ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿವಂಗತ ಅನಂತಮೂರ್ತಿಯವರೇ ಇದು ಸರಿಯೇ?

By ಜಿ.ಎನ್. ನಾಗರಾಜ್
|
Google Oneindia Kannada News

ತಮ್ಮ ಬರವಣಿಗೆಗಳಲ್ಲಿ, ಚಿಂತನೆಗಳಲ್ಲಿ, ವಾಗ್ವಾದಗಳಲ್ಲಿ, ನಡವಳಿಕೆಗಳಲ್ಲಿ ಬ್ರಾಹ್ಮಣ್ಯ, ಧಾರ್ಮಿಕ ಆಚರಣೆ, ಶಾಸ್ತ್ರ ಸಂಪ್ರದಾಯಗಳನ್ನು ಧಿಕ್ಕರಿಸಿದ್ದ ದಿವಂಗತ ಡಾ. ಯು.ಆರ್. ಅನಂತಮೂರ್ತಿ ಅವರ ಅಂತಿಮ 'ಸಂಸ್ಕಾರ' ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ವಿವಾದಗಳಿಗೂ ಕಾರಣವಾಗಿದೆ. ಮೂರ್ತಿಯವರನ್ನು ಅಪಾರವಾಗಿ ಪ್ರೀತಿಸುತ್ತಿದ್ದವರು ಕೂಡ ಈ ಬೆಳವಣಿಗೆಯಿಂದ ಬೆಚ್ಚಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅನಂತಮೂರ್ತಿಯವರನ್ನು ಹತ್ತಿರದಿಂದ ಬಲ್ಲವರಾಗಿದ್ದ ಜಿ.ಎನ್. ನಾಗರಾಜ್ ಅವರು ಅನಂತದಲ್ಲಿ ಲೀನವಾಗಿರುವ ಅನಂತಮೂರ್ತಿಯವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

***
ದಿವಂಗತ ಅನಂತಮೂರ್ತಿಯವರ ಬಗ್ಗೆ ಗೌರವದಿಂದಲೇ ಈ ಪ್ರಶ್ನೆಗಳನ್ನು ಎತ್ತುತ್ತಿದ್ದೇನೆ. ಅವರ ಜೊತೆ ಅನೇಕ ಪ್ರಶ್ನೆಗಳನ್ನು ನಿರ್ಭಿಡೆಯಿಂದ ಹೇಗೆ ಎತ್ತುತ್ತಿದ್ದೆವೋ ಹಾಗೆಯೇ ಅವರಿಗೇ ಈ ಪ್ರಶ್ನೆಗಳನ್ನು ಹಾಕುತ್ತಿದ್ದೇನೆ.

ನಮ್ಮೆಲ್ಲರ ಪ್ರೀತಿಯ ಅನಂತಮೂರ್ತಿಯವರೇ, ನಿಮ್ಮ ಸಂಸ್ಕಾರ ನಿಮ್ಮ ನಂಬಿಕೆಯ ಪ್ರಶ್ನೆ. ಇದು ಭಾರತದ ಸಂವಿಧಾನ ಕೊಡಮಾಡಿದ ಹಕ್ಕು.

ಕುವೆಂಪುರವರ ಹೊಸ ಬಾಳಿನ ಗೀತೆ-
ಹಳೆ ಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿ ಹೋಗಲಿ ಬರಲಿ ವಿಜ್ಞಾನ ಬುದ್ಧಿ
ವೇದ ಪ್ರಮಾಣತೆಯ ಮರು ಮರೀಚಿಕೆಯಲ್ಲಿ

ನೀರರಸಿ ಕೆಡದಿರಲಿ ಸ್ವಾತಂತ್ರ್ಯ ಸಿದ್ಧಿ

What is this Dr U.R. Ananthamurthy?

ಇಂತಹ ಅನೇಕ ವಿಚಾರಗಳಿಂದ ಎಚ್ಚರಾದ ಸಮುದಾಯಗಳು ನೀವು ಇಂತಹ ನಿಲುವಿಗೆ ಅನುಸಾರವಾಗಿ ಸಮಾಜ ಮುಂದೆ ಒಂದು ಮಾದರಿಯನ್ನು ಹೊಸ ಬಿಂಬಿಸಿದ್ದರೆ ನಿಮ್ಮ ಸಾವಿನಲ್ಲಿಯೂ ಒಂದು ದೊಡ್ಡ ಸಂದೇಶ ನೀಡಿದಂತಾಗುತ್ತದೆಂದು ಆಶಿಸಿದ್ದರು. ನಿಮ್ಮ ಇತ್ತೀಚಿನ ಬರಹ, ಭಾಷಣಗಳನ್ನು ಓದಿದ ಕೇಳಿದ ಸಾರ್ವಜನಿಕರಿಗೆ ಈ ರೀತಿಯ ಕಲ್ಪನೆಗಳು ಮೂಡಿದ್ದವು. ಅದರಂತೆ ಅವರು ನಿಮ್ಮ ಸಂಸ್ಕಾರ ಧರ್ಮ ನಿರಪೇಕ್ಷವಾಗಿ ಶಾಸ್ತ್ರ ಸಂಪ್ರದಾಯಗಳನ್ನು ಬಿಟ್ಟು ನಡೆಯುತ್ತದೆಂದು, ನೀವು ಹಾಗೆಯೇ ನಿಮ್ಮ ಇಚ್ಛೆಯನ್ನು ವ್ಯಕ್ತಪಡಿಸಿರುತ್ತೀರೆಂದು ನಿರೀಕ್ಷಿಸಿದ್ದರು. ಅದು ಹುಸಿಯಾಯಿತೆಂದು ಹಲವರಿಗೆ ಅಸಮಧಾನವಾಗಿದೆ. ಈ ಜಡ ಸಂಪ್ರದಾಯಗಳನ್ನು ನೀವು ಮೀರಲಾಗಲಿಲ್ಲವೆಂಬ ಭಾವನೆ ವ್ಯಾಪಕವಾಗಿ ಮೂಡಿದೆ.

ಆದರೆ ಪುರಾಣ, ಸಂಪ್ರದಾಯಗಳ ಬಗ್ಗೆ ನಿಮ್ಮ ಅಭಿಪ್ರಾಯ ಬೇರೆಯೇ ಇತ್ತೆಂದು ನಿಮ್ಮನ್ನು ಹತ್ತಿರದಿಂದ ಬಲ್ಲ ಕೆಲವರಿಗಾದರೂ ಗೊತ್ತಿತ್ತು. ನೀವು ನಮ್ಮೆಲ್ಲರನ್ನೂ ಅಗಲುವ ಮೊದಲೇ ಒಂದು ನಿಶ್ಚಿತ ನಿಲುವು ತೆಗೆದುಕೊಂಡು, ಅದನ್ನು ನಿಮ್ಮದೇ ಆದ ಕಾರಣಗಳನ್ನು ನೀಡಿ ಲೋಕದ ಮುಂದೆ ಇಟ್ಟಿದ್ದರೆ ಈ ಗೊಂದಲ ಇರುತ್ತಿರಲಿಲ್ಲ ಅಲ್ಲವೇ? [ಅನಂತಮೂರ್ತಿ ವ್ಯಕ್ತಿಚಿತ್ರ]

ಇದಕ್ಕಿಂತ ಮುಖ್ಯವಾದದ್ದು ಸರ್ಕಾರದ ನಡೆ. ನಿಮ್ಮ / ಕುಟುಂಬದ ನಂಬಿಕೆಗಳಿಗೆ ಅನುಗುಣವಾಗಿ ಸಂಸ್ಕಾರದ ರೀತಿಯನ್ನು ಆರಿಸಿಕೊಳ್ಳಬಹುದು. ಆದರೆ ಜಾತ್ಯತೀತ (ಧರ್ಮ ನಿರಪೇಕ್ಷ ಸರ್ಕಾರವೊಂದು ನಿಮ್ಮ ಧಾರ್ಮಿಕ ಆಚರಣೆಯ ಬೆಲೆ-ತುಪ್ಪ ಬೆಣ್ಣೆ ಗಂಧದ ಕಟ್ಟಿಗೆ ಇತ್ಯಾದಿಗಳು ಮಾತ್ರವಲ್ಲ ಪುರೋಹಿತರ ಸಂಭಾವನೆಗಳನ್ನೂ ತೆರಬೇಕೆ? ಇದಂತೂ ನೀವು ಯಾವ ಜಾತ್ಯತೀತ ಸರ್ಕಾರದ ಬಗ್ಗೆ ಪ್ರತಿಪಾದಿಸುತ್ತಾ ಬಂದಿರೋ ಅದಕ್ಕೆ ಪೂರ್ಣ ವಿರುದ್ಧವಲ್ಲವೇ? ಈಗಲೂ ನಿಮ್ಮ ಕುಟುಂಬದವರು ಈ ವೆಚ್ಚಗಳನ್ನು ಸ್ವಯಂ ಇಚ್ಛೆಯಿಂದ ತೆರುವುದು ನೀವು ಪ್ರತಿಪಾದಿಸಿದ ತತ್ವಗಳಿಗೆ ಗೌರವ ನೀಡಿದಂತಲ್ಲವೇ?

ಇನ್ನು ಈ ಆಚರಣೆಗಳನ್ನು ಮಾಧ್ಯಮಗಳ ಮೂಲಕ ಲೈವ್ ಪ್ರಸಾರವಂತೂ ವೈಯುಕ್ತಿಕವಾದದ್ದನ್ನು, ಖಾಸಗಿಯಾದದ್ದನ್ನು ಸಾರ್ವಜನಿಕಗೊಳಿಸಿದಂತೆ, ಆ ಮೂಲಕ ವೈಯುಕ್ತಿಕಕ್ಕೆ ಅಪಚಾರವಾದಂತಲ್ಲವೇ? ಖಾಸಗೀ ಬದುಕಿನ ಮೇಲೆ ಸಾರ್ವಜನಿಕದ ಹಾಗೆಯೇ ಸಾರ್ವಜನಿಕದ ಮೇಲೆ ಖಾಸಗಿಯ ಅತಿಕ್ರಮ ಪ್ರವೇಶವಲ್ಲವೇ? ಜೊತೆಗೆ ಅಂತ್ಯ ಸಂಸ್ಕಾರಕ್ಕೆ ಇದೇ ಮಾದರಿ ಎಂದು ನೀವೂ ತೋರಿಸಿಕೊಟ್ಟಂತಾಗಲಿಲ್ಲವೇ? ಇದಕ್ಕೆ ಒಂದು ಕಡೆ ಕುಟುಂಬವೂ, ಮತ್ತೊಂದು ಕಡೆ ಸರ್ಕಾರವೂ ನೀಡಿದ ಅವಕಾಶ ಮತ್ತು ವೆಚ್ಚಗಳನ್ನು ಭರಿಸಿದ್ದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯೇ ಅಲ್ಲವೇ?

ನಿಮ್ಮ ನಂಬಿಕೆ ಮತ್ತು ಅದರ ಅನುಸರಣೆಯ ಬಗ್ಗೆ ನೀವು ಲೋಕಕ್ಕೆ ಸ್ಪಷ್ಟ ಪಡಿಸಬೇಕಿತ್ತು. ಇಂತಹ ಗೊಂದಲಗಳಿಗೆ ಅವಕಾಶವೇ ಇರುತ್ತಿರಲಿಲ್ಲ. ಅನೇಕರು ಇದು ಪ್ರಶ್ನೆಗಳನ್ನು ಎತ್ತುವ ಸಂದರ್ಭವಿದಲ್ಲವೆಂದು ಭಾವಿಸಿದರೂ ಜನಮನದಲ್ಲಿ ಉಸಿರಾಡುತ್ತಿರುವ ಈ ಪ್ರಶ್ನೆಗಳು ಇನ್ನು ಮುಂದಾದರು ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ತೆಗೆದುಕೊಳ್ಳಬೇಕಾದ ಎಚ್ಚರ ಎಂಬುದಕ್ಕಾಗಿ ಎತ್ತಲೇಬೇಕಾಗಿದೆ. [ಅನಂತದಲ್ಲಿ ಲೀನವಾದ ಸಾರಸ್ವತ ಲೋಕದ ಕೀರ್ತಿ]

ಕ್ಷಮಿಸಿ,
ನಿಮ್ಮ ಪ್ರೀತಿಯ
ಜಿ.ಎನ್ ನಾಗರಾಜ್

***
ಅನಂತ ಮೂರ್ತಿಯವರ ಬಗ್ಗೆ ನನಗೆ ಹಲವು ಕಾರಣಗಾಗಿ ಅಪಾರ ಗೌರವ. ಅವರ ಸಾಹಿತ್ಯ, ಸಾಂಸ್ಕೃತಿಕ ಚಿಂತನೆಗಳು, ಪ್ರಾಧ್ಯಾಪಕರಾಗಿ ಹಾಗೂ ಋಜುವಾತು ಪತ್ರಿಕೆಯ ಮೂಲಕ ಅನೇಕರನ್ನು ಬೆಳೆಸಿದ್ದು, ಸಾಮಾಜಿಕ ಕ್ರಿಯಾಶೀಲತೆ, ಕೋಮುವಾದದ ವಿರುದ್ಧ ರಾಜಿಯಿಲ್ಲದ ಹೋರಾಟ, ಅವರು ವಿವಾದಗಳ ಮೂಲಕವೆ ಕರ್ನಾಟಕದಲ್ಲಿ ಚರ್ಚೆಗಳನ್ನು ಹುಟ್ಟು ಹಾಕುತ್ತಿದ್ದ, ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತಿದ್ದ ರೀತಿ, ಕೊನೆಗೆ ನನ್ನ ಸಾಹಿತ್ಯ, ಸಾಂಸ್ಕೃತಿಕ ಓದು ಮತ್ತು ತತ್ವಶಾಸ್ತ್ರ ಪ್ರಿಯತೆ ಬಗ್ಗೆ ಮೆಚ್ಚುಗೆ ಮತ್ತು ನನ್ನ ಮಗ ಯಶಸ್ವಿಯ ಬಗ್ಗೆ ಪ್ರೀತಿ ಹೀಗೆ ಅವರೊಡನೆ ಇತ್ತೀಚಿನ ಎರಡು ದಶಕಗಳ ಇನ್ನೂ ಹತ್ತಿರವಾದ ಒಡನಾಟ, ಆಗ ಅವರೊಂದಿಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ, ಹರಟೆಗಳು, ಒಂದೆರಡು ಬಾರಿ ಜಗಳವೂ ಕೂಡ. ಒಟ್ಟಿನಲ್ಲಿ ಅವರನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಅವಕಾಶ ಸಿಕ್ಕಿತು.

ಅನಂತಮೂರ್ತಿಯವರು ನಿಧನರಾಗುವ ನಾಲ್ಕು ದಿನಗಳ ಹಿಂದೆ ಅವರನ್ನು ಆಸ್ಪತ್ರೆಯಲ್ಲಿದ್ದಾಗ ಬೆಂಗಳೂರಿಗೆ ಭೇಟಿ ನೀಡಿದ ಸಿಪಿಐ (ಎಮ್) ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾದ ಸೀತಾರಾಮ್ ಯೆಚೂರಿಯವರೊಂದಿಗೆ ಭೇಟಿ ಮಾಡಿದ್ದೆ. ಅವರು ಉಸಿರಾಟಕ್ಕಾಗಿ ಮೂಗಿನ ಮೇಲೆ ಕವಿಸಿದ್ದ ಮಾಸ್ಕ್ ನ ಹಿಂದಿನಿಂದಲೇ ಯೆಚೂರಿಯವರೊಂದಿಗೆ ಹಿಂದೂ ಧರ್ಮ ಮತ್ತು ಹಿಂದೂತ್ವಗಳ ನಡುವಣ ಅಗಾಧ ವ್ಯತ್ಯಾಸದ ಬಗ್ಗೆ ಮತ್ತು ಅದರ ಬಗ್ಗೆ ಅವರು ಬರೆದಿರುವ ಪುಸ್ತಕದ ಬಗ್ಗೆ, ಈ ಸತ್ಯದ ಬಗ್ಗೆ ಜನ ಸಮುದಾಯಕ್ಕೆ ಅರಿವು ಮೂಡಿಸುವ ಬಗ್ಗೆ ಅತೀವ ಕಾಳಜಿಯಿಂದ ಮಾತನಾಡಿದ್ದನ್ನು ಕಂಡು ದೇಶದ ಪ್ರಜಾಸತ್ತೆಯನ್ನು ಉಳಿಸಿಕೊಳ್ಳುವ ಬಗ್ಗೆ ಅವರ ಬದ್ಧತೆಯ ಬಗ್ಗೆ ಬೆರಗು ಪಟ್ಟಿದ್ದೆ. ಇದನ್ನೆಲ್ಲ ಫೇಸ್ ಬುಕ್ ನಲ್ಲಿ ಹಂಚಿಕೊಂಡು ಅವರ ಸಾವು ನನಗೆ ಉಂಟು ಮಾಡಿದ ವೈಯುಕ್ತಿಕ ನೋವನ್ನು ವ್ಯಕ್ತಪಡಿಸಿದ್ದೆ.

"ಅನಂತಮೂರ್ತಿಯವರೇ, ಇದು ಸರಿಯೆ" ಎಂಬ ಪ್ರಶ್ನೆಯನ್ನು ಎತ್ತುವ ಮೊದಲು ಫೇಸ್ ಬುಕ್ ನಲ್ಲಿ ಹಾಕಿದ ಮೂರು ಸ್ಟೇಟಸ್ ಗಳ ಮುಂದುವರಿಕೆಯೆಂದೇ ನೋಡಬೇಕು. ಅನಂತಮೂರ್ತಿಯವರ ಸಾವಿನ ಸಂದರ್ಭದಲ್ಲಿ ಅವರ ಸಂಸ್ಕಾರಕ್ಕೆ ಸಂಬಂಧಿಸಿ ಇಂತಹ ಪ್ರಶ್ನೆಗಳನ್ನು ಎತ್ತುವುದು ಸರಿಯೇ? ಅದರಲ್ಲಿಯೂ ಕೋಮುವಾದಿ ಶಕ್ತಿಗಳು ಅವರ ಸಾವನ್ನು ಸಂಭ್ರಮಿಸುತ್ತಿರುವಾಗ ಈ ಶಕ್ತಿಗಳಿಗೆ ನಾವೇ ಅಸ್ತ್ರಗಳನ್ನು ಒದಗಿಸಿದಂತಾಗುವುದಿಲ್ಲವೇ? ಅವರ ಸಂಸ್ಕಾರ ಅವರ ನಂತರದ್ದು ಇದರಲ್ಲಿ ಅನಂತ ಮೂರ್ತಿಯವರ ಪಾತ್ರವೇನು? ಇದರ ಹೊಣೆ ಏನಿದ್ದರೂ ಅವರ ಕುಟುಂಬದ್ದು. ಹೀಗೆ ಹತ್ತು ಹಲವು ಅಭಿಪ್ರಾಯಗಳು ಬಂದಿವೆ. [ಅತೃಪ್ತ ಆತ್ಮಗಳಿಂದ ಸಂಭ್ರಮಾಚರಣೆ]

ಅವರಿಗೆ ಕೊನೆಯ ಗೌರವ ಸಲ್ಲಿಸುವುದಕ್ಕೆ ಅವರ ಮನೆಗೆ, ರವೀಂದ್ರ ಕಲಾಕ್ಷೇತ್ರಕ್ಕೆ ಭೇಟಿ ನೀಡಿದ್ದೆ. ನಂತರ ಕಲಾಗ್ರಾಮಕ್ಕೆ ಅವರ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಭೇಟಿ. ಅಲ್ಲಿಯೂ ಅನೇಕ ಅಭಿಮಾನಿಗಳು ನೆರೆದಿದ್ದರು ಮಂತ್ರ ಘೋಷಗಳು ಸಾಗಿದ್ದವು. ಅಂದು ‘ಸುರಗಿ‘ಯಲ್ಲಿ ಮತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಭಿಮಾನಿಗಳು ಮತ್ತು ಜೊತೆಗಾರ ಸಾಹಿತಿ, ಸಾಂಸ್ಕೃತಿಕ ಲೋಕದ ಗಣ್ಯರ ನಡುವೆ ಇದ್ದ ವಾತಾವರಣವೇ ಬೇರೆ, ಕಲಾಗ್ರಾಮದ ವಾತಾವರಣವೇ ಬೇರೆ. ಅಲ್ಲೆಲ್ಲಾ ಅನಂತ ಮೂರ್ತಿಯವರ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾ, ಸಾಹಿತ್ಯ ಪರಿಸರದ ಬಗ್ಗೆ ಮಾತನಾಡಿಕೊಳ್ಳತ್ತಾ ಗೆಳೆಯರು ನೆರೆದಿದ್ದರೆ ಇಲ್ಲಿ ಅವರ ಮುಖದ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳು, ಅವರ ಅತೃಪ್ತಿಯನ್ನು ಹೊರ ಹಾಕುತ್ತಿದ್ದ ಕಾಮೆಂಟುಗಳು, ಇನ್ನುಳಿದವರದು ನೀರವ ಮೌನ.

ಈ ಸಂದರ್ಭದಲ್ಲಿ ಎದ್ದ ಪ್ರಶ್ನೆಗಳಿಗೆ ದನಿ ಕೊಡಲೇ ಬೇಕೆನ್ನಿಸಿತು. ಇದು ಕೂಡ ಅವರಿಗೆ ಸಲ್ಲಿಸಿದ ನಮನದ ಮತ್ತೊಂದು ರೂಪವೇ. ಅವರು ಕರ್ನಾಟಕಕ್ಕೆ ನೀಡಿದೆಲ್ಲಾ ಕೊಡುಗೆಗಳ ಬಗ್ಗೆ ನಮ್ಮ ಕೃತಜ್ಞತೆಯನ್ನು ತೋರಿಸುತ್ತಲೇ ಎತ್ತ ಬೇಕಾದ ಪ್ರಶ್ನೆಗಳು. ಯಾರನ್ನೂ, ಯಾವ ವಿಚಾರವನ್ನೂ ಪ್ರಶ್ನಿಸದೇ ಒಪ್ಪಿಕೊಳ್ಳಬೇಡ ಎಂಬುದು ವೈಚಾರಿಕತೆಯ ಮೂಲ ಬೇರು. ಹೀಗೆ ಹಲವು ಪ್ರಶ್ನೆಗಳ, ವಿವಾದಗಳ ಮೂಸೆಯಲ್ಲಿ ಬೆಂದವರು ಅನಂತಮೂರ್ತಿಯವರು. ಅವರನ್ನು ಗೌರವಿಸುವುದಕ್ಕೆ ಅವರ ವಿಚಾರ ಸರಣಿಯ ಎಲ್ಲವನ್ನೂ ಒಪ್ಪಿಕೊಳ್ಳಲೇಬೇಕೆಂಬ ಷರತ್ತನ್ನು ಹಾಕುವ ಹಕ್ಕು ಯಾರಿಗೂ ಇಲ್ಲ. ಅವರ ಬಗ್ಗೆ, ಅವರ ವಿಚಾರ ಅಭಿಪ್ರಾಯಗಳ ಬಗ್ಗೆ ಕನ್ನಡ ಸಾಂಸ್ಕೃತಿಕ ಲೋಕ ಅನೇಕ ಪ್ರಶ್ನೆಗಳನ್ನು ಎತ್ತುತ್ತಲೇ ಬೆಳೆಯಬೇಕು. ಅದು ಅವರ ವಿಚಾರಗಳನ್ನು ಬೆಳೆಸುತ್ತದೆ. ಪ್ರಸ್ತುತವಾಗಿಸುತ್ತಾ ಇರುತ್ತದೆ.

English summary
Dr. U.R. Ananthamurthy's last rites at Kalagrama in Jnanabharati has raises many questions among rationalists. URA never believed in caste system and never followed any rituals. But, many think, his cremation as per Hindu rituals, is an insult to URA himself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X