ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿ ರೆಡ್ಡಿ ಲೋಕಸತ್ತಾ ಬಿಟ್ಟು ಏಕೆ ಆಪ್ ಸೇರಿದರು?

By Prasad
|
Google Oneindia Kannada News

ಬೆಂಗಳೂರು, ಫೆ. 2 : ಗಾಳಿ ಬಂದತ್ತ ತೂರಿಕೋ ಎಂಬುದು ಕನ್ನಡದ ಅತ್ಯಂತ ಜನಪ್ರಿಯ ಗಾದೆ. ದೇಶದಾದ್ಯಂತ ಆಮ್ ಆದ್ಮಿ ಪಕ್ಷದ ಬಲವಾದ ಗಾಳಿ ಬೀಸಿದೆ. ಕರ್ನಾಟಕದಲ್ಲಿಯೂ ನಿಧಾನವಾಗಿ ಆ ಗಾಳಿ ವೇಗ ಪಡೆಯುತ್ತಿದೆ. ಭ್ರಷ್ಟಾಚಾರವನ್ನು ವಿರೋಧಿಸುತ್ತ ಜನರ ಮನ್ನಣೆ ಗಳಿಸಿರುವ ಮತ್ತು ಆಡಳಿತ ನಡೆಸುತ್ತಿರುವ ರೀತಿಯಿಂದಾಗಿ ಟೀಕೆಗೂ ಗುರಿಯಾಗಿರುವ ಎಎಪಿ ಪಕ್ಷಕ್ಕೆ, ಉತ್ತಮ ದೇಶ ಕಟ್ಟುವ ಗುರಿಯೊಂದಿಗೆ ಅನೇಕರು ಸೇರುತ್ತಿದ್ದಾರೆ.

ಈಗಾಗಲೆ ಏರ್ ಡೆಕ್ಕನ್ ಕಂಪನಿಯ ಮಾಲಿಕ ಕ್ಯಾಪ್ಟನ್ ಗೋಪಿನಾಥ್ ಅವರು ಆಮ್ ಆದ್ಮಿ ಪಕ್ಷವನ್ನು ಸೇರಿಕೊಂಡಿದ್ದಾರೆ. ಕರ್ನಾಟಕದ ಮತ್ತೊಬ್ಬ ಉದ್ಯಮಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಆಪ್ ಸೇರಲು ನಿರಾಕರಿಸಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯೆಂದರೆ, ರಾಜಕೀಯ ಮಾಡಲೆಂದೇ ಅಮೆರಿಕದಿಂದ ಬಂದಿರುವ ರವಿ ಕೃಷ್ಣಾ ರೆಡ್ಡಿ ಅವರು ಲೋಕಸತ್ತಾ ತ್ಯಜಿಸಿ ಆಮ್ಮ ಆದ್ಮಿ ಪಕ್ಷಕ್ಕೆ ಜೈ ಎದಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಜಾಗಟೆ ಬಾರಿಸುತ್ತಲೇ ಇರುವ ರವಿ ಕೃಷ್ಣಾ ರೆಡ್ಡಿ ಅವರು ಲೋಕಸತ್ತಾ ಯಾಕೆ ಬಿಟ್ಟರು, ಆಮ್ಮ ಆದ್ಮಿ ಪಕ್ಷ ಸೇರಲು ಅವರಿಗಿದ್ದ ಬಲವಾದ ಕಾರಣಗಳೇನು, ಮುಂದೆ ಅವರ ರಾಜಕೀಯ ನಡೆಗಳು ಹೇಗೆ ಇರಲಿವೆ ಎಂಬುದನ್ನು ಅವರು ತಮ್ಮ ವರ್ತಮಾನ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಲೇಖನದಲ್ಲಿ ವಿವರಿಸಿದ್ದಾರೆ. ಅದನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. [ಇಲ್ಲಿ ಬಂದಿದ್ದು ವ್ಯವಸ್ಥೆ ಬದಲಿಸಲು]

Why Ravi Krishna Reddy quit Lok Satta and joined AAP

ಸ್ನೇಹಿತರೇ,

ನಿಮಗೆಲ್ಲಾ ನನ್ನ ಸಕ್ರಿಯ ರಾಜಕೀಯ ಹೋರಾಟದ ಬಗ್ಗೆ ಗೊತ್ತೇ ಇದೆ. ಒಂದೂವರೆ ವರ್ಷದ ಹಿಂದೆ ನಾನು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸುವ ಲೋಕಸತ್ತಾ ಪಕ್ಷದ ಜೊತೆ ಗುರುತಿಸಿಕೊಂಡು ಕೆಲಸ ಮಾಡುತ್ತ ಬಂದಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ಇತ್ಯಾದಿಗಳನ್ನು ನೀವು ಗಮನಿಸಿರುತ್ತೀರಿ.

ಕಳೆದ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ನಮ್ಮ ರಾಜ್ಯದ ಜನ ಭ್ರಷ್ಟ ಬಿಜೆಪಿಯನ್ನು ಬದಿಗೊತ್ತಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಟ್ಟರು. ಆದರೆ ಆಡಳಿತದ ವಿಷಯದಲ್ಲಾಗಲಿ ಮತ್ತು ಭ್ರಷ್ಟಾಚಾರದ ವಿಷಯದಲ್ಲಾಗಲಿ ಈಗಿನ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಪಕ್ಷಕ್ಕಿಂತ ಉತ್ತಮ ಎನ್ನುವ ಭಾವನೆ ಜನಕ್ಕೆ ಇಲ್ಲಿಯ ತನಕ ಬರದ ಹಾಗೆಯೇ ಕಾಂಗ್ರೆಸ್ ನಡೆದುಕೊಂಡಿದೆ. ಹೇಳಬೇಕೆಂದರೆ, ನಮ್ಮ ನಾಡಿನ ಜನರೂ ಕಾಂಗ್ರೆಸ್ ಮೇಲೆ ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡೇನೂ ಅವರನ್ನು ಆರಿಸಲಿಲ್ಲ. ಭ್ರಷ್ಟ ಬಿಜೆಪಿಗೆ ಮತ್ತದರ ಪರಮಾತಿಪರಮ ಭ್ರಷ್ಟರಿಗೆ ಪಾಠ ಕಲಿಸಬೇಕೆಂಬ ಉದ್ದೇಶದಿಂದಷ್ಟೇ ಕಾಂಗ್ರೆಸ್ ಅನ್ನು ಬೆಂಬಲಿಸಿದರು. ಬೇರೆ ಇನ್ನೊಂದು ಪಕ್ಷವನ್ನು ಬೆಂಬಲಿಸುವುದಕ್ಕೆ ಇಲ್ಲಿ ಗಟ್ಟಿಯಾದ ಪರ್ಯಾಯವೇ ಇರಲಿಲ್ಲ.

\ಹಾಗೆ ನೋಡಿದರೆ, ಉತ್ತಮವಾದ ಪರ್ಯಾಯವೊಂದನ್ನು ಕಟ್ಟುವ ಜವಾಬ್ದಾರಿ ಮತ್ತು ಚಾರಿತ್ರಿಕ ಅವಕಾಶವೊಂದು ನಾಡಿನ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಾರರಿಗೆ ಇತ್ತು. ಆದರೆ, ಈ ಗುಂಪಿನ ಜನರು ತಮ್ಮ ಸಿನಿಕತನ, ಜವಾಬ್ದಾರಿ ನಿಭಾಯಿಸಲಾಗದ ಹೊಣೆಗೇಡಿತನ, ಮತ್ತು ಕೆಲವು ಸ್ವಕೇಂದ್ರಿತ ಸ್ವಾರ್ಥಮನೋಭಾವಗಳಿಂದಾಗಿ ಆ ಅವಕಾಶವನ್ನು ಹಾಳುಮಾಡಿಕೊಂಡಿದ್ದಷ್ಟೇ ಅಲ್ಲದೆ ಕ್ರಮೇಣವಾಗಿ ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಅಪ್ರಸ್ತುತರಾಗಿಬಿಟ್ಟರು. ಇದು ಅವರ ಸೋಲು ಮತ್ತು ನಿಷ್ಕ್ರಿಯೆಗಿಂತ ಹೆಚ್ಚಾಗಿ ರಾಜ್ಯದ ಸೋಲಾಗಿ ಪರಿಣಮಿಸಿರುವುದನ್ನು ರಾಜ್ಯದಲ್ಲಿ ಮುಂದುವರೆದ ದುರಾಡಳಿತ, ನಿರಾಡಳಿತ, ಕುಸಿಯುತ್ತಲೇ ಇರುವ ಸಾಮಾಜಿಕ ಮೌಲ್ಯಗಳು, ಹಾಗೂ ನಮ್ಮ ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಸಂಸ್ಥೆಗಳ ಅವನತಿಯಲ್ಲಿ ಕಾಣಬಹುದು.

ಆದರೆ, ಇದೇ ಸಮಯದಲ್ಲಿ ದೇಶದಲ್ಲಿ ರಕ್ತರಹಿತ ಕ್ರಾಂತಿಯೊಂದು ಜಾರಿಯಲ್ಲಿದೆ. ಮೂರು ವರ್ಷಗಳ ಹಿಂದೆ ದೇಶದಲ್ಲಿಯ ಮಿತಿಮೀರಿದ ಭ್ರಷ್ಟಾಚಾರದ ವಿರುದ್ಧ ರೂಪುಗೊಂಡ ಹೋರಾಟ ಕಳೆದ ವರ್ಷದ ಅಂತ್ಯದಲ್ಲಿ ದೆಹಲಿಯ ಜನ ಕೊಟ್ಟ ಪ್ರಜಾಸತ್ತಾತ್ಮಕ ತೀರ್ಮಾನದ ಮೂಲಕ ಪ್ರಮುಖ ಘಟ್ಟವನ್ನು ತಲುಪಿದೆ. ಇದು ಈ ರಾಷ್ಟ್ರದ ಜನ ಒಂದು ನಂಬಲರ್ಹ ಪರ್ಯಾಯಕ್ಕಾಗಿ ಕಾಯುತ್ತಿದ್ದದ್ದನ್ನು ಮತ್ತು ಅಂತಹುದೊಂದನ್ನು ಬೆಂಬಲಿಸಲು ಸಿದ್ದವಿರುವುದನ್ನು ತೋರಿಸುತ್ತದೆ. ರಾಷ್ಟ್ರವ್ಯಾಪಿಯಾಗಿ ಈ ಚಳವಳಿ ಕೇವಲ ಆಮ್ ಆದ್ಮಿ ಪಾರ್ಟಿಯ ರೂಪದಲ್ಲಿ ಮಾತ್ರವಲ್ಲ, ಬೇರೆ ಪಕ್ಷಗಳಲ್ಲಿಯೂ ಗಮನಾರ್ಹ ಮತ್ತು ಗುಣಾತ್ಮಕ ಬದಲಾವಣೆಗಳ ರೂಪದಲ್ಲಿ ಕಾಣಿಸುತ್ತಿದೆ. ಅದನ್ನು ಗಮನಿಸದ ಪಕ್ಷಗಳು ಮತ್ತು ತಮ್ಮ ಕೋಮುವಾದಿ ಮತ್ತು ವಂಶಪಾರಂಪರ್ಯ ನೆಲೆಗಳಿಂದ ಹೊರಬಂದು ಆಂತರಿಕ ಪ್ರಜಾಪ್ರಭುತ್ವದ ಮೂಲಕ ಸರ್ವಜನರ ಪರವಾಗಿ ರಾಜಕಾರಣ ಮಾಡಲಾಗದ ಪಕ್ಷಗಳು ಇತಿಹಾಸದ ಕಸದಬುಟ್ಟಿಗೆ ಸೇರಲಿವೆ. ಇಂತಹುದೇ ಒಂದು ಸಂದರ್ಭದಲ್ಲಿ ಕರ್ನಾಟಕವೂ ಬಂದು ನಿಂತಿದೆ.

ಇದೆಲ್ಲವನ್ನೂ ಮತ್ತು ರಾಜ್ಯದ ರಾಜಕೀಯ ವಾಸ್ತವಗಳನ್ನು ಗಮನಿಸಿ ನಾನು ಕಳೆದ ವಾರ ಲೋಕಸತ್ತಾ ಪಕ್ಷಕ್ಕೆ ರಾಜಿನಾಮೆ ನೀಡಿ, ಇಂದು ಆಮ್ ಆದ್ಮಿ ಪಕ್ಷದ ಸದಸ್ಯನಾಗಿ ಅಧಿಕೃತವಾಗಿ ಸೇರ್ಪಡೆ ಆಗಿದ್ದೇನೆ. ಇದು ಒಂದು ರೀತಿಯಲ್ಲಿ ತಾಂತ್ರಿಕವಾಗಿ ಪಕ್ಷಾಂತರವಾದರೂ ಲೋಕಸತ್ತಾ ಮತ್ತು ಆಮ್ ಆದ್ಮಿ ಪಾರ್ಟಿಗಳ ನಡುವೆ ಹೇಳಿಕೊಳ್ಳುವಂತಹ ಗಂಭೀರ ವ್ಯತ್ಯಾಸಗಳಿಲ್ಲ; ಅದರಲ್ಲೂ ಮೌಲ್ಯಾಧಾರಿತ ಮತ್ತು ಭ್ರಷ್ಟಾಚಾರಮುಕ್ತ ರಾಜಕಾರಣದ ವಿಚಾರದಲ್ಲಿ ಇಲ್ಲವೇ ಇಲ್ಲ. ಆದರೆ, ಕೆಲವು ಕಾರಣಾಂತರಗಳಿಂದಾಗಿ ಈ ಎರಡೂ ಪಕ್ಷಗಳು ಕೂಡಿ ಕೆಲಸ ಮಾಡುವ ಸ್ಥಿತಿ ಈಗ ಕರ್ನಾಟಕದಲ್ಲಿ ಇಲ್ಲ ಎನ್ನುವ ವಾತಾವರಣದಲ್ಲಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದಲಾವಣೆಗೆ ತುಡಿಯುತ್ತಿರುವ ಮತ್ತು ಆ ದಿಸೆಯಲ್ಲಿ ಗಟ್ಟಿಯಾದ ಚಳವಳಿಯೊಂದು ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ಅಂತಹ ಚಳವಳಿಯೊಂದರಿಂದ ಹೊರಗಿರುವುದು ನೈತಿಕವಾಗಿ ಸರಿಯಾದ ನಿರ್ಧಾರ ಅಲ್ಲ ಮತ್ತು ಅದನ್ನು ಬೆಂಬಲಿಸುವುದು ಮತ್ತು ಪಾಲ್ಗೊಳ್ಳುವುದು ಚಳವಳಿಯೆಡೆಗಿನ ನನ್ನ ಬದ್ಧತೆಯೂ ಹೌದು ಎನ್ನುವ ಕಾರಣಕ್ಕಾಗಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದೇನೆ. ನಾನು ನಂಬುವ ಮತ್ತು ನಾನು ತಪ್ಪು ಮಾಡಬಹುದಾದ ಸಂದರ್ಭದಲ್ಲಿ ನನ್ನನ್ನು ಕೈಹಿಡಿದು ಸರಿಯಾದ ಮಾರ್ಗದಲ್ಲಿ ನಡೆಸಬಲ್ಲ ಆತ್ಮೀಯರು ಮತ್ತು ಸ್ನೇಹಿತರು ನನ್ನ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ ಮತ್ತು ಇದು ಪಕ್ಷಾಂತರವಲ್ಲ, ತಾರ್ಕಿಕವಾಗಿ ಮುಟ್ಟಬೇಕಿದ್ದ ಗುರಿಯೇ ಎಂದು ಹೇಳಿದ್ದಾರೆ. ಹಾಗಾಗಿ ಯಾವುದೇ ಗೊಂದಲಗಳಿಲ್ಲದೆ ರಾಜ್ಯ ಆಮ್ ಆದ್ಮಿ ಪಕ್ಷದಲ್ಲಿಯ ಕೆಲವು ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ಆಮ್ ಆದ್ಮಿ ಪಾರ್ಟಿಯೆನ್ನುವುದು ಈಗ ವಾಸ್ತವ. ಸಾವಿರಾರು ಜನ ಆ ಪಕ್ಷಕ್ಕೆ ಯಾವುದೇ ವೈಯಕ್ತಿಕ ಲಾಭದ ನಿರೀಕ್ಷೆಗಳಿಲ್ಲದೆ ಸೇರುತ್ತಿದ್ದಾರೆ. ಅನೇಕ ಜನ ತಾವು ಮಾಡುತ್ತಿದ್ದ ನೌಕರಿಯಿಂದ ರಜೆ ಪಡೆದು ಮತ್ತು ಅದಾಗದ ಸಂದರ್ಭದಲ್ಲಿ ರಾಜೀನಾಮೆ ನೀಡಿ ಪೂರ್ಣಾವಧಿ ಕಾರ್ಯಕರ್ತರಾಗಿ ಒಂದು ಘನ ಉದ್ದೇಶಕ್ಕಾಗಿ ದುಡಿಯುತ್ತಿದ್ದಾರೆ. ನನ್ನ ಇಲ್ಲಿಯತನಕದ ಜೀವನದಲ್ಲಿ ವೈಯಕ್ತಿಕವಾಗಿ ಅನುಭವಕ್ಕೆ ಬಾರದಿದ್ದ ವಿದ್ಯಮಾನವೊಂದನ್ನು ಇಲ್ಲಿ ಕಾಣುತ್ತಿದ್ದೇನೆ. ಇದನ್ನು ಇತಿಹಾಸದ ಹಿನ್ನೆಲೆಯಲ್ಲಿ ಕೇಳಿದ್ದೆ, ಓದಿದ್ದೆ. ಆದರೆ ಸ್ವತಃ ನೋಡಿರಲಿಲ್ಲ. ಸಮಾಜದ ನಾನಾವರ್ಗದ ಜನರು ಒಂದು ಧ್ಯೇಯೋದ್ದೇಶಕ್ಕಾಗಿ ನಿಸ್ವಾರ್ಥವಾಗಿ ತೊಡಗಿಸಿಕೊಂಡು ತಮ್ಮೆಲ್ಲ ಹಮ್ಮುಬಿಮ್ಮು, ನೋವುನಲಿವುಗಳನ್ನು ಬದಿಗೊತ್ತಿ ತಮ್ಮೆಲ್ಲ ಎಚ್ಚರದ ಸ್ಥಿತಿಯನ್ನು ಈ ಚಳವಳಿಗೆ ದುಡಿಯುತ್ತಿರುವುದನ್ನು ಕಂಡು ನಾನು ಆಶ್ಚರ್ಯಪಟ್ಟಿದ್ದೇನೆ, ಹೆಮ್ಮೆಪಟ್ಟಿದ್ದೇನೆ. ಇದು ನಮ್ಮ ಕಾಲದ ಚಳವಳಿ. ನಮ್ಮದೇ ಚಳವಳಿ.

ನಾನು ಆಮ್ ಆದ್ಮಿ ಪಾರ್ಟಿಗೆ ಸೇರಿರುವ ಸಂಗತಿ ವರ್ತಮಾನ.ಕಾಮ್‌ನ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ (ನನ್ನ ಸಮಯವನ್ನೊಂದು ಬಿಟ್ಟು). ಮೊದಲಿನಿಂದಲೂ ನಾವು ನಮ್ಮ ಬಳಗದ ಎಲ್ಲಾ ಪ್ರಮುಖ ಲೇಖಕರ ಲೇಖನಗಳನ್ನು ಎಡಿಟ್ ಮಾಡದೇ ಪ್ರಕಟಿಸುತ್ತ ಬಂದಿದ್ದೇವೆ (ಕಾಗುಣಿತ ಮತ್ತು ಕೆಲವು ಭಾಷಾಪ್ರಯೋಗಗಳನ್ನು ಹೊರತುಪಡಿಸಿ). ಅದು ಮುಂದೆಯೂ ಮುಂದುವರೆಯುತ್ತದೆ. ನಮ್ಮಲ್ಲಿ ಈಗಾಗಲೇ ಬರೆಯುತ್ತಿರುವ ಲೇಖಕರಿಂದ ಇಲ್ಲಿ ಆಮ್ ಆದ್ಮಿ ಪಾರ್ಟಿಯ ಪರವಾಗಿ ಏನಾದರೂ ಕೆಲವು ಲೇಖನಗಳು ಬಂದರೆ ಅದು ಅವರ ಬರವಣಿಗೆ ಮತ್ತು ಸ್ವತಂತ್ರ ಅಭಿಪ್ರಾಯದ ಮುಂದುವರೆಕೆಯೇ ಹೊರತು ಬೇರಲ್ಲ, ಇದೊಂದು ಸ್ವತಂತ್ರ ವೇದಿಕೆ ಮತ್ತು ಹಾಗೆಯೇ ಮುಂದುವರೆಯುತ್ತದೆ; ನನ್ನ ವೈಯಕ್ತಿಕ ಆಯ್ಕೆಗಳ ಹೊರತಾಗಿ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

English summary
Why did Ravi Krishna Reddy quit Lok Satta party and joined Aam Admi Party (AAP). In a letter written by him in his website Varthamana he explains his political motives and ambitions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X