ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರಿಗೆ ಒಲಿಯುತ್ತಾ ಮತ್ತೊಂದು ಪ್ರಮುಖ ಹುದ್ದೆ?

|
Google Oneindia Kannada News

ನವದೆಹಲಿ, ಜು. 08: ರಾಜಕೀಯ ಜೀವನದ ಒಂದು ಹಂತದಲ್ಲಿ ಕೆ.ಎಂ.ಎಫ್. ಅಧ್ಯಕ್ಷ ಸ್ಥಾನ ಪಡೆಯಲೂ ಪರದಾಡಿದ್ದ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ನಂತರ ರಾಜಕೀಯ ಜೀವನದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ರಾಜಕೀಯ ವಿರೋಧಿಗಳು ಹೋಗಲಿ, ಅವರ ರಾಜಕೀಯ ಸ್ನೇಹಿತರೂ ಕೂಡ ಅಸೂಯೆ ಪಡುವಂತೆ ಒಂದಾದಮೇಲೊಂದರಂತೆ ಅತಿ ಮಹತ್ವದ ಹುದ್ದೆಗಳನ್ನು ಅಲಂಕರಿಸುತ್ತ ಹೋದರು. ಆದರೆ ಇದೀಗ ಉನ್ನತ ಹುದ್ದೆಗಳಿಗೆ ಏರಿದಷ್ಟೇ ವೇಗವಾಗಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ.

ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಕೇಂದ್ರ ಸಂಪುಟದಿಂದ ಕೈಬಿಡುವ ಮೊದಲು ಅನೇಕ ವಿಷಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅವಲೋಕಿಸಿದ್ದಾರೆ ಎಂಬ ಮಾಹಿತಿಯಿದೆ. ಸತತ 7 ವರ್ಷಗಳಿಂದ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದ ಸದಾನಂದಗೌಡ ಅವರಿಗೆ ರಾಜೀನಾಮೆ ಕೊಡುವಂತೆ ಸಂಪುಟ ಪುನಾರಚನೆಗೆ ಎರಡು ದಿನಗಳಿರುವಾಗಲೇ ಹೈಕಮಾಂಡ್ ಸೂಚಿಸಿತ್ತು.

ಕೇಂದ್ರ ಸಂಪುಟಕ್ಕೆ ಶೋಭಾ ಕರಂದ್ಲಾಜೆ: ಬಿಎಸ್ವೈ ಕೈಬಿಟ್ಟರೂ ಮೋದಿ ಕೈಬಿಡಲಿಲ್ಲಕೇಂದ್ರ ಸಂಪುಟಕ್ಕೆ ಶೋಭಾ ಕರಂದ್ಲಾಜೆ: ಬಿಎಸ್ವೈ ಕೈಬಿಟ್ಟರೂ ಮೋದಿ ಕೈಬಿಡಲಿಲ್ಲ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲದಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿವಿಎಸ್ ನಂತರ ಕೇಂದ್ರ ಸಚಿವರಾಗಿ ಪ್ರಧಾನಿ ಮೋದಿ ಅವರ ನೀರಿಕ್ಷೆಗಳನ್ನು ತಲುಪಲಿಲ್ಲವಾ? ಅಷ್ಟಕ್ಕೂ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಸಂಪುಟದಿಂದ ಕೈಬಿಡಲು ಇದ್ದ ಕಾರಣಗಳೇನಾದರೂ ಏನು? ಮುಂದೆ ಅವರಿಗೆ ಬಿಜೆಪಿ ಹೈಕಮಾಂಡ್ ಕೊಡಲು ಉದ್ದೇಶಿಸಿರುವ ಮಹತ್ವದ ಹುದ್ದೆ ಯಾವುದು? ಮುಂದಿದೆ ಮಾಹಿತಿ!

ಭರವಸೆ ಕಳೆದುಕೊಂಡ ಪ್ರಧಾನಿ ಮೋದಿ?

ಭರವಸೆ ಕಳೆದುಕೊಂಡ ಪ್ರಧಾನಿ ಮೋದಿ?

2014ರಲ್ಲಿ ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆಗ ಕೇಂದ್ರದಲ್ಲಿ ಪ್ರಭಾವಿಯಾಗಿದ್ದ ದಿ. ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರೊಂದಿಗೆ ಸದಾನಂದಗೌಡರು ಸಂಪುಟ ಸೇರಿದ್ದರು. ಜೊತೆಗೆ ಅತ್ಯಂತ ಮಹತ್ವದ ರೇಲ್ವೆ ಖಾತೆಯನ್ನೂ ಕೂಡ ಅವರಿಗೆ ಕೊಡಲಾಗಿತ್ತು. ಒಂದು ರೇಲ್ವೆ ಬಜೆಟ್‌ನ್ನೂ ಕೂಡ ಡಿವಿಎಸ್ ಮಂಡನೆ ಮಾಡಿದ್ದರು. ಆದರೆ ರೇಲ್ವೆ ಖಾತೆಯಲ್ಲಿ ನಿರೀಕ್ಷಿತ ಸಾಧನೆ ಮಾಡದಿದ್ದರಿಂದ ಅವರಿಗೆ ಮಹತ್ವದ ಕಾನೂನು ಖಾತೆಯನ್ನು ಕೊಡಲಾಗಿತ್ತು ಎಂಬ ಮಾತಿದೆ.

ಮತ್ತೊಂದು ಮಹತ್ವದ ಖಾತೆ ನಿರ್ವಹಣೆ

ಮತ್ತೊಂದು ಮಹತ್ವದ ಖಾತೆ ನಿರ್ವಹಣೆ

ಆದರೆ ಮಹತ್ವದ ಕಾನೂನು ಖಾತೆಯನ್ನೂ ಕೂಡ ಅವರು ಸರಿಯಾಗಿ ನಿರ್ವಹಣೆ ಮಾಡಲಿಲ್ಲ ಎಂಬ ಆರೋಪಗಳಿವೆ. ಅದಾದ ಬಳಿಕ ಅಂಕಿ ಅಂಶ ಖಾತೆಯನ್ನು ಡಿವಿಎಸ್ ಅವರಿಗೆ ಪ್ರಧಾನಿ ಮೋದಿ ಕೊಟ್ಟಿದ್ದರು. ಮುಂದೆ ಎರಡನೇ ಅವಧಿಯಲ್ಲಿ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯನ್ನು ಕೊಡಲಾಗಿತ್ತು. ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಮಹಾಮಾರಿ ಇಡೀ ಜಗತ್ತನ್ನು ಆವರಿಸಿಕೊಂಡು, ನ್ಮಮ ದೇಶವನ್ನೂ ಸಂಕಷ್ಟಕ್ಕೆ ದೂಡಿತ್ತು. ರಾಸಾಯನಿಕ ಸಚಿವರಾಗಿ ಸದಾನಂದಗೌಡರ ಮೇಲೆ ಬಹುದೊಡ್ಡ ಜವಾಬ್ದಾರಿಯಿತ್ತು. ಅದನ್ನು ಅವರು ಸರಿಯಾಗಿ ನಿರ್ವಹಿಸಲಿಲ್ಲ ಎಂಬುದು ಮೋದಿ ಭರವಸೆ ಕಳೆದುಕೊಳ್ಳಲು ಒಂದು ಕಾರಣ ಎನ್ನಲಾಗಿದೆ. ಅದನ್ನು ಬಿಟ್ಟರೆ ಬೇರೆ ಕಾರಣಗಳೂ ಇವೆ.

ಸಮುದಾಯವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲ?

ಸಮುದಾಯವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲ?

ಖಾತೆ ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ಅವರ ನಿರೀಕ್ಷೆ ತಲುಪದಿದ್ದರೂ ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯವನ್ನು ಹಿಡಿದಿಟ್ಟುಕೊಳ್ಳುತ್ತಾರೆ ಎಂಬ ನಂಬಿಕೆಯನ್ನು ಮೋದಿ ಇಟ್ಟುಕೊಂಡಿದ್ದರಂತೆ. ಆದರೆ ಸದಾನಂದಗೌಡ ಅವರು ಸಮುದಾಯದ ನಾಯಕರಾಗಿ ಬೆಳೆಯಲಿಲ್ಲ ಎಂಬುದೂ ಕೂಡ ಕೇಂದ್ರ ಮಂತ್ರಿಮಂಡಲದಿಂದ ಕೈಬಿಡಲು ಮತ್ತೊಂದು ಕಾರಣ. ಕರ್ನಾಟಕದಲ್ಲಿ ಬಿಜೆಪಿಗೆ ಲಿಂಗಾಯತ ಸಮುದಾಯದ ಬೆಂಬಲ ಪಡೆದುಕೊಂಡಿದೆ. ಅದಕ್ಕೆ ಸಿಎಂ ಯಡಿಯೂರಪ್ಪ ಅವರು ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಒಕ್ಕಲಿಗ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ಸದಾನಂದಗೌಡರಿಗೆ ಒಂದಾದಮೇಲೊಂದರಂತೆ ಪ್ರಮುಖ ಖಾತೆಗಳನ್ನು ಮೋದಿ ಕೊಟ್ಟಿದ್ದರು. ಆದರೆ ಸಮುದಾಯದ ನಾಯಕರಾಗಿಯೂ ನಿರೀಕ್ಷಿತ ಮಟ್ಟವನ್ನು ಡಿವಿಎಸ್ ತಲುಪಲಿಲ್ಲ.

ಅಧಿಕಾರ ಪಡೆಯಿರಿ, ಆಡಳಿತ ಮಾಡಿ

ಅಧಿಕಾರ ಪಡೆಯಿರಿ, ಆಡಳಿತ ಮಾಡಿ

ಪ್ರಧಾನಿ ಮೋದಿ ಅವರು ತಮಗೆ ಸಂಬಂಧಿಸದ ಇಲಾಖೆಯಲ್ಲಿನ ಅಭಿವೃದ್ಧಿ ಕುರಿತಂತೆ ಯಾವುದೇ ದೂರುಗಳನ್ನು ಸಹಿಸುವುದಿಲ್ಲವಂತೆ. ಜೊತೆಗೆ ಬೇರೆ ಇಲಾಖೆಗಳಲ್ಲಿ ಹಸ್ತಕ್ಷೇಪವನ್ನೂ ಅವರು ಮಾಡುವುದಿಲ್ಲ ಎಂಬ ಮಾಹಿತಿಯಿದೆ. ಆದರೆ ಇಲಾಖೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡದೇ ಇದ್ದಲ್ಲಿ ಖಾತೆಯನ್ನು ಬದಲಾವಣೆ ಮಾಡಿ ಪ್ರಯೋಗ ಮಾಡುತ್ತಾರೆ.


ಸದಾನಂದಗೌಡರ ವಿಚಾರದಲ್ಲಿಯೂ ಹಲವು ಖಾತೆಗಳನ್ನು ಬದಲಾಯಿಸಿದ ಮೇಲೆ ಸಂಪುಟದಿಂದ ಕೈಬಿಡುವ ನಿರ್ಧಾರವನ್ನು ಮೋದಿ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಒಂದು ಅರ್ಥದಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ರಾಜಕೀಯ ಜೀವನ ಅಂತ್ಯವಾದಂತಾಗಿದೆ. ಮುಂದೇನು ಎಂದು ನೋಡಿದರೆ ರಾಜ್ಯಪಾಲರ ಹುದ್ದೆ ಕಾಣುತ್ತಿದೆ. ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಯಾವುದಾದರೊಂದು ರಾಜ್ಯದ ರಾಜ್ಯಪಾಲರಾಗುತ್ತಾರಾ?

ರಾಜ್ಯಪಾಲರಾಗುತ್ತಾರಾ ಸದಾನಂದಗೌಡರು?

ರಾಜ್ಯಪಾಲರಾಗುತ್ತಾರಾ ಸದಾನಂದಗೌಡರು?

ಕೇಂದ್ರ ಸಚಿವರಾಗಿದ್ದ ಥಾವರಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡುವ ನಿರ್ಧಾರ ತೆಗೆದುಕೊಂಡ ಬಳಿಕ ಅವರು ಸಚಿವಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಹೀಗಾಗಿ ಅದೇ ರೀತಿ ಸದಾನಂದಗೌಡರನ್ನೂ ರಾಜ್ಯಪಾಲರನ್ನಾಗಿ ನೇಮಕ ಮಾಡುತ್ತಾರೆ ಎನ್ನಲಾಗಿತ್ತು. ಥಾವರಚಂದ್ ಗೆಹ್ಲೋಟ್ ಅವರು ರಾಜ್ಯಸಭಾ ಸದಸ್ಯರಾಗಿದ್ದು, ಮತ್ತೊಬ್ಬರನ್ನು ಅವರ ಸ್ಥಾನಕ್ಕೆ ನೇಮಕ ಮಾಡಬಹುದು.


ಆದರೆ ಡಿ.ವಿ. ಸದಾನಂದಗೌಡರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ ಅವನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿದರೆ ಉಪ ಚುನಾವಣೆ ನಡೆಯಬೇಕು. ಈ ಸಂದರ್ಭದಲ್ಲಿ ಚುನಾವಣೆ ರಿಸ್ಕ್ ತೆಗೆದುಕೊಳ್ಳಲು ಸ್ವತಃ ಪ್ರಧಾನಿ ಮೋದಿ ಮುಂದಾಗುವುದಿಲ್ಲ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆ ನಡೆದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಮಾತ್ರ ಸದಾನಂದಗೌಡರನ್ನು ರಾಜ್ಯಪಾಲರನ್ನಾಗಿ ಮಾಡಬಹುದು ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಬಂದಿದೆ. ರಾಜ್ಯಪಾಲರಾಗಿದ್ದರೆ ಮುಂದಿನ ಚುನಾವಣೆಯಲ್ಲಿ ಡಿವಿಎಸ್ ಸ್ಪರ್ಧೆ ಮಾಡುತ್ತಾರಾ? ಇಲ್ಲ.

ಮುಂದಿನ ಚುನಾವಣೆಗೆ ಬಿಜೆಪಿ ಟಿಕೆಟ್ ಇಲ್ಲ?

ಮುಂದಿನ ಚುನಾವಣೆಗೆ ಬಿಜೆಪಿ ಟಿಕೆಟ್ ಇಲ್ಲ?

2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ತಮ್ಮ ಸಂಪುಟದಲ್ಲಿ ಭಾರಿ ಬದಲಾವಣೆ ಮಾಡಿದ್ದಾರೆ. ಜೊತೆಗೆ ತಮ್ಮ ಜನಪ್ರೀಯತೆ ಕಡಿಮೆ ಆಗುತ್ತಿರುವುದು ಅವರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಜೊತೆಗೆ ಅಭಿವೃದ್ಧಿಯಿಂದ ಮಾತ್ರ ಚುನಾವಣೆಯಲ್ಲಿ ಗೆಲವು ಸಾಧ್ಯ ಎಂದು ಪಶ್ಚಿಮ ಬಂಗಾಳ ವಿಧಾನಸಭಾ ಫಲಿತಾಂಶ ತೋರಿಸಿಕೊಟ್ಟಿದೆ. ಈ ಎಲ್ಲವನ್ನು ನೋಡಿದಾಗ ಮುಂದಿನ ಚುನಾವಣೆಯಲ್ಲಿ ಸದಾನಂದಗೌಡರಿಗೆ ಬಿಜೆಪಿ ಟಿಕೆಟ್ ಸಿಗುವುದು ಅನುಮಾನ.


ಇದಲ್ಲದೆ ಮುಂದಿನ ಚುನಾವಣೆ ಹೊತ್ತಿಗೆ ಸದಾನಂದಗೌಡರ ವಯಸ್ಸು ಸಹ 71 ಆಗಿರುತ್ತದೆ. 75 ವರ್ಷ ಮೀರಿದವರಿಗೆ ಚುನಾವಣಾ ರಾಜಕೀಯ ಬೇಡ ಎಂಬ ಬಿಜೆಪಿ ಅಲಿಖಿತ ನಿಯಮವೂ ಕೂಡ ಸದಾನಂದಗೌಡರಿಗೆ ಟಿಕೆಟ್ ಕೊಡಲು ಅಡ್ಡಿಯಾಗುತ್ತದೆ. ಹೀಗಾಗಿ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ರಾಜಕೀಯ ಜೀವನ ಮುಕ್ತಾಯವಾದಂತಾಗಿದೆ.

Recommended Video

Zodiac Sign ರಾಶಿ ನಕ್ಷತ್ರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ!! | Oneindia Kannada

English summary
What causes Former Union Minister D.V. Sadananda Gowda to abandon his ministry? Will Sadananda Gowda become governor? Here's information on more details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X