• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ?

|
Google Oneindia Kannada News

ಬೆಂಗಳೂರು, ಜು. 30: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೆ ಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ಆತಂಕ ಶುರುವಾಗಿದೆ. ಮುಂದಿನ ಮುಖ್ಯಮಂತ್ರಿ ಯಾರು? ಎಂಬದರ ಸುಳಿವೂ ಸಿಗದಂತೆ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿತ್ತು. ಹೀಗಾಗಿ ಮಂತ್ರಿಸ್ಥಾನ ಯಾರಿಗೆ ಸಿಗುತ್ತದೆ? ಯಾರಿಗೆ ಸಿಗುವುದಿಲ್ಲ ಎಂಬ ಆತಂಕ ಈಗ ಸಚಿವಾಕಾಂಕ್ಷಿಗಳಿಗೆ ಎದುರಾಗಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ.

   ಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ಶುರುವಾಯ್ತು ಢವಢವ | Oneindia Kannada

   ಹೈಕಮಾಂಡ್ ಭೇಟಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಆಗುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ ಹೈಕಮಾಂಡ್ ನಡೆಯ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಹೀಗಾಗಿ ಪ್ರಮಾಣ ವಚನ ಸ್ವೀಕರಿಸುವವರ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಮುಂದೇನು ಎಂಬ ಟೆನ್ಶನ್ ಸಚಿವಾಕಾಂಕ್ಷಿಗಳಿಗೆ ಶುರುರಾಗಿದೆ. ಜೊತೆಗೆ ಸಚಿವ ಸಂಪುಟದ ಸಹೋದ್ಯೋಗಿಳ ಪಟ್ಟಿಯೊಂದಿಗೆ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ ಎಂಬ ಮಾಹಿತಿಯೂ ಇದೆ. ಯಾರಿಗಿದೆ ಮಂತ್ರಿಸ್ಥಾನದ ಭಾಗ್ಯ?

   ಯಾರು ಇನ್? ಯಾರು ಔಟ್?

   ಯಾರು ಇನ್? ಯಾರು ಔಟ್?

   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೈಕಮಾಂಡ್ ಭೇಟಿಯ ಸಂದರ್ಭದಲ್ಲಿ ಸಚಿವ ಸಂಪುಟ ಪಟ್ಟಿಯ ಬಗ್ಗೆ ತೀರ್ಮಾನ ತೆಗೆದುಕೊಂಡು ಬಿಟ್ಟರೆ? ಎಂಬ ಪ್ರಶ್ನೆಯೂ ಶಾಸಕರನ್ನು ಕಾಡುತ್ತಿದೆ. ಹೀಗಾಗಿ ಅತ್ತ ತಮ್ಮ ಸ್ವಕ್ಷೇತ್ರಗಳಿಗೂ ತೆರಳದೆ ಇತ್ತ ಬೆಂಗಳೂರಿನಲ್ಲಿಯೇ ಉಳಿಯುವುದೂ ಬಿಜೆಪಿ ಶಾಸಕರಿಗೆ ಕಷ್ಟವಾಗಿದೆ. ಪ್ರವಾಹ ಸ್ಥಿತಿಯ ಸಂದರ್ಭದಲ್ಲಿ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವುದು ಟೀಕೆಗೆ ಗುರಿಯಾಗಿದೆ.

   ಇದೇ ಸಂದರ್ಭದಲ್ಲಿ ದೆಹಲಿ ತಲುಪಿರುವ ಸಂಭಾವ್ಯ ಮಂತ್ರಿಗಳ ಪಟ್ಟಿ ಲಭ್ಯವಾಗಿದ್ದು, ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಿದ್ದ ಯಾರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಅಷ್ಟಕ್ಕೂ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಯಾರು ಸೇರ್ಪಡೆ ಆಗಲಿದ್ದಾರೆ? ಮುಂದಿದೆ ಸಂಭಾವ್ಯರ ಪಟ್ಟಿ.

   ಇವರಿಗೆಲ್ಲ ಮಂತ್ರಿ ಸ್ಥಾನ ಪಕ್ಕಾ?

   ಇವರಿಗೆಲ್ಲ ಮಂತ್ರಿ ಸ್ಥಾನ ಪಕ್ಕಾ?

   ಮುಖ್ಯಮಂತ್ರಿ ಹುದ್ದೆಗೆ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ ಮಾದರಿಯಲ್ಲಿಯೇ ಮಂತ್ರಿಸ್ಥಾನಗಳಿಗೆ ಶಾಸಕರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಮಾಹಿತಿಯಿದೆ. ಅದರಲ್ಲಿಯೂ ಕೆಲಸ ಮಾಡುವವರಿಗೆ ಆಧ್ಯತೆ ಕೊಡಲು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆಯಂತೆ. ಹೀಗಾಗಿ ಯುವ ಶಾಸಕರಿಗೆ ಹೆಚ್ಚು ಅವಕಾಶವಿದೆ ಎನ್ನಲಾಗುತ್ತಿದೆ. 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ನೂತನ ಸಚಿವ ಸಂಪುಟ ರಚನೆಯಾಗಲಿದೆ ಎಂಬ ಖಚಿತ ಮಾಹಿತಿಯಿದೆ.


   ನೂತನ ಸಂಪುಟಕ್ಕೆ ಸೇರ್ಪಡೆಯಾಗುವವರು ಯಾರು? ನೂತನ ಸಚಿವ ಸಂಪುಟದ ಸಂಭಾವ್ಯರ ಪಟ್ಟಿ ಹೀಗಿದೆ.


   1. ಡಾ. ಭರತ್ ಶೆಟ್ಟಿ-ಮಂಗಳೂರು ಉತ್ತರ

   2. ಪೂರ್ಣಿಮಾ ಶ್ರೀನಿವಾಸ್(ಹಿರಿಯೂರು) ಅಥವಾ ರೂಪಾಲಿ ನಾಯ್ಕ(ಕಾರವಾರ)

   3. ಅರವಿಂದ ಬೆಲ್ಲದ್ (ಧಾರವಾಡ ಪಶ್ಚಿಮ)

   4. ಬಸನಗೌಡ ಪಾಟೀಲ್ ಯತ್ನಾಳ್( ವಿಜಯಪುರ)

   5. ಎಸ್.ಎ. ರಾಮದಾಸ್ (ಕೃಷ್ಣರಾಜ)

   6. ಸತೀಶ್ ರೆಡ್ಡಿ (ಬೊಮ್ಮನಹಳ್ಳಿ)

   7. ಎಸ್.ಆರ್. ವಿಶ್ವನಾಥ್ (ಯಲಹಂಕ)

   8. ಎ.ಎಸ್. ಪಾಟೀಲ್ ನಡಹಳ್ಳಿ (ಮುದ್ದೆಬಿಹಾಳ)

   9. ರಾಜೂಗೌಡ (ಸುರಪುರ) ಅಥವಾ ಶಿವನಗೌಡ ನಾಯಕ್ ದೇವದುರ್ಗ)

   10. ಕುಮಾರ ಬಂಗಾರಪ್ಪ (ಸೊರಬ)

   11. ಎಂ.ಪಿ. ರೇಣುಕಾಚಾರ್ಯ (ಹೊನ್ನಾಳಿ)

   12. ವಿ. ಸೋಮಣ್ಣ (ಗೋವಿಂದರಾಜನಗರ)

   13. ದುರ್ಯೋಧನ ಐಹೊಳೆ (ರಾಯಭಾಗ)

   14. ಆರ್. ಅಶೋಕ್ (ಪದ್ಮನಾಭನಗರ)

   15. ಕೆ.ಎಸ್. ಈಶ್ವರಪ್ಪ (ಶಿವಮೊಗ್ಗ)

   16. ಪ್ರೀತಮ್ ಗೌಡ (ಹಾಸನ)

   17. ಮುರುಗೇಶ್ ನಿರಾಣಿ (ಬೀಳಗಿ)

   18. ಮುನಿರತ್ನ (ಆರ್‌ಆರ್‌ ನಗರ)

   19. ವಿ. ಸುನೀಲ್ ಕುಮಾರ್ (ಕಾರ್ಕಳ)

   20. ಬಿ. ಶ್ರೀರಾಮುಲು (ಮೊಳಕಾಲ್ಮೂರು)

   21. ಡಾ. ಅಶ್ವಥ್ ನಾರಾಯಣ (ಮಲ್ಲೇಶ್ವರ)

   22. ಜೆ.ಸಿ. ಮಾಧುಸ್ವಾಮಿ (ಚಿಕ್ಕನಾಯನಹಳ್ಳಿ)

   ವಲಸಿಗರೆಲ್ಲರಿಗೂ ಮಂತ್ರಿಸ್ಥಾನ ಖಚಿತ?

   ವಲಸಿಗರೆಲ್ಲರಿಗೂ ಮಂತ್ರಿಸ್ಥಾನ ಖಚಿತ?

   ಇವರೊಂದಿಗೆ ಬೇರೆ ಪಕ್ಷಗಳಿಂದ ಬಂದು ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಮಂತ್ರಿಗಳಾಗಿದ್ದ 11 ವಲಸಿಗರಿಗೂ ಮಂತ್ರಿ ಸ್ಥಾನ ಪಕ್ಕಾ ಆಗಿದೆ ಎಂಬ ಮಾಹಿತಿಯಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ 17 ಜನರು ಬಂದಿದ್ದರು. ಅವರಲ್ಲಿ ಶಾಸಕರಾಗಿ ಆಯ್ಕೆಯಾಗಿರುವವರಿಗೆ ಮಂತ್ರಿಸ್ಥಾನ ಕೊಡಲೇಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ರಾಜೀನಾಮೆಗೂ ಮೊದಲೇ ಕರಾರು ಹಾಕಿದ್ದಾರಂತೆ. ಅದರಂತೆ ಈ ಹಿಂದೆ ಮಂತ್ರಿಗಳಾಗಿದ್ದ 11 ಜನ ಜೊತೆಗೆ ಆರ್.ಆರ್. ನಗರ ಶಾಸಕ ಮುನಿರತ್ನ ಅವರಿಗೂ ಮಂತ್ರಿಸ್ಥಾನ ಸಿಗಲಿದೆ ಎಂಬ ಮಾಹಿತಿಯಿದೆ. ಜೊತೆಗೆ ಮೂವರು ಉಪಮುಖ್ಯಮಂತ್ರಿಗಳಾಗಲಿದ್ದಾರೆ ಎಂಬ ಮಾಹಿತಿಯಿದೆ.

   ಎಷ್ಟು ಮಂತ್ರಿಗಳಿಗೆ ಡಿಸಿಎಂ ಹುದ್ದೆ?

   ಎಷ್ಟು ಮಂತ್ರಿಗಳಿಗೆ ಡಿಸಿಎಂ ಹುದ್ದೆ?

   ಯಡಿಯೂರಪ್ಪ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾದವರಿಗೆ ಈ ಸಲ ಡಿಸಿಎಂ ಹುದ್ದೆ ಇಲ್ಲ ಎಂಬ ಮಾಹಿತಿ ಬಂದಿದೆ. ಆದರೆ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಕೊಟ್ಟಿರುವುದರಿಂದ ಮೂರು ಸಮುದಾಯಗಳಿಗೆ ಸೇರಿದವರಿಗೆ ಡಿಸಿಎಂ ಹುದ್ದೆ ಕೊಡಲು ಹೈಕಮಾಂಡ್ ತೀರ್ಮಾನ ಮಾಡಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ದೆಹಲಿಗೆ ಕರೆಯಿಸಿಕೊಂಡಿದ್ದ ಬಿ. ಶ್ರೀರಾಮುಲು ಅವರೂ ಸೇರಿದಂತೆ ಆರ್. ಅಶೋಕ್ ಹಾಗೂ ಕೆ.ಎಸ್. ಈಶ್ವರಪ್ಪ ಅವರಿಗೆ ಡಿಸಿಎಂ ಸ್ಥಾನ ಕೊಡಲಾಗುತ್ತದೆ ಎನ್ನಲಾಗಿದೆ.

   ಆದರೆ ದೆಹಲಿಗೆ ತೆರಳುವ ಮೊದಲು ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆ ಇನ್ನೂ ಎರಡ್ಮೂರು ದಿನಗಳ ನಂತರ ಮಾಡಲು ಹೈಕಮಾಂಡ್ ತೀರ್ಮಾನಿಸಲಿದೆ ಎಂದಿದ್ದರು. ಆದರೆ ರಾಜ್ಯದಲ್ಲಿ ಕೊರೊನಾ ಆರೋಗ್ಯ ತುರ್ತು ಪರಿಸ್ಥಿತಿ ಹಾಗೂ ಅತಿವೃಷ್ಟಿ ಸಂಕಷ್ಟ ಇರುವುದರಿಂದ ಇಂದೇ ಸಂಪುಟ ವಿಸ್ತರಣೆಗೆ ಆದೇಶ ಸಿಗಬಹುದು ಎಂಬ ಮಾಹಿತಿಯೂ ಕೇಳಿ ಬಂದಿದೆ.

   ಇದೇ ಸಂದರ್ಭದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿರುವ ಬಿಜೆಪಿ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೀಗಾಗಿ ಕಳೆದ ಎರಡು ವರ್ಷಗಳ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಲೂ ಬಿಜೆಪಿಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

   English summary
   Will there be a change in Karnataka Cabinet? Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X