India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠ್ಯ ಪುಸ್ತಕದಲ್ಲಿನ ತಪ್ಪುಗಳ ತಿದ್ದುಪಡಿ ಆದೇಶ ಖಂಡನೀಯ

|
Google Oneindia Kannada News

ಬೆಂಗಳೂರು ಜೂನ್ 28: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದವನ್ನು ಕೊನೆಗಾಣಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಪರಿಷ್ಕೃತ ಪಠ್ಯದಲ್ಲಿ ಸಮಾಜ ಸುಧಾರಕರ ಕುರಿತು ಆಗಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿ ಸರಿಪಡಿಸಿ ಪಠ್ಯದಲ್ಲಿ ಅಳವಡಿಸುವಂತೆ ಆದೇಶ ನೀಡಿದೆ. ಈ ಆದೇಶವನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ತೀವ್ರವಾಗಿ ಖಂಡಿಸಿದೆ.

ವೇದಿಕೆಯ ಮಹಾಪೋಷಕರು ಹಾಗೂ ಅಭಿವೃದ್ಧಿ ಶಿಕ್ಷಣ ತಜ್ಞ ವಿ. ಪಿ. ನಿರಂಜನಾರಾಧ್ಯ, ಪಠ್ಯ ಪರಿಷ್ಕರಣೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಹೊರಡಿಸಿರುವ ತಿದ್ದುಪಡಿ ಸುತ್ತೋಲೆ ಮೂಲಕ ಸರ್ಕಾರ ಅಂಸಾವಿಧಾನಿಕ, ನಿಯಮಾನುಸಾರ ಚೌಕಟ್ಟಿನಲ್ಲಿ ನಡೆಯದ ಅಪ್ರಬುದ್ಧ, ಪಾರದರ್ಶಕವಲ್ಲ, ನಿಯಮಬಾಹಿರ ಪಠ್ಯ ಪರಿಷ್ಕರಣೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಂತಿದೆ. ಸರ್ಕಾರ ಈ ನಡೆ ಜನರ ವಿರೋಧಿ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.

ಪಠ್ಯದಲ್ಲಿನ ಆಕ್ಷೇಪಾರ್ಹ ತಪ್ಪುಗಳನ್ನು ತಿದ್ದುವಂತೆ ಹೇಳಿರುವುದು ಇದು ಮಕ್ಕಳ ಕಲಿಕೆಯನ್ನು ಮತ್ತಷ್ಟು ಗೊಂದಲಗೊಳಿಸುತ್ತದೆ. ಜತೆಗೆ ಅನೇಕ ದಶಕಗಳಿಂದ ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕೆ ಅಣಿಗೊಳಿಸಿದ ಶಿಕ್ಷಣ ಕ್ಷೇತ್ರವನ್ನು ಹಾಳುಗೆಡುವವ ಮೂಲಕ ದಮನಿತ ಮತ್ತು ಅವಕಾಶ ವಂಚಿತ ಸಮುದಾಯಗಳ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುವ ಹುನ್ನಾರವಾಗಿದೆ ಎಂದರು.

ತಿದ್ದುಪಡಿಯಲ್ಲೇ ಶೈಕ್ಷಣಿಕ ವರ್ಷ ಕೊನೆಯಾಗುತ್ತದೆ

ತಿದ್ದುಪಡಿಯಲ್ಲೇ ಶೈಕ್ಷಣಿಕ ವರ್ಷ ಕೊನೆಯಾಗುತ್ತದೆ

ಶಿಕ್ಷಣ ಹಕ್ಕಲ್ಲ ಅದು ಕೆಲವರ ಸವಲತ್ತು. ಹೀಗೆ ವಾದಿಸುತ್ತಾ ಸಾವಿರಾರು ವರ್ಷಗಳಿಂದ ಬಹುಸಂಖ್ಯಾತ ದಮನಿತರನ್ನು ಶಿಕ್ಷಣದಿಂದ ದೂರವಿಡಲು ನಡೆದಿದ್ದ ಅಕ್ಷರ ವಂಚನೆ ಸಂಸ್ಕೃತಿಯನ್ನು ಮುಂದುವರಿಸಲು ಮತ್ತು ಜನರನ್ನು ದಿಕ್ಕು ತಪ್ಪಿಸುವ ಉದ್ದೇಶ ಮಾಡಿದ ಆದೇಶವಾಗಿದೆ. ಶಾಲಾ ಹಂತದಲ್ಲಿ ಶಿಕ್ಷಕರು ಮಕ್ಕಳಿಗೆ ಕಲಿಸುವ ಬದಲು, ತಿದ್ದುಪಡಿ ಆದೇಶದನ್ವಯ ಪುಸ್ತಕಗಳಲ್ಲಿರುವ ದೋಷಗಳನ್ನು ತಿದ್ದುವ ಕೆಲಸದಲ್ಲಿಯೇ ಈ ಶೈಕ್ಷಣಿಕ ವರ್ಷ ಮುಗಿದು ಹೋಗಲಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ತಪ್ಪು ತಿದ್ದಲು ಅನುಮತಿಸಿರುವ ಆದೇಶವು ವಿಷವುಣಿಸಿದ ವ್ಯಕ್ತಿಗೆ ಸಾಯುವ ಮುನ್ನ ನೀರು ಕೊಡಲು ಕರುಣಿಸಿದಂತಿದೆ. ವಿಷವುಣಿಸಿದ ಘೋರ ಅಪರಾಧ ಮುಚ್ಚಿ ಹಾಕಿ, ಅಪರಾಧವೇ ನಡೆದಿಲ್ಲ ಎಂಬಂತೆ ಬಿಂಬಿಸುವ ಪ್ರಯತ್ನ ಇದಾಗಿದೆ. ಈ ಪ್ರಯತ್ನವು ಸರ್ಕಾರದ ಕುತಂತ್ರ ಹಾಗೂ ಹುನ್ನಾರಗಳನ್ನು ಬೆತ್ತಲೆಗೊಳಿಸಿದೆ.

ಅಕ್ರಮ ಸಕ್ರಮವಾಗದು

ಅಕ್ರಮ ಸಕ್ರಮವಾಗದು

ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಕ್ಕಳಿಗೆ ವಿಷಪ್ರಾಶನ ಮಾಡುತ್ತಿರುವ ಸಂವಿಧಾನಕ್ಕೂ ಮೀರಿದ ಶಕ್ತಿಗಳು ಸರ್ಕಾರವನ್ನು ನಿಯಂತ್ರಿಸುತ್ತಿವೆ. ಸರ್ಕಾರದ ಆಡಳಿತ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಪರಿಷ್ಕರಣೆಯ ಮೂಲ ಚಿಂತನೆಯೇ ದುರುದ್ದೇಶಪೂರಿತ ಹಾಗು ಅಪ್ರಜಾಸತ್ತಾತ್ಮಕ ಎಂದಾದರೆ, ಅದನ್ನು ಆಧರಿಸಿ ಪರಿಷ್ಕರಿಸಿರುವ ಎಲ್ಲಾ ಪ್ರಕ್ರಿಯೆಗಳು ಅಕ್ರಮವಲ್ಲವೇ?. ತಿದ್ದುಪಡಿ ಆದೇಶ ಮೂಲಕ ಪದ, ವಾಕ್ಯ, ಪ್ಯಾರಾ, ಪೋಟೋಗಳನ್ನು ಸರಿಪಡಿಸಿದರೆ ಅದು ಸಕ್ರಮವಾಗುವುದೇ? ಎಂದು ಪ್ರಶ್ನಿಸಿದ್ದಾರೆ.

ಸ್ವತಂತ್ರ ಸಮಿತಿ ರಚಿಸಬೇಕು

ಸ್ವತಂತ್ರ ಸಮಿತಿ ರಚಿಸಬೇಕು

ತಿದ್ದುಪಡಿ ಆದೇಶ ಹೊರಡಿಸುವುದೆಂದರೆ ಸರ್ಕಾರ ಪಠ್ಯ ಪರಿಷ್ಕರಣೆ ಪ್ರಕ್ರಿಯಲ್ಲಿ ಆಗಿರುವ ಲೋಪದೋಷಗಳನ್ನು ಅಧಿಕೃತವಾಗೇ ಒಪ್ಪಿದೆ ಎಂದಾಯಿತು. ತಪ್ಪಾಗಿರುವುದನ್ನು ಸರ್ಕಾರ ಒಪ್ಪಿದ ಮೇಲೆ, ಆದೇಶದ ಮೂಲಕ ತಿಪ್ಪೆ ಸಾರಿಸುವುದನ್ನು ಕೈಬಿಟ್ಟು ಅಸಂವಿಧಾನಿಕ ಹಾಗೂ ಅಪ್ರಜಾಸತ್ತಾತ್ಮಕವಾದ ಈ ಪ್ರಕ್ರಿಯೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಬೇಕು. ಅಲ್ಲಿರುವ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ಒಂದು ಸ್ವತಂತ್ರ ತಜ್ಞರ ಸಮಿತಿ ಅಥವಾ ಸದನ ಸಮಿತಿ ರಚಿಸುವುದೇ ಸೂಕ್ತವಾಗಿದೆ ಎಂದು ನಿರಂಜನಾರಾಧ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಂ ವಿರೋಧಿಗಳ ಕೈಗೊಂಬೆ ಆಗಬಾರದು:

ಸಿಎಂ ವಿರೋಧಿಗಳ ಕೈಗೊಂಬೆ ಆಗಬಾರದು:

ಸಮಿತ ರಚನೆ ಆಗುವವರೆಗೂ ಸಹಜ ನ್ಯಾಯದ ತತ್ವದಂತೆ ಯಥಾಸ್ಥಿಯನ್ನು, ಅಂದರೆ 2021-2022 ರಲ್ಲಿದ್ದ ಪುಸ್ತಕಗಳನ್ನೇ ಮುಂದುವರಿಸಬೇಕು. ತಜ್ಞರ ಸಮಿತಿ/ ಸದನ ಸಮಿತಿಯ ವರದಿ ನಂತರ ಅಂತಿಮ ತೀರ್ಮಾನ ಕೈಗೊಳ್ಳಬೇಕಿರುವುದು ಸಾಂವಿಧಾನಿಕ ನಡೆ ಎನಿಸಿಕೊಳ್ಳುತ್ತದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮಗೇ ತಿಳಿಯದ ತೆರೆಮರೆಯಲ್ಲಿನ ಈ ಎಲ್ಲ ಕುತಂತ್ರಗಳನ್ನು ಅರಿಯಬೇಕು. ಸಂವಿಧಾನ ವಿರೋಧಿಗಳ ಕೈಗೊಂಬೆಯಾಗದೆ ಸಂವಿಧಾನಬದ್ಧ ತಮ್ಮ ಅಧಿಕಾರ ಬಳಸಿ ವಿವಾಧಕ್ಕೆ ಕಾರಣರಾದ ಶಿಕ್ಷಣ ಸಚಿವ ಬಿ.ಸಿ.ನಾಗೇಶರನ್ನು ಸಂಪುಟದಿಂದ ವಜಾಗೊಳಿಸಬೇಕು. ಕಾನೂನು ಬಾಹಿರ ಪಠ್ಯ ಪರಿಷ್ಕರಣೆಯನ್ನು ಅಮಾನ್ಯಗೊಳಿಸಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಅವರು ಒತ್ತಾಯಿಸಿದ್ದಾರೆ.

English summary
Educationist Niranjanaradhya V. P. condemned Karnataka government order on correct the errors of revised text book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X