets in an unexpected way. With huge calculation congress has not given ticket to its MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X