ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿದೆ ಕಾಂಗ್ರೆಸ್ ಹೈಕಮಾಂಡ್? ಎಲ್ಲಿ ರಾಹುಲ್ ಗಾಂಧಿ? ಏನಾಗುತ್ತಿದೆ ಕರ್ನಾಟಕದಲ್ಲಿ?

By ಪಟಕೂಟ ಯಶೋಧರ
|
Google Oneindia Kannada News

ತಮ್ಮ ಹೆಸರು ಸಚಿವರ ಪಟ್ಟಿಯಲ್ಲಿಲ್ಲವೆಂದ ಕೂಡಲೆ ಕಾಂಗ್ರೆಸ್ಸಿನಲ್ಲಿ ಆಂತರಿಕ ಭಿನ್ನಮತ ಭುಗಿಲೇಳುತ್ತದೆ, ಆಕಾಂಕ್ಷಿಗಳು ಸಿಡಿಮಿಡಿಗೊಳ್ಳುತ್ತ ಕೆಂಡ ಕಾರುತ್ತಾರೆ, ಅಭಿಮಾನಿಗಳು ಟೈರುಗಳಿಗೆ ಬೆಂಕಿ ಹಚ್ಚುತ್ತಾರೆ, ಕೆಲವರು ಹುದ್ದೆ ತಪ್ಪಿಸಿದವರ ಮೇಲೆ ಕೆಂಡಾಮಂಡಲರಾಗುತ್ತಾರೆ, ಅವರ ಕೋಪ ಶಮನ ಮಾಡಲು ಹಿರಿಯರು ಧಾವಿಸುತ್ತಾರೆ! ಭಿನ್ನಮತೀಯರ ಮನವೊಲಿಸಲು ಸೋತು ಸುಣ್ಣವಾಗುತ್ತಿದ್ದಾರೆ.

ಎಲ್ಲಿದೆ ಕಾಂಗ್ರೆಸ್ ಹೈಕಮಾಂಡ್? ಎಲ್ಲಿದ್ದಾರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ? ಏನಾಗುತ್ತಿದೆ ಕರ್ನಾಟಕ ಕಾಂಗ್ರೆಸ್ ನಲ್ಲಿ?

ಒಂದಾನೊಂದು ಕಾಲದಲ್ಲಿ ಹೈಕಮಾಂಡ್ ಅಂದ್ರೆ ಕಾಂಗ್ರೆಸ್ ಹೈಕಮಾಂಡ್ ನಂತೆ ಇರಬೇಕು ಎಂದು ಹೇಳುತ್ತಿದ್ದರು. ಆಗಿನ ಹೈಕಮಾಂಡ್ ಖದರ್, ಸದಸ್ಯರ ಪಕ್ಷನಿಷ್ಠೆ ಎಲ್ಲಿ ಹೋಯಿತು? ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಆದ್ರೂ ಇದೆಯಾ ಎಂಬಷ್ಟರ ಮಟ್ಟಿಗೆ ನಿರ್ಲಿಪ್ತವಾಗಿದೆ, ದೌರ್ಬಲ್ಯದ ಪ್ರದರ್ಶನ ಮಾಡುತ್ತಿದೆ ಕಾಂಗ್ರೆಸ್ ಹೈಕಮಾಂಡ್.

ಅತೃಪ್ತರ ಹಠಕ್ಕೆ ಮಣಿದ ಕಾಂಗ್ರೆಸ್, ದೆಹಲಿಗೆ ಎಂ.ಬಿ.ಪಾಟೀಲ ಅತೃಪ್ತರ ಹಠಕ್ಕೆ ಮಣಿದ ಕಾಂಗ್ರೆಸ್, ದೆಹಲಿಗೆ ಎಂ.ಬಿ.ಪಾಟೀಲ

ಯಾವಾಗ ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಕೈಲಿಂದ ಅಧಿಕಾರವನ್ನು ಪಡೆದುಕೊಂಡರೋ, ಅಲ್ಲಿಂದಲೇ ಚುನಾವಣೆಗಳಲ್ಲಿ ಸಾಲುಸಾಲು ಸೋಲು ಮಾತ್ರವಲ್ಲ, ಕಾಂಗ್ರೆಸ್ ಹೈಕಮಾಂಡ್ ತನ್ನ ಶಕ್ತಿಯನ್ನು ಕಳೆದುಕೊಳ್ಳಲು ಆರಂಭಿಸಿದೆ. ಇದೀಗ ಕರ್ನಾಟಕದಲ್ಲಿ ಖಾತೆಗಾಗಿ ಕಚ್ಚಾಟ ಭುಗಿಲೆದ್ದಿದ್ದರೂ, ಭಿನ್ನಮತವನ್ನು ಆರಂಭದಲ್ಲಿಯೇ ಹೊಸಕಿಹಾಕಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗಿಲ್ಲ.

ಇದು ಯಾವ ಮಟ್ಟಿಗೆ ಜಗಜ್ಜಾಹೀರಾಗಿತ್ತೆಂದರೆ, ಕರ್ನಾಟಕದಲ್ಲಿ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ, ಚುನಾವಣೆಗೂ ಮುನ್ನ ಬಲಿಷ್ಠರಾಗಿದ್ದ ಸಿದ್ದರಾಮಯ್ಯನವರೇ ಹೈಕಮಾಂಡ್ ನಂತೆ ಆಗಿದ್ದರು. ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಕರ್ನಾಟಕದಲ್ಲಿ ಮಾತ್ರ ಇದ್ದಿದ್ದರಿಂದ ಸಿದ್ದರಾಮಯ್ಯ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸದೆ ರಾಹುಲ್ ಅವರಿಗೆ ಬೇರೆ ದಾರಿ ಇದ್ದಿದ್ದಿಲ್ಲ.

ಭುಗಿಲೆದ್ದ ಆಕ್ರೋಶ: ಸಂಕಷ್ಟದಲ್ಲಿರುವ ಕಾಂಗ್ರೆಸ್ ಅನ್ನು ದಡ ಸೇರಿಸುವವರಾರು? ಭುಗಿಲೆದ್ದ ಆಕ್ರೋಶ: ಸಂಕಷ್ಟದಲ್ಲಿರುವ ಕಾಂಗ್ರೆಸ್ ಅನ್ನು ದಡ ಸೇರಿಸುವವರಾರು?

ಖಾತೆ ಸಿಕ್ಕಿಲ್ಲವೆಂದು ಮಾಜಿ ಸಚಿವರಾದ ಎಂಬಿ ಪಾಟೀಲ, ಸತೀಶ್ ಜಾರಕಿಹೊಳಿ, ಬಿಸಿ ಪಾಟೀಲ, ಎಸ್ ಆರ್ ಪಾಟೀಲ, ರಾಮಲಿಂಗಾ ರೆಡ್ಡಿ, ಎನ್ ಎ ಹ್ಯಾರಿಸ್, ಶಾಮನೂರು ಶಿವಶಂಕರಪ್ಪ ಮುಂತಾದವರು ಬೆಂಬಲಿಗರ ಮೂಲಕ ಕಂಡಕಂಡಲ್ಲಿ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ಒಂದೇ ಒಂದು ಮಾತು ಕೇಳಿಬಂದಿಲ್ಲ. ಸದ್ಯಕ್ಕೆ ಮಧ್ಯಪ್ರದೇಶದ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಅವರು ಎಲ್ಲವನ್ನೂ ಕೆಸಿ ವೇಣುಗೋಪಾಲ್ ಅವರಿಗೆ ಬಿಟ್ಟು ನಿರಾತಂಕರಾಗಿದ್ದಾರೆ.

ಸೊಲ್ಲೆತ್ತುವವರು ಒಬ್ಬರೂ ಇದ್ದಿದ್ದಿಲ್ಲ

ಸೊಲ್ಲೆತ್ತುವವರು ಒಬ್ಬರೂ ಇದ್ದಿದ್ದಿಲ್ಲ

ಒಂದಾನೊಂದು ಕಾಲದಲ್ಲಿ 'ಉಕ್ಕಿನ ಮಹಿಳೆ' ಎಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಲ್ಲಿ, ಸಂಪುಟದಲ್ಲಾಗಲಿ ಕಾಂಗ್ರೆಸ್ ಪಕ್ಷದ ಸಭೆಗಳಲ್ಲಾಗಲಿ ಎಲ್ಲ ಪುರುಷ ನಾಯಕರು ಕೈಕಟ್ಟಿಕೊಂಡು ನಿಲ್ಲಬೇಕಾಗಿತ್ತು. ಹೈಕಮಾಂಡ್ ವಿರುದ್ಧ ಸೊಲ್ಲೆತ್ತುವವರು ಒಬ್ಬರೂ ಇದ್ದಿದ್ದಿಲ್ಲ. ಸೊಲ್ಲೆತ್ತುವ ಧೈರ್ಯವೂ ಇರುತ್ತಿರಲಿಲ್ಲ. ನರಸಿಂಹ ರಾವ್, ಪ್ರಣಬ್ ಮುಖರ್ಜಿ, ಸೀತಾರಾಂ ಕೇಸರಿ ಅಂಥವರು ಕೂಡ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಎದುರಾಡಿದ್ದೇ ಇಲ್ಲ. ಕಾಂಗ್ರೆಸ್ಸಿನಲ್ಲಿ ಇಂದಿರಾ ಗಾಂಧಿ ಒಬ್ಬರೇ ಪುರುಷರು ಎಂಬಷ್ಟರ ಮಟ್ಟಿಗೆ ಇಂದಿರಾ ಪ್ರಬಲರಾಗಿದ್ದರು, ಉಳಿದವರು ದುರ್ಬಲರಾಗಿದ್ದರು.

ದನಿಯೆತ್ತಿದ್ದ ವೀರೇಂದ್ರ ಪಾಟೀಲರ ಪದಚ್ಯುತಿ

ದನಿಯೆತ್ತಿದ್ದ ವೀರೇಂದ್ರ ಪಾಟೀಲರ ಪದಚ್ಯುತಿ

ಹಿಂದೆ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಏನಾಗಿತ್ತೆಂಬುದನ್ನು ನೆನಪಿಸಿಕೊಳ್ಳಬಹುದು. ವೀರೇಂದ್ರ ಪಾಟೀಲ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ತನ್ನಿಚ್ಛೆಯ ಹೆಸರುಗಳನ್ನು ಹೈಕಮಾಂಡ್ ಸೂಚಿಸಿದ್ದನ್ನು ವಿರೋಧ ವ್ಯಕ್ತಪಡಿಸಿದ್ದಕ್ಕೆ ವೀರೇಂದ್ರ ಪಾಟೀಲರನ್ನೇ ಕಾಂಗ್ರೆಸ್ ಹೈಕಮಾಂಡ್ ಕಿತ್ತೆಸೆಯಿತು. ಹೈಕಮಾಂಡ್ ಆಶೀರ್ವಾದವಿಲ್ಲದೆ ಯಾವ ಮುಖ್ಯಮಂತ್ರಿಯೂ ಹುದ್ದೆಯಲ್ಲಿ ಉಳಿಯುವುದು ಸಾಧ್ಯವೇ ಇಲ್ಲ ಎಂಬುದನ್ನು ರಾಜೀವ್ ಗಾಂಧಿ ಅವರೇ ಸಾಬೀತುಪಡಿಸಿದ್ದರು. ಲಾಲ್ ಕೃಷ್ಣ ಅಡ್ವಾಣಿ ಅವರು ಈ ಕ್ರಮವನ್ನು ವಿರೋಧಿಸಿದ್ದರು.

ಎಲ್ಲೀ ಹೈಕಮಾಂಡ್, ನಾವೇ ಹೈಕಮಾಂಡ್

ಎಲ್ಲೀ ಹೈಕಮಾಂಡ್, ನಾವೇ ಹೈಕಮಾಂಡ್

ವೀರೇಂದ್ರ ಪಾಟೀಲ ಅವರಿಗಿಂತ ಮೊದಲು ಮತ್ತು ನಂತರ ಬಂದಿರುವ ಕಾಂಗ್ರೆಸ್ ಮುಖ್ಯಮಂತ್ರಿಗಳೆಲ್ಲ 'ಜೀ ಹುಜೂರ್' ಅನ್ನುವಂಥ ಮುಖ್ಯಮಂತ್ರಿಗಳೇ. ಇದ್ದುದರಲ್ಲಿ ಸಿದ್ದರಾಮಯ್ಯ ಒಬ್ಬರೇ ಹೈಕಮಾಂಡ್ ಅನ್ನು ಸ್ವಲ್ಪ ಮಟ್ಟಿಗೆ ತಮಗೆ ತಕ್ಕಂತೆ ಆಟವಾಡಿಸಿರುವುದು. ಅವರು ಕೂಡ ರಾಹುಲ್ ಗಾಂಧಿ ಅವರನ್ನು ವಾಚಾಮಗೋಚರವಾಗಿ ಹೊಗಳಿಯೇ ಕೆಲಸ ಮಾಡಿಸಿಕೊಂಡವರು. ಆದರೆ ಹೈಕಮಾಂಡೇ ದುರ್ಬಲವಾದರೆ ಬೇರೆಯವರು ತಮಗೆ ತಕ್ಕಂತೆ ಆಟವಾಡಲು ಅವಕಾಶ ಸಿಕ್ಕಂತಾಗುವುದಿಲ್ಲವೆ? ಕರ್ನಾಟಕದಲ್ಲಿ ಈಗ ಅದೇ ಆಗಿದ್ದು. ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಹೆದರಿಕೆಯೂ ಇಲ್ಲ, ಗೌರವವೂ ಇಲ್ಲ. ಎಲ್ಲೀ ಹೈಕಮಾಂಡ್, ನಾವೇ ಹೈಕಮಾಂಡ್ ಅನ್ನುವವರಿದ್ದಾರೆ!

ಹೈಕಮಾಂಡ್ ದೌರ್ಬಲ್ಯಕ್ಕೆ ಹಿಡಿದ ಕನ್ನಡಿ

ಹೈಕಮಾಂಡ್ ದೌರ್ಬಲ್ಯಕ್ಕೆ ಹಿಡಿದ ಕನ್ನಡಿ

ಗೋವಾದಲ್ಲಿ ವಿಧಾನಸಭಾ ಚುನಾವಣೆಯ ನಂತರ ಸರಕಾರ ರಚಿಸುವ ಅವಕಾಶ ಬಂದಾಗ, ಕಾಂಗ್ರೆಸ್ ಹೈಕಮಾಂಡ್ ಸೂಕ್ತವಾದ ನಿರ್ಧಾರವನ್ನು ತಳೆಯಲು ವಿಫಲವಾದಾಗ ಬಿಜೆಪಿ ಆ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿತ್ತು. ಈಗ ಅಂಥದೇ ಅವಕಾಶ ಕಾಂಗ್ರೆಸ್ಸಿಗೆ ಬಂದಾಗ, ಅವಕಾಶ ಇಲ್ಲದಿದ್ದರೂ ಪರಿಸ್ಥಿತಿಯ 'ಲಾಭ' ಪಡೆದು'ಕೊಂಡು' ಸರಕಾರ ರಚಿಸಲು ಹೊರಟಿದೆ. ಅದರ ಪರಿಣಾಮವನ್ನು ಇದೀಗ ಕಾಂಗ್ರೆಸ್ ಹೈಕಮಾಂಡ್ ಅನುಭವಿಸುತ್ತಿದೆ. ಯಾವ ಭಿನ್ನಮತೀಯನೂ ಹೈಕಮಾಂಡ್ ಅಂಕೆಗೆ ಸಿಗುತ್ತಿಲ್ಲದಿರುವುದು ಹೈಕಮಾಂಡ್ ದೌರ್ಬಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಕಾಂಗ್ರೆಸ್ ಹೈಕಮಾಂಡ್ ದಿಕ್ಕೆಟ್ಟಿರುವುದು ನಿಶ್ಚಿತ

ಕಾಂಗ್ರೆಸ್ ಹೈಕಮಾಂಡ್ ದಿಕ್ಕೆಟ್ಟಿರುವುದು ನಿಶ್ಚಿತ

ಕರ್ನಾಟಕದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಡಿದ ಒಂದೇ ಒಂದು ಅದ್ಭುತ ಕೆಲಸವೆಂದರೆ, ತೃತೀಯರಂಗವನ್ನು ಬೆಂಬಲಿಸುವ ಎಲ್ಲ ನಾಯಕರನ್ನು ಬೆಂಗಳೂರಿನಲ್ಲಿ ಸೇರಿಸಿದ್ದು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಸರಕಾರ ರಚಿಸುವ ಸಂದರ್ಭದಲ್ಲಿ ಕೂಡ ಕಾಂಗ್ರೆಸ್ ಹೈಕಮಾಂಡ್ ದಾರಿ ತಪ್ಪಿಸುವ ಕೆಲಸವಾಗಿದೆ. ಕೆಲ ನಾಯಕರು ಆಡಿದ್ದೇ ಆಟ ಎಂಬಂತಾಗಿದೆ. ಸಂಪುಟ ರಚಿಸುವಲ್ಲಿ ಮತ್ತು ಖಾತೆ ಹಂಚಿಕೊಳ್ಳುವಲ್ಲಿ ಕೂಡ ಕಾಂಗ್ರೆಸ್ ಹೈಕಮಾಂಡ್ ಮುಗ್ಗರಿಸಿ ಬಿದ್ದಿದೆ. ಸಿದ್ದರಾಮಯ್ಯ ಜಾಣತನದಿಂದ ಹಿಂದೆ ಸರಿದಿದ್ದಾರೆ, ಪರಮೇಶ್ವರ ನೇತೃತ್ವ ವಹಿಸಿಕೊಂಡಿದ್ದಾರೆ. ಗುಲಾಂ ನಬಿ ಆಝಾದ್ ಸದ್ಯಕ್ಕೆ ಎಲ್ಲಿದ್ದಾರೋ ಗೊತ್ತಿಲ್ಲ.

English summary
Where is Congress highcommand? Where is Rahul Gandhi? Why has the Congress highcommand become so weak, unable to solve the crisis in Karnataka Congress? Analysis of present political situation in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X