ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ಭೇಟಿ ಸಂದರ್ಭ ನಿಜಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ!

|
Google Oneindia Kannada News

ಬೆಂಗಳೂರು, ಜು. 21: ನಾಯಕತ್ವ ಬದಲಾವಣೆ ಚರ್ಚೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಏಕಾಏಕಿ ದೆಹಲಿಗೆ ತೆರಳಿದ್ದು ಕುತೂಹಲ ಮೂಡಿಸಿತ್ತು. ದಿಢೀರ್ ದೆಹಲಿಗೆ ತೆರಳಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಲ್ಕು ನಾಯಕರನ್ನು ಭೇಟಿ ಮಾಡಿ ಬಂದಿದ್ದರು. ಭೇಟಿ ಬಳಿಕ ಮಾತನಾಡಿದ್ದ ಅವರು, "ರಾಜೀನಾಮೆ ಕೊಡುವಂತೆ ನನಗೆ ಯಾರೂ ಸೂಚಿಸಿಲ್ಲ. ಉಳಿದ ಅವಧಿಗೆ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ" ಎಂದು ಹೇಳಿಕೆ ನೀಡಿದ್ದರು.

ಆದರೆ ದೆಹಲಿ ಭೇಟಿಯ 4 ದಿನಗಳ ಬಳಿಕ ಸಿಎಂ ಯಡಿಯೂರಪ್ಪ ಅವರು ತಮ್ಮ ಮಾತಿನ ದಾಟಿ ಬದಲಿಸಿದ್ದಾರೆ. ನಿನ್ನೆ ಹಾಗೂ ಇವತ್ತು (ಜು.21) ತಮ್ಮನ್ನು ಭೇಟಿ ಮಾಡಿದ್ದ ವಿವಿಧ ಮಠಾಧೀಶರಿಗೆ, "ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ಅಂತಿಮ" ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರು ತಮ್ಮ ಮಾತನ್ನು ಬದಲಿಸಿದ್ದು ಯಾಕೆ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ. ಅದಕ್ಕೆ ಪೂರಕವಾಗಿ ನಿಜವಾಗಿಯೂ ದೆಹಲಿಯಲ್ಲಿ ನಡೆದಿದ್ದೇನು ಎಂಬುವ ಕುರಿತು 'ಒನ್‌ಇಂಡಿಯಾ ಕನ್ನಡ'ಕ್ಕೆ ಒಂದಿಷ್ಟು ಖಚಿತ ಮಾಹಿತಿ ಸಿಕ್ಕಿದೆ.

ಅಷ್ಟಕ್ಕೂ ದೆಹಲಿಗೆ ಯಡಿಯೂರಪ್ಪ ಅವರೇ ತೆರಳಿ ಹೈಕಮಾಂಡ್ ಭೇಟಿ ಮಾಡಿದ್ದರಾ? ಅಥವಾ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಕರೆಯಿಸಿಕೊಂಡಿತ್ತಾ? ಹೈಕಮಾಂಡ್ ಕೊಟ್ಟಿರುವ ಸೂಚನೆ ಏನು? ದೆಹಲಿಯಲ್ಲಿ ಯಡಿಯೂರಪ್ಪ ಅವರು ಭೇಟಿ ಮಾಡಿದ್ದ ಪ್ರಮುಖ ನಾಲ್ವರು ನಾಯಕರು ಯಾರು? ಮುಂದಿದೆ ಮಾಹಿತಿ!

ಪ್ರಧಾನಿ ಮೋದಿ ಭೇಟಿಯಲ್ಲಿ ನಡೆದಿದ್ದೇನು?

ಪ್ರಧಾನಿ ಮೋದಿ ಭೇಟಿಯಲ್ಲಿ ನಡೆದಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದರು ಎಂಬ ಮಾಹಿತಿಯಿದೆ. ಜೊತೆಗೆ ಪ್ರಧಾನಿ ಹಾಗೂ ಯಡಿಯೂರಪ್ಪ ಅವರ ಮಧ್ಯೆ ಮಾತುಕತೆ ನಡೆದಿದ್ದು ಕೇವಲ ಆರರಿಂದ ಏಳು ನಿನಿಷಗಳು ಮಾತ್ರ. "ಎರಡು ವರ್ಷಗಳ ಬಳಿಕ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುವುದಾಗಿ ಹೇಳಿದ್ದಿರಿ. ಅದರಂತೆ ನಡೆದುಕೊಳ್ಳಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೇರವಾಗಿ ಹೇಳಿದ್ದರಂತೆ.

ಆಗ ಉತ್ತರ ಕೊಟ್ಟ ಸಿಎಂ ಯಡಿಯೂರಪ್ಪ ಅವರು, "ನಾನು ಜುಲೈ 10ರಂದೇ ರಾಜೀನಾಮೆ ಕೊಡಲು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಆಗ ಆಷಾಢ ಮಾಸ ಇದ್ದುದ್ದರಿಂದ ರಾಜೀನಾಮೆ ಕೊಟ್ಟಿಲ್ಲ" ಎಂದು ರಾಜೀನಾಮೆ ಪತ್ರವನ್ನು ಪ್ರಧಾನಿ ಮೋದಿ ಅವರಿಗೆ ತೋರಿಸಿದ್ದಾರಂತೆ. ಅದಾದ ಬಳಿಕ ನಿಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಜುಲೈ 26ರಂದು ರಾಜೀನಾಮೆ ಕೊಡಿ ಎಂದು ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ. ಹಾಗೆಯೇ ಮಾಡುತ್ತೇನೆ ಎಂದು ಮೋದಿ ಅವರಿಗೆ ಯಡಿಯೂರಪ್ಪ ಅವರೂ ಭರವಸೆ ಕೊಟ್ಟು ಬಂದಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಈ ಎಲ್ಲ ಮಾತುಕತೆ ನಡೆದಿದ್ದು ಕೇವಲ ಆರರಿಂದ ಏಳು ನಿಮಿಷಗಳ ಕಾಲ ಎಂಬ ಖಚಿತ ಮಾಹಿತಿ ಸಿಕ್ಕಿದೆ. ಪ್ರಧಾನಿ ಭೇಟಿ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಯಡಿಯೂರಪ್ಪ ಭೇಟಿ ಮಾಡಿದ್ದರು.

ಯಡಿಯೂರಪ್ಪ ರಾಜೀನಾಮೆ ಪತ್ರ?

ಯಡಿಯೂರಪ್ಪ ರಾಜೀನಾಮೆ ಪತ್ರ?

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮರುದಿನ ಅಂದರೆ ಜುಲೈ 17ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಯಡಿಯೂರಪ್ಪ ಭೇಟಿ ಮಾಡಿದ್ದರು. ಜೆ.ಪಿ. ನಡ್ಡಾ ಅವರೂ ಕೂಡ ರಾಜೀನಾಮೆ ವಿಚಾರವನ್ನೇ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಆಗ ಸಿಎಂ ಯಡಿಯೂರಪ್ಪ ಅವರು ಜೆಪಿ ನಡ್ಡಾ ಅವರಿಗೆ ಮುಖ್ಯಮಂತ್ರಿ ಹುದ್ದೆಗೆ ತಮ್ಮ ರಾಜೀನಾಮೆ ಪತ್ರವನ್ನು ತೋರಿಸಿದ್ದರಂತೆ. ರಾಜೀನಾಮೆ ಕೊಡಲು ಮುಂದಾಗಿದ್ದೆ. ಆದರೆ ಅಷಾಢ ಮಾಸ ಇದ್ದುದರಿಂದ ಕೊಟ್ಟಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದ್ದರಂತೆ. ಜೊತೆಗೆ ಆ ರಾಜೀನಾಮ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಯಡಿಯೂರಪ್ಪ ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ.

ಸಾಂವಿಧಾನಿಕವಾಗಿ ನೀವು ರಾಜೀನಾಮೆ ಪತ್ರವನ್ನು ಕೊಡಬೇಕಾಗಿದ್ದುದು ರಾಜ್ಯಪಾಲರಿಗೆ. ಹೀಗಾಗಿ ನೀವು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಕೊಡಿ ಎಂದು ನಡ್ಡಾ ಅವರು ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ. ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸಿಎಂ ಯಡಿಯೂರಪ್ಪ ಅವರು ಭೇಟಿ ಮಾಡಿದ್ದರು.

ಬಿಎಸ್‌ವೈಗೆ ರಾಜನಾಥ್ ಸಿಂಗ್ ಕೊಟ್ಟ ಸಲಹೆ ಏನು?

ಬಿಎಸ್‌ವೈಗೆ ರಾಜನಾಥ್ ಸಿಂಗ್ ಕೊಟ್ಟ ಸಲಹೆ ಏನು?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಅವರು ಬಿಜೆಪಿಯ ಮತ್ತೊಮ್ಮೆ ಪ್ರಭಾವಿ ನಾಯಕ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡಸಿದ್ದಾರೆ. ಅವರೊಂದಿಗೂ ಕೂಡ ರಾಜೀನಾಮೆ ವಿಚಾರವನ್ನೇ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ರಾಜನಾಥ್ ಸಿಂಗ್ ಅವರು ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಅದೇ ರೀತಿ ನಡೆದುಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಅವರೂ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಯಡಿಯೂರಪ್ಪ ಅವರು ಹೋಗಿದ್ದರು. ಆದರೆ ಅಮಿತ್ ಶಾ ಭೇಟಿ ಸಾಧ್ಯವಾಗದೆ ಹಿಂದಿರುಗಿದ್ದರು. ಆಗ ಅಮಿತ್ ಶಾ ಅವರೇ ದೆಹಲಿ ಏರ್‌ಪೋರ್ಟ್ ತಲುಪಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಗೆ ಬರುವಂತೆ ಸೂಚಿಸಿದ್ದರು. ಅದಾದ ಬಳಿಕ ಯಡಿಯೂರಪ್ಪ ಅವರು ಅಮಿತ್ ಶಾ ಅವರನ್ನೂ ಭೇಟಿ ಮಾಡಿದ್ದರು. ಆ ಭೇಟಿಯಲ್ಲಿ ಏನಾಯ್ತು? ಮುಂದಿದೆ.

ಯಡಿಯೂರಪ್ಪಗೆ ಅಮಿತ್ ಶಾ ಹೇಳಿದ್ದೇನು?

ಯಡಿಯೂರಪ್ಪಗೆ ಅಮಿತ್ ಶಾ ಹೇಳಿದ್ದೇನು?

ಮೊದಲು ಅಮಿತ್ ಶಾ ಅವರು ಯಡಿಯೂರಪ್ಪ ಅವರ ಭೇಟಿಗೆ ಸಿಕ್ಕಿರಲಿಲ್ಲ ಎಂಬ ಮಾಹಿತಿಯಿದೆ. ಆದರೆ ಅದಕ್ಕೆ ಯಾವುದೇ ಖಚಿತತೆ ಇಲ್ಲ. ಜೆಪಿ ನಡ್ಡಾ ಅವರು ಅಮಿತ್ ಶಾ ಅವರಿಗೆ ದೂರವಾಣಿ ಕರೆ ಮಾಡಿ ಯಡಿಯೂರಪ್ಪ ಅವರೊಂದಿಗಿನ ಭೇಟಿ ಬಗ್ಗೆ ವಿವರಿಸಿದ ಬಳಿಕ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಕರೆಯಿಸಿಕೊಂಡರಂತೆ. ಹೀಗಾಗಿ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏರ್‌ಪೋರ್ಟ್‌ನಿಂದ ಮತ್ತೆ ಅಮಿತ್ ಶಾ ಅವರ ನಿವಾಸಕ್ಕೆ ತೆರಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಿಎಂ ಯಡಿಯೂರಪ್ಪ ಅವರು ಚರ್ಚೆ ಮಾಡಿದ್ದರು.

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೊಟ್ಟಿದ್ದ ಸೂಚನೆ ಆಧರಿಸಿ ಅಮಿತ್ ಶಾ ಅವರೂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಬಿಜೆಪಿಯಲ್ಲಿ ಯಾರಿಗೂ ಕೊಡದಿದ್ದ ಅವಕಾಶವನ್ನು 75 ವರ್ಷ ವಯೋಮಿತಿಯ ಅಲಿಖಿತ ನಿಯಮವನ್ನು ಮೀರಿ ನಿಮಗೆ ಅವಕಾಶ ಕೊಡಲಾಗಿತ್ತು. ಆಗ ನೀವು ಹೇಳಿದಂತೆಯೆ ಈಗ ಎರಡು ವರ್ಷ ಆಡಳಿತ ಪೂರೈಸಿದ್ದೀರಿ. ಹೀಗಾಗಿ ರಾಜೀನಾಮೆಗೆ ಸಿದ್ಧರಾಗಿರಿ ಎಂಬ ಸೂಚನೆ ಅಮಿತ್ ಶಾ ಅವರಿಂದಲೂ ಯಡಿಯೂರಪ್ಪ ಅವರಿಗೆ ಬಂದಿದೆ ಎನ್ನಲಾಗಿದೆ. ಹೀಗಾಗಿ ತಮ್ಮ ದೆಹಲಿ ಭೇಟಿ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖ ನಾಲ್ಕು ನಾಯಕರನ್ನು ಯಡಿಯೂರಪ್ಪ ಅವರು ಭೇಟಿ ಮಾಡಿದ್ದರೂ ಚರ್ಚಿಸಿದ್ದ ವಿಚಾರ ಒಂದೇ ಎಂಬ ಮಾಹಿತಿಯಿದೆ.

ಶಾಸಕಾಂಗ ಪಕ್ಷದ ಸಭೆ ಗೊಂದಲ!

ಶಾಸಕಾಂಗ ಪಕ್ಷದ ಸಭೆ ಗೊಂದಲ!

ಆದರೆ ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಬಿಜೆಪಿ ಯಾರೂ ನನ್ನನ್ನು ರಾಜೀನಾಮೆ ಕೇಳಿಲ್ಲ ಎಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಜುಲೈ 25ರಂದು ಶಾಸಕಾಂಗ ಪಕ್ಷದ ಸಭೆ ಕರೆಯುವುದಾಗಿ ಮಾಧ್ಯಮಗಳಿಗೆ ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಿದ್ದರು. ಆದರೆ ಶಾಸಕಾಂಗ ಪಕ್ಷದ ಸಭೆ ಕರೆಯಲು ಹೈಕಮಾಂಡ್ ಹೇಳಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಮತ್ತೆ ಇದೇ ವಿಚಾರಕ್ಕೆ ಹೈಕಮಾಂಡ್‌ನಿಂದ ಸಿಎಂ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಬಂದಿತ್ತು ಎಂಬ ಮಾಹಿತಿಯಿದೆ.

ಜುಲೈ 25 ರಂದು ಶಾಸಕಾಂಗ ಪಕ್ಷದ ಸಭೆಯನ್ನು ಯಾಕೆ ಕರೆದಿದ್ದೀರಿ ಎಂದು ಹೈಕಮಾಂಡ್ ಶಾಸಕಾಂಗ ಪಕ್ಷದ ನಾಯಕ, ಸಿಎಂ ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡಿತ್ತಂತೆ. ಆಗ ಶಾಸಕರಿಗೆ ಭೋಜನ ಕೂಟ ಏರ್ಪಡಿಸಿದ್ದೇವೆ. ಹೀಗಾಗಿ ಅಲ್ಲಿಯೇ ಶಾಸಕಾಂಗ ಪಕ್ಷದ ಸಭೆಯನ್ನೂ ನಡೆಸುತ್ತೇವೆ ಎಂದಿದ್ದರಂತೆ. ಆದರೆ ಯಾವುದೇ ಕಾರಣಕ್ಕೂ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಬೇಡಿ ಎಂದು ಹೈಕಮಾಂಡ್ ಸೂಚನೆ ಕೊಟ್ಟಿದೆ ಎನ್ನಲಾಗಿದೆ. ಹೀಗಾಗಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ರದ್ದು ಮಾಡಿದ್ದಾಗಿ ಮಾಹಿತಿ ಬಂದಿದೆ.

ಒಟ್ಟಾರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆ ಕುರಿತು ದೆಹಲಿ ಮಟ್ಟದಲ್ಲಿ ಮಾಹಿತಿ ದಟ್ಟವಾಗಿದೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರು ನಿರ್ಗಮಿಸುತ್ತಾರಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದೇ ಜುಲೈ 26ರಂದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ!

English summary
What Actually Happened in Chief Minister BS Yediyurappa Delhi visit? Here's the information. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X