ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣ್ಯರ ನಿಧನಕ್ಕೆ ರಜೆ ಘೋಷಿಸುವ ಗೀಳು ಸರಕಾರಕ್ಕೆ ಯಾಕೆ?

By ಬಾಲರಾಜ್ ತಂತ್ರಿ
|
Google Oneindia Kannada News

ಗಣ್ಯರು ನಿಧನ ಹೊಂದಿದಾಗ ಸರಕಾರ ರಜೆ ಘೋಷಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಪದ್ದತಿ. ಕನ್ನಡ ಸಾರಸ್ವತ ಲೋಕದ ದಿಗ್ಗಜ ಜಿ ಎಸ್ ಶಿವರುದ್ರಪ್ಪ ಮತ್ತು ಯದು ವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನ ಹೊಂದಿದಾಗಲೂ ಸರಕಾರ ರಜೆ ಘೋಷಿಸಿತ್ತು.

ನಮ್ಮನ್ನು ಅಗಲಿದ ಈ ಇಬ್ಬರು ಗಣ್ಯರ ಮೇಲೆ ಅಪಾರ ಗೌರವವನ್ನು ಇಟ್ಟುಕೊಳ್ಳುತ್ತಾ ಸರಕಾರಕ್ಕೆ ನಾವು ಕೇಳಬೇಕಾಗಿರುವ ಪ್ರಶ್ನೆ ಏನಂದರೆ ಮೃತರ ಗೌರವಾರ್ಥ ರಜೆ ಘೋಷಿಸುವ ಅವಶ್ಯಕತೆ ಇತ್ತೇ? ರಜೆ ಘೋಷಿಸಿದರೆ ಮಾತ್ರ ಮೃತರಿಗೆ ಗೌರವ ನೀಡಿದಂತಾಗುತ್ತದೆಯೇ? (ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರ್ ವಿಧಿವಶ)

ಶಿವರುದ್ರಪ್ಪನವರು ಕಾಯಕವೇ ಕೈಲಾಸವೆಂದು ಜೀವನದುದ್ದಕ್ಕೂ ನಡೆದುಕೊಂಡು ಬಂದವರು. ಒಂದು ನಿಮಿಷ ಸಮಯ ವ್ಯರ್ಥ ಮಾಡಿದವರಲ್ಲ. ಅವರ ನಿಧನದ ಗೌರವಾರ್ಥ ಸರಕಾರ ತಮ್ಮ ಉದ್ಯೋಗಿಗಳಿಂದ ಒಂದು ಗಂಟೆ ಹೆಚ್ಚು ಕೆಲಸ ತೆಗೆಸಿಕೊಳ್ಳುವ ನಿರ್ಧಾರ ತೆಗೆದು ಕೊಂಡಿದ್ದರೆ ಹಿರಿಯ ಜೀವಕ್ಕೆ ನಿಜವಾದ ಶ್ರದ್ದಾಂಜಲಿ ನೀಡಿದಂತಾಗುತ್ತಿತ್ತು ಅಲ್ಲವೇ?

ಮೈಸೂರು ರಾಜ ಮನೆತನದ ಒಡೆಯರ್ ನಿಧನ ಹೊಂದಿದಾಗಲೂ ರಾಜ್ಯಾದ್ಯಂತ ರಜೆ ಘೋಷಿಸಲಾಯಿತು. ಸರಕಾರಕ್ಕೆ ರಜೆ ಘೋಷಿಸಲೇ ಬೇಕು ಎಂದಿದ್ದರೆ ಮೈಸೂರು ಜಿಲ್ಲಾ ವ್ಯಾಪ್ತಿಗೆ ಮೀಸಲಾಗುವಂತೆ ರಜೆ ನೀಡ ಬಹುದಾಗಿತ್ತಲ್ಲವೇ ಎನ್ನುವುದು ಬಹು ಜನರ ಅಭಿಪ್ರಾಯ ಕೂಡಾ. (ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ವಿಧಿವಶ)

Why government declaring holidays's on respect of leading personalities death

ಸರಕಾರೀ ಕೆಲಸದಲ್ಲಿರುವ ಉದ್ಯೋಗಿಗಳು ಮತ್ತು ಶಾಲಾ ಕಾಲೇಜಿನಲ್ಲಿ ಕೆಲಸ ನಿರ್ವಹಿಸುವವರಲ್ಲಿ ಎಷ್ಟು ಜನರು ಜಿಎಸ್ಎಸ್ ಮತ್ತು ಒಡೆಯರ್ ಹೆಸರನ್ನು ಬಲ್ಲರು ಎನ್ನುವುದೂ ಒಂದು ಪ್ರಶ್ನೆಯಲ್ಲವೇ? ಶೋಕಾಚಾರಣೆಗೆ ನೀಡುವ ರಜೆಯನ್ನು ಮೋಜಿಗಾಗಿ ಕಳೆಯುವವರೂ ಇವರಲ್ಲಿ ಇರುವುದಿಲ್ಲ ಎನ್ನುವುದು ಏನು ಗ್ಯಾರಂಟಿ?

ನನ್ನ ಸಹದ್ಯೋಗಿಯೊಬ್ಬರು ಅವರ ಅಕೌಂಟಿಗೆ ಒಂದು ಚೆಕ್ ಹಾಕಿದ್ದರು. ಅದು ಮಂಗಳವಾರ (ಡಿ 24) ಕ್ಲಿಯರೆನ್ಸ್ ಆಗಿ ಹಣ ಜಮಾ ಆಗಬೇಕಾಗಿತ್ತು. ಆದರೆ ಸರಕಾರ ಮಂಗಳವಾರ ರಜೆ ಘೋಷಿಸಿ ಚೆಕ್ ಕ್ಲಿಯರೆನ್ಸಿಗಾಗಿ ಗುರುವಾರದವರೆಗೆ ಕಾಯುವ ಪರಿಸ್ಥಿತಿ ಅವರಿಗೆ ಒದಗಿ ಬಂತು. ಅದನ್ನೇ ನಂಬಿಕೊಂಡಿದ್ದ ಅವರು ಹಾಕಿದ್ದ ಪ್ಲಾನ್ ಎಲ್ಲಾ ಉಲ್ಟಾಪಲ್ಟಾ ಆಯಿತು. ಇವರಿಗಾದ ಪರಿಸ್ಥಿತಿ ಬಹಳಷ್ಟು ಜನರಿಗೆ ಆಗಿರಬಹುದಲ್ಲವೇ? (2014ರ ಸರ್ಕಾರಿ ರಜಾ ಪಟ್ಟಿ, ಮೂರು ರಜೆ ನಷ್ಟ)

ಒಂದು ದಿನ ಸರಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸದೇ ಇದ್ದರೆ ಆಗುವ ಕೋಟಿ ಕೋಟಿ ನಷ್ಟವನ್ನು ತುಂಬುವವರು ಯಾರು? ಯಾರದರೂ ಗಣ್ಯರು ನಿಧನ ಹೊಂದಿದಾಗ ಸರಕಾರ ರಜೆ ಘೋಷಿಸುತ್ತದೆಯೇ ಎಂದು ಟಿವಿ/ಪತ್ರಿಕೆ ಜಾಲಾಡಿಸುವವರಿಗೂ ನಮ್ಮಲ್ಲಿ ಬರವಿಲ್ಲ ಎನ್ನುವುದು ಎಲ್ಲರೂ ಒಪ್ಪಿ ಕೊಳ್ಳಬೇಕಾದ ವಿಚಾರ.

ಈ ರೀತಿ ಸರಕಾರ ಶಾಲಾ ಕಾಲೇಜಿಗೆ ರಜೆ ನೀಡುತ್ತಾ ಬಂದರೆ, ಶಾಲೆಯಲ್ಲಿ portion ಮುಗಿಯದೇ ಇದ್ದ ಪಕ್ಷದಲ್ಲಿ ವಿದ್ಯಾರ್ಥಿಗಳಿಗಾಗುವ ತೊಂದರೆಗೆ ಯಾರು ಜವಾಬ್ದಾರರು? ಅದರ ಬದಲು ಮೃತ ಗಣ್ಯರ ಬಗ್ಗೆ ವಿಶೇಷ ಉಪನ್ಯಾಸ ಆಯೋಜಿಸಿ, ವಿದ್ಯಾರ್ಥಿಗಳಿಗೆ ಅವರ ಬಗ್ಗೆ ಪರಿಚಯಿಸಿದರೆ ಅವರ ಸಾವಿಗೆ ನಿಜವಾದ ಕಂಬನಿ ಮಿಡಿದಂತಾಗುವುದಲ್ಲವೇ?

ಯಾವ ವ್ಯಕ್ತಿಗಳೂ ನಿಧನರಾದಾಗ ಸರಕಾರ ರಜೆ ನೀಡದಂತೆ ಸೂಕ್ತ ಕಾನೂನು ಜಾರಿಗೊಳಿಸುವುದು ಯಾವಾಗ? ಮೃತ ಗಣ್ಯರ ಗೌರವಾರ್ಥ ರಜೆ ನೀಡುವ ಬದಲು ಒಂದು ಗಂಟೆ ಹೆಚ್ಚು ಕಾರ್ಯ ನಿರ್ವಹಿಸುವ ಪದ್ದತಿಯನ್ನು ನಮ್ಮ ಸರಕಾರೀ ಚೌಕಟ್ಟಿನಲ್ಲಿ ತಂದರೆ ಗಣ್ಯರಿಗೆ ಅದಕ್ಕಿಂತ ದೊಡ್ಡ ಶ್ರದ್ದಾಂಜಲಿ ಬೇಕೇ?

English summary
Why Karnataka government declaring holidays's on respect of leading personalities death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X