ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮಗಳು ರೈತರಿಗೆ ಏಕವಚನ ನೀಡುವುದು ಯಾಕೆ?

|
Google Oneindia Kannada News

ಅದು ದಿನಪತ್ರಿಕೆ ಆಗಿರಬಹುದು, ಸುದ್ದಿ ವಾಹಿನಿಯಾಗಿರಬಹು ಇಲ್ಲವೇ ಅಂತರ್ಜಾಲ ಮಾಧ್ಯಮವೇ ಆಗಿರಬಹುದು ಎಲ್ಲರೂ ಒಂದು ಸಂಪ್ರದಾಯ(ಸಂಪ್ರದಾಯ ಎಂದರೆ ತಪ್ಪಾಗುತ್ತದೆ ಅಂಧಾನುಕರಣೆ ಸರಿಯಾದ ಬಳಕೆ) ಬೆಳೆಸಿಕೊಂಡು ಬಂದಿದ್ದಾರೆ. ನಾವು ಸಹ ಅದಕ್ಕೆ ಹೊರತಾಗಿಲ್ಲ. ಇದನ್ನು ಹುಟ್ಟುಹಾಕಿದವರು ಯಾರು ಅನ್ನುವುದಕ್ಕೂ ಉತ್ತರ ಅಸ್ಪಷ್ಟ.

ದೇಶಕ್ಕೆ ಅನ್ನ ನೀಡುವ ಅನ್ನದಾತ, ರೈತ, ರೈತರ ಪರವಾಗಿಯೇ ನಮ್ಮ ಸರ್ಕಾರ, ಜನರ ಪರವಾಗಿಯೇ ನಮ್ಮ ಮಾಧ್ಯಮ, ನೇರ-ನಿಷ್ಠುರ-ನಿಷ್ಪಕ್ಷಪಾತ-ಸಮಾಜ ಬದಲಾಯಿಸುವ ಸುದ್ದಿ ಹಾಕುತ್ತೇವೆ ಎಂದು ಹೇಳಿಕೊಳ್ಳುವ ನಾವು ರೈತರ ಸುದ್ದಿ ಬರೆಯುವಾಗ, ಬಿತ್ತರ ಮಾಡುವಾಗ ಅವರಿಗೆ ಬಹುವಚನ ಬಳಸುವ ಔದಾರ್ಯವನ್ನು ತೋರಿಸುವುದಿಲ್ಲ. ಯಾಕೆ ಹೀಗೆ ಯಾರಿಗೂ ಗೊತ್ತಿಲ್ಲ.[ಬಾಂಗ್ಲಾ ಪತ್ರಿಕೆಯಲ್ಲಿ ಇಂಡಿಯನ್ ಕ್ರಿಕೆಟರ್ಸ್ ಮಾನ ಹರಾಜು]

we are all using singular to Farmer, Why ?

ಏಕವಚನ ಬಳಸಿದ ಮಾತ್ರಕ್ಕೆ ಅವರ ಮೇಲೆ ಕಳಕಳಿ ಇಲ್ಲ ಅಥವಾ ಪ್ರೀತಿ ಇಲ್ಲ ಎಂದೇನೂ ಅಲ್ಲ. ಕೆಲವೊಮ್ಮೆ ನಮಗೆ ಅತೀ ಪ್ರೀತಿ ಪಾತ್ರರಾದವರನ್ನು ಏಕವಚನದಲ್ಲಿ ಸಂಬೋಧಿಸುತ್ತೇವೆ ಅಲ್ಲವೇ?

ಆದರೆ ನಾವು ಸುದ್ದಿ ನೀಡುತ್ತಿರುವುದು ಸಮಸ್ತ ಜನತೆಗೆ. ಇಲ್ಲಿ ಏಕವಚನ ಬಳಕೆ ಮಾಡುವುದಕ್ಕಿಂತ ಬಹುವಚನ ಪ್ರಯೋಗ ಮಾಡಿದರೆ ನಮ್ಮ ಗಂಟೇನು ಹೋಗುವುದಿಲ್ಲ. ವರದಿ ನೀಡುವ ಅಥವಾ ಬರೆಯುವ ಕೆಲ ತುಣುಕುಗಳನ್ನು ನೋಡಿದರೆ ಸಾಕು ನಮಗೆ ರೈತರ ಮೇಲಿರುವ 'ಅಸಡ್ಡೆ' ಗೊತ್ತಾಗಿ ಬಿಡುತ್ತದೆ.

ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿಗೆ, ಕಾರು ಅಪಘಾತ ಮಾಡಿದ ಸಚಿವರಿಗೆ, ಪುಟಗೋಸಿ ಕಾರ್ಯಕ್ರಮ ಉದ್ಘಾಟನೆಗೆ ಹೋದ ರಾಜಕಾರಣಿಗೆ ಅಷ್ಟೇ ಏಕೆ ಆರೋಪ ಸಾಬೀತಾಗದೇ ಜೈಲಿಗೆ ಹೋಗಿ ಬಂದ(ಅಲ್ಲೆ ಇರುವ) ಪುಣ್ಯಾತ್ಮರ ಸುದ್ದಿ ಬರೆಯುವಾಗಲೂ ನಮ್ಮ ಬಹುವಚನದ ಪದ ಪುಂಜ ತುಂಬಿಕೊಂಡಿರುತ್ತದೆ. ಅಗತ್ಯವಿಲ್ಲದ ಕಡೆಯೂ 'ಅವರು-ಇವರು' ಅಂಥ ಬರೆಯುತ್ತೇವೆ. ರೈತರಿಗೆ ಬಹುವಚನ ಪಡೆದುಕೊಳ್ಳುವ ಅರ್ಹತೆ ಇಲ್ಲವೇ? ಅಥವಾ ನಮಗೆ ಕೊಡುವ ಜವಾಬ್ದಾರಿಯೂ ಇಲ್ಲವೇ?

ಬೆಳಗಾವಿ ಅಧಿವೇಶನ ಸಂದರ್ಭ, ಜುಲೈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆಗಳನ್ನು ಮುಖಪುಟದಲ್ಲಿ ಹಾಕಿದೆವು. ವಿಶೇಷ ಕಾರ್ಯಕ್ರಮಗಳನ್ನು ಮಾಡಿದೆವು. ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡೆವು. ಆದರೆ ನಂತರ ಮಾಡಿದ್ದೇನು? ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ.

ರೈತರ ಆತ್ಮಹತ್ಯೆ ಸರಣಿ ಮುಂದುವರಿಯುತ್ತಲೇ ಹೋಯಿತು(ಇನ್ನು ನಿಂತಿಲ್ಲ). ಆತ್ಮಹತ್ಯೆ ಸುದ್ದಿ 3 ನೇ ಪುಟಕ್ಕೋ, 8 ನೇ ಪುಟಕ್ಕೋ ಜಾರಿಗೊಂಡಿತು. ವಾಹಿನಿಗಳಲ್ಲಿ ಬ್ರೇಕಿಂಗ್ ಅಂಥ ಒಂದು ಕ್ಷಣ ಬಂದು ಮಾಯವಾಯಿತು. ಅಂತರ್ಜಾಲ ತಾಣಗಳು ವಾರದ ಅಷ್ಟೂ ಆತ್ಮಹತ್ಯೆಯನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿ ನೀಡತೊಡಗಿದವು. ಅಲ್ಲಿ ಬೆಳೆಗಾರನಿಗೆ ಯಾವ ಪರಿಹಾರವೂ ಸಿಗಲಿಲ್ಲ. ರಾಜಕಾರಣಿಗಳ ಸಾಂತ್ವನ ಕಾರ್ಯಕ್ರಮವೇ ನಮಗೆ ಮುಖ್ಯವಾಯಿತು.

ಮಾಧ್ಯಮಗಳ ಅತಿ ರಂಜಿತ ವರದಿಯಿಂದ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಇದೆ. ಇದೆಲ್ಲವನ್ನು ಪಕ್ಕಕ್ಕಿಟ್ಟು ಒಂದು ಕ್ಷಣ ಯೋಚಿಸಬೇಕಿದೆ. ರೈತರ ಕುರಿತಾದ ಸುದ್ದಿ ನೀಡುವಾಗ ಅದು ಆತ್ಮಹತ್ಯೆಯಿರಲಿ, ನೈಸರ್ಗಿಕ ಗೊಬ್ಬರ ಬಳಸಿ ಕಡಿಮೆ ಜಮೀನಿನಲ್ಲಿ ಅಧಿಕ ಇಳುವರಿ ಪಡೆದಿದ್ದಾಗಿರಲಿ, ಸಾಲಗಹಾರರಿಂದ ಭೂಮಿ ಬಿಡಿಸಿಕೊಡಿ ಎಂದು ಸಚಿವರ ಕಾಲಿಗೆ ಎರಗಿದ್ದಾಗಲಿ ಯಾವುದೇ ಸಂದರ್ಭದಲ್ಲಿ ಕನಿಷ್ಠ ಬಹುವಚನವನ್ನಾದರೂ ನೀಡುವ 'ದೊಡ್ಡ ಮನಸ್ಸು' ನಮ್ಮದಾಗಲಿ....

English summary
We are the Media people using singular form to farmer. News paper, Television, online news portal doing same thing. Why we using singular form to farmer? There is no answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X