ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ -ಅಮೆರಿಕ-ರಷ್ಯಾ ತಿಕ್ಕಾಟ, ಕರ್ನಾಟಕ

By ಸಂದೀಪ್ ಕಂಬಿ, ಬೆಂಗಳೂರು
|
Google Oneindia Kannada News

ಉಕ್ರೇನಿನಲ್ಲಿ ನಡೆಯುತ್ತಿರುವ ದೊಂಬಿಯ ಬಗ್ಗೆ ಓದುಗರಿಗೆ ತಿಳಿದಿರುತ್ತದೆ. "ಈ ದೊಂಬಿ ಯಾಕಾಗುತ್ತಿದೆ?, ಇದರಿಂದ ಕನ್ನಡಿಗರು ಕಲಿಯಬಹುದಾದ ಪಾಟವೇನು?" ಎಂಬ ಬಗ್ಗೆ ಸಂದೀಪ್ ಕಂಬಿ ಅವರು ಬರಹವೊಂದನ್ನು ಮಾಡಿದ್ದರು. ಆ ಬರಹವು ಹೊನಲಿನಲ್ಲಿ (honalu.net) ಮೂಡಿಬಂದಿದೆ. ಈ ಲೇಖನ 'ಹೊಸಬರಹ'ದಲ್ಲಿದ್ದು ಹಾಗೆಯೇ ಮೂಡಿಸುವಂತೆ ಲೇಖಕರು ಕೋರಿಕೊಂಡಿದ್ದಾರೆ-ಒನ್ ಇಂಡಿಯಾ ಕನ್ನಡ

ನೇಟೋದ ಒತ್ತಾಳು (secretary) ಆಂಡರ್ ‍ಸ್ ಪಾಗ್ ರಾಸ್ಮುಸನ್ ಯೂಕ್ರೇನಿನ ಕ್ರಯ್ಮಿಯ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳಲ್ಲಿ ಮೂಗು ತೂರಿಸದಂತೆ ರಶ್ಯಾಗೆ ಎಚ್ಚರಿಕೆ ನೀಡಿದ್ದಾರೆ.

ಯೂಕ್ರೇನಿನಲ್ಲಿ ನಡೆಯುತ್ತಿರುವ ಕದಲಿಕೆ, ದೇಶದ ಮಂದಿಯಲ್ಲಿ ಒಡಕು ಮೂಡಿಸಿರುವುದಲ್ಲದೆ, ಮೂಡಣದ ರಶ್ಯಾ ಮತ್ತು ಪಡುವಣದ ಯೂರೋಪ್-ಅಮೇರಿಕ-ನೇಟೋಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಯೂರೋಪಿಯನ್ ಒಕ್ಕೂಟಕ್ಕೆ ಸೇರಿಕೊಳ್ಳುವ ಮಾತು ಕೊಟ್ಟಿದ್ದ ಅಲ್ಲಿನ ಅದ್ಯಕ್ಶ ವಿಕ್ಟರ್ ಯನುಕೋವಿಚ್, ತಮ್ಮ ಮಾತಿನಿಂದ ಹಿಂದೆ ಸರಿದು ರಶ್ಯಾದ ಜೊತೆ ಕಯ್ ಜೋಡಿಸಿದ್ದರು. ಮುಂದುವರಿದಿರುವ ಯೂರೋಪಿಯನ್ ಒಕ್ಕೂಟದ ವ್ಯಾಪಾರ ಮತ್ತು ಹಣಕಾಸಿನ ಏರ್‍ಪಾಟಿನ ಲಾಬಗಳನ್ನು ಪಡೆದು ಏಳಿಗೆಯ ಹಾದಿಯ ಕನಸನ್ನು ಕಂಡಿದ್ದ ಯೂಕ್ರೇನಿಯನ್ ಮಂದಿಗೆ ಇದು ಕಡು ನಿರಾಸೆಗೆ ಕಾರಣವಾಗಿತ್ತು. ನೆಲೆವೀಡು ಕಿಯೆವ್ ಮತ್ತು ಇತರೆಡೆಗಳಲ್ಲಿ ಎಡೆಬಿಡದೆ ನಡೆದ ಬೀದಿ ಹೊರಾಟಾಗಳಿಂದಾಗಿ ಯನುಕೋವಿಚ್, ಕಳೆದ ವಾರ ಕಿಯೆವ್ ತೊರೆದು ತಮ್ಮ ಬೆಂಬಲಿಗರು ಹೆಚ್ಚಿರುವ ಮೂಡಣದ ಕಡೆಗೆ ಹೊರಟಿದ್ದರು. ಸದ್ಯಕ್ಕೆ ಇವರು ರಶ್ಯಾದಲ್ಲಿರಬಹುದು ಎಂಬ ಸುದ್ದಿಯಿದೆ.

ಹಾಗೆಂದು ಯನುಕೋವಿಚ್ ಅವರಿಗೆ ಯೂಕ್ರೇನಿನಲ್ಲಿ ಬೆಂಬಲವಿಲ್ಲವೆಂದಲ್ಲ. ರಶ್ಯನ್ನರು ಹೆಚ್ಚಿರುವ ದೇಶದ ಮೂಡಣ ಮತ್ತು ತೆಂಕಣದ ಬಾಗಗಳಲ್ಲಿ ಇವರಿಗೆ ಬೆಂಬಲವಿದೆ, ಮತ್ತು ಇವರೂ ಕೂಡ ಜನಾಂಗೀಯವಾಗಿ ರಶ್ಯನ್ ಮೂಲದವರೇ. ಮೂಡಣದ ಜನರಿಗೆ ಯೂರೋಪಿಯನ್ ಒಕ್ಕೂಟ ಸೇರಿಕೊಳ್ಳುವುದಕ್ಕಿಂತ ರಶ್ಯಾ ಜೊತೆ ಕಯ್ ಜೋಡಿಸುವುದರತ್ತ ಹೆಚ್ಚಿನ ಒಲವು. ಈ ಎರಡು ತಿಕ್ಕಾಟ, ಜಗ್ಗಾಟಗಳ ನಡುವೆ ಈಗ ದೇಶವೇ ಒಡೆಯುವಂತಹ ಸ್ತಿತಿಗೆ ಬಂದು ನಿಂತಿದೆ. ಒಡಕಿನ ಹಿನ್ನೆಲೆ, ಬದುಕಿನ ಎಲ್ಲ ಬೇರೆ ಹರಹುಗಳಲ್ಲಿಯೂ ರಶ್ಯನ್ ನುಡಿ, ಇದರಿಂದ ನಾವೇನು ಕಲಿಯಬಹುದು ಮುಂದೆ ಓದಿ...[ಚಿತ್ರ ಕೃಪೆ: AP/PTI]

ಸೋವಿಯೆತ್ ಒಕ್ಕೂಟದಲ್ಲಿದ್ದ ಯೂಕ್ರೇನಿನ ಸ್ಥಿತಿ

ಸೋವಿಯೆತ್ ಒಕ್ಕೂಟದಲ್ಲಿದ್ದ ಯೂಕ್ರೇನಿನ ಸ್ಥಿತಿ

ಒಡಕಿನ ಹಿನ್ನೆಲೆ: ಸೋವಿಯೆತ್ ಒಕ್ಕೂಟದಲ್ಲಿದ್ದ ಯೂಕ್ರೇನಿನಲ್ಲಿ ಮೊದಲನೇ ವಿಶ್ವ ಯುದ್ದದ ಬಳಿಕ ಯೂಕ್ರೇನಿಯನ್ ನುಡಿ ಮತ್ತು ಸಂಸ್ಕ್ರುತಿಗೆ ಹೆಚ್ಚು ಒತ್ತು ಕೊಡಲಾಗಿತ್ತು. ಆದರೆ ಇದು ಸೋವಿಯೆತ್ ಒಕ್ಕೂಟದ ಇರುಹಕ್ಕೆ ಕುತ್ತಾದೀತು ಎಂದು ಬಗೆದ ಒಕ್ಕೂಟದ ಆಡಳಿತ, ಯೂಕ್ರೇನಿಯನ್ ನುಡಿಯನ್ನು ಹಿಂದಕ್ಕೆ ತಳ್ಳಿ ರಶ್ಯನ್ ನುಡಿಯನ್ನು ಮೆನ್ನೆಲೆಗೆ ತರಲು ಯತ್ನಿಸಿತು.

ಯೂಕ್ರೇನಿಯನ್ ನುಡಿಯ ಪರವಾಗಿದ್ದ ಹಲವು ಆಡಳಿತಗಾರರನ್ನು ಕಿತ್ತೊಗೆದು, ರಶ್ಯಾದ ಮಂದಿಯನ್ನು ಆಡಳಿತದಲ್ಲಿ ಇರಿಸಲಾಯಿತು. ಈ ಹೊತ್ತಿನಲ್ಲಿ ಯೂಕ್ರೇನಿಯನ್ನರು ತಮ್ಮ ನುಡಿ ಮತ್ತು ಸಂಸ್ಕ್ರುತಿಗಳ ಬದಲಾಗಿ ಮೆಲ್ಲಗೆ, ರಶ್ಯನ್ ನುಡಿ ಮತ್ತು ಸಂಸ್ಕ್ರುತಿಗಳನ್ನು ಅಳವಡಿಸಿಕೊಳ್ಳುವಂತಹ ನೀತಿಯನ್ನು ತರಲಾಯಿತು. ಇದನ್ನು Russification ಎನ್ನುತ್ತಾರೆ. ಕನ್ನಡದಲ್ಲಿ ರಶ್ಶಿಸಿಕೆ ಎಂದು ಹೇಳಬಹುದು.

ಬದುಕಿನ ಎಲ್ಲ ಬೇರೆ ಹರಹುಗಳಲ್ಲಿಯೂ ರಶ್ಯನ್ ನುಡಿ

ಬದುಕಿನ ಎಲ್ಲ ಬೇರೆ ಹರಹುಗಳಲ್ಲಿಯೂ ರಶ್ಯನ್ ನುಡಿ

ಕಲಿಕೆ ಮೊದಲುಗೊಂಡು, ಬದುಕಿನ ಎಲ್ಲ ಬೇರೆ ಹರಹುಗಳಲ್ಲಿಯೂ ರಶ್ಯನ್ ನುಡಿಯನ್ನು ತರಲಾಯಿತು. ಬಳಿಕ ಸೋವಿಯೆತ್ ಒಕ್ಕೂಟ ಇಲ್ಲಿ ಹೆಚ್ಚಿನ ಕಾಯ್ಗಾರಿಕೆಗಳನ್ನು ಕಟ್ಟಿದ್ದರಿಂದ ಸಾಕಶ್ಟು ಮಟ್ಟದಲ್ಲಿ ಏಳಿಗೆಯೂ ಆಯಿತು. ಜೊತೆಗೆ, ನುಡಿ, ಸಂಸ್ಕ್ರುತಿ ಮತ್ತು ಬದುಕು ಕಟ್ಟಿಕೊಳ್ಳುವ ಕೋನದಿಂದ ರಶ್ಯನ್ನರಿಗೆ ಅನುಕೂಲಕರವಾದ್ದರಿಂದ ರಶ್ಯಾದಿಂದ ರಶ್ಯನ್ ಆಡುವವರ ವಲಸೆಯೂ ಆಯಿತು. ಹೆಚ್ಚಾದ ರಶ್ಯನ್ ಪ್ರಬಾವದಿಂದ ಯೂಕ್ರೇನ್ ಮೂಲದ ಹಲವು ಮಂದಿಯೇ ರಶ್ಶಿಸಿಕೆಗೆ ಒಳಗಾಗಿ ಯೂಕ್ರೇನಿಯನ್ ನುಡಿಯನ್ನು ಬಿಟ್ಟು ರಶ್ಯನ್ ನುಡಿಯನ್ನು ತಮ್ಮ ಮೊದಲನೇ ನುಡಿಯಾಗಿ ಒಪ್ಪಿಕೊಂಡರು.

ಜೊತೆಯಲ್ಲಿ ರಶ್ಯನ್ ರಾಜಕೀಯ ಪ್ರಬಾವವೂ ಯೂಕ್ರೇನಿನಲ್ಲಿ ಮನೆ ಮಾಡಿತು. ಇದು ಮೂಡಣದಲ್ಲಿ ಹೆಚ್ಚಿನ ಮಟ್ಟದಲ್ಲಿ ಆಗಿದೆ. ಕೆಲವೇ ವರುಶಗಳ ಹಿಂದೆ ಕಿಯೆವ್ ಸೇರಿದಂತೆ ಯೂಕ್ರೇನಿನ ಹಲವು ಪಟ್ಟಣಗಳಲ್ಲಿ ರಶ್ಯನ್ ನುಡಿಯನ್ನೇ ಹೆಚ್ಚಾಗಿ ಬಳಸಲಾಗುತ್ತಿತ್ತು. ಆಶ್ಟೇ ಅಲ್ಲ, ಸೋವಿಯೆತ್ ಒಕ್ಕೂಟದ ರಾಜ್ಯಗಳಲ್ಲಿ ಕಡು ಹೆಚ್ಚು ರಶ್ಶಿಸಿಕೆಗೆ ಒಳಗಾದ ನಾಡು ಯೂಕ್ರೇನ್.

ಆದರೆ ಮುಂದಿನ ದಿನಗಳಲ್ಲಿ ಮತ್ತೆ ಯೂಕ್ರೇನಿಸಿಕೆ (Ukranisation) ನಡೆಯಿತು. ಸೋವಿಯೆತ್ ಒಕ್ಕೂಟದಿಂದ ಬಿಡುಗಡೆಯ ಬಳಿಕ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಿತು. ಇದರ ಕಾರಣದಿಂದಾಗಿ ಪಡುವಣದಲ್ಲಿ ಯೂಕ್ರೇನಿಯನ್ ನುಡಿ ಗಟ್ಟಿಯಾಗಿ ನಿಂತಿತು, ಮತ್ತು ಕಲಿಕೆ, ವ್ಯಾಪಾರ ಮುಂತಾದವುಗಳಲ್ಲಿ ಯೂಕ್ರೇನಿಯನ್ ಬಳಕೆ ಹೆಚ್ಚಾಗಿದೆ. ಆದರೆ ಮೊದಲು ನಡೆದ ರಶ್ಶಿಸಿಕೆಯ ಕಾರಣದಿಂದಾಗಿ, ಇಂದು ಯೂಕ್ರೇನ್ ಬೇರೆಯೇ ದೇಶವಾಗಿದ್ದರೂ, ರಶ್ಯನ್ ಪ್ರಬಾವ ಕಳೆದಿಲ್ಲ. ಇದು ಯೂಕ್ರೇನಿನ ಇಂದಿನ ಸ್ತಿತಿಗೆ ಕಾರಣವಾಗಿದೆ.

ಯಾವುದೇ ರಾಶ್ಟ್ರವು ಒಡಕನ್ನು ಸಹಿಸುವುದಿಲ್ಲ

ಯಾವುದೇ ರಾಶ್ಟ್ರವು ಒಡಕನ್ನು ಸಹಿಸುವುದಿಲ್ಲ

ನಾವು ಏನು ಕಲಿಯಬಹುದು : ಯಾವುದೇ ರಾಶ್ಟ್ರವು ಒಡಕನ್ನು ಸಹಿಸುವುದಿಲ್ಲ. ಒಡಕುಗಳು ಏಳದಿರಲಿ ಎಂಬ ಆತುರದಲ್ಲಿ ತಮ್ಮ ಒಡಲಲ್ಲಿರುವ ಎಲ್ಲ ಬೇರ್‍ಮೆಗಳನ್ನು ತುಳಿಯಲು, ಇಲ್ಲವೇ ಅಳಿಸಿ ಹಾಕುವ ಕಡೆಗೆ ರಾಶ್ಟ್ರಗಳು ಒಲವನ್ನು ತೋರಿಸುವುದು ಸಾಮಾನ್ಯ. ಈ ಇಲ್ಲದ ಒಂತನವನ್ನು ಹುಟ್ಟುಹಾಕಲು, ದೇಶಕ್ಕೆಲ್ಲ ಒಂದೇ ನುಡಿಯ ಬಳಕೆಯನ್ನು ತರುವುದು ಮತ್ತು ಆ ಒಂದು ನುಡಿಯೇ ದೇಶದ ನಿಜವಾದ ಗುರುತು ಎಂಬಂತೆ ಅದರ ಸುತ್ತ ಪೊಳ್ಳು ದೇಶ ಬಕ್ತಿಯ ಕತೆ ಕಟ್ಟುವುದು ಹಲವು ರಾಶ್ಟ್ರಗಳಲ್ಲಿ ಸಾಮಾನ್ಯವಾಗಿ ಕಂಡಿದ್ದೇವೆ.

ಈ ಒಂತನದ ತೋರಿಕೆಯು, ಒಗ್ಗಟ್ಟನ್ನು ಗಟ್ಟಿ ಮಾಡುತ್ತದೆ ಎಂಬುದು ರಾಶ್ಟ್ರಗಳ ನಂಬಿಕೆ. ಇಲ್ಲೇ ರಾಶ್ಟ್ರಗಳು ಎಡುವುವುದು. ಒಗ್ಗಟ್ಟು ಒಬ್ಬರನ್ನೊಬ್ಬರು ಸಮಾನರೆಂದು ಗವ್ರವಿಸುವುದರಿಂದ ಹುಟ್ಟುತ್ತದೆಯೇ ಹೊರತು ಒಂತನದ ತೋರಿಕೆಯಿಂದಲ್ಲ. ಹಿಂದೆ ಯೂಕ್ರೇನಿನಲ್ಲಿ ಸೋವಿಯೆತ್ ಒಕ್ಕೂಟವು ನಡೆಸಿದ್ದು ಇಂತಹುದೇ ಕೆಲಸ. ಈಗ ಕರ್‍ನಾಟಕದಲ್ಲಿ (ಮತ್ತು ಇತರೆ ರಾಜ್ಯಗಳಲ್ಲಿ) ಬಾರತ ಒಕ್ಕೂಟವು ಹಿಂದಿ ಹೇರಿಕೆಯ ಮೂಲಕ ಮಾಡುತ್ತಿರುವುದು ಇಂತಹುದೇ ಕೆಲಸವನ್ನು. ಯೂಕ್ರೇನಿನಲ್ಲಿ ರಶ್ಶಿಸಿಕೆ ನಡೆಸುವಲ್ಲಿ, ಆಗಿಂದಾಗ್ಗೆ ಜೀವಗಳು ಹೋಗಿದ್ದವು, ಹೇರಳವಾಗಿ ನೆತ್ತರು ಹರಿದಿತ್ತು. ಆದರೆ ಕರ್‍ನಾಟಕದಲ್ಲಿ ಹಿಂದಿ ಹೇರಿಕೆ ಎಂಬುದು ಹೆಚ್ಚು ಸದ್ದು ಮಾಡದೆ ನಡೆಯುತ್ತಿದೆ.

ಕರ್‍ನಾಟಕದಲ್ಲಿ ಹಲವು ಮಂದಿಗೆ ಬಾರತದ ಎಲ್ಲ ಮಂದಿ ಒಗ್ಗಟ್ಟಿನಿಂದಿರಲು ಹಿಂದಿಯ ಅಗತ್ಯವಿದೆ ಎಂಬ ಗಟ್ಟಿಯಾದ ನಂಬಿಕೆಯಿದೆ. ಆದರೆ ಇದು ಮೊದಲೇ ಹೇಳಿದಂತೆ ರಾಶ್ಟ್ರಗಳು ಹೋಳಾಗುವ ದಿಗಿಲಿಗೆ ಬಿದ್ದು ಹುಸಿ ಒಂತನದ ಕತೆ ಕಟ್ಟುವಂತೆ, ಅರವತ್ತು ವರುಶಗಳಿಂದ ಬಾರತದ ಒಕ್ಕೂಟ ಸರಕಾರವು ಹಿಂದಿಯ ಸುತ್ತ ಹೆಣೆದ ಹುಸಿ ರಾಶ್ಟ್ರೀಯತೆಯ ಕತೆಯ ಪರಿಣಾಮ. ಇನ್ನು ಹಲವರಿಗೆ, ಕನ್ನಡವೂ ಇದೆಯಲ್ಲವೇ, ಹಿಂದಿ ಜೊತೆಯಲ್ಲಿದ್ದರೆ ಏನೂ ತೊಂದರೆ ಆಗದು ಎಂಬ ಅನಿಸಿಕೆ ಇದೆ.

ಹಿಂದಿ ತಿಳಿದಿದ್ದರೆ ಇಲ್ಲಿಗೆ ಬಂದು ವ್ಯಾಪಾರ

ಹಿಂದಿ ತಿಳಿದಿದ್ದರೆ ಇಲ್ಲಿಗೆ ಬಂದು ವ್ಯಾಪಾರ

ಆದರೆ ಇಂದು ಕರ್‍ನಾಟಕದ ಹಣಕಾಸು ಮತ್ತು ಕೊಡುಕೊಳೆಯ ಏರ್‍ಪಾಟುಗಳಲ್ಲಿ ಹಿಂದಿ ಇದೆ. ಹಿಂದಿ ತಿಳಿದಿದ್ದರೆ ಇಲ್ಲಿಗೆ ಬಂದು ವ್ಯಾಪಾರ ಮಾಡಬಹುದು ಎಂಬಂತಹ ಸ್ತಿತಿ ಇದೆ. ಹಣಮನೆಗಳಲ್ಲಿ ಹಿಂದಿ ಬಳಕೆಗೆ ಹಿಂದೆಂದೂ ಇಲ್ಲದ ಹೆಚ್ಚುಗಾರಿಕೆ ಇದೆ. ಎಶ್ಟರ ಮಟ್ಟಿಗೆ ಎಂದರೆ, ಇಂದು ಹಿಂದಿ ಬಲ್ಲವನು ಕರ್‍ನಾಟಕದ ನೆಲೆವೀಡಾದ ಬೆಂಗಳೂರಿನ ಹಣಮನೆಗಳಲ್ಲಿ ತನ್ನ ಕೆಲಸಗಳನ್ನು ಸಲೀಸಾಗಿ ನಡೆಸಿಕೊಳ್ಳಬಹುದು. ಆದರೆ ಕನ್ನಡ ಮಾತ್ರ ಬಲ್ಲವನಿಗೆ, ಕೆಲವೆಡೆಗಳನ್ನು ಹೊರತುಪಡಿಸಿ, ಇದು ಆಗದ ಮಾತು.

ಒಂದೆಡೆ ಕರ್‍ನಾಟಕದ ಏರ್‍ಪಾಟು ಹಿಂದಿ ಬಲ್ಲವನಿಗೆ ಸೂಕ್ತವಾಗಿದ್ದರೆ, ಇನ್ನೊಂದೆಡೆ ಹಿಂದಿ ಬಲ್ಲವರು ಇಲ್ಲಿಗೆ ಬರಲು ಅನುಕೂಲವಾಗುವಂತೆ ಇಲ್ಲಿನ ಹೆದ್ದಾರಿಗಳಲ್ಲಿ, ರಯ್ಲುಗಳಲ್ಲಿ, ಬಾನೋಡಗಳಲ್ಲಿ, ಹೇರಳವಾಗಿ ಹಿಂದಿಯ ಬಳಕೆ ಆಗುತ್ತಿದೆ. ನಮ್ಮ ಮೆಟ್ರೋದಲ್ಲಿ ಹಿಂದಿಯ ಬಳಕೆ ಆಗುತ್ತಿದೆ. ಹಿಂದಿ ನಾಡುಗಳಲ್ಲಿ ಮಂದಿ ದಟ್ಟಣೆಯೂ ಹೆಚ್ಚಿರುವುದರಿಂದ ಯಾವುದೇ ಅಡೆ ತಡೆಗಳಿಲ್ಲದೆ ಆ ಮಂದಿ ಕರ್‍ನಾಟಕಕ್ಕೆ ಬಂದು, ತಮ್ಮ ಬದುಕುಗಳನ್ನು ಕಟ್ಟಿಕೊಳ್ಳಲು ಇಂತಹ ಏರ್‍ಪಾಟುಗಳು ಅನುಕೂಲ ಮಾಡಿ ಕೊಟ್ಟಿವೆ.

ಹಿಂದಿ ಹೇರಿಕೆ, ಮತ್ತು ಹಿಂದಿ ನಾಡುಗಳಿಂದ ಮುಂದುವರಿಕೆ

ಹಿಂದಿ ಹೇರಿಕೆ, ಮತ್ತು ಹಿಂದಿ ನಾಡುಗಳಿಂದ ಮುಂದುವರಿಕೆ

ಆದರೆ ಇದೇ ಮಟ್ಟದ ಅನುಕೂಲ ಕನ್ನಡಿಗರಿಗೇ ಇಲ್ಲದಂತಾಗಿದೆ. ಇದು ಬೆಂಗಳೂರಿನಂತಹ ಪಟ್ಟಣಗಳಲ್ಲಿ ಆಗುತ್ತಿರುವ ಏಳಿಗೆಯನ್ನು ಕರ್‍ನಾಟಕದವರು ತಕ್ಕುದಾಗಿ ಬಳಸಿಕೊಳ್ಳಲಾಗದೆ, ಅವರ ಏಳಿಗೆಗೆ ಕಡಿವಾಣ ಹಾಕುತ್ತದೆ. ಜೊತೆಗೆ ಹಿಂದಿ ಹೇರಿಕೆ, ಮತ್ತು ಹಿಂದಿ ನಾಡುಗಳಿಂದ ಮುಂದುವರಿಯುವ ವಲಸೆಗಳಿಂದಾಗಿ ಮುಂದೊಂದು ದಿನ, ಕರ್‍ನಾಟಕದಲ್ಲಿ ಸಾಂಸ್ಕ್ರುತಿಕವಾಗಿ ಮತ್ತು ಅದಕ್ಕೂ ಮಿಗಿಲಾಗಿ ಹಣಕಾಸಿನ ವಿಚಾರದಲ್ಲಿ ಹಿಂದಿ, ಮತ್ತು ಹಿಂದಿ ಆಡುವವರು, ಕನ್ನಡ ಮತ್ತು ಕನ್ನಡಿಗರ ಬದಲಾಗಿ ಮೇಲುಗಯ್ ಸಾದಿಸುವುದು ಕಂಡಿತ. ಅಂದರೆ ಕನ್ನಡಿಗರ ಒಳಿತು, ಕಳಕಳಿಗಳನ್ನು ಬದಿಗೊತ್ತಿ ಹೆರರ ಒಳಿತು ಕಾಯುವ ಏರ್‍ಪಾಟು ನಮ್ಮಲ್ಲಿ ಆಗಲೇ ಇದೆ ಎಂಬುದನ್ನು ಗಮನಿಸಬೇಕು. ಇನ್ನು ಕಲಿಕೆಯ ಮೂಲಕ, ಮತ್ತು ಹಿಂದಿ ಮನೆರಂಜನೆಯನ್ನು ಹುರಿದುಂಬಿಸುವಂತಹ ನೇರವಲ್ಲದ ದಾರಿಗಳ ಮೂಲಕ ಹಿಂದಿ ಹೇರುತ್ತಿರುವುದು ಮತ್ತು ಕನ್ನಡದ ಮಂದಿಯನ್ನು ಹಿಂದಿಯ ಕಡೆಗೆ ಸೆಳೆಯುವುದು, ಹಿಂದಿಯವರನ್ನಾಗಿಸುವಂತಹ ಪ್ರಯತ್ನಗಳ ಬಗ್ಗೆ ಬೇರೆ ಹೇಳಬೇಕಾಗಿಲ್ಲ.

ಯೂಕ್ರೇನಿನಲ್ಲಿ ರಶ್ಶಿಸಿಕೆಯಿಂದ ರಶ್ಯನ್ ಪ್ರಬಾವ ಹೆಚ್ಚಾದಂತೆ ಮುಂದೆ ಕರ್‍ನಾಟಕದಲ್ಲಿ ಇದು ಒಂದು ಹಿಂದಿ ಆಡುವ ಮೇಲುಗಯ್ಯ ಕೊರೆಯೆಣಿಕೆಯವರನ್ನು (dominant minority) ಕಟ್ಟುತ್ತದೆ. ಈ ಮಂದಿ ಹೆಚ್ಚೆಣಿಕೆಯ ಮೂಲ ಕನ್ನಡಿಗರ ಒಳಿತನ್ನು ಬದಿಗೊತ್ತಿ, ತಮ್ಮ ಒಳಿತನ್ನು ಗಟ್ಟಿಯಾಗಿ ಕಾಪಾಡಿಕೊಳ್ಳುವ ಪ್ರಬಾವವನ್ನು ಬೀರಲು ತೊಡಗುತ್ತಾರೆ. ಈ ಬಗೆಯ ತಿಕ್ಕಾಟಗಳು ಹೆಚ್ಚಾದಾಗ ಒಡಕುಗಳು ಮೂಡುತ್ತವೆ. ಇದರ ಕೆಲವು ತುಣುಕುಗಳನ್ನು ಈಗಾಗಲೇ ಬೆಂಗಳೂರಿನಲ್ಲಿ ನೋಡುತ್ತಿದ್ದೇವೆ.

ಇಂದಿನ ಯೂಕ್ರೇನಿನ ಪಾಡು ಕರ್‍ನಾಟಕಕ್ಕೆ

ಇಂದಿನ ಯೂಕ್ರೇನಿನ ಪಾಡು ಕರ್‍ನಾಟಕಕ್ಕೆ

ನಾಗರಿಕ ಸಂಗಗಳಲ್ಲಿ ಮತ್ತು ಹೋರಾಟಗಳಲ್ಲಿ ಕನ್ನಡಿಗರಲ್ಲದವರು ಸೇರಿಕೊಂಡು ಸರಿಯಾದ ಆಡಳಿತ ನಡೆಸಿದರೆ ಸಾಕು, ಕನ್ನಡದ ಅಗತ್ಯವಿಲ್ಲವೆಂಬಂತಹ ಮಾತುಗಳನ್ನು ಆಡುತ್ತಿರುವುದು ನೋಡಿದ್ದೇವೆ. ಅಂತೆಯೇ, ಅಲ್ಲಿಲ್ಲಿ ಬೆಂಗಳೂರನ್ನು ಕರ್‍ನಾಟಕದಿಂದ ಬೇರ್‍ಪಡಿಸಿ ಒಕ್ಕೂಟ ಸರಕಾರದ ಅಂಕೆಗೆ ಕೊಡಬೇಕೆಂಬ ಕೂಗುಗಳೂ ಕೇಳಿಬರುತ್ತಿವೆ. ಇದು ಮುಂದುವರಿದಲ್ಲಿ, ಮುಂದೊಂದು ದಿನ, ಇಂದಿನ ಯೂಕ್ರೇನಿನ ಪಾಡು ಕರ್‍ನಾಟಕಕ್ಕೆ ಬಂದೊದಗಿದರೆ ಅಚ್ಚರಿಯಿಲ್ಲ.

ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಅವಕಾಶ ಒದಗಿಸಿ ಕೊಡುವ ತೆರೆದ ಮಾರುಕಟ್ಟೆಯ ಏರ್‍ಪಾಟು ಸರಿಯಿಲ್ಲ ಎಂದು ಹೇಳುತ್ತಿಲ್ಲ. ಮೂಲ ಜನಾಂಗದ ಏಳಿಗೆಯನ್ನು ಅದುಮಿ, ಈ ಬಗೆಯಲ್ಲಿ ಒಂದು ಕೊರೆಯೆಣಿಕೆಯವರು ಮಾತ್ರ ಏಳಿಗೆ ಕಂಡರೆ, ಮುಂದೊಂದು ದಿನ ಆ ಜನಾಂಗ ಸಿಡಿದೇಳುತ್ತದೆ. ಕಚ್ಚಾಟಗಳಾಗುತ್ತವೆ. ಆಗ ವ್ಯಾಪಾರ, ಕೊಡುಕೊಳೆ ಸರಾಗವಾಗಿ ನಡೆಯಲಾಗದೆ ನಾಡಿನ ಹಣಕಾಸು ಏಳಿಗೆ ಕುಸಿಯುತ್ತದೆ. ಆದ್ದರಿಂದ ತೆರೆದ ಮಾರುಕಟ್ಟೆಯ ಲಾಬ, ಗಳಿಕೆ, ಹೆರರಿಗಿಂತ ನಾಡ ಮಂದಿಯು ಅನುಕೂಲಕರವಾಗಿ ಪಡೆದುಕೊಳ್ಳುವಂತಹ ಏರ್‍ಪಾಟನ್ನು ಕರ್‍ನಾಟಕವು ಕಟ್ಟಿಕೊಳ್ಳ ಬೇಕು. ಮತ್ತು ಹುಸಿ ಒಂತನವನ್ನು ಕಟ್ಟಲು ಹೊರಟಿರುವ, ಬೇರ್‍ಮೆಗಳನ್ನು ಕರಗಿಸುವ ಹಿಂದಿ ಹೇರಿಕೆಯಂತಹ ಕೆಲಸಗಳಿಗೆ ಕಡಿವಾಣ ಹಾಕಬೇಕಾಗಿದೆ.

English summary
What Karnataka can learn from on going crisis in Ukraine and European Union. How America and Russia- Neto tussle to get hold of Ukraine Here is the analysis by Citizen Journalist Sandeep KN
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X