ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್‌ ಒಡನಾಟ ಅಂತ್ಯ; ಬಸವರಾಜ ಹೊರಟ್ಟಿ ಮುಂದಿನ ದಾರಿ?

|
Google Oneindia Kannada News

ಬೆಂಗಳೂರು, ಮೇ 12; ಜೆಡಿಎಸ್‌ ಪಕ್ಷದಲ್ಲಿ 20ಕ್ಕೂ ಹೆಚ್ಚು ವರ್ಷಗಳನ್ನು ಕಳೆದಿದ್ದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಕೊನೆಗೂ ಪಕ್ಷಕ್ಕೆ ಗುಡ್‌ ಬೈ ಹೇಳಿದ್ದಾರೆ. ಸೋಮವಾರ ವಿಧಾನ ಪರಿಷತ್‌ ಸಭಾಪತಿ ಸ್ಥಾನ ಮತ್ತು ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಮಂಗಳವಾರ ಬಿಜೆಪಿ ಸೇರುತ್ತೇನೆ ಎಂದು ಬಸವರಾಜ ಹೊರಟ್ಟಿ ಘೋಷಣೆ ಮಾಡಿದ್ದಾರೆ. ಜನತಾ ಪಕ್ಷದಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ಹೊರಟ್ಟಿ, 2000ನೇ ಇಸವಿಯಲ್ಲಿ ದೇವೇಗೌಡ ನೇತೃತ್ವದ ಜೆಡಿಎಸ್‌ ಸೇರಿಕೊಂಡಿದ್ದರು. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸತತ 7 ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಹೊರಟ್ಟಿ, ತಮ್ಮ 76ನೇ ವಯಸ್ಸಿನಲ್ಲಿ ಬಿಜೆಪಿಗೆ ವಲಸೆ ಹೋಗುತ್ತಿದ್ದಾರೆ.

ಸೋಮವಾರ ವಿಧಾನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾತನಾಡಿದ ಹೊರಟ್ಟಿ ಬಿಜೆಪಿ ಸೇರುವ ತಮ್ಮ ನಿರ್ಧಾರಕ್ಕೆ ಬಸವರಾಜ ಹೊರಟ್ಟಿ ನಿಖರವಾದ ಕಾರಣ ನೀಡಿಲ್ಲ. ರಾಜ್ಯದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತದಾರರ ಅಭಿಪ್ರಾಯದಂತೆ ಬಿಜೆಪಿ ಸೇರಲು ಬಯಸಿದ್ದೇನೆ ಎಂದು ಮಾತ್ರ ಹೇಳಿದ್ದಾರೆ. "ಆಕಸ್ಮಿಕ ಸನ್ನಿವೇಶಗಳ ನಡೆಯುತ್ತವೆ. ಈ ಕಾರಣದಿಂದ ಜೆಡಿಎಸ್‌ ತೊರೆದಿದ್ದೇನೆ. ಆದರೆ ಜೆಡಿಎಸ್‌ ಮತ್ತು ದೇವೇಗೌಡರ ಬಗ್ಗೆ ಅಭಿಮಾನ ಇದ್ದೇ ಇದೆ ಮುಂದೆಯೂ ಇರುತ್ತದೆ. ದೇವೇಗೌಡರು, ಜೆಡಿಎಸ್ ಪಕ್ಷ ಮತ್ತು ಕುಮಾರಸ್ವಾಮಿ ನನಗೆ ಎಲ್ಲವನ್ನೂ ನೀಡಿದ್ದಾರೆ" ಎಂದರು.

"ನನ್ನನ್ನು ಕುಟುಂಬ ಸದಸ್ಯನಂತೆ ನೋಡಿಕೊಂಡಿದ್ದಾರೆ. ದೇವೇಗೌಡರನ್ನು ನೇರವಾಗಿ ಭೇಟಿ ಮಾಡಲು ಧೈರ್ಯ ಸಾಕಾಗಲಿಲ್ಲ. ಅದಕ್ಕಾಗಿ 12 ಪುಟಗಳ ಪತ್ರ ಬರೆದು ಅವರಿಗೆ ಕಳುಹಿಸಿದ್ದೇನೆ. ಕುಮಾರಸ್ವಾಮಿಯನ್ನು ಭೇಟಿಯಾಗಿ ಮಾತನಾಡಿದ್ದೇನೆ. ಅವರು ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ" ಎಂದು ಹೇಳಿದರು.

ಪಕ್ಷಾಂತರ ಹೊಸ ವಿಷಯವೇನಲ್ಲ

ಪಕ್ಷಾಂತರ ಹೊಸ ವಿಷಯವೇನಲ್ಲ

ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಹೊಸ ವಿಷಯವೇನಲ್ಲ, ಕಳೆದ ಒಂದು ದಶಕದಲ್ಲಿ ಅನೇಕನೇಕ ಹಿರಿಯ ನಾಯಕರು ವಿವಿಧ ಕಾರಣಗಳನ್ನು ನೀಡಿ ಪಕ್ಷಾಂತರ ಮಾಡಿದ್ದಾರೆ. ಆದರೆ ಅವರೆಲ್ಲರೂ ತಮ್ಮ ಹಿಂದಿನ ಪಕ್ಷದ ಬಗ್ಗೆ ಟೀಕೆಗಳನ್ನು ಮಾಡಿ ಹೋಗಿದ್ದಾರೆ. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಜಮೀರ್ ಅಹ್ಮದ್, ಶ್ರೀನಿವಾಸ್‌ ಪ್ರಸಾದ್‌. ಜಮೀರ್‌ ಜೆಡಿಎಸ್‌ ತೊರೆದಾಗಿನಿಂದಲೂ ಯಾವುದಾದರು ವಿಷಯದಲ್ಲಿ ಕುಮಾರಸ್ವಾಮಿ ಅವರೊಂದಿಗೆ ವಾಕ್ಸಮರ ನಡೆಸುತ್ತಲೇ ಇರುತ್ತಾರೆ. ಇನ್ನು ಕಾಂಗ್ರೆಸ್‌ನಿಂದ ಬಿಜೆಪಿ ಸೇರಿ ಸಂಸದರಾಗಿರುವ ಶ್ರೀನಿವಾಸ್‌ ಪ್ರಸಾದ್‌ ಕೂಡ ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ವಿರುದ್ಧ ಪಕ್ಷ ಬಿಡುವಾಗಲೂ ಮತ್ತು ಬಿಟ್ಟ ನಂತರವೂ ಕಿಡಿಕಾರುವುದನ್ನು ಮುಂದುವರಿಸಿದ್ದಾರೆ. ಆದರೆ ಹೊರಟ್ಟಿ ಇವರೆಲ್ಲರಿಗಿಂತ ಭಿನ್ನವಾಗಿದ್ದಾರೆ.

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಖಚಿತ

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಖಚಿತ

ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊರಟ್ಟಿ ಮಂಗಳವಾರ ಬಿಜೆಪಿ ಸೇರುವುದನ್ನು ಖಚಿತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಕರ್ನಾಟಕಕ್ಕೆ ಬಂದಿದ್ದ ವೇಳೆ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಆದರೆ ಪಕ್ಷ ಸೇರುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ ಯಾವುದೇ ಬೇಡಿಕೆಯಿಲ್ಲದೆ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.

ಹೊರಟ್ಟಿ ಸೇರ್ಪಡೆ ನಂತರ ಬಿಜೆಪಿ ಲೆಕ್ಕಾಚಾರ

ಹೊರಟ್ಟಿ ಸೇರ್ಪಡೆ ನಂತರ ಬಿಜೆಪಿ ಲೆಕ್ಕಾಚಾರ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ವಿಧಾನ ಪರಿಷತ್‌ನಲ್ಲಿ ಬಹುಮತಕ್ಕೆ ಇನ್ನೂ ಒಂದು ಸದಸ್ಯ ಬಲ ಕಡಿಮೆ ಇದೆ. ಇದೀಗ ಹೊರಟ್ಟಿ ಸೇರ್ಪಡೆಯಿಂದ ಆ ಕೊರತೆ ನೀಗಬಹುದು ಎಂಬ ಲೆಕ್ಕಾಚಾರದಲ್ಲಿ ಕೇಸರಿ ಬಳಗವಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಹೊರಟ್ಟಿ ಸತತ ಏಳು ಬಾರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಂದ ಅವರನ್ನು ಸೋಲಿಸಲು ಸಾಧ್ಯವಾಗಿಲ್ಲ. ಆ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ಬಿಜೆಪಿಯಲ್ಲಿ ಆಕಾಂಕ್ಷಿಗಳು ಇದ್ದಾರೆ. ಆದರೆ ಗೆಲ್ಲುತ್ತಾರೆನ್ನುವ ವಿಶ್ವಾಸ ಆ ಪಕ್ಷದ ನಾಯಕರಿಗೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರ ಶಿಗ್ಗಾವಿ ಹಾಗೂ ಅವರ ನಿವಾಸವಾಗಿರುವ ಹುಬ್ಬಳ್ಳಿ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ವಿಧಾನ ಪರಿಷತ್‌ ಚುನಾವಣೆ ಸೋಲು ಪಕ್ಷಕ್ಕೆ ಬೇರೆ ಸಂದೇಶ ನೀಡಬಹುದು. ಒಂದು ವೇಳೆ ಹೊರಟ್ಟಿ ಈ ಕ್ಷೇತ್ರದ ಅಭ್ಯರ್ಥಿಯಾದರೆ ಗೆಲುವು ಸುಲಭವಾಗಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

ಸೇರ್ಪಡೆಗೆ ಕಮಲ ಪಾಳಯದಲ್ಲಿ ವಿರೋಧ

ಸೇರ್ಪಡೆಗೆ ಕಮಲ ಪಾಳಯದಲ್ಲಿ ವಿರೋಧ

ಬಸವರಾಜ ಹೊರಟ್ಟಿ ಬಿಜೆಪಿ ಸೇರುತ್ತಿರುವುದಕ್ಕೆ ಪಕ್ಷದ ಕೆಲವು ಹಿರಿಯ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಈಗಾಗಲೇ ಈ ಬಗ್ಗೆ ಹೈಕಮಾಂಡ್‌ಗೆ 10 ಅಂಶಗಳುಳ್ಳ ಪತ್ರವನ್ನು ಪರೆದಿದ್ದಾರೆ ಎಂದು ತಿಳಿದುಬಂದಿದೆ. ಪತ್ರದಲ್ಲಿ ಹೊರಟ್ಟಿಗೆ ಈಗಾಗಲೇ 76 ವರ್ಷವಾಗಿದೆ. ಇವರಿಗೆ ಪಕ್ಷದಿಂದ ಟಿಕೆಟ್ ನೀಡಲು ಅವಕಾಶವಿಲ್ಲ. 1980ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದರು, ಇದೇ ವೇಳೆ 1999ರವರೆಗೆ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ, ಎರೆಡೆರುಡು ವೇತನ ಪಡೆದಿರುವ ಆರೋಪವಿದೆ. ಧಾರವಾಡದಲ್ಲಿ ಎಸ್‌ಟಿ ಸಮಾಜಕ್ಕೆ ಸೇರಿದ ಸರ್ವೋದಯ ಶಿಕ್ಷಣ ಸಂಸ್ಥೆಯ ಆಸ್ತಿ ಕಬಳಿಸಿದ ಆರೋಪ ಇವರ ಮೇಲಿದೆ. ಜೊತೆಗೆ ಪಕ್ಷದ ಸಿದ್ದಾಂತವನ್ನು ಹೊರಟ್ಟಿ ಅವರು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಹೀಗೆ ಹಲವಾರು ಅಂಶಗಳನ್ನು ಪತ್ರದಲ್ಲಿ ನಮೂದಿಸಿ ಅವರಿಗೆ ಟಿಕೆಟ್‌ ನೀಡಿ ಸಾಧಿಸುವುದೇನಿದೆ? ಎಂದು ತಿಳಿಸಲಾಗಿದೆ.

ಬಸವರಾಜ ಹೊರಟ್ಟಿ ಲೆಕ್ಕಾಚಾರ ಏನು?

ಬಸವರಾಜ ಹೊರಟ್ಟಿ ಲೆಕ್ಕಾಚಾರ ಏನು?

ಜೆಡಿಎಸ್‌ ರಾಜ್ಯದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ತುಂಬಾ ಕಡಿಮೆ. ಬಿಜೆಪಿ ಸೇರಿದರೆ ವಿಧಾನ ಪರಿಷತ್‌ನಲ್ಲಿ ಸಭಾಪತಿಯಾಗಿ ಮುಂದುವರಿಯಬಹುದು. ಜೊತೆಗೆ ಪುತ್ರನನ್ನು ರಾಜಕೀಯ ಪ್ರವೇಶಸುವುದಕ್ಕೆ ದಾರಿಯಾಗಲಿದೆ. ಹೊರಟ್ಟಿ ಪುತ್ರ 2014ರಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಅಲ್ಲಿಂದ ಅವರು ಮತ್ತೆ ರಾಜಕೀಯದ ಕಡೆಗೆ ಮುಖ ಮಾಡಿಲ್ಲ. ರಾಜಕೀಯ ವೃತ್ತಿ ಜೀವನದ ನಂತರ ತಮ್ಮ ಪುತ್ರ ಜೆಡಿಎಸ್‌ನಲ್ಲಿ ನೆಲೆ ಕಂಡುಕೊಳ್ಳುವುದು ಕಷ್ಟ. ಬಿಜೆಪಿಯಲ್ಲಿದ್ದರೆ ರಾಜಕೀಯ ಸ್ಥಾನಮಾನ ದೊರೆಕಿಸಿಕೊಡಬಹುದು ಎನ್ನುವ ಲೆಕ್ಕಾಚಾರದಲ್ಲಿ ಹೊರಟ್ಟಿ ಇದ್ದಾರೆ.

ಹೊರಟ್ಟಿ ಬಿಜೆಪಿ ಸೇರುತ್ತಿರುವ ವಿಷಯವಾಗಿ ಬಿಜೆಪಿಯ ಯಾವುದೇ ನಾಯಕರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಎಂದು ಸ್ವತಃ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ. ಆದರೆ ಇದೇ ಕ್ಷೇತ್ರದ ಆಕಾಂಕ್ಷೆಯಾಗಿರುವ ಲಿಂಬೆಕಾಯಿ ಮಾತ್ರ ಹೊರಟ್ಟಿ ಅವರ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲಾ ವಾಗ್ದಾಳಿ ಮುಂದುವರಿಸಿದ್ದಾರೆ. ಮಂಗಳವಾರ ಹೊರಟ್ಟಿ ಬಿಜೆಪಿ ಸೇರ್ಪಡೆಯ ನಂತರವಷ್ಟೇ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

English summary
Basavaraj Horatti Monday resigned as the chairman of Karnataka legislative council. What is the next move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X