ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಗುರು ಬಸವಣ್ಣ ಆಗಲೂ ಈಗಲೂ ಪ್ರಸ್ತುತ!

|
Google Oneindia Kannada News

ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ

ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದಿನಸಯ್ಯಾ

ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ

ಎಂದು 12 ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿಹಾಡಿದವರು ವಿಶ್ವಗುರು ಬಸವಣ್ಣನವರು. ಅಂದಿನ ಕಾಲಕ್ಕೆ ಪ್ರಜಾಪ್ರಭುತ್ವ, ಕಾಯಕ, ಸ್ತ್ರೀ ಸಮಾನತೆ ಮಹತ್ವ ಕೊಡುವ ಮೂಲಕ ಜಾತೀಯತೆ ಅಳಿಸಲು ಪ್ರಧಾನ ಆದ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ವಿಶ್ವಗುರು ಬಸವಣ್ಣನವರು. ಅಣ್ಣ ಬಸವಣ್ಣ ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರ ರಾಜಕೀಯವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದವರು. ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವ ವಚನ ಸಾಹಿತ್ಯದ ಮೂಲಕ ಜನರಲ್ಲಿನ ಅಂಧ ಶ್ರದ್ಧೆ ತೊಡೆಹಾಕಲು ಪ್ರಯತ್ನಿಸಿದ್ದವರು. ಅನುಭವ ಮಂಟಪದ ಮೂಲಕ ಲಿಂಗ, ಜಾತಿ ಸಮಾನತೆಗೆ ಒತ್ತು ಕೊಟ್ಟವರು. ಸಮಾಜದಲ್ಲಿ ಮೇಲು ಕೀಳೆಂಬ ಭಾವನೆ ಇರಬಾರದು, ಎಲ್ಲರೂ ಸಮಾನರು ಎಂದು ಬೋಧಿಸಿ, ಆಚರಣೆ ಮಾಡಿದವರು.

Vishwaguru Basavanna was the initiator of the social revolution in the 12th century

ಬಸವಣ್ಣನವರು 1134 ರಲ್ಲಿ ಈಗಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗೆ ಜನಿಸಿದರು. ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ 8ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾನೆ, ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಎಂದಾಗ, ಬಸವಣ್ಣ ಸ್ತ್ರೀ-ಪುರುಷ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.

ಬಸವ ಜಯಂತಿ; ಸಮಾಜ ಸುಧಾಕರಣೆಯ ಆಶಯ ಪಾಲಿಸೋಣಬಸವ ಜಯಂತಿ; ಸಮಾಜ ಸುಧಾಕರಣೆಯ ಆಶಯ ಪಾಲಿಸೋಣ

ಬಸವಣ್ಣನವರು 12 ವರ್ಷಗಳ ಕಾಲ ಈಗಿನ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು. ವಿಶ್ವಗುರು ಬಸವಣ್ಣವರ ದೃಷ್ಟಿಯಲ್ಲಿ ದೇವರು ಮನುಷ್ಯರಲ್ಲಿದ್ದಾನೆಯೆ ಹೊರತು ಗುಡಿಗಳಲ್ಲಿ ಅಲ್ಲ. ಕಾಯಕವೇ ಕೈಲಾಸ, ಅಂದರೆ ಕೆಲಸ ಮಾಡಿಯೆ ಜೀವನ ಮಾಡಬೇಕು, ಕಾಯಕ ಮಾಡದೇ ಜೀವನ ಮಾಡುವುದು ಜೀವನವಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಅತ್ಯಂತ ಘೋರ ಅಪರಾಧ. ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ಓದು ಹಾಗೂ ಜೀವನ ರೂಪಿಸಿಕೊಳ್ಳಲು ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗ ಬಹುದು ಎಂದು ಬಸವಣ್ಣವರು ಸಾರಿದರು.

Vishwaguru Basavanna was the initiator of the social revolution in the 12th century

ಜಾತಿ, ವರ್ಗ, ವರ್ಣ ರಹಿತ ಆದರೆ ಧರ್ಮ ಸಹಿತವಾದ ಕಲ್ಯಾಣ ರಾಜ್ಯವನ್ನು ಕಟ್ಟುವ ವೇದಿಕೆಯಾಗಿ ಬಸವಣ್ಣ ಆದಿಯಾಗಿ ಶರಣರು ಅನುಭವ ಮಂಟಪವನ್ನು ಕಟ್ಟಿದರು. ಅನುಭವ ಮಂಟಪ ದೇವಾಲಯವಲ್ಲ. ದೇವಾಲಯಗಳನ್ನು ದೇವರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿದರೆ, ಅನುಭವ ಮಂಟಪ ನಾಲ್ಕು ಗೋಡೆಗಳ ಮಧ್ಯೆ ಇದ್ದ ದೇವರನ್ನು ಬಂಧಮುಕ್ತಗೊಳಿಸಿತು. ದೇವಾಲಯಗಳು ಕೆಲವರಿಗೆ ದರ್ಶನಾವಕಾಶ ಪೂಜಾ ಹಕ್ಕು ನೀಡಿದರೆ ಮತ್ತೆ ಕೆಲವರನ್ನು ಈ ಸೌಲಭ್ಯಗಳಿಂದ ವಂಚಿಸಿದವು. ಆದರೆ ಅನುಭವ ಮಂಟಪ ಕೆಲವರ ಕಪಿಮುಷ್ಟಿಯಲ್ಲಿದ್ದ ಧರ್ಮ ದೇವರನ್ನು ಎಲ್ಲರ ಸಂಪತ್ತನ್ನಾಗಿ ಮಾಡಲು ಹೋರಾಡಿತು.

ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿಯೆ ಅನುಭವ ಮಂಟಪದ ಮೂಲಕ ಜಾರಿಗೆ ತಂದಿದ್ದು ವಿಶ್ವಗುರು ಅಣ್ಣ ಬಸವಣ್ಣನವರು. ವಿಚಾರ, ವಾಕ್, ಆಚಾರ ಸ್ವಾತಂತ್ರ್ಯ, ಸಮುದಾಯಿಕ ಚಿಂತನೆ ಪ್ರಜಾಪ್ರಭುತ್ವದ ವಿಶೇಷ. ನಮ್ಮ ಲೋಕಸಭೆ ಆ ಅನುಭವ ಮಂಟಪವನ್ನು ಹೋಲುತ್ತದೆ ಎಂದರೂ ತಪ್ಪಾಗಲಾರದು. ಅಲ್ಲಿ ಪ್ರತಿಯೊಬ್ಬ ಶರಣ-ಶರಣೆಗೂ ವಿಚಾರ ಸ್ವಾತಂತ್ರ್ಯವಿತ್ತು, ತನಗೆ ಸರಿಕಂಡದ್ದನ್ನು ಪ್ರತಿಪಾದಿಸುವ ವಾಕ್ ಸ್ವಾತಂತ್ರ್ಯವಿತ್ತು. ತನಗೆ ಸಮ್ಮತವಾದ ಆಚಾರವನ್ನು ಅಳವಡಿಸಿಕೊಳ್ಳಲು ಅವಕಾಶವಿತ್ತು.

Vishwaguru Basavanna was the initiator of the social revolution in the 12th century

ಶರಣರು ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳೆಲ್ಲವನ್ನು ಮುಕ್ತಮನದಿಂದ ಚರ್ಚಿಸುತ್ತಿದ್ದರು. ಈಗಿನ ಪ್ರಜಾಪ್ರಭುತ್ವಕ್ಕೆ ಭಿನ್ನವಾದ ಅಂಶವೊಂದಿತ್ತು, ಅದು ನುಡಿದಂತೆ ನಡೆಯುವುದು. ತಾವು ತಾವು ನುಡಿಯುವುದನ್ನೇ ಶರಣರು ತಮ್ಮ ಬದುಕಿನಲ್ಲಿ ಆಳವಡಿಸಿಕೊಂಡಿದ್ದರು, ಅದನ್ನು ಜನಸಾನ್ಯರಿಗೆ ಅಳವಡಿಸಿಕೊಳ್ಳುವಂತೆ ಹೇಳುತ್ತಿದ್ದರು. ಹೀಗಾಗಿ ಅನುಭವ ಮಂಟಪವು ಜಗತ್ತಿನ ಎಲ್ಲ ಪಾರ್ಲಿಮೆಂಟ್‌ಗಳಿಗೂ ಮಾದರಿಯಾಗಿದೆ ಎನ್ನಬಹುದು. ಅನುಭವ ಮಂಟಪದಲ್ಲಿ ಸರಿಸುಮಾರು 770 ಶರಣ-ಶರಣೆಯರು ಇದ್ದರು.

Vishwaguru Basavanna was the initiator of the social revolution in the 12th century

ಬಸವಣ್ಣನವರ ಸುಮಾರು 1500 ಕ್ಕೂ ಹೆಚ್ಚು ವಚನಗಳನ್ನು ಸಂಗ್ರಹ ಮಾಡಲಾಗಿದೆ. ಬಸವ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಕೊರೊನಾ ವೈರಸ್ ಸಂಕಷ್ಟ ಇರುವುದರಿಂದ ಸಾಂಕೇತಿಕವಾಗಿ ಬಸವ ಜಯಂತಿ ಆಚರಣೆ ಮಾಡಲಾಗಿದೆ. ಬಸವಣ್ಣನವರ ವಚನಗಳು ಜಗತ್ತಿಗೆ ಉತ್ತಮ ಸಂದೇಶಗಳಾಗಿವೆ. ಭಾರತ ಸರಕಾರದ ಅಂಚೆ ಇಲಾಖೆಯು ಗುರು ಬಸವಣ್ಣವರ ಭಾವಚಿತ್ರವುಳ್ಳ ಅಂಚೆ ಚೀಟಿ, ಭಾವಚಿತ್ರವುಳ್ಳ 5 ರೂಪಾಯಿ ಮತ್ತು 100 ರುಪಾಯಿ ನಾಣ್ಯ ಮುದ್ರಿಸಿತು. ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟವರಲ್ಲಿ ಬಸವಣ್ಣನವರು ಪ್ರಥಮ ಕನ್ನಡಿಗ ರಾಗಿದ್ದಾರೆ.ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯ ಪಾರ್ಲಿಮೆಂಟ್ ನಲ್ಲಿ ಅನಾವರಣಗೊಳಿಸಲಾಗಿದೆ.

English summary
Vishwaguru Basavanna was the initiator of the social revolution in the 12th century. At that time, democracy, heroism, and gender equality were key to eradicating casteism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X